ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಅವಶ್ಯಕತೆ ನಮಗಿದೆ ಭಗತ್!

Last Updated 22 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕ್ರೂರಿ ಬ್ರಿಟಿಷರು ನಿಮ್ಮನ್ನು ಗಲ್ಲಿಗೇರಿಸಿ ಇಂದಿಗೆ ಸರಿಯಾಗಿ (ಮಾರ್ಚ್ 23) ಎಂಬತ್ತು ವರ್ಷಗಳು. ನೀವು ಗತಿಸಿದ 16 ವರ್ಷಗಳ ಬಳಿಕ ನಮಗೆ ಸ್ವಾತಂತ್ರ್ಯ ಬಂತು. ಆದರೆ ನೀವು ಆಶಿಸಿದ ಸ್ವಾತಂತ್ರ್ಯವಲ್ಲ. ಬದಲಾಗಿ ಯಾವಾಗಲೂ ನೀವು ಎಚ್ಚರಿಸುತ್ತಿದ್ದಂತೆಯೇ, ಬ್ರಿಟಿಷರಿಂದ ಇಲ್ಲಿನ ಬಂಡವಾಳಶಾಹಿಗಳಿಗೆ ‘ಅಧಿಕಾರ ಹಸ್ತಾಂತರ’ದ ಮೂಲಕ ನಮಗೆ ‘ಸ್ವಾತಂತ್ರ್ಯದೇವಿ’ ಒಲಿದಳು.

ನಾವು ಪಡೆಯುತ್ತಿರುವ ಶಿಕ್ಷಣವು ಮಾನವೀಯತೆಯ ಕಾಳಜಿಗಿಂತ, ಜ್ಞಾನ ಪಡೆಯುವ ಆಶಯಕ್ಕಿಂತ, ಹೆಚ್ಚು ಆದಾಯದ ಉದ್ಯೋಗ ದೊರಕಿಸಲು ಒತ್ತು ನೀಡುತ್ತಿದೆ. ನಮ್ಮನ್ನು ಇನ್ನಷ್ಟು ಮಾನವೀಯಗೊಳಿಸಬೇಕಾಗಿದ್ದ ಸಂಸ್ಕೃತಿಯು ಅದೇ ಹೆಸರಿನಲ್ಲಿ ವಿಕೃತಿಯನ್ನು ನೀಡುತ್ತಿದೆ. ‘ಆಯ್ಕೆ ನಿಮಗೆ ಬಿಟ್ಟದ್ದು’ ಎಂದು ಕೆಲ ಮೇಧಾವಿಗಳು ನಮಗೆ (ಯುವಕರಿಗೆ) ಸಲಹೆ ನೀಡುತ್ತಾರಾದರೂ, ಎಲ್ಲವೂ ಅದೇ ಆದಾಗ ನಮ್ಮ ಮುಂದೆ ಉಳಿಯುವ ಆಯ್ಕೆ ಯಾವುದು? 

ನೀವು ಇಡೀ ದೇಶಕ್ಕಾಗಿ ಜೈಲಿಗೆ ಹೋದಿರಿ, ಅನ್ಯಾಯವೇ ಸರ್ವಸ್ವವಾಗಿದ್ದ ಬ್ರಿಟಿಷರನ್ನು ಎದುರು ಹಾಕಿಕೊಂಡಿರಿ. ಅಂಥ ಕೆಚ್ಚು ನಮಗೆಲ್ಲಿದೆ? ನಿಮಗೆ ಮರಣದಂಡನೆ ಖಚಿತವೆಂದು ತಿಳಿದಾಗ ತಂದೆ ಕಿಶನ್‌ಸಿಂಗ್ ಅದನ್ನು ತಡೆಯಲು ಸಹಜ ಪುತ್ರ ವ್ಯಾಮೋಹದಿಂದ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿದರು. ಇದರಿಂದ ನೀವು ಕೆಂಡಾಮಂಡಲವಾಗಿ ಅವರನ್ನೇ ತರಾಟೆಗೆ ತೆಗೆದುಕೊಂಡಿರಿ. “ನಾನು ಇದ್ದರೂ ಕೂಡ ಇನ್ನೂ ಎತ್ತರಕ್ಕೇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನನ್ನ ಜೀವನ ಕ್ರಾಂತಿಯೊಂದಿಗೆ ಬೆರೆತುಹೋಗಿದೆ.

‘ಭಗತ್‌ಸಿಂಗ್ ಪ್ರಾಣಕ್ಕೆ ಹೆದರಿ ತಂದೆಯ ಮೂಲಕ ಬ್ರಿಟಿಷರಿಗೆ ಶರಣಾದ’ ಎಂಬ ಕಪ್ಪು ಚುಕ್ಕೆ ನನ್ನ ವ್ಯಕ್ತಿತ್ವಕ್ಕೆ ಅಂಟಿಕೊಳ್ಳುವುದು ಬೇಡ. ಆದ್ದರಿಂದ ನನ್ನ ನಿಲುವನ್ನು ಪತ್ರಿಕೆಗಳಿಗೆ ತಲುಪಿಸಿ” ಎಂದು ಮನವಿ ಮಾಡಿಕೊಂಡಿರಿ. ಅದು ‘ದಿ ಟ್ರಿಬ್ಯೂನ್’ ಪತ್ರಿಕೆಯಲ್ಲೂ ಪ್ರಕಟಗೊಂಡಿತು ಕೂಡ. ಇದನ್ನೆಲ್ಲ ನೆನಪಿಸಿಕೊಳ್ಳಲು ಕಾರಣವಿದೆ. ಇನ್ನು ನೀವು ಪ್ರತಿಪಾದಿಸಿದ ವೈಜ್ಞಾನಿಕ, ಧರ್ಮನಿರಪೇಕ್ಷ ದೃಷ್ಟಿಕೋನ. ಇದು ಈಗ ಬೇರೊಂದು ಅರ್ಥವನ್ನೇ ಪಡೆದುಕೊಂಡಿದೆ. ವೈಜ್ಞಾನಿಕ ಮನೋಭಾವ ಶಾಲಾ ಪಠ್ಯಗಳಲ್ಲಿ ಅಡಕವಾಗಿದೆಯೇ ಹೊರತು, ನಿತ್ಯ ಜೀವನದಲ್ಲಲ್ಲ. ಆಧುನಿಕ ವಿಜ್ಞಾನದ ಪ್ರತೀಕವಾದ ರಾಕೆಟ್ ಉಡಾವಣೆಗೂ ಮುನ್ನ ತೆಂಗಿನಕಾಯಿ ಒಡೆದು ಕರ್ಪೂರ ಹಚ್ಚುತ್ತಾರೆ ಎಂದರೆ ವೈಜ್ಞಾನಿಕ ಮನೋಧರ್ಮ ಯಾವ ಮಟ್ಟದಲ್ಲಿದೆ ಊಹಿಸಿಕೊಳ್ಳಿ!

ಇನ್ನು ಧರ್ಮ ನಿರಪೇಕ್ಷತೆ. ಎಲ್ಲ ಧರ್ಮಗಳನ್ನು ವೈಯಕ್ತಿಕ ನೆಲೆಯಲ್ಲಿ ಆಚರಿಸಬೇಕು ಎಂಬ ವ್ಯಾಖ್ಯಾನವನ್ನೇ ತಿರುಚಿ ಎಲ್ಲ ಧರ್ಮಗಳಿಗೂ ಸಮಾನ ಆದ್ಯತೆಯೆಂದು ಅರ್ಥೈಸಲಾಯಿತು. ಅದರ ಪರಿಣಾಮ ಇಂದು ಎಲ್ಲೆಂದರಲ್ಲಿ ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು ಎದ್ದು ನಿಂತಿವೆ. ಕೋಟ್ಯಂತರ ಹಣವನ್ನು ತಮ್ಮ ಒಡಲಲ್ಲಿಟ್ಟುಕೊಂಡು! ಆ ಜಾಗದಲ್ಲಿ ಸೂರನ್ನು ಕಟ್ಟಿಕೊಳ್ಳಬಹುದಾಗಿದ್ದವರು ಅವುಗಳ ಮುಂದೆ ಕುಳಿತಿದ್ದಾರೆ. ದೇವರ ಮುಂದೆ ಕೈಯೊಡ್ಡಿ.

ನಾವು ದಿನೇ ದಿನೇ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಹಾಯಕ್ಕೆ ಮೊರೆಯಿಡುತ್ತಿರುವವರನ್ನು ಕಂಡು ಮಿಡಿಯಬೇಕಾಗಿದ್ದ ನಾವು ಮುಖ ತಿರುಗಿಸಿ ಹೋಗುತ್ತಿದ್ದೇವೆ. ಈ ಪ್ರಕ್ರಿಯೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಆದ್ದರಿಂದ ನಿಮ್ಮ ಅವಶ್ಯಕತೆ ನಮಗೆ ಅತ್ಯವಶ್ಯವಾಗಿದೆ. ಹೇಳಿ ಯಾವಾಗ ಬರುತ್ತೀರಿ?  ನಿಮ್ಮ ಆಗಮನದ ಬಳಿಕ ಮೂಡುವ ಉಷಃಕಾಲವನ್ನು ಬಣ್ಣಿಸುವ ಕವಿಗಳಾಗಲು ನಾವು ಹಾತೊರೆಯುತ್ತಿದ್ದೇವೆ. ಆದಷ್ಟು ಬೇಗ ನಮ್ಮ ಆಸೆ ಈಡೇರಿಸಿ...  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT