ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಯರು ನಾವು ಧನ್ಯರು

ಅಂತರ್ಯುದ್ಧ
Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಇಂದು ಬೆಳಿಗ್ಗೆ ಯಾವುದೇ ಅನಾರೋಗ್ಯವಿಲ್ಲದೇ ಎದ್ದಿದ್ದರೆ ನಾವು ಧನ್ಯರು. ಏಕೆಂದರೆ ರಾತ್ರಿ ಮಲಗಿದವರಲ್ಲಿ 3 ಲಕ್ಷ ಜನ ಏಳುವಷ್ಟರಲ್ಲಿ ಸತ್ತಿರುತ್ತಾರೆ. ಇದುವರೆಗೆ ಯಾವುದೇ ರೀತಿಯ ಹಿಂಸೆ, ಅಂದರೆ ಜೈಲುವಾಸ, ನೇರವಾಗಿ ಭಯೋತ್ಪಾದಕರ ದಾಳಿ, ಪ್ರಳಯ, ಮಹಾಪೂರ, ಭೂಕಂಪ ಇತ್ಯಾದಿ ಅನುಭವಿಸಿಲ್ಲದಿದ್ದರೂ ನಾವೇ ಧನ್ಯರು. ಏಕೆಂದರೆ, ಯಾವುದೋ ಒಂದು ರೀತಿಯಲ್ಲಿ ನೇರವಾಗಿ ಹಿಂಸೆಗೆ ಒಳಗಾಗುತ್ತಿರುವ 50 ಕೋಟಿ ಜನರಿಗಿಂತ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ.

ನಮಗೆ ಪ್ರತಿದಿನ ಊಟ ಸಿಗುತ್ತಿದೆ, ಬಟ್ಟೆ ಇದೆ, ಸ್ವಂತದ್ದೋ ಅಥವಾ ಬಾಡಿಗೆಯದೋ ವಾಸಿಸಲು ಮನೆ ಇದೆ. ಶೇ 75 ಜನಕ್ಕೆ ಇದರಲ್ಲಿ ಯಾವುದೋ ಒಂದು ಇರುವುದಿಲ್ಲ. ನಿಮಗೆ ಓದು, ಬರಹ ಬರುತ್ತದೆ. ಆ ಮೂಲಕ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತಿಳಿಯುತ್ತಿವೆ. 200 ಕೋಟಿ ಜನಕ್ಕೆ ಓದು-ಬರಹ ಬರುವುದಿಲ್ಲ. ನಮ್ಮ ತಂದೆ-ತಾಯಿ ಜೀವಂತವಾಗಿದ್ದಾರೆ, ಇನ್ನೂ ಮದುವೆಯ ಬಂಧನದಲ್ಲಿ ಇದ್ದಾರೆ. ನಾವೇ ಅದೃಷ್ಟವಂತರು. ನಮ್ಮ ಪರ್ಸ್‌ನಲ್ಲಿ, ಬ್ಯಾಂಕ್‌ನಲ್ಲಿ ಹಣವಿದೆ. ಭಿಕ್ಷುಕರಿಗೆ ಒಂದು ರೂಪಾಯಿ ಕೊಡಲು ಸಾಧ್ಯವಿದೆ. ಹೀಗಾಗಿ ಪ್ರಪಂಚದಲ್ಲಿರುವ ಶೇ 8ರಷ್ಟು ಶ್ರೀಮಂತರಲ್ಲಿ ನಾವೂ ಒಬ್ಬರು.

ಆದರೂ... ನಮಗೆ ಸಂತೃಪ್ತಿ ಎಂಬುದಿಲ್ಲ ಯಾಕೆ? ಯಾಕೆಂದರೆ ನಾವು ಎಲ್ಲಿ ಕೆಲಸ ಮಾಡಬೇಕೋ ಮತ್ತು ಎಲ್ಲಿ ಮಾಡುತ್ತಿದ್ದೇವೆಯೋ ಇವುಗಳ ವ್ಯತ್ಯಾಸ ನಮಗೆ ತಿಳಿದಿಲ್ಲ. ಅಂದರೆ, ಅದು ಜಾಗಕ್ಕೆ ಸಂಬಂಧಿಸಿದ ವಿಷಯವಲ್ಲ. ನಮ್ಮ ಆಸಕ್ತಿ, ಪ್ರತಿಭೆಗೆ ತಕ್ಕಂತಹ ಕೆಲಸದಲ್ಲಿ ನಾವು ತೊಡಗಿದ್ದೇವೆಯೇ ಎಂಬುದು ಮುಖ್ಯ.

ನಮ್ಮ ಸುತ್ತಲೂ ಎರಡು ವಲಯಗಳಿವೆ.
1. ಪ್ರಭಾವಿ ವಲಯ
2. ಕಾಳಜಿ ವಲಯ

ನಾವು ನಮ್ಮ ಪ್ರಭಾವಿ ವಲಯದಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯ. ಕಾಳಜಿ ವಲಯದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಂದರೆ ಏನು?

ಉದಾ: ವಾಹನ ದಟ್ಟಣೆಯಿಂದ ಎಲ್ಲೆಡೆಯೂ ತೊಂದರೆ ಆಗುತ್ತಿರುವ ಬಗ್ಗೆ ನನಗೆ ಕಾಳಜಿ ಇದೆ. ಆದರೆ ಈ ಬಗ್ಗೆ ಏನೂ ಮಾಡಲು ನನಗೆ ಸಾಧ್ಯವಿಲ್ಲ. ಯಾಕೆಂದರೆ ನಾನು ಟ್ರಾಫಿಕ್ ಕಮಿಷನರ್ ಅಲ್ಲ. ಆದರೆ ನನ್ನ ಕಾರಿನ ಮೇಲೆ ನನಗೆ ಹಿಡಿತವಿದೆ. ಆದ್ದರಿಂದ ನಾನು ಕಾರಿನಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳಬಹುದು. ಅದು ಬಿಟ್ಟು ನಾನು ವಾಹನ ದಟ್ಟಣೆಯ ವಿಷಯ ಚಿಂತಿಸುತ್ತಾ, ಸದಾ ದೂಷಿಸುತ್ತಿದ್ದರೆ ಪ್ರಯೋಜನವಿಲ್ಲ. ನನ್ನ ನೆಮ್ಮದಿ ಹಾಳಾಗುತ್ತದೆ ಅಷ್ಟೆ. ಟ್ರಾಫಿಕ್ ಕಮಿಷನರ್ ನನ್ನನ್ನು ಕರೆದು 10,000 ಜನಕ್ಕೆ ತರಬೇತಿ ನೀಡಲು ತಿಳಿಸಿದರೆ ಆಗ ನಾನು ಏನಾದರೂ ಮಾಡಬಹುದು. ಅದು ನನ್ನ ಪ್ರಭಾವಿ ವಲಯವಾಗುತ್ತದೆ.

ಭಾರತೀಯ ಕ್ರಿಕೆಟ್ ತಂಡ ಚೆನ್ನಾಗಿ ಆಡುತ್ತಿಲ್ಲವೆಂದು ನನಗೆ ತಿಳಿದಿದೆ. ನಾನು ಚಿಂತಿಸುತ್ತಾ ಕುಳಿತರೆ ತಂಡ ಸುಧಾರಿಸುವುದಿಲ್ಲ. ಈಗ ಕೆಲವರಿಗೆ ಸಿಟ್ಟು ಬರಬಹುದು. ಹಾಗಾದರೆ ನಾವು ಈ ಎಲ್ಲದರ ಬಗ್ಗೆ ಕಾಳಜಿ ವಹಿಸಲೇಬಾರದೇ ಎಂದು ಅವರು ಕೇಳಬಹುದು. ಕಾಳಜಿ ಇರಬೇಕು. ನನಗೂ ಇದೆ. ಆದರೆ ನಾನು ಪ್ರಭಾವ ಬೀರಲು ಸಾಧ್ಯವಿಲ್ಲ. ನಾನೇನಾದರೂ ಐ.ಸಿ.ಸಿ. ಅಧ್ಯಕ್ಷನಾದರೆ ಏನಾದರೂ ಮಾಡಲು ಸಾಧ್ಯ.

ನಮ್ಮ ತಂದೆಯ ಆರೋಗ್ಯ ಚೆನ್ನಾಗಿಲ್ಲ. ಐ.ಸಿ.ಯು.ನಲ್ಲಿ ಇದ್ದಾರೆ. ನಾನು ಹೊರಗೆ ನಿಂತು ಶತಪಥ ಅಡ್ಡಾಡುತ್ತಿದ್ದರೆ ಅವರ ಆರೋಗ್ಯ ಸುಧಾರಿಸಿಬಿಡುವುದಿಲ್ಲ. ಅದರಿಂದ ನನ್ನ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಅಷ್ಟೇ. ಅಂದರೆ ನಾನು ಕಾಳಜಿ ವಲಯದಲ್ಲಿ ಇದ್ದೇನೆ. ಹೀಗಾಗಿ ನಾನು ದೇವರನ್ನು ಪ್ರಾರ್ಥಿಸಬಹುದು, ಡಾಕ್ಟರನ್ನು ಕೋರಬಹುದು. ಡಾಕ್ಟರ್ ಪ್ರಭಾವಿ ವಲಯದಲ್ಲಿದ್ದಾರೆ. ಅವರು ಏನಾದರೂ ಮಾಡಬಹುದು. ಅದು ಬಿಟ್ಟು ನಾನು ಅಳುತ್ತಾ ಕುಳಿತರೆ ತಂದೆಯನ್ನು ನೋಡಿಕೊಳ್ಳುವವರು ಯಾರು? ನಾನು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿದ್ದರೂ ತಂದೆ ಆರೋಗ್ಯ ಕೆಡಿಸಿಕೊಂಡರೆ ನಾನು ಚಿಕಿತ್ಸೆ ಮಾಡುವಷ್ಟು ಪ್ರಭಾವಿ ಅಲ್ಲ. ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗಬಹುದು ಅಷ್ಟೆ.

ನನ್ನ ಪ್ರಭಾವಿ ವಲಯವೆಂದರೆ ನನ್ನ ಕುಟುಂಬ ವರ್ಗ- ಅಂದರೆ ತಂದೆ, ತಾಯಿ, ಸಹೋದರ, ಸಹೋದರಿಯರು. ಇಲ್ಲಿ ನಾನು ಪ್ರಭಾವ ಬೀರಲು ಸಾಧ್ಯ. ಕ್ರಮೇಣ ನಮ್ಮ ಪ್ರಭಾವವನ್ನು ಹೊರಗೂ ವಿಸ್ತರಿಸಿಕೊಳ್ಳಬೇಕು. ಹೀಗೆ ನಮ್ಮ ಪ್ರಭಾವಿ ವಲಯ ದೊಡ್ಡದಾಗುತ್ತಾ ಬಂದಾಗ ನಾವು ವಾಹನ ದಟ್ಟಣೆ ಸಮಸ್ಯೆಗೆ, ಭಾರತೀಯ ಕ್ರಿಕೆಟ್ ಸುಧಾರಣೆಗೆ ಏನಾದರೂ ಪ್ರಯತ್ನ ಮಾಡಬಹುದು.
* * *
ಮನೆಯಲ್ಲಿ ಯಾರೂ ನಿಮ್ಮ ಮಾತು ಕೇಳುವುದಿಲ್ಲವೆಂದು ನಿಮಗೆ ಬೇಸರ ಆಗಿರಬಹುದು. ಆದರೆ ನೀವು ಬೆಳೆದರೆ ಇತರರು ತಾವಾಗೇ ನಿಮ್ಮನ್ನು ಹಿಂಬಾಲಿಸುತ್ತಾರೆ. ಜನ ನಾವು ಹೇಳುವುದನ್ನು ಮಾಡುವುದಿಲ್ಲ, ನಾವು ಮಾಡುವುದನ್ನು ಅನುಸರಿಸುತ್ತಾರೆ. ಆದ್ದರಿಂದ ಮೊದಲು ನಾವು ಬೆಳೆದು ಸ್ಥಿರವಾದರೆ ಮುಂದೆ ರಾಜ್ಯ, ದೇಶದ ಅಭಿವೃದ್ಧಿಯತ್ತ ಗಮನ ಹರಿಸಬಹುದು. ಮೊದಲು ವ್ಯಾಯಾಮ, ಧ್ಯಾನದಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಆರೋಗ್ಯ ಸರಿಯಿಲ್ಲದಿದ್ದರೆ ಯಾರೂ ನಮ್ಮ ಮಾತನ್ನು ಕೇಳುವುದಿಲ್ಲ. ಹೀಗೆ ನಮ್ಮಲ್ಲಿ ಸ್ಥಿರತೆ ಮತ್ತು ನೆಮ್ಮದಿ ಇದ್ದರೆ ಪ್ರಭಾವಿ ವಲಯ ವಿಸ್ತರಿಸುತ್ತದೆ.

`ನಾನು ಒಳಗೂ, ಹೊರಗೂ ಒಂದೇ ರೀತಿ ಇರುತ್ತೇನೆ, ಏನು ಮಾಡುತ್ತೇನೋ ಅದನ್ನೇ ಹೇಳುತ್ತೇನೆ; ಏನು ಹೇಳುತ್ತೇನೋ ಅದನ್ನೇ ಪಾಲಿಸುತ್ತೇನೆ. ಆದ್ದರಿಂದ ನಾನು ಇಷ್ಟು ಬೆಳೆದಿದ್ದೇನೆ. ನಾನು ಸಂತೋಷದಿಂದ ಅತಿಯಾಗಿ ಬೆಳೆದು ಯಶಸ್ಸು ಗಳಿಸಿದರೆ ನನ್ನ ಪ್ರಭಾವಿ ವಲಯ ದೊಡ್ಡದಾಗುತ್ತದೆ. ಆಗ ನಾನು ಹೆಚ್ಚು ಹೆಚ್ಚು ಬಲಶಾಲಿಯಾಗುತ್ತೇನೆ' ಎಂಬಂತಹ ವಾಸ್ತವ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.

ಕೆಲವರು ಕೆಲವು ಪ್ರಭಾವಶಾಲಿಗಳನ್ನು ಕೇಳುತ್ತಾರೆ `ನಿಮ್ಮ ಮಾತಿನಲ್ಲಿ ಅಷ್ಟೊಂದು ಪ್ರಭಾವ ಇದೆಯಲ್ಲ ಹೇಗೆ? ಎಂದು. ಪ್ರಭಾವ ಬರುವುದು ನಾಲಿಗೆಯಿಂದಲ್ಲ; ಸ್ಥಿರತೆಯಿಂದ ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT