ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಕ್ರಮ: ಸಚಿವ ಜಾರಕಿಹೊಳಿ

Last Updated 3 ಜನವರಿ 2014, 8:54 IST
ಅಕ್ಷರ ಗಾತ್ರ

ರಾಯಚೂರು: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿ­ರುವ ರಾಜ್ಯದ ಗಡಿ ಭಾಗದ ಜಿಲ್ಲೆಗಳಾದ ಕೋಲಾರ, ರಾಯಚೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸಾರಾಯಿ, ಮದ್ಯ ತಯಾರಿಕೆಗೆ ಬಳಸುವ ರಾಸಾಯನಿಕ ‘ಸಿಎಚ್ ಪೌಡರ್’ ಸಾಗಾಟ ಮತ್ತು ಅಕ್ರಮ ಮದ್ಯ ಮಾರಾಟ ಜಾಲವಿದ್ದು, ಆಂಧ್ರಪ್ರದೇಶ ಪೊಲೀಸರು ಹಾಗೂ ರಾಜ್ಯದ ಅಬಕಾರಿ ಇಲಾಖೆ ಮತ್ತು ಪೊಲೀಸರ ತಂಡವನ್ನೊಳಗೊಂಡ ಜಂಟಿ ಕಾರ್ಯಪಡೆ ಮೂಲಕ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಅಬಕಾರಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಗುರುವಾರ ಸಂಜೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಸುವ ಜಾಲ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಇದರ ನಿಯಂತ್ರಣಕ್ಕೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಇಲಾಖೆ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ತಂಡವು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು.

ಅಕ್ರಮ ಮದ್ಯ ಸಾಗಾಟ, ಸಿ.ಎಚ್ ಪೌಡರ್ ಸಾಗಾಟ, ತಯಾರಿ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಇಲಾಖೆ ಅಧಿಕಾರಿಗಳ ತಂಡ ವರದಿ ಕೊಟ್ಟರೆ ಅದನ್ನು ಪರಿಶೀಲಿಸಿ ಕಾನೂನು ತಿದ್ದುಪಡಿ ತರುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

2200 ಹುದ್ದೆ ಭರ್ತಿ: ಅಬಕಾರಿ ಇಲಾಖೆಯಲ್ಲಿ 2,200 ವಿವಿಧ ಹುದ್ದೆಗಳು ಖಾಲಿ ಇದ್ದವು. ಇದರಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 500 ಹುದ್ದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇನ್ನೂ 1,700 ಹುದ್ದೆ ನೇಮಕಾತಿಗೂ ಇಲಾಖೆ ಬದ್ಧವಾಗಿದೆ. ಸಂವಿಧಾನದ 371(ಜೆ) ಕಲಂ ಅನುಷ್ಠಾನ ಪ್ರಕ್ರಿಯೆ ಬಳಿಕ ಈ ಹುದ್ದೆ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದರು.

700 ಕೋಟಿ ಆದಾಯ ಹೆಚ್ಚಳ: ಅಬಕಾರಿ ಇಲಾಖೆಯ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಆ ಪ್ರಕಾರ ಈ ಬಾರಿ ₨ 600ರಿಂದ 700 ಕೋಟಿ ಆದಾಯ ಹೆಚ್ಚಳವಾಗಿದೆ ಎಂದು ಹೇಳಿದರು.

ಪಕ್ಷದ ಆಂತರಿಕ ವಿಚಾರ ವರಿಷ್ಠರಿಗೆ ಬಿಟ್ಟದ್ದು:  ಸರ್ಕಾರದಲ್ಲಿ ಸಚಿವ ಸ್ಥಾನ ಯಾರಿಗೆ ಕೊಡಬೇಕು, ಯಾರಿಗೆ ಕೊಟ್ಟರೆ ಸೂಕ್ತ ಮುಂತಾದ ವಿಷಯಗಳು ಪಕ್ಷದ ಆಂತರಿಕ ವಿಚಾರಗಳು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT