ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆ: ರೇಷ್ಮೆ ಬೆಳೆಗೆ ಪರಂಗಿ ತುಪ್ಪಳ ತಿಗಣೆ ಬಾಧೆ ಉಲ್ಬಣ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಹಿಪ್ಪುನೇರಳೆಗೆ ಕಾಣಿಸಿಕೊಂಡಿದ್ದ ಪರಂಗಿ ತುಪ್ಪಳ ತಿಗಣೆ ಹಾವಳಿ ಉಲ್ಬಣಗೊಂಡಿದ್ದು, ಬೆಳೆಗಾರರು ದಿಕ್ಕೆಟ್ಟಿದ್ದಾರೆ. 90ಕ್ಕೂ ಹೆಚ್ಚು ಬೆಳೆಗಳಿಗೆ ಹಾನಿ ಮಾಡುವ ಸಾಮರ್ಥ್ಯ ಈ ಕೀಟಕ್ಕಿದೆ. ತೋಟಗಾರಿಕೆ ಬೆಳೆಗಳಿಗೂ ಬಾಧೆ ಉಂಟು ಮಾಡುತ್ತಿದೆ. ಪರಂಗಿ, ಸೀಬೆ, ಸೀತಾಫಲ, ಬದನೆ, ಬೆಂಡೆ, ನೆಲ್ಲಿ, ಜತ್ರೋಪ, ತೇಗ ಸೇರಿದಂತೆ ಪಾರ್ಥೇನಿಯಂ ಗಿಡಗಳನ್ನೂ ಭಕ್ಷಿಸುವ ಗುಣ ಕೀಟಗಳಿಗಿದೆ.

ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲಿನ ಪ್ರಮಾಣ ಏರಿದಂತೆ ಈ ಕೀಟಬಾಧೆ ತೀವ್ರಗೊಳ್ಳುತ್ತದೆ. ಹಸಿರೆಲೆ ಗಿಡಗಳ ಸಂಖ್ಯೆ ಕಡಿಮೆಯಾದಾಗ ಹಾಲುದ್ರವ ಸ್ರವಿಸುವ ಸಸ್ಯದ ಮೇಲೆ ನೇರದಾಳಿ ಮಾಡುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದು, ರೇಷ್ಮೆ ಬೆಳೆಗೆ ಕೀಟಬಾಧೆ ತೀವ್ರಗೊಂಡಿದೆ.

ಜಿಲ್ಲೆಯಲ್ಲಿ 4,701.34 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಇದರಲ್ಲಿ ಶೇ.20ರಷ್ಟು ಬೆಳೆ ಪಪ್ಪಾಯಿ ಹಿಟ್ಟು ತಿಗಣೆ ಹಾವಳಿಗೆ ತುತ್ತಾಗಿದೆ. ಈ ಕೀಟದ ಮೂಲ ಆಹಾರ ಸಸ್ಯ ಪಪ್ಪಾಯಿ ಗಿಡ. ಅದಕ್ಕಾಗಿಯೇ ಕೀಟಕ್ಕೆ ’ಪಪ್ಪಾಯಿ ಹಿಟ್ಟು ತಿಗಣೆ’, ’ಪರಂಗಿ ತುಪ್ಪಳ ತಿಗಣೆ’ ಅಥವಾ ’ಪಪ್ಪಾಯಿ ಮಿಲಿ ಬಗ್’ಎಂದು ಕರೆಯಲಾಗುತ್ತಿದೆ.

ದೇಶದಲ್ಲಿ ಪ್ರಥಮ ಬಾರಿಗೆ ತಮಿಳುನಾಡಿನ ಈರೋಡ್ ಮತ್ತು ಕೊಯಮತ್ತೂರು ಜಿಲ್ಲೆಯಲ್ಲಿ ಪಪ್ಪಾಯಿ ಗಿಡಗಳಿಗೆ ಈ ಕೀಟಬಾಧೆ ಕಾಣಿಸಿಕೊಂಡಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ತಾಲ್ಲೂಕಿನ ಗಡಿಭಾಗದ ವೆಂಕಟಯ್ಯನಛತ್ರ, ಬ್ಯಾಡಮೂಡ್ಲು, ಚಿಕ್ಕಹೊಳೆ, ಯರಗನಹಳ್ಳಿ ಮುಂತಾದ ಗ್ರಾಮದ ರೇಷ್ಮೆ ತೋಟದಲ್ಲಿ ಕೀಟದ ಹಾವಳಿ ಕಾಣಿಸಿಕೊಂಡು, ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು.

ಈ ಕೀಟಬಾಧೆಗೆ ತುತ್ತಾಗುವ ಸಸ್ಯದ ಬೆಳವಣಿಗೆ ಸಂಪೂರ್ಣ ಕುಂಠಿತಗೊಳ್ಳುತ್ತದೆ. ಗಿಡಗಳು ಕುಬ್ಜವಾಗುತ್ತವೆ. ಬುಡದಿಂದ ಕುಡಿಯವರೆಗೆ ಎಲೆ, ಮೊಗ್ಗು ಹಾಗೂ ಕಾಂಡಗಳು ಕೀಟದ ಹಾವಳಿಗೆ ತುತ್ತಾಗುತ್ತವೆ. ಎಲೆಯ ಬುಡ, ರಂಬೆ, ಕುಡಿ ಭಾಗದಲ್ಲಿ ಹಿಟ್ಟಿನಂತಹ ಮೇಣ, ತಿಗಣೆ ಮತ್ತು ಅವುಗಳ ಮೊಟ್ಟೆಚೀಲ ಇರುವುದು ಕಂಡುಬರುತ್ತದೆ. ಈ ಕೀಟಗಳು ರಸ ಹೀರುವ ಕ್ರಿಮಿಗಳಾಗಿವೆ. ಅವುಗಳು ಸ್ರವಿಸುವ ಸಿಹಿದ್ರವದಿಂದ ಕಪ್ಪು ಶಿಲೀಂಧ್ರ ಬೆಳೆದು ತೋಟ ಕಪ್ಪಾಗಿ ಕಾಣಿಸುತ್ತದೆ. ಈ ಕೀಟ ಜಲವಿಕಷಣ ಮೇಣವನ್ನು ತನ್ನ ಮೈಮೇಲೆ ಸುರಿಸಿಕೊಳ್ಳುವ ಗುಣ ಹೊಂದಿದೆ. ಹಾಗಾಗಿ, ನಾಶಪಡಿಸಲು ಕಠಿಣವಾದ ಕೀಟವಾಗಿ ಪರಿಣಮಿಸಿದೆ ಎನ್ನುತ್ತಾರೆ ರೇಷ್ಮೆ ಇಲಾಖೆಯ ಅಧಿಕಾರಿಗಳು.

ಜೈವಿಕ ವಿಧಾನದಿಂದ ಕೀಟದ ಹತೋಟಿ ಮಾಡಬಹುದು. ಹಿಪ್ಪುನೇರಳೆ ತೋಟಗಳಿಗೆ ಅಸಿರೋಫೇಗಸ್ ಪಪ್ಪಾಯಿ, ಸಿಡ್ಲೊಸೊಮ್ಯಾಸ್ಟಿಕ್ಸ್ ಮೆಕ್ಸಿಕಾನ ಹಾಗೂ ಅನಾಗೈರಸ್ ಲೊಕೈ ಎಂಬ ಪರತಂತ್ರ ಜೀವಿ ಬಿಟ್ಟು ಕೀಟದ ಹಾವಳಿ ತಡೆಗೆ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ರೇಷ್ಮೆ ಇಲಾಖೆ ಮುಂದಾಗಿವೆ. ಆದರೆ ನಿರೀಕ್ಷಿತ ಫಲಶ್ರುತಿ ಸಿಕ್ಕಿಲ್ಲ ಎನ್ನುವುದು ಬೆಳೆಗಾರರ ಅಳಲು.

’ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಈ ಕೀಟಬಾಧೆ ತೀವ್ರಗೊಳ್ಳುತ್ತಿದೆ. ಕೇಂದ್ರದಿಂದ ಜೈವಿಕ ವಿಧಾನದಡಿ ಹತೋಟಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೆಳೆಗೆ 250 ಪರತಂತ್ರ ಜೀವಿ ಬಿಟ್ಟರೆ ಹಾವಳಿ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ’ ಎಂದು ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಡಿ.ಎಸ್. ಚಂದ್ರಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT