ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ನಲ್ಲಿ ಟಾಪ್ 5 ತಪ್ಪು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಕಿರಿದಾದ ಹದಗೆಟ್ಟ ರಸ್ತೆ. ಮೀಟರ್‌ಗಳ ಅಂತರದಲ್ಲಿ ಸಿಗುವ ಟ್ರಾಫಿಗ್ ಸಿಗ್ನಲ್‌ಗಳು. ಅಲ್ಲಲ್ಲಿ ಮೆಟ್ರೊ, ಜಲಮಂಡಳಿ ಕಾಮಗಾರಿ ಕಿರಿಕಿರಿ. ಇಷ್ಟೆಲ್ಲ ಇದ್ದರೂ ಪರವಾಗಿಲ್ಲಪ್ಪ ಕಚೇರಿ ಕೆಲಸಕ್ಕೋ, ಹೊರಗೋ ಹೋಗೋಣವೆಂದರೆ ಸಂಚಾರ ಪೊಲೀಸರ ಕಾಟ.

ಯಾರಿಗೂ ಕಾಣದ ಹಾಗೆ ಎಲ್ಲೋ ಮೂಲೆಯಲ್ಲಿ ನಿಲ್ಲೋ ಪೊಲೀಸರು ನಿಯಮ ಉಲ್ಲಂಘಿಸಿದ ತಕ್ಷಣ ಬಂದು ಗಕ್ಕನೆ ಹಿಡಿಯುತ್ತಾರೆ. ಎಷ್ಟೋ ಸಲ ನಮಗೆ ಗೊತ್ತಿಲ್ಲದಂತೆಯೇ ನಿಯಮ ಉಲ್ಲಂಘನೆ ಮಾಡಿರುತ್ತೇವೆ. ಪೊಲೀಸರು ಬಂದು ಕೇಳಿದಾಗಲೇ ತಪ್ಪು ಮಾಡಿರುವ ವಿಚಾರ ಗೊತ್ತಾಗುವುದು.

ಸಿಲಿಕಾನ್ ಸಿಟಿಯ ವಾಹನ ಸವಾರರು ಸಾಮಾನ್ಯವಾಗಿ ಯಾವ ಯಾವ ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳ್ತಾರೆ, ಟಾಪ್ ಫೈವ್ ತಪ್ಪುಗಳಾವುವು ಅಂತ ಪತ್ತೆ ಹಚ್ಚುವ ಪ್ರಯತ್ನ ಮಾಡಿದಾಗ ಸಿಕ್ಕಿದ್ದು ಕುತೂಹಲಕಾರಿ ಫಲಿತಾಂಶ.

ರಾಜಧಾನಿಯಲ್ಲಿ ಸೈಟು ಮತ್ತು ಪಾರ್ಕಿಂಗ್ ಜಾಗ ಸಿಗುವುದಿಲ್ಲವೆಂಬ ಮಾತಿದೆ. ಅದು ಬಹುತೇಕ ನಿಜ. ನಲವತ್ತು ಲಕ್ಷ ವಾಹನಗಳಿರುವ ಇಲ್ಲಿ ಪಾರ್ಕಿಂಗ್ ಪರದಾಟ ನಿತ್ಯದ ಗೋಳು. ಎಷ್ಟೋ ಬಾರಿ ನಿರ್ದಿಷ್ಟವಾದ ಸ್ಥಳದಲ್ಲಿ ಪಾರ್ಕಿಂಗ್ ಸಿಗದೆ ಮನೆಗೆ ವಾಪಸಾಗುವ ಅನಿವಾರ್ಯತೆ ಎದುರಾಗಿ ಬಿಡುತ್ತದೆ. ಅಯ್ಯೋ ಪಾರ್ಕಿಂಗ್‌ಗೆ ಜಾಗ ಇಲ್ಲ ಅಂತ ಮನೆಗೆ ವಾಪಸಾಗೋಕೆ ಆಗುತ್ತ? ಇದೇ ಕಾರಣಕ್ಕೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರೂ ಕಡಿಮೆ ಇಲ್ಲ.

ಹೀಗೆ ಧೈರ್ಯ ಮಾಡಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ಹೋದರೆ ದಂಡ ಕಟ್ಟುವುದು ಅನಿವಾರ್ಯ. ಸರಿ, ಹೋದ ವರ್ಷ ಎಷ್ಟು ವಾಹನ ಸವಾರರು ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿ ದಂಡ ಕಟ್ಟಿದ್ದಾರೆ ಅಂತ ತಿಳಿಯಬೇಕೆ? ಕೇಳಿ- ಬರೋಬ್ಬರಿ 5,73,748 ಮಂದಿ ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿ ದಂಡ ಕಟ್ಟಿದ್ದಾರೆ. ಟಾಪ್ ಫೈವ್ ತಪ್ಪುಗಳಲ್ಲಿ ಮೊದಲ ಸ್ಥಾನ ನೋ ಪಾರ್ಕಿಂಗ್‌ಗೆ. ಇದರಲ್ಲಿ ಕಾರು, ಬೈಕ್ ಇತ್ಯಾದಿ ವಾಹನ ಸವಾರರು ಸೇರಿದ್ದಾರೆ.

ಆಫೀಸ್‌ಗೆ ಹೊರಟಾಗಿದೆ. ಅದಾಗಲೇ ಏಳೆಂಟು ಸಿಗ್ನಲ್‌ಗಳಲ್ಲಿ ನಿಂತು, ಕಾದು ಸುಸ್ತಾಗಿ ಬಂದಾಗಿದೆ. ಆದರೂ ಈ ಸಿಗ್ನಲ್‌ಗೆ ಕೊನೆಯಾದ್ರು ಎಲ್ಲಿದೆ? ಹಾಗೆ ಮಧ್ಯಮ ವೇಗದಲ್ಲಿ ಹೋಗುತ್ತಿರುವಾಗ ಇನ್ನೊಂದು ಸಿಗ್ನಲ್ ಕಾಣುತ್ತದೆ. ಗ್ನೀನ್ ಸಿಗ್ನಲ್ ರೆಡ್ ಆಗೋಕೆ ಏಳೆಂಟು ಸೆಕೆಂಡ್ ಮಾತ್ರ ಇರುತ್ತದೆ. ಮತ್ತೆ ಸಿಗ್ನಲ್‌ನಲ್ಲಿ ನಿಲ್ಲಬೇಕಾ ಅಂದುಕೊಂಡು ರೆಡ್ ಸಿಗ್ನಲ್ ಬೀಳುವಷ್ಟರಲ್ಲಿ ಪಾಸಾಗಿಬಿಡೋಣ ಅಂತ ಆಕ್ಸಲರೇಟರ್ ಒತ್ತುವಾಗಲೇ ದುರದೃಷ್ಟ ವಕ್ಕರಿಸುತ್ತದೆ. ವಾಹನವು ನಿರೀಕ್ಷಿತ ವೇಗವನ್ನೂ ಮೀರಿ ಕೆಂಪು ದೀಪ ಹತ್ತುತ್ತೆ. ಅಷ್ಟರಲ್ಲಿ ಮುಂದೆ ಸಾಗಿರುವುದರಿಂದ ಪೊಲೀಸ್ ಕೈಗೆ ಸಿಕ್ಕಿ ಬೀಳದೆ ವಿಧಿಯಿಲ್ಲ.

ಇಂಥ ಸಿಗ್ನಲ್ ನಿಯಮ ಉಲ್ಲಂಘನೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅದಕ್ಕೇ ಪೊಲೀಸರು ಸಿಗ್ನಲ್‌ನಿಂದ ಸ್ವಲ್ಪ ದೂರದಲ್ಲಿ ನಿಂತು ಕಾಯುತ್ತಿರುತ್ತಾರೆ. `ರಾಂಗ್ ಪಾರ್ಕಿಂಗ್~ ನಂತರ `ಟಾಪ್ ಫೈವ್ ರೂಲ್ಸ್ ವಯಲೇಷನ್~ನಲ್ಲಿ `ಸಿಗ್ನಲ್ ಜಂಪ್~ಗೆ ಎರಡನೇ ಸ್ಥಾನ ಇದೆ. ಒಟ್ಟು 4,38,292 ಮಂದಿ ಹೋದ ವರ್ಷ ಸಿಗ್ನಲ್ ಜಂಪ್ ಮಾಡಿ ದಂಡ ಕಟ್ಟಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಒಂದು ಕ್ಷಣ ಯೋಚನೆ ಮಾಡಿದರೆ ಊರಿಗೇ ನೋ ಎಂಟ್ರಿ ಬೋರ್ಡ್ ಹಾಕಿರೋ ಹಾಗೆ ಭಾಸವಾಗುತ್ತದೆ. ಗಾಡಿಯಲ್ಲಿ ಎಲ್ಲಿಗೂ ಹೋಗೋದು ಬೇಡ, ಬೆಚ್ಚಗೆ ಮನೆಯಲ್ಲೇ ಇರೋಣ ಅನ್ನಿಸಿ ಬೇಸರಗೊಂಡವರೂ ಇಲ್ಲದೇ ಇಲ್ಲ. ಆದರೆ ಗಾಡಿ ಇರುವುದು ಅಲಂಕಾರಕ್ಕಷ್ಟೇ ಅಲ್ಲವಲ್ಲ? ಹೋಗುವ ಆತುರದಲ್ಲಿ ಯಾವ ರಸ್ತೆಯಲ್ಲಿ `ಎಂಟ್ರಿ~ ಇದೆ, `ನೋ ಎಂಟ್ರಿ~ ಯಾವುದು ಎಂದು ಗೊತ್ತಾಗುವುದೇ ಇಲ್ಲ. ನೋ ಎಂಟ್ರಿಲಿ ನುಗ್ಗಿದರೆ ಪೊಲೀಸೋರು ಕೇಸ್ ಹಾಕಿ ದಂಡ ವಸೂಲಿ ಮಾಡುತ್ತಾರೆ. ಹೀಗೆ ದಂಡ ಕಟ್ಟಿರುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. 4,03,510 ಮಂದಿ ವಾಹನ ಸವಾರರು `ನೋ ಎಂಟ್ರೀಲಿ~ ವಾಹನ ಓಡಿಸಿ ದಂಡ ಕಟ್ಟಿದ್ದಾರೆ. ಆದ್ದರಿಂದ `ಟಾಪ್ ಥ್ರೀ~ ಸ್ಥಾನ `ನೋ ಎಂಟ್ರಿ~ಗೆ ಸಲ್ಲುತ್ತದೆ.

ನೀಟಾಗಿ ತಲೆ ಬಾಚಿಕೊಂಡು, ಕ್ರಾಪ್ ತೆಗೆದ ಮೇಲೆ ಹೆಲ್ಮೆಟ್ ಹಾಕೋಬೇಕು ಅಂದ್ರೆ... ಛೇ ಯುವಕರಿಗೆ ಬೇಜಾರಾಗುತ್ತೆ ಅಲ್ವ? ಹಾಗಂತ ಹೆಲ್ಮೆಟ್ ಇಲ್ಲದೆ ಹೋದ್ರೆ ಏನಾಗುತ್ತೆ? ಕೇಸ್ ಬೀಳುತ್ತೆ. ಕೈಯಲ್ಲಿ ಇರೋ ಹೆಲ್ಮೆಟ್‌ನ ತಲೆಗೆ ಹಾಕಿಕೊಳ್ಳದೆ ಹೋಗುವವರ ಸಂಖ್ಯೆಯೂ ಕಡಿಮೆ ಇಲ್ಲ. ಈ ರೀತಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಲು ಹೋಗಿ ಸುಮಾರು 2,87,328 ಮಂದಿ ಕೇಸ್ ಹಾಕಿಸಿಕೊಂಡಿದ್ದಾರೆ. ಎರಡು ಲಕ್ಷಕ್ಕಿಂತ ಹೆಚ್ಚು ಜನ ದಂಡ ಕಟ್ಟಿದ್ದಾರೆ. ಇದನ್ನು ಗಮನಿಸಿದರೆ ಹೆಲ್ಮೆಟ್ ಹಾಕೋಳ್ಳೋದೆ ವಾಸಿ ಅನ್ನಿಸುತ್ತೆ ಅಲ್ಲವೇ?

ರೆಡ್ ಸಿಗ್ನಲ್‌ನಲ್ಲಿ ಕಾದುಕಾದು ಗ್ರೀನ್ ಸಿಗ್ನಲ್ ಬಿದ್ದೊಡನೆ ಜೇಬೊಳಗಿನ ಫೋನ್ ರಿಂಗಣಿಸುತ್ತದೆ. ರಿಸೀವ್ ಮಾಡಿ ಮಾತನಾಡುತ್ತಲೇ ಗಾಡಿ ಓಡಿಸಿದರೆ? ಮತ್ತೆ ಪೊಲೀಸರಿಂದ ಬೀಳುವುದು ದಂಡ. 1,08,099 ಮಂದಿ ಇದೇ ಕಾರಣಕ್ಕೆ ದಂಡ ತೆತ್ತಿದ್ದಾರೆ. ಟಾಪ್ ಫೈವ್‌ನಲ್ಲಿ ಕೊನೆಯ ಸ್ಥಾನ ಮೊಬೈಲ್ ಫೋನ್ ಸಂಭಾಷಣೆಗಿದೆ. ಲಕ್ಷ, ಲಕ್ಷ ಮಂದಿ ಕೋಟಿಗಟ್ಟಲೆ ಫೈನ್ ಕಟ್ಟಿರೋ ಟಾಪ್ ಫೈವ್ ಕಥೆ ಇದು.

ನಿಯಮಾನುಸಾರ ವಾಹನ ಚಾಲನೆ ಮಾಡಬೇಕು ಎಂದು ಪೊಲೀಸರು ಬಯಸುವುದರಲ್ಲಿ ವಾಹನ ಸವಾರರ ಹಿತದೃಷ್ಟಿಯೂ ಇದೆ. ಅದನ್ನು ಸವಾರರು ಅರ್ಥ ಮಾಡಿಕೊಳ್ಳಬೇಕು. ಯಾರೋ ಒಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್ ಓಡಿಸಿ ಇನ್ನಾರದ್ದೋ ಕಾರಿಗೆ ಡಿಕ್ಕಿ ಹೊಡೆದರೆ? ಯಾರದ್ದೋ ಮನೆಯ ಗೇಟಿಗೆ ಅಡ್ಡವಾಗಿ `ನೋ ಪಾರ್ಕಿಂಗ್~ನಲ್ಲಿ ವಾಹನ ನಿಲ್ಲಿಸಿದರೆ? ಒನ್ ವೇ ಇದ್ದರೂ ನುಗ್ಗಿ ಅಪಘಾತಕ್ಕೀಡಾದರೆ? ಇಂಥ ಪ್ರಶ್ನೆಗಳು ಸರಳವೂ ಸಹಜವೂ ಆಗಿರುವುದರಿಂದಲೇ ನಿಯಮಗಳನ್ನು ಪಾಲಿಸುವುದೇ ಒಳಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT