ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ತಂಡದ ಶುಭಾರಂಭ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಭಾರತದ ಆಟಗಾರರು ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಶನಿವಾರ ಇಲ್ಲಿ ನಡೆದ ಎ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭಾರತ ತಂಡದವರು 3-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದರು.

ಹಲವು ಹೊಸಬರನ್ನೇ ಒಳಗೊಂಡಿರುವ ಈ ತಂಡ ಆರಂಭದಿಂದಲೂ ಆಕ್ರಮಣಕಾರಿ ತಂತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಹಲವು ಸಲ ಇಂಗ್ಲೆಂಡ್ ಆಟಗಾರರು ಪರದಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಎದ್ದು ಕಾಣುತಿತ್ತು.

ಆಟ ಶುರುವಾಗಿ  14 ನಿಮಿಷಗಳಾಗಿದ್ದಾಗ ಇಂಗ್ಲೆಂಡ್‌ಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ರಿಚರ್ಡ್ ಸ್ಮಿತ್ ಗೋಲು ಗಳಿಸಿದರು. ಇದನ್ನು ಕಂಡ ಹಲವರು ಭಾರತ ಒಲಿಂಪಿಕ್ಸ್ ಸೋಲಿನ ಸರಮಾಲೆಯನ್ನೇ ಇಲ್ಲಿ ಮುಂದುವರಿಸುತ್ತದೇನೋ ಎಂದುಕೊಂಡರು. ಆದರೆ ಹಾಗಾಗಲಿಲ್ಲ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕೊನೆಯ ಸ್ಥಾನಕ್ಕಿಳಿದ ಭಾರತ ಆ ನಂತರ ಆಡುತ್ತಿರುವ ಮೊದಲ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿ ಇದಾಗಿದೆ. ಒಲಿಂಪಿಕ್ಸ್‌ನಲ್ಲಿ ಆಡಿದ ತಂಡದಲ್ಲಿದ್ದ ಹಲವರು ಇದೀಗ ಈ ತಂಡದಲ್ಲಿಲ್ಲ. ಜಗತ್ತಿನ ಪ್ರಬಲ ಎಂಟು ತಂಡಗಳು ಆಡುವ ಈ ಟೂರ್ನಿಯಲ್ಲಿ ಭಾರತ ಗಮನಾರ್ಹ ಸಾಮರ್ಥ್ಯ ತೋರುವ ಮೂಲಕ ಒಲಿಂಪಿಕ್ಸ್‌ನಲ್ಲಿ ಉಂಟಾದ ಅವಮಾನದ ಕೊಳೆಯನ್ನು ಸ್ವಲ್ಪ ಮಟ್ಟಿಗಾದರೂ ತೊಳೆದುಕೊಳ್ಳುವ ಉತ್ಸಾಹದಲ್ಲಿದೆ. ಹೀಗಾಗಿ ಸ್ಮಿತ್ ನೀಡಿದ ಮೊದಲ ಗೋಲಿನ ಆಘಾತದಿಂದ ಬಲು ಬೇಗನೆ ಚೇತರಿಸಿಕೊಂಡ ಭಾರತದ ಆಟಗಾರರು ಇಂಗ್ಲೆಂಡ್‌ಗೆ ತಿರುಗೇಟು ನೀಡಿದರು.

ಡ್ಯಾನೀಶ್ ಮುಜ್ತಾಬಾ 22ನೇ ನಿಮಿಷದಲ್ಲೊಂದು ಗೋಲು ಗಳಿಸಿದರೆ, ಯುವರಾಜ್ ವಾಲ್ಮಿಕಿ 38ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿದರು. ಆ ನಂತರ ಇಂಗ್ಲೆಂಡ್ ಆಟಗಾರರ ಗೋಲು ಗಳಿಸುವ ಹಲವು ಯತ್ನಗಳನ್ನು ಭಾರತದ ರಕ್ಷಣಾ ಆಟಗಾರರು ವಿಫಲಗೊಳಿಸಿ ಗಮನ ಸೆಳೆದರು.

ಪಂದ್ಯದುದ್ದಕ್ಕೂ ತಮ್ಮ ಚಾಣಕ್ಷ್ಯ `ಸ್ಟಿಕ್‌ವರ್ಕ್' ಮೂಲಕ ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಗುರುವಿಂದರ್ ಸಿಂಗ್ 66ನೇ ನಿಮಿಷದಲ್ಲಿ ಸಿಕ್ಕಿದ `ಪೆನಾಲ್ಟಿ ಕಾರ್ನರ್' ಅವಕಾಶದಲ್ಲಿ ಭಾರತದ ಗೆಲುವಿನ ಅಂತರವನ್ನು 3-1ಕ್ಕೆ ಏರಿಸಿದರು.

ಆದರೆ ಇಂಗ್ಲೆಂಡ್ ಈ ಟೂರ್ನಿಯನ್ನು `ಪ್ರಯೋಗ ಶಾಲೆ' ಯಂತೆ ಪರಿಗಣಿಸಿದಂತಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡದಲ್ಲಿದ್ದ ಪ್ರಮುಖ ಆಟಗಾರರಿಗೆಲ್ಲಾ ವಿಶ್ರಾಂತಿ ಕೊಟ್ಟು ಹೊಸಮುಖಗಳೇ ಹೆಚ್ಚಾಗಿರುವ ತಂಡವನ್ನು ಇಲ್ಲಿಗೆ ಕಳುಹಿಸಿಕೊಟ್ಟಿದೆ.

`ಎ' ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಭಾರತದವರು ಭಾನುವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದ್ದಾರೆ. ಶನಿವಾರ ನಡೆದಿದ್ದ ಇನ್ನೊಂದು ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ಸ್ ಜರ್ಮನಿ ತಂಡದವರು 3-2 ಗೋಲುಗಳಿಂದ ನ್ಯೂಜಿಲೆಂಡ್ ವಿರುದ್ಧ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT