ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನ : ವೇದಿಕೆ ಮೇಲಿನ ಕ್ರಾಂತಿಗೆ ಮನ್ನಣೆ

Last Updated 20 ಜೂನ್ 2011, 9:50 IST
ಅಕ್ಷರ ಗಾತ್ರ

ಬಂಗಾರಪೇಟೆ: ರಾಷ್ಟ್ರದಲ್ಲಿ ವೇದಿಕೆಯ ಮೇಲೆ ಕ್ರಾಂತಿ ಮೊಳಗಿಸಿದವರಿಗೆ ಸಿಗುವ ಮನ್ನಣೆಯು ನಿಜವಾದ ಕ್ರಾಂತಿವೀರನಿಗೆ ಸಿಗುತ್ತಿಲ್ಲ ಎಂದು ಕೋಟಿಗಾನಹಳ್ಳಿ ರಾಮಯ್ಯ ವಿಷಾದಿಸಿದರು.

ಪಟ್ಟಣದಲ್ಲಿ ಭಾನುವಾರ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿ ಬಳಿಕ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಸುಧಾರಣಾ ಕ್ರಾಂತಿಯನ್ನು ಇಲ್ಲಿ ಮೊಳಗಿಸುವ ಮೊದಲೇ ನಿಜವಾದ ಕ್ರಾಂತಿಕಾರರಾದ ಜ್ಯೋತಿಬಾ ಪುಲೆ ಅವರು ಬ್ರಾಹ್ಮಣ ಗರ್ಭಿಣಿ ವಿಧವೆಯರಿಗೆ ರಹಸ್ಯವಾಗಿ ಪ್ರಸೂತಿ ಮಾಡಿಸಲು ಆಶ್ರಮ ಕಟ್ಟಿದ್ದರು. ಅಂಬೇಡ್ಕರ್ ಅವರು ಗಾಂಧೀಜಿಗೂ ಮೊದಲೇ ಮಹಿಳೆಯರಿಗೆ ಆಸ್ತಿ ಹಕ್ಕು, ವಿಧವಾ ವಿವಾಹಕ್ಕೆ ಮಸೂದೆ ಮಂಡಿಸಿದ್ದರು. ಆದರೆ ಅವರನ್ನು ಹೊರತುಪಡಿಸಿ ಇತರರನ್ನು ವ್ಯವಸ್ಥಿತವಾಗಿ ಪ್ರಚಾರಕ್ಕೆ ತರಲಾಯಿತು. ಆದರೂ ರಾಷ್ಟ್ರವು ಕೊನೆಗೆ ಅವರೆಲ್ಲರನ್ನು ಮರೆತರೂ ಫುಲೆ, ಅಂಬೇಡ್ಕರ್ ಅವರನ್ನು ಮರೆಯಲು ಸಾಧ್ಯವೇ ಇಲ್ಲದ ಸನ್ನಿವೇಶ ನಿರ್ಮಾಣವಾಯಿತು ಎಂದರು.

ಮಹಿಳಾ ಹೋರಾಟಗಾರರು ಜ್ಯೋತಿಬಾ ಫುಲೆ ಅವರನ್ನು ಆದರ್ಶವಾಗಿ ತೆಗೆದುಕೊಳ್ಳದಿದ್ದರೆ, ವಿದೇಶೀಯ ಇತರೆ ಯಾವುದೇ ವ್ಯಕ್ತಿಯನ್ನು ತಮಗೆ ಮಾದರಿಯಾಗಿ ತೆಗೆದುಕೊಂಡರೂ ಅವರು ಸುಧಾರಣೆ ಬದಲಾಗಿ ಸಾಂಪ್ರದಾಯ ಪದ್ಧತಿಗೆ ವೇದಿಕೆ ಮೂಡಿಸಿದಂತಾಗುತ್ತದೆ. ಇಲ್ಲಿನ ಬ್ರಾಹ್ಮಣ ಸಮುದಾಯದ ವಿಧವೆಯರು ಎಲ್ಲಿ ಬೇರೆಯವರೊಡನೆ ಕೂಡಿ ಗರ್ಭಿಣಿಯಾಗುವರೋ ಎಂದು ಕಾಯುವುದೇ ಇಲ್ಲಿನ ವೈದಿಕ ಸಮುದಾಯ ಮೊದಲ ಕರ್ತವ್ಯವಾಗಿತ್ತು. ಅದಕ್ಕಾಗಿ ಅವರು ಬಾಲ ವಿಧವೆಯರಿಗೆ ಇಲ್ಲದ ಆಚಾರಗಳನ್ನು ಸೃಷ್ಟಿಸಿದ್ದರು. ಆದರೆ ಅದನ್ನು ಮೊಟ್ಟಮೊದಲು ಅದೇ ಕಾಲಘಟ್ಟದಲ್ಲಿ ಜ್ಯೋತಿಬಾಪುಲೆ ಮುರಿದರು ಎಂದರು.

`ಜಾನಪದ ಅಳತೆಗೋಲು ಬದಲಾಗಲಿ~:
ಜಾನಪದವು ಸಂಬಂಧಗಳನ್ನು ಕುರಿತದ್ದು. ಆದರೆ ಈಚಿನ ದಿನಗಳಲ್ಲಿ ಸಂಬಂಧಗಳೇ ಅಳಿಯುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಅಧ್ಯಯನದ ಮಾಪನಗಳನ್ನೇ ಬದಲಾಯಿಸಬೇಕಾದ ಅನಿವಾರ್ಯತೆ ಮೂಡಿದೆ ಎಂದು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಜಿ.ಆರ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಕವಿಗೋಷ್ಠಿಗೂ ಮುನ್ನ `ಜಾನಪದ ಸೊಗಡು~ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದ ಅವರು, ಆಧುನಿಕತೆ, ಸಂಕುಚಿತ ಮನೋಭಾವನೆಗಳಿಂದ ಸಂಬಂಧಗಳೇ ಹಳಸುತ್ತಿರುವುದರಿಂದ ಜಾನಪದ ಮಹತ್ವ ಕಳೆದುಕೊಳ್ಳುತ್ತಿದೆ. ಸಂಘಟನೆಯ ಕಾಲವಾದ 80 ರ ದಶಕಕ್ಕೂ ಮೊದಲು ಜಾನಪದ ಪ್ರವರ್ಧಮಾನಕ್ಕೆ ಸಂಬಂಧ ಕಟ್ಟುವ ಮೂಲಕ ಬಂದಿತ್ತು. ಆದರೆ ಈಗ ವಿಘಟನೆಯ  ಘಟ್ಟ ತಲುಪಿ ಜಾನಪದದ ಅರ್ಥ ಕೆಡುತ್ತಿದೆ ಎಂದರು.

ಅಸ್ತಿತ್ವ ಕಳೆದುಕೊಳ್ಳುತ್ತಿವ ಸಂಬಂಧಗಳನ್ನು ಬೆಸೆಯುವುದು ಕಷ್ಟ. ಆದ್ದರಿಂದ ಜಾನಪದ ಅಧ್ಯಯನವೂ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕಾಗಿದೆ. ಮೊದಲು ಜಾನಪದ ಅಧ್ಯಯನವನ್ನು ರಸ ವಿಮರ್ಶೆಯ ಮೂಲಕ ಮಾಡಲಾಗುತ್ತಿತ್ತು. ಈಗ ರಸ ವಿಮರ್ಶೆಯೊಂದಿಗೆ ಆರ್ಥಿಕ, ಸಾಂಸ್ಕೃತಿಕ ಮತ್ತು ವೈಚಾರಿಕತೆ ನೆಲೆಯಲ್ಲಿಯೂ ಅಧ್ಯಯನ ನಡೆಯಬೇಕಾದ ಅನಿವಾರ್ಯತೆ ಮೂಡಿದೆ ಎಂದು ವಿಶ್ಲೇಷಿಸಿದರು.

ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಇತರೆ ಸಹೋದರ ಭಾಷೆಗಳನ್ನೂ ಬಳಸಿಕೊಂಡು ತಞಮ್ಮ ಕಥಾಸಾಹಿತ್ಯಗಳಲ್ಲಿ ಹಿಡಿದಿಡುವ ಪ್ರಯೋಗವನ್ನು ಡಿ.ವಿ.ಜಿ., ಮಾಸ್ತಿ ಮಾಡಿದ್ದರು. ಮಾಸ್ತಿಯವರು ಗರತಿಯ ಹಾಡಿನ ಆಶೀರ್ವಾದ ಮುನ್ನುಡಿಯಲ್ಲಿ ಜಾನಪದ ಬಗ್ಗೆ ಉಲ್ಲೇಖಿಸುತ್ತಾ ಜಿಲ್ಲೆಯಲ್ಲಿ ಜಾನಪದ ಹುಟ್ಟಿಗೆ ಅಡಿಪಾಯ ಹಾಕಿದ್ದರು. ಇದೇ ರೀತಿ ಗ್ರಾಮಮೂಲದಿಂದ ಬಂದಂತಹ ಕುವೆಂಪು, ಕಾರಂತ ಮೊದಲಾದವರು ತಮ್ಮ ಗ್ರಾಮವಾಸ ಅನುಭಾವವನ್ನೇ ಕೃತಿಗಿಳಿಸಿ ಜಾನಪದ ಹುಟ್ಟಿಗೆ ಕಾರಣರಾದರು. ಆದರೆ ಗ್ರಾಮವಾಸ ಕಳೆದಂತೆ ಜಾನಪದವನ್ನು ಮರೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT