ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಉದ್ಯಮವಲ್ಲ; ಮಾಧ್ಯಮ

Last Updated 15 ಅಕ್ಟೋಬರ್ 2011, 11:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಚಲನಚಿತ್ರ ಉದ್ಯಮವಲ್ಲ, ಅದು ಮಾಧ್ಯಮ. ಇದು ಸದ್ಬಳಕೆ ಆಗಬೇಕಾದರೆ ಸದಭಿರುಚಿಯ ಪ್ರೇಕ್ಷಕರ ಪಾತ್ರವೂ ಮುಖ್ಯ ಎಂದು ಚಿತ್ರನಿರ್ದೇಶಕ ಹಾಗೂ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ರಾಜ್ಯ ಚಲನಚಿತ್ರ ಅಕಾಡೆಮಿ ಮತ್ತು ಬೆಳ್ಳಿಮಂಡಲ ಸಹಯೋಗದೊಂದಿಗೆ ಟೌನ್ ಮಹಿಳಾ ಸಮಾಜದ ಶಾಂತಾಬಾಯಿ ಸವೂರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಚಲನಚಿತ್ರ ರಸಗ್ರಹಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿನಿಮಾ ಎಂದಾಕ್ಷಣ ಅದಕ್ಕೆ ಅದರದೆ ಆದ ಪ್ರಭಾವ ಮತ್ತು ಅದರ ಜತೆಗಿನ ಬದುಕನ್ನು ತೂಗಿ ಅಳೆಯ ಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ಕನಸುಗಳಿರುತ್ತವೆ. ಎಷ್ಟೊ ಜನ ಕನಸನ್ನು ಮರೆತು ಬಿಡುತ್ತಾರೆ. ಮತ್ತೆ ಕೆಲವರು ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸಿನಿಮಾದಲ್ಲಿ ತತ್ವ, ಸಿದ್ಧಾಂತ, ತಂತ್ರಜ್ಞತೆ ಇರುತ್ತದೆ. ಈ ಮಾಧ್ಯಮವನ್ನು ಯೋಚಿಸುವ ರೀತಿ ಆಗಬೇಕು ಎಂದರು.

ದೃಶ್ಯ ಮಾಧ್ಯಮಕ್ಕೆ ಈಗ ಬಹಳ ಪ್ರಭಾವ ಇದೆ. ಒಬ್ಬ ವ್ಯಕ್ತಿಯನ್ನು ಕೆಟ್ಟವನನ್ನಾಗಿ ಮತ್ತು ಒಳ್ಳೆಯವನನ್ನಾಗಿ ತೋರಿಸಬಹುದು. ಮನರಂಜನೆಗೆ ಸರಿಯಾದ ವ್ಯಾಖ್ಯಾನ ಇಲ್ಲ; ಅದು ಆಯಾ ವ್ಯಕ್ತಿಗೆ ಅನುಗುಣವಾಗಿ ಇರುತ್ತದೆ. ಮನರಂಜನೆ ಮೀರಿದಂತಹ ಮಾಧ್ಯಮದ ಉಪಯುಕ್ತತೆ ಅರಿಯಬೇಕಾಗುತ್ತದೆ. ಸಾಮಾನ್ಯ ಜನರ ಮಧ್ಯದಲ್ಲಿ ಮೀರಿದಂತಹ ಮಾಧ್ಯಮವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಸಿನಿಮಾ ನೋಡುವ ವ್ಯಕ್ತಿಗೆ ತನ್ನದೇ ಆದ ಗ್ರಹಿಕೆ ಇರುತ್ತದೆ. ಅವರ ಮನಸ್ಥಿತಿ ಸರಿ ಮಾಡುವುದು ಯಾವಾಗ ಎಂಬ ಪ್ರಶ್ನೆ ಮೂಡತೊಡಗಿದೆ. ಸಿನಿಮಾ ಗ್ರಹಿಸುವ ಬಗೆಯನ್ನು ಜನರಿಗೆ ತಲುಪಿಸಬೇಕು. ಗ್ರಹಿಕೆ ಸೈದ್ಧಾಂತಿಕ ನೆಲೆಯನ್ನು ಗುರುತಿಸುವ ಕೆಲಸ ಮೊದಲು ಆಗಬೇಕಾಗಿದೆ ಎಂದರು.

ಪ್ರೇಕ್ಷಕನ ಮನಸ್ಥಿತಿಗೆ ಅರಿವು ಉಂಟುಮಾಡುವ ಕೆಲಸಗಳು ರಸಗ್ರಹಣ ಶಿಬಿರಗಳಿಂದಾಗಬೇಕು. ಅದಕ್ಕೆ ಅಕಾಡೆಮಿಯ ಪ್ರಯತ್ನ ಇದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಖಾದರ್‌ಷಾ ಮಾತನಾಡಿ, ಇಂದಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳು ಹೆಚ್ಚಾಗಿ ಬಿಡುಗಡೆ ಕಾಣಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶಿಬಿರ ನಿರ್ದೇಶಕ ಅಬ್ದುಲ್ ರೆಹಮಾನ್‌ಪಾಷ, ರಾಜ್ಯ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ಸಂಚಾಲಕ ಚಿಂದೋಡಿ ಬಂಗಾರೇಶ್, ಬೆಳ್ಳಿಮಂಡಲ ಜಿಲ್ಲಾ ಸಂಚಾಲಕ ಜ್ವಾಲನಪ್ಪ, ಖಜಾಂಚಿ ದಿನೇಶ್‌ಪಟವರ್ಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT