ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಿಗೆ ಹರಕೆ ಬೇಡ, ಶ್ರಮಪಟ್ಟು ಓದಿ

Last Updated 11 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

ಮಡಿಕೇರಿ: ದೇವರ ಹೆಸರಿನಲ್ಲಿ ಹರಕೆ ಹೊರದೇ ವಿದ್ಯಾರ್ಥಿಗಳು ಶ್ರಮಪಟ್ಟು ಓದಿ, ಪರೀಕ್ಷೆಗಳನ್ನು ಎದುರಿಸಬೇಕು ಎಂದು ಹಿರಿಯ ಉಪ ವಿಭಾಗಾಧಿಕಾರಿ ಡಾ.ಎಂ.ಆರ್.ರವಿ ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ `ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ~ ಎಂಬ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಅಧ್ಯಯನದ ಜೊತೆ ಊಟ, ತಿಂಡಿ, ನಿದ್ರೆಯನ್ನು ಎಂದಿನಂತೆ ಮಾಡಬೇಕು. ಪರೀಕ್ಷೆ ಅಂದತಕ್ಷಣ ಭಯಬೀಳುವುದು, ಆತಂಕಕ್ಕೆ ಒಳಗಾಗುವುದು ಬೇಡ. ಸಹಜವಾಗಿ ಹಾಗೂ ಧೈರ್ಯದಿಂದ ಎದುರಿಸಿ ಎಂದು ಅವರು ಕರೆ ನೀಡಿದರು.

ಪರೀಕ್ಷೆಯು ಇಡೀ ಬದುಕಿನ ಚಿತ್ರಣವನ್ನು ಬದಲಾಯಿಸುವ ಒಂದು ವಿಧಾನವಾದ್ದರಿಂದ  ವಿದ್ಯಾರ್ಥಿಗಳು ಆಸಕ್ತಿಯಿಂದ ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಆ ದಿಸೆಯಲ್ಲಿ ದಿನಕ್ಕೆ ಕನಿಷ್ಠ 4ರಿಂದ 6 ಗಂಟೆಯಾದರೂ ಪರೀಕ್ಷೆಗೆ ತಯಾರಾಗಬೇಕು ಎಂದು ಹೇಳಿದರು.

ಪರೀಕ್ಷೆಯ ದಿನಗಳು ಹತ್ತಿರ ಬಂದಿರುವುದರಿಂದ ಪೋಷಕರು ಮನೆಗಳಲ್ಲಿ ಟಿ.ವಿ. ನೋಡುವುದನ್ನು ಬಿಡಬೇಕು. ಮಕ್ಕಳಿಗೆ ಅಧ್ಯಯನ ಮಾಡಲು ಉತ್ತಮ ವಾತಾವರಣ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರು ಮಾತನಾಡಿ ಪರೀಕ್ಷೆ ಯುದ್ಧವಲ್ಲ, ಹಬ್ಬ ಎಂಬ ಭಾವನೆಯಿಂದ ಪರೀಕ್ಷೆ ಬರೆಯಬೇಕು. ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ನಗರಸಭೆ ಅಧ್ಯಕ್ಷರಾದ ಎಚ್.ಎಂ.ನಂದಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಂಡು ಓದಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ     ವಿದ್ಯಾರ್ಥಿಗಳು ಜಾಗೃತರಾದರೆ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಾ ಚೈತನ್ಯ,  ಶೈಲಾ, ಸತ್ಯನಾರಾಯಣ, ಗಿರೀಶ್ ರಾಜೇ ಅರಸ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧರಾಗುವ ಬಗ್ಗೆ ಮಾರ್ಗದರ್ಶನ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ ಶೆಣೈ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರನ್,  ಶಿಕ್ಷಣ ಸಂಯೋಜಕರಾದ ಎಚ್.ಆರ್. ಮುತ್ತಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಯಶೋದ ಮತ್ತಿತರು ಇದ್ದರು. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರಾದ ಲಿಂಗರಾಜು ಸ್ವಾಗತಿಸಿದರು, ಶಾರದಾ ರಾಮನ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT