ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ

Last Updated 3 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಕಲ್ಯಾಣಿಗಳ ಸ್ವಚ್ಛತೆ, ಹೂಳೆತ್ತುವ ಕೆಲಸ ಮತ್ತು ಮಳೆ ನೀರು ಸಂಗ್ರಹಕ್ಕಾಗಿ 2010ನೇ ಸಾಲಿಗೆ ಇಲ್ಲಿನ ನಗರಸಭೆಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಪಡೆದುಕೊಂಡಿದೆ. ಪ್ರಶಸ್ತಿಯು ್ಙ 3 ಲಕ್ಷ ನಗದು ಬಹುಮಾನ ಮತ್ತು ಮತ್ತು ಪ್ರಮಾಣಪತ್ರ ಒಳಗೊಂಡಿದೆ.

ಪ್ರಶಸ್ತಿ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಪೌರಾಯುಕ್ತ ವಿಜಯಕುಮಾರ್ ಮತ್ತು ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಸಿಟಿ ಮ್ಯಾನೇಜರ್ಸ್‌ ಅಸೋಸಿಯೇಷನ್ ವತಿಯಿಂದ ಈ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ  ನಡೆದ ‘ಮುನಿಸಿಪಾಲಿಕಾ- 2011’ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಪ್ರಶಸ್ತಿ ವಿತರಿಸಿದರು ಎಂದು ತಿಳಿಸಿದರು.

ಪಾಳೆಗಾರರ ಕಾಲದ ಏಳು ಕಲ್ಯಾಣಿಗಳನ್ನು ಹೂಳು ಎತ್ತಿಸಿ ಪುನಃಶ್ಚೇತನಗೊಳಿಸಿ ನಿರ್ವಹಣೆ ಮಾಡಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ‘ನಗರಗಳ ಚಲನಶೀಲತೆಗಾಗಿ ಉತ್ತಮ ನಗರಾಡಳಿತ’ ಕುರಿತ ಪ್ರಶಸ್ತಿಯೂ ನಗರಸಭೆಗೆ ದೊರೆತಿದೆ ಎಂದು ತಿಳಿಸಿದರು.

ನಲ್ಲಿಗಳಿಗೆ ಮೀಟರ್

ನಗರದಲ್ಲಿ ಜೂನ್‌ನಿಂದ ನಲ್ಲಿಗಳಿಗೆ ಕೆಎಂಆರ್‌ಪಿ ಯೋಜನೆ ಅಡಿಯಲ್ಲಿ ಮೀಟರ್ ಅಳವಡಿಸಲಾಗುವುದು. ಮೊದಲನೇ ಹಂತದಲ್ಲಿ 10 ಸಾವಿರ ನಲ್ಲಿಗಳಿಗೆ ಮೀಟರ್ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಪೌರಾಯುಕ್ತ ವಿಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕುಂದಾಪುರದಲ್ಲಿ ಯಾವುದೇ ರೀತಿಯ ಸಾರ್ವಜನಿಕ ನಲ್ಲಿಗಳು ಇಲ್ಲ. ಹಣ ಪಾವತಿಸಿ ನೀರು ಬಳಸುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಿಂದ ನೀರಿನ ಸಮಸ್ಯೆ ಉಂಟಾಗಿಲ್ಲ. ಇದರಿಂದ 8ಕ್ಕೆ ನಿರಂತರ ನೀರು ಪೂರೈಸಲಾಗುತ್ತಿದೆ. ಇದೊಂದು ಮಾದರಿ ವ್ಯವಸ್ಥೆಯಾಗಿದ್ದು, ಪ್ರಶಸ್ತಿಯೂ ದೊರೆತಿದೆ ಎಂದರು.

ಚಿತ್ರದುರ್ಗ ನಗರದಲ್ಲಿ 13ರಿಂದ 14 ಸಾವಿರ ಕಾನೂನು ಬದ್ಧವಾಗಿ ನಲ್ಲಿಗಳಿಗೆ ಸಂಪರ್ಕ ನೀಡಲಾಗಿದೆ. ನಲ್ಲಿಗಳಿಗೆ ಮೀಟರ್ ಅಳವಡಿಸುವುದರಿಂದ ನೀರು ವ್ಯರ್ಥವಾಗುವುದು ತಪ್ಪುತ್ತದೆ. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡುವುದು ಅತ್ಯಗತ್ಯ ಎಂದು ನುಡಿದರು.ವಿದ್ಯುತ್ ಸಮಸ್ಯೆಯಿಂದ ಹಲವು ಬಾರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ್ಙ 29 ಲಕ್ಷ ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಫೀಡರ್ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಅನುಮೋದನೆಯೂ ದೊರೆತಿದೆ ಎಂದು ಮಾಹಿತಿ ನೀಡಿದರು.

ಪುಕ್ಕಟೆ ನೀರು ಇಲ್ಲ
ಉಚಿತವಾಗಿ ಯಾರಿಗೂ ನೀರು ಪೂರೈಸುವುದಿಲ್ಲ. ಅಕ್ರಮವಾಗಿ ನಲ್ಲಿಗಳನ್ನು ಪಡೆದುಕೊಂಡವರು ಸಕ್ರಮ ಮಾಡಿಕೊಳ್ಳಲು ಕಾಲವಕಾಶ ನೀಡುತ್ತೇವೆ. ಸಾರ್ವಜನಿಕ ನಲ್ಲಿಗಳನ್ನು ಕಡಿತಗೊಳಿಸಲು ಉದ್ದೇಶಿಸಿದ್ದೇವೆ ಎಂದು ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.

ತರಳಬಾಳು ನಗರ, ವಿದ್ಯಾನಗರ, ಬ್ಯಾಂಕ್ ಕಾಲೊನಿಗಳಲ್ಲಿ ಪರವಾನಗಿ ಇಲ್ಲದೆ ನಲ್ಲಿ ಸಂಪರ್ಕ ಪಡೆದಿರುವುದು ಗಮನಕ್ಕೆ ಬಂದಿದೆ. ನೀರು ಪಡೆಯುವವರೆಲ್ಲರೂ ಹಣ ಪಾವತಿಸಲೇಬೇಕು. ಶಾಂತಿಸಾಗರದಿಂದ ನೀರು ತರುವ ಮಾರ್ಗದಲ್ಲಿ ಸುಮಾರು 30 ಹಳ್ಳಿಗಳಿವೆ. ಹಲವು ಹಳ್ಳಿಗಳು ಈ ನೀರು ಪಡೆಯುತ್ತಿವೆ. ನಮಗೆ ಹಣ ಪಾವತಿಸದಿದ್ದರೆ ನಾವು ನೀರು ಪೂರೈಸುವುದಿಲ್ಲ. ಈಗಾಗಲೇ ಜಗಳೂರು ಪಟ್ಟಣ ಪಂಚಾಯ್ತಿ ್ಙ 25 ಲಕ್ಷ ಪಾವತಿಸಿದೆ ಎಂದು ಮಾಹಿತಿ ನೀಡಿದರು.

ನೈರ್ಮಲ್ಯ ಕಾಪಾಡಲು ನಗರಸಭೆ ಹೊಸ ಪದ್ಧತಿಯನ್ನು ಅಳವಡಿಸುತ್ತಿದೆ. ವಾರ್ಡ್‌ವಾರು ಯೋಜನೆ ರೂಪಿಸಿ ಕಸವನ್ನು ಸಂಗ್ರಹಿಸಲಾಗುವುದು. 6 ಕಸ ಸಂಗ್ರಹಿಸುವ ವಾಹನಗಳ ಮೂಲಕ ಕಸ ಸಂಗ್ರಹಿಸುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ ಎಂದು ಪೌರಾಯುಕ್ತರು ತಿಳಿಸಿದರು.

ಪಾದಚಾರಿ ಮಾರ್ಗ ನಿರ್ಮಿಸಲು ್ಙ 1.10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಿಸಿದರು.
ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಫಲಕಗಳನ್ನು ಸಹ ಹಾಕುವಂತೆ ಸಲಹೆ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಅಲ್ಲಾಭಕ್ಷ, ಸದಸ್ಯರಾದ ಸಿ.ಟಿ. ಕೃಷ್ಣಮೂರ್ತಿ, ಕುಮಾರ್, ರುದ್ರಾಣಿ ಗಂಗಾಧರ್, ಸರ್ದಾರ್ ಪಾಷಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT