ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ಭಾರತ ಸಲಹೆ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ):  ಭಾರತ ಮತ್ತು ಚೀನಾ ಬಹಳ ಸಂಕೀರ್ಣ ಸಂಬಂಧ ಹೊಂದಿರುವುದಾಗಿ ತಿಳಿಸಿರುವ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, ಚೀನಾವು ಪಾಕಿಸ್ತಾನದೊಡನೆ ವ್ಯವಹರಿಸುವಾಗ ಭಾರತದ ಆತಂಕವನ್ನು ಗಮನದಲ್ಲಿರಿಸಿಕೊಂಡು, ಹೆಚ್ಚು ಸೂಕ್ಷ್ಮವಾಗಿ ವ್ಯವಹರಿಸಬೇಕೆಂದು ಸೂಚಿಸಿದ್ದಾರೆ.

‘ಪಾಕಿಸ್ತಾನದೊಡನೆ ಇತರ ದೇಶಗಳು ಸಂಬಂಧ ಹೊಂದುವುದಕ್ಕೆ ಭಾರತದ ವಿರೋಧವಿಲ್ಲ.ಆದರೆ ಚೀನಾ ಮತ್ತು ಪಾಕ್ ನಡುವಿನ ಬಾಂಧವ್ಯದ ಕೆಲವು ಅಂಶಗಳ ಬಗ್ಗೆ ಭಾರತಕ್ಕೆ ಕಳವಳವಿದೆ’ ಎಂದು  ಭಾನುವಾರ ಇಲ್ಲಿ ತಿಳಿಸಿದರು.ಪಾಕ್‌ನ ಪರಮಾಣು ಕಾರ್ಯಕ್ರಮಕ್ಕೆ ಚೀನಾದ ಬೆಂಬಲ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ‘ಹೆಚ್ಚು ಸ್ಪಷ್ಟತೆ ಮತ್ತು ಪಾರದರ್ಶಕತೆ ಬಯಸಿರುವ ಭಾರತವು ಮುಕ್ತ ಚರ್ಚೆಯನ್ನು ಸ್ವಾಗತಿಸುತ್ತದೆ’ ಎಂದರು.

ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರತ್ಯೇಕ (ಬಿಳಿಹಾಳೆಯ) ವೀಸಾ ನೀಡುತ್ತಿರುವ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಸೇನೆಯನ್ನು ನಿಯೋಜಿಸಿರುವ ಚೀನಾದ ಕ್ರಮವನ್ನು ಭಾರತ ಬಲವಾಗಿ ವಿರೋಧಿಸುವುದು ಎಂದು ಅವರು ನುಡಿದರು.

‘ಭಾರತದ ಸೌರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ವಿಷಯಗಳಲ್ಲಿ ಹೆಚ್ಚು ಸೂಕ್ಷ್ಮತೆಯನ್ನು ಪ್ರದರ್ಶಿಸಿದರೆ ಮಾತ್ರ ಉಭಯ ದೇಶಗಳ ಬಾಂಧವ್ಯ ಇನ್ನೂ ಪ್ರಬಲವಾಗಿರುವುದು’ ಎಂದು ಅವರು ಚೀನಾಕ್ಕೆ ಸ್ಪಷ್ಟಪಡಿಸಿದರು. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯಂ ಸದಸ್ಯತ್ವಕ್ಕೆ ಭಾರತದ ಅಭ್ಯರ್ಥಿತನವನ್ನು ಚೀನಾ ಮತ್ತು ಅಮೆರಿಕ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆದರೆ ಚೀನಾ ಬಹಿರಂಗವಾಗಿ ವಿರೋಧಿಸಿಲ್ಲ ಎಂದರು. ಪ್ರಸ್ತುತ ವಿಶ್ವಸಂಸ್ಥೆಯ 192 ರಾಷ್ಟ್ರಗಳಲ್ಲಿ 128 ದೇಶಗಳು ಭಾರತಕ್ಕೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ ದೊರಕಬೇಕೆಂಬ ನಿಲುವಿಗೆ ಬೆಂಬಲವಾಗಿವೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT