ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಗುರುಗಳಿಗೆ ನಮನ

Last Updated 6 ಸೆಪ್ಟೆಂಬರ್ 2013, 6:37 IST
ಅಕ್ಷರ ಗಾತ್ರ

ಯಾದಗಿರಿ: ಜೀವನದಲ್ಲಿ ಯಶಸ್ಸು ಸಾಧಿಸಲು ಗುರುವಿನ ಅವಶ್ಯಕತೆ ಇದೆ. ಸಕಾರಾತ್ಮಕ ಚಿಂತನೆಗಳಿಂದ ಆ ಯಶಸ್ಸು ಪಡೆಯುವಲ್ಲಿ ಗುರುವಿನ ಮಾರ್ಗದರ್ಶನ ಪಡೆಯಬೇಕು ಎಂದು ಪ್ರಾಂಶುಪಾಲ ಡಾ.ಸುಭಾಷಚಂದ್ರ ಕೌಲಗಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಕಾಲೇಜು ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನವೊಂದು ಚಿಕ್ಕ ಮೋಂಬತ್ತಿಯಲ್ಲ. ಅದೊಂದು ಅದ್ಭುತ ಪಂಜು. ಅದು ಉಜ್ವಲವಾಗಿ ಬೆಳಗುವಂತೆ ಮಾಡುವ ಶಕ್ತಿ ಗುರು ತೊಏರುವ ದಾರಿಯಲ್ಲಿ ಅಡಗಿದೆ. ಅದರಂತೆ ಗುರುವು ಕೇವಲ ಮಾರ್ಗದರ್ಶಕನಲ್ಲ. ಬದಲಿಗೆ ಜೀವನವನ್ನು ರೂಪಿಸುವವರು ಎಂದು ಹೇಳಿದರು.

ಉಪನ್ಯಾಸಕ ಜಟ್ಟಪ್ಪ ದೋರನಳ್ಳಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಸಿಗುವಷ್ಟು ಗೌರವ ಬೇರೆ ಯಾರಿಗೂ ಸಿಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳಾದವರು ಗುರುವಿನ ಮಾರ್ಗದರ್ಶನದಲ್ಲಿ ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಮಲ್ಲಾರಡ್ಡಿ ಪಾಟೀಲ, ಡಾ. ಬಿ.ಆರ್.ಚಿಕ್ಕಮಠ, ಶರಣಬಸ್ಸಪ್ಪ ರಾಯಕೊಡಿ, ಡಾ.ಜಗನ್ನಾಥ ಪಟ್ಟಣಕರ್, ಶ್ರೀನಿವಾಸ ರಾಮಾಚಾರ್ಯ, ಭಾಗ್ಯಲಕ್ಷ್ಮಿ ಇದ್ದರು.

ಶ್ರುತಿ ನಿರೂಪಿಸಿದರು. ನಾಗರಾಜ ಸ್ವಾಗತಿಸಿದರು. ಅಕ್ಷತಾ ವಂದಿಸಿದರು.
ಉಳ್ಳೆಸುಗೂರು: ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಗಳ ಮಧ್ಯೆ ವಿದ್ಯಾರ್ಜನೆ ಮಾಡುವ ಶಿಕ್ಷಕ, ದೇಶದ ಭವಿಷ್ಯ ನಿರ್ಮಿಸುವ ಕಾಯಕ ಯೋಗಿಯಾಗಿದ್ದಾನೆ ಎಂದು ನಿವೃತ್ತ ಶಿಕ್ಷಕ ಮರಿಲಿಂಗಪ್ಪ ಬದ್ದೇಳ್ಳಿ ಹೇಳಿದರು.

ಸಮೀಪದ ಉಳ್ಳೆಸೂಗೂರ ಗ್ರಾಮದ ಜ್ಞಾನಾಮೃತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶಕ. ಅವರ ಭವ್ಯ ಜೀವನಕ್ಕೆ ಪ್ರೇರಣೆ ಆಗುತ್ತಾನೆ ಎಂದು ಹೇಳಿದರು.
ಮುಖ್ಯಗುರು ಪೀರ್‌ಮಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿದ್ದಯ್ಯ ಕಲಾಲ, ಮಾಳಪ್ಪ, ಹಣಮಂತ ಭಾಗವಹಿಸಿದ್ದರು. ಗೌಸೋದ್ದೀನ್ ನಿರೂಪಿಸಿದರು. ಚಾಂದಬೀ ಸ್ವಾಗತಿಸಿದರು. ವಿಶ್ವಾರಾಧ್ಯ ವಂದಿಸಿದರು.

ಪ್ರಿಯಂಕಾ ಶಾಲೆ: ಸಮಾಜಕ್ಕೆ ಶಿಕ್ಷಕರ ಮಹತ್ವವನ್ನು ಸಾರಿದ ಧೀಮಂತ ವ್ಯಕ್ತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅವರ ಜನ್ಮದಿನವನ್ನು ಶಿಕ್ಷಕರರ ದಿನವನ್ನಾಗಿ ಆಚರಿಸುವುದು ಅವರ ಜೀವನ ಸಂದೇಶವನ್ನು ಮೆಲುಕು ಹಾಕಲು ಉತ್ತಮ ಅವಕಾಶ ನೀಡುತ್ತದೆ ಎಂದು ಪ್ರಿಯಾಂಕಾ ಸಂಸ್ಥೆಯ ಅಧ್ಯಕ್ಷೆ ಕವಿತಾ.ಎ ಹೇಳಿದರು.

ಗುರುವಾರ ತಾಲ್ಲೂಕಿನ ಯರಗೋಳ ಗ್ರಾಮದ ಪ್ರಿಯಾಂಕಾ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಗೌರವಿಸಲು ಅವಕಾಶ ಒದಗಿಸಿದಂತಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಬೆಳೆಯುತ್ತದೆ ಎಂದು ಹೇಳಿದರು.

ಶಿಕ್ಷಕರಾದ ಕವಿತಾ ಹಿರೇಮಠ, ರೇಣುಕಾ, ದೀಪಾ. ಶ್ರೀನ, ಸಾಯಿಬಣ್ಣ ಚಿಕ್ಕಬಾನ ಇದ್ದರು. ಚಂದ್ರಕಲಾ ಸ್ವಾಗತಿಸಿದರು. ಸುನೀಲ್ ನಿರೂಪಿಸಿದರು. ವಿನೋದ ವಂದಿಸಿದರು.

ಯಲಸತ್ತಿ: ತಾಲ್ಲೂಕಿನ ಯಲಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಮೊದಲಿಗೆ ಶಾಲೆಯ ಮುಖ್ಯಗುರು ರಾಜು ಬಂಡಳ್ಳಿ ಮಾತನಾಡಿ, ವೈದ್ಯ  ರೋಗಿಗೆ ಸೀಮಿತ. ಎಂಜಿನಿಯರ್ ಕಟ್ಟಡಕ್ಕೆ ಸೀಮಿತ. ಆದರೆ ಶಿಕ್ಷಕ ಭವಿಷ್ಯದ ಬಲಿಷ್ಠ ರಾಷ್ಟ್ರದ ನಿರ್ಮಾಪಕ ಎಂದರು.

ಹಿರಿಯ ಶಿಕ್ಷಕರಾದ ಶಶಿಗಂಗಾಧರ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು. ಶಿಕ್ಷಕರಿಗೆ ಕೆಲ ಸ್ಪರ್ಧೆಗಳನ್ನು ಏರ್ಪಡಿಸಿದ್ದ ವಿದ್ಯಾರ್ಥಿಗಳು ಬಹುಮಾನ ವಿತರಿಸಿದರು.

ಶಿಕ್ಷಕರಾದ ಮರೆಪ್ಪ ಕೊಲ್ಲೂರು, ರಮೇಶ ಕಮತೆ, ಶ್ರೀನಿವಾಸ, ಸೌಮ್ಯ, ಸತೀಶಮ್ಮ ಸೇರಿದಂತೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ನವೀನಕುಮಾರ ಸ್ವಾಗತಿಸಿ ನಿರೂಪಿಸಿದರು. ಜಗದೀಶ ವಂದಿಸಿದರು.

ಮಕ್ಕಳಿಂದ ಶಿಕ್ಷಕರಿಗೆ ಸ್ಪರ್ಧೆ
ಯಾದಗಿರಿ ತಾಲ್ಲೂಕಿನ ಸೈದಾಪುರದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಇಂತಹದ್ದೊಂದು ವಿಶಿಷ್ಟ ರೀತಿಯ ಆಚರಣೆ ಮಾಡುವ ಮೂಲಕ ಶಿಕ್ಷಕ ಮತ್ತು ಶಿಕ್ಷಕಿಯರ ಮನರಂಜಿಸಿದರು.

ಶಿಕ್ಷಕರಿಗಾಗಿ ಬಿಸ್ಕೆಟ್ ತಿನ್ನುವ ಸ್ಪರ್ಧೆ, ಬಾಳೆ ಹಣ್ಣಿನ ಸ್ಪರ್ಧೆ, ಬಾಯಿಯಲ್ಲಿ ಚಮಚ ಹಿಡಿದು ದ್ರಾಕ್ಷಿಯನ್ನು ಎತ್ತಿಕೊಂಡು ಬಟ್ಟಲಲ್ಲಿ ಹಾಕುವ ಸ್ಪರ್ಧೆ, ಬಲೂನ್ ಊದುವ ಸ್ಪರ್ಧೆ, ಕಣ್ಣು ಕಟ್ಟಿಕೊಂಡು ದೂರದಲ್ಲಿರುವ ಹಸುವಿನ ಚಿತ್ರಕ್ಕೆ ಕೊಂಬು ಬಿಡಿಸುವ ಸ್ಪರ್ಧೆ, ಸೇರಿದಂತೆ ನಾನಾ ಸ್ಪರ್ಧೆಗಳನ್ನು ಮಕ್ಕಳು ಏರ್ಪಡಿಸಿದ್ದರು.

ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ ಪೂರ್ವ ಪ್ರಾಥಮಿಕ ವಿಭಾಗದ ಪುಟ್ಟ ಮಕ್ಕಳು ಬಹುಮಾನ ವಿತರಿಸು ಮೂಲಕ ಗಮನ ಸೆಳೆದರು.
ಏಳನೇ ತರಗತಿಯ ವಿದ್ಯಾರ್ಥಿನಿ ಹರಿಪ್ರಿಯಾ ಕುಲಕರ್ಣಿ, ಶಿಕ್ಷಕರು ನಮಗಾಗಿ ಇಡೀ ವರ್ಷ ಶ್ರಮ ವಹಿಸುತ್ತಾರೆ. ಹೀಗಾಗಿ ಈ ಒಂದು ದಿನವಾದರೂ ಶಿಕ್ಷಕರ ಮನರಂಜಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದಕ್ಕೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತನಾಡಿದರು. ಶಿಕ್ಷಕರಾದ ನರಸಪ್ಪ ನಾರಾಯಣೋರ, ಸಾಬರೆಡ್ಡಿ ಕಂಬಾರ, ಸುಭದ್ರಮ್ಮ, ಆಂಜನೇಯ, ಯಲ್ಲಪ್ಪ, ಮಂಗಳ, ಮಂಜುಲತಾ, ಕಲ್ಲಪ್ಪ ಕುಂಬಾರ, ಹಣಮಂತ ತಳಕ, ನಮೃತಾ ಮುಂತಾದವರು ಭಾಗವಹಿಸಿದ್ದರು. ಆಯೀಷಾ ಸ್ವಾಗತಿಸಿದರು. ಹರಿಪ್ರಿಯಾ ನಿರೂಪಿಸಿದರು. ಹರೀಶ್ ವಂದಿಸಿದರು.

ಕೆಂಭಾವಿ ವರದಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಶಿಕ್ಷಕರ ದಿನ ಆಚರಿಸಲಾಯಿತು.

ಪ್ರಾಚಾರ್ಯ ಎಚ್.ಎಂ. ವಗ್ಗಾರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಪ್ರಭುಲಿಂಗ ಸಪಲಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಕುರಿತು ಮಾತನಾಡಿದರು.

ಪ್ರಾಧ್ಯಾಪಕರಾದ ಡಾ. ಯಂಕನಗೌಡ, ವಿಶ್ವನಾಥರೆಡ್ಡಿ, ವೀರೇಂದ್ರ ಧರಿ ಹಾಜರಿದ್ದರು. ಶಿವಶರಣರೆಡ್ಡಿ ನಿರೂಪಿಸಿದರು. ಗಿರಿರಾಜ ಸ್ವಾಗತಿಸಿದರು. ಸಂತೋಷ ವಂದಿಸಿದರು. ಮಹಾಂತೇಶ ಕವಾಲ್ದಾರ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಮುಖ್ಯಗುರು  ಶಾಂತಾಬಾಯಿ ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಗುರು ಬಿ.ಎಸ್. ಪಟೇಲ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಖಾಜಾಹುಸೇನ ಹುಳಬುತ್ತಿ, ಮಹ್ಮದ್ ರಫೀಕ್, ವೀರಯ್ಯ ಸ್ವಾಮಿ, ಸವಿತಾ ದೋರನಹಳ್ಳಿ, ರೇಣುಕಾ ಯಲಗೋಡ, ವಿಜಯಲಕ್ಷ್ಮೀ, ರೂಪಾ, ಶಶಿಕಲಾ ಆಗಮಿಸಿದ್ದರು. ಪುನೀತ್ ಸ್ವಾಗತಿಸಿದರು. ವನಿತಾ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು. 

ಮುದನೂರ(ಬಿ): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ದಿನವನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಪ್ರಭುಲಿಂಗ ಕೊಣ್ಣೂರ ವಹಿಸಿದ್ದರು.

  ಮುಖ್ಯ ಅತಿಥಿಗಳಾಗಿ ಸಿಆರ್‌ಪಿ ರಾಜಅಹ್ಮದ್ ಬಡಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಗುರೆಡ್ಡಿ ನಾಲ್ವರ, ಎಪಿಎಫ್ ಮಲ್ಲೇಶಿ ವಗ್ಗರ್, ಹಾಸ್ಮಿನ್ ಪಟೇಲ, ಕೇಶುರಾಯ, ಶರಣಬಸಯ್ಯ, ಶಿವನಗೌಡ ಪಾಟೀಲ, ಬಸವರಾಜ, ಮೈನಾವತಿ, ಭಾರತಿ ಸೇರಿದಂತೆ ಅನೇಕ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಸವರೆಡ್ಡಿ ನಿರೂಪಿಸಿದರು. ನಾಗರಾಜ ಸ್ವಾಗತಿಸಿದರು. ಸೌಭಾಗ್ಯ ವಂದಿಸಿದರು.

ಹುಣಸಗಿ ವರದಿ: ಪಟ್ಟಣದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅರಕೇರಾ (ಜೆ.) ಗ್ರಾಮದ ಬಸವೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀವರ್ಧನಗೌಡ ಮಾತನಾಡಿ, ರಾಧಾಕೃಷ್ಣನ್ ಅವರು ಕೇವಲ ಶಿಕ್ಷಕರಾಗಿರದೇ ಜಗದ್ವಿಖ್ಯಾತ ದಾರ್ಶನಿಕ, ಮಾನವತವಾದಿ ಮತ್ತು ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು ಎಂದು ಹೇಳಿದರು.

ಗುರುಬಸವ ಮಹಿಳಾ ವಿವಿಧೋದ್ದೇಶ ಸೇವಾ ಸಂಘದ ಅಧ್ಯಕ್ಷೆ ಮಹಾದೇವಿ ಪಲಗಲದಿನ್ನಿ ಮಾತನಾಡಿ, ಶಿಕ್ಷಕರು ಜೀವನ ಪೂರ್ತಿ ಕಲಿಯುವರಾಗಬೇಕು. ಒಬ್ಬ ಶಿಕ್ಷಕ ಅನೇಕ ವಿದ್ಯಾರ್ಥಿಗಳ ಬಾಳಿನ ದೀಪಗಳನ್ನು ಬೆಳಗಿಸಬಲ್ಲ ಎಂದು ತಿಳಿಸಿದರು.

ಶಾಲೆಯ ಸಂಸ್ಥಾಪಕ ಬಸವರಾಜ ಪಲಗಲದಿನ್ನಿ ಮಾತನಾಡಿದರು. ಶಿಕ್ಷಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಭಾರ್ಗವಿ, ಶ್ರುತಿ ಪ್ರಾರ್ಥಿಸಿದರು. ಶಿಕ್ಷಕಿ ಪದ್ಮಾ ಸ್ವಾಗತಿಸಿದರು. ಚೈತ್ರಾ ನಾಡಗೇರ ನಿರೂಪಿಸಿದರು.

ಕಲ್ಲದೇವನಹಳ್ಳಿ ಖಾಸ್ಗತೇಶ್ವರ ಶಾಲೆಯಲ್ಲಿ ಸಂಸ್ಥಾಪಕ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿದರು. ಶಿಕ್ಷಕಿಯರಾದ ಹಂಪಮ್ಮ, ಬೋರಮ್ಮ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸುರಪುರ ವರದಿ: ಸಮಾಜದಲ್ಲಿ ಶಿಕ್ಷಕನಿಗೆ ಅತ್ಯಂತ ಗೌರವವಿದೆ. ಸದೃಢ ಸಮಾಜದಲ್ಲಿ ಶಿಕ್ಷಕ ಪ್ರಮುಖ ಪಾತ್ರವಹಿಸುತ್ತಾನೆ. ಉತ್ತಮ ಪ್ರಜೆಗಳ ನಿರ್ಮಾಣ ಶಿಕ್ಷಕರ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕರಿ ಎ.ವ್ಹಿ. ಕೆಂಪರಂಗಯ್ಯ ಹೇಳಿದರು.

ಪಟ್ಟಣದ ಗಾಯಿತ್ರಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ದೇಶದಲ್ಲಿ ಪ್ರತಿಯೊಬ್ಬರು ಒಳ್ಳೆ ನಾಗರಿಕರಾಗಿ ಪರಿವರ್ತನೆಯಾದಾಗ ದೇಶ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು. 

ಶಿಕ್ಷಣ ಸಂಯೋಜಕ ನಿಂಗಯ್ಯ ಮಠ, ಸಿ.ಆರ್.ಪಿ ಚನ್ನಪ್ಪ ಹೂಗಾರ ವೇದಿಕೆಯಲ್ಲಿದ್ದರು. ಮುಖ್ಯಗುರು ಅಪ್ಪಣ್ಣ ಕುಲಕರ್ಣಿ ಸ್ವಾಗತಿಸಿದರು. ಪವನ ಕಟ್ಟಿಮನಿ ನಿರೂಪಿಸಿದರು. ಶ್ರೀನಾಥ ಸಿಂಧಗಿರಿ ವಂದಿಸಿದರು.  ಮಂಜುನಾಥ, ಕಲ್ಪನಾ ಕನಕಗಿರಿ, ರವಿ ಕಂಬಳಿ, ನಾಗರಾಜ ದೇಸಾಯಿ, ಮಂಜುಳಾ, ಅರ್ಚನಾ, ರೇಖಾ, ರಾಧಾ, ಉಷಾ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT