ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ಇಲ್ಲ; ಡಾಂಬರೂ ಇಲ್ಲವೇ ಇಲ್ಲ!

Last Updated 29 ಜನವರಿ 2011, 8:25 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ಬಾಣಾವರ-ಪಂಚನಹಳ್ಳಿ ರಸ್ತೆ ಕಣಕಟ್ಟೆ ಕೆರೆ ಏರಿ ಮೇಲೆ ಗುಂಡಿ ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಸಂಚಕಾರಿಯಾಗಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ವಹಿಸಿದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಆಳವಾದ ಕೆರೆ, ಇನ್ನೊಂದೆಡೆ ತಗ್ಗು, ಇವೆರಡರ ಮಧ್ಯೆ ಎರಡೂವರೆ ಕಿ.ಮೀ ಉದ್ದದ ಕಿರಿದಾದ ಕೆರೆ ದಂಡೆ. ಹತ್ತಾರು ಅಂಕು- ಡೊಂಕು ಗಳಿವೆ. ವಾಹನ ಸವಾರ ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸೀದಾ ‘ಯಮಲೋಕಕ್ಕೆ ಪಯಣ’ ಎನ್ನುತ್ತಾರೆ ಸದಾ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರ ಶಂಕರ್ ಹಾಗೂ ಇತರರು.

ಈ ರಸ್ತೆಯಲ್ಲಿ ಸಂಚರಿಸುವಾಗ ಎದುರಾಗುವ ತಿರುವುಗಳು ವಾಹನ ಸವಾರರಲ್ಲಿ ಗಾಬರಿ ಉಂಟು ಮಾಡುತ್ತದೆ. ಎಚ್ಚರ ತಪ್ಪಿದರೆ ಕೆರೆಗೋ ಇಲ್ಲವೇ ಅಳವಾದ ನೀರು ತುಂಬಿದ ಕೆರೆ ಒಡಲಿಗೆ ಬೀಳುವ ಸ್ಥಿತಿ. ತಗ್ಗಿನಲ್ಲಿ ಬಿದ್ದರೂ ಅದೃಷ್ಟ ಗಟ್ಟಿಯಿದ್ದರೆ ಸಾವಿನಿಂದ ಪಾರಾಗಬಹುದು. ಆದರೆ, ಕೆರೆಗೆ ಬಿದ್ದರೆ ಸಾವು ಕಟ್ಟಿಟ್ಟ ಬುತ್ತಿ. ದಶಕದಿಂದ ಕೆರೆಯ ಹಿಂಭಾಗ ಹಾಗೂ ಕೆರೆ ಏರಿ ದಡದಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಪೊದೆ ಮಧ್ಯೆ ಸಿಕ್ಕಿಬಿದ್ದರೆ ಕೆರೆ ಏರಿ ಮೇಲೆ ಇರುವ ‘ಮೂರುಕಣ್ಣು ಮಾರಿ’ ರಕ್ಷಿಸಲಾರಳು.

ತಾಲ್ಲೂಕಿನ ದೊಡ್ಡಕೆರೆ ಇದು. ಆದರೆ, ಕೆರೆ ದಂಡೆಯ ಎರಡು ಬದಿಗಳಲ್ಲಿ ಯಾವುದೇ ತಡೆಗೋಡೆಗಳಿಲ್ಲ. ರಸ್ತೆ ಉದ್ದಕ್ಕೂ ಗಿಡ-ಗೆಂಟೆ ಬೆಳೆದು ಎದುರಿನಿಂದ ವಾಹನಗಳು ಬರುವುದು ಗೊತ್ತಾಗುವುದಿಲ್ಲ. ಈ ರಸ್ತೆಯಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದು, ಇದು ಮೂಡಿಗೆರೆ-ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಾಗಿದೆ. ಚಿತ್ರದುರ್ಗ, ಬಳ್ಳಾರಿ, ಹಿರಿಯೂರು, ಹುಳಿಯಾರು ಕಡೆಯಿಂದ ಚಿಕ್ಕಮಗಳೂರಿಗೆ ಸರಕು ಸಾಗಾಣಿಕೆ ಮಾಡುವ ನೂರಾರು ಲಾರಿಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಮಿತಿಗಿಂತ ಹೆಚ್ಚು ಜನರನ್ನು ತುಂಬಿದ ಮೆಟಾಡೋರ್ ಹಾಗೂ ಟೆಂಪೋ ಟ್ರಾಕ್ಸ್‌ಗಳು ಮತ್ತು ಬೇಲೂರು, ಹಳೇಬೀಡು ನೋಡಲು ದೂರ ದೂರದಿಂದ ಬರುವ ಶಾಲಾ ಮಕ್ಕಳು, ಪ್ರವಾಸಿಗರನ್ನು ಹೊತ್ತ ಬಸ್‌ಗಳು ಹೀಗೆ ಹಗಲು ರಾತ್ರಿ ಎನ್ನದೆ ನೂರಾರು ವಾಹನಗಳು ಈ ಕೆರೆ ಏರಿಮೇಲೆ ಸಂಚರಿಸುತ್ತವೆ.

ಆದರೆ, ಒಂದೇ ಒಂದು ಕ್ಷಣ ಚಾಲಕ ಮೈ ಮರೆತರೆ ನಿರೀಕ್ಷೆಗೂ ಮೀರಿದ ಅಪಾಯ ಖಚಿತ. ಆದ್ದರಿಂದ ಹಾಳಾಗಿರುವ ರಸ್ತೆ ದುರಸ್ತಿ ಮತ್ತು ಕೆರೆ ದಂಡೆಯ ಎರಡು ಬದಿಗಳಲ್ಲಿ ತಡೆಗೋಡೆ ನಿರ್ಮಿಸಿದರೆ ಮಾತ್ರ ಅಪಾಯ ತಡೆಯಬಹುದು. ಅಲ್ಲದೇ ರಸ್ತೆ ಬದಿ ಬೆಳೆದಿರುವ ಗಿಡ-ಗಂಟಿ ಕಿತ್ತು ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಈ ಭಾಗದ ಜನತೆ.
ಮಾಡಾಳು ಶಿವಲಿಂಗಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT