ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸರಬರಾಜು ಯೋಜನೆ: ನಿರ್ವಹಣೆ ಖಾಸಗೀಕರಣಕ್ಕೆ ಒತ್ತಾಯ

Last Updated 1 ಜೂನ್ 2011, 6:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿರುವ 9 ಬಹುಗ್ರಾಮ ನೀರು ಸರಬರಾಜು ಯೋಜನೆಗಳು ನಿರುಪಯುಕ್ತವಾಗಿದ್ದು, ಅವುಗಳ ಸಮರ್ಪಕ ನಿರ್ವಹಣೆಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆ ಸೇರಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ ಸೇರಿದಂತೆ ಅನೇಕ ಜಿಪಂ ಸದಸ್ಯರು ಒಕ್ಕೊರಲಿನಿಂದ ಸೋಮವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಬಹುಗ್ರಾಮ ನೀರು ಸರಬರಾಜು ಯೋಜನೆಯ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ. ಯೋಜನೆಯ ಫಲಾನುಭವಿಗಳಿಂದ ಶುಲ್ಕ ವಸೂಲಿ ಮಾಡುವುದು ಗ್ರಾಪಂನಿಂದ ಅಸಾಧ್ಯವಾಗಿದ್ದು, ಅದಕ್ಕಾಗಿ ಈ ಯೋಜನೆಯ ನಿರ್ವಹಣೆ ಹಾಗೂ ಶುಲ್ಕ ವಸೂಲಿಗಾಗಿ ಖಾಸಗಿ ಏಜೆನ್ಸಿ ಅವರಿಗೆ ಗುತ್ತಿಗೆ ನೀಡಬೇಕು ಎಂದು ಸಜ್ಜನರ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಲನಿರ್ಮಲ ಅಧಿಕಾರಿಗಳು ಖಾಸಗಿ ನಿರ್ವಹಣೆಗಾಗಿ ಜಿಲ್ಲೆಯ ಬೈರನಪಾದ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಆಯ್ಕೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿರುವ ಎಲ್ಲ ಯೋಜನೆಗಳನ್ನು ಇದರ ವ್ಯಾಪ್ತಿಗೆ ಸೇರಿಸಬೇಕು ಎಂದು ಹೇಳಿದರು.

ಈ ಮಧ್ಯೆ ಶಾಸಕ ಜಿ.ಶಿವಣ್ಣ ರಾಣೇಬೆನ್ನೂರು ತಾಲ್ಲೂಕಿನ ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂದು ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ.ಕೋಮ್ಟೆ ಅವರನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ದ ಶಾಸಕರು ಕಿಡಿ ಕಾರಿದರು.

ಜಿಲ್ಲಾ ಕೇಂದ್ರದಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ತಾಲ್ಲೂಕು ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಅಧಿಕಾರಿಗಳಿಗೆ ಶಿವಣ್ಣ ತಾಕೀತು ಮಾಡಿದರು.

`ಬೀಜ ಗೊಬ್ಬರ ಪೂರೈಸಿ~
 ಜಿಲ್ಲೆಗೆ 115396 ಟನ್ ರಸಗೊಬ್ಬರ ಬೇಡಿಕೆ ಇದ್ದು, ಇದರಲ್ಲಿ ಈವರೆಗೆ 30507 ಟನ್ ರಸಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ ಡಿಎಪಿ 35022 ಟನ್ ಬೇಡಿಕೆ ಇದೆ.  ಆದರೆ ಈವರೆಗೆ ಸರಬರಾಜು ಆಗಿರುವುದು 10835 ಟನ್. ಇದರಲ್ಲಿ 8945 ಟನ್ ಗೊಬ್ಬರವನ್ನು ಈಗಾಗಲೇ ವಿತರಿಸಲಾಗಿದ್ದು, 1890 ಟನ್ ಡಿಎಪಿ ದಾಸ್ತಾನಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿರುವುದರಿಂದ ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ಸಿಗುವುದು ಅಸಾಧ್ಯ. ಹೀಗಾಗಿ ಕಾಂಪೋಸ್ಟ್ ಸೇರಿದಂತೆ ಮತ್ತಿತರರ ಗೊಬ್ಬರಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಗೆ 56438 ಕ್ವಿಂಟಲ್ ಬಿತ್ತನೆ ಬೀಜದ ಅಗತ್ಯವಿದೆ. ಇದರಲ್ಲಿ 12468 ಕ್ವಿಂಟಲ್ ಬೀಜವನ್ನು ಈಗಾಗಲೇ ದಾಸ್ತಾನು ಮಾಡಿಡಲಾಗಿದೆ. ಹಂತ ಹಂತವಾಗಿ ಜಿಲ್ಲೆಗೆ ಪೂರೈಕೆಯಾಗಲಿದೆ. ಬೀಜದ ಕೊರತೆಯುಂಟಾಗುವುದಿಲ್ಲ ಎಂದು ತಿಳಿಸಿದರು.

ಇನ್ನೂ ಬಿಟಿ ಬೀಜವೂ ಜಿಲ್ಲೆಗೆ 4.35 ಲಕ್ಷ ಪ್ಯಾಕೇಟ್ ಬೇಕು. ಈಗಾಗಲೇ ವಿವಿಧ ಕಂಪನಿಗಳಿಂದ 2 ಲಕ್ಷ ಪ್ಯಾಕೇಟ್ ಬಿತ್ತನೆ ಬೀಜ ಜಿಲ್ಲೆಗೆ ಬಂದಿದೆ. ರೈತರು ಕನಕ ಬೀಜವೇ ಬೇಕೆನ್ನುತ್ತಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಕನಕ 7351 ತಳಿಯ ಬಿಟಿ ಬೀಜವನ್ನು ಜಿಲ್ಲೆಗೆ 45 ಸಾವಿರ ಪ್ಯಾಕೇಟ್ ಸರಬರಾಜು ಆಗಿತ್ತು. ಅದೆಲ್ಲವನ್ನು ಈಗಾಗಲೇ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ರೈತರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಕಳಪೆ ಬೀಜ
ಇದೇ ವೇಳೆ ಶಿಗ್ಗಾಂವ ತಾಲ್ಲೂಕಿನ ಜಿಪಂ ಸದಸ್ಯ ಶಶಿಧರ ಹೊನ್ನಣ್ಣನವರ, ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿರುವ ಶೇಂಗಾ ಬೀಜ ಕಳಪೆಯಾಗಿವೆ ಎಂದು ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾದ ಶೇಂಗಾ ಬೀಜವನ್ನು ಸಭೆಗೆ ಪ್ರದರ್ಶಿಸಿದರು. ಆಗ ಸಿಇಓ ಉಮೇಶ ಕುಸಗಲ್ ಈ ಬಗ್ಗೆ ಕೂಡಲೇ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಲು ಆದೇಶಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT