ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಜನಸ್ಪಂದನದಲ್ಲಿ ದೂರುಗಳ ಮಹಾಪೂರ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಬಡಾವಣೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಮೂರು ತಿಂಗಳಾದರೂ ರಿಪೇರಿ ಮಾಡಿಸಿಲ್ಲ... ಬಡಾವಣೆಯ ರಸ್ತೆಗಳಲ್ಲಿ ಬೀಳುವ ಕಸ ವಿಲೇವಾರಿ ಮಾಡದೇ ರಸ್ತೆಗಳೇ ತಿಪ್ಪೆಗುಂಡಿಗಳಾಗಿವೆ... ಪಾದಚಾರಿ ಮಾರ್ಗಗಳಲ್ಲಿ ಚಾಟ್ಸ್ ಮಾರುವ ಗಾಡಿಗಳಿಂದ ಪಾದಚಾರಿಗಳಿಗೆ ಅನನುಕೂಲವಾಗುತ್ತಿದೆ... ಬಡಾವಣೆಯ ಕುಡಿಯುವ ನೀರು ಮತ್ತು ಒಳಚರಂಡಿ ಲೈನ್‌ಗಳ ಸಮಸ್ಯೆಯನ್ನು ಕೇಳುವವರೇ ಇಲ್ಲ... ರಸ್ತೆಗಳಲ್ಲಿ ಸಮರ್ಪಕವಾಗಿ ವಾಹನ ನಿಲುಗಡೆಯ ಅವಕಾಶವಿಲ್ಲದೇ ವಾಹನ ಸವಾರರು ಪರದಾಡುವಂತಾಗಿದೆ...~

ನಗರದ ಕೆಂಪೇಗೌಡ ಬಡಾವಣೆಯ ಕೆಂಪೆಗೌಡ ಆಟದ ಮೈದಾನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಶನಿವಾರ ಆಯೋಜಿಸಿದ್ದ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ `ಸಮ್ಮುಖ~ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಗರಿಕರಿಂದ ಕೇಳಿಬಂದ ಸಮಸ್ಯೆಗಳ ಪಟ್ಟಿಯಿದು.

`ಗಿರಿನಗರದ ಐವತ್ತು ಅಡಿ ರಸ್ತೆಯಲ್ಲಿ ರಾತ್ರಿವೇಳೆ ನಿಲ್ಲುವ ಚಾಟ್ಸ್ ಮಾರುವ ತಳ್ಳುವ ಗಾಡಿಗಳಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಂಚಾರ ಸಮಸ್ಯೆ ಮಿತಿಮೀರುತ್ತಿದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು~ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ಆಗ್ರಹಿಸಿದರು.

`ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ನೀರು ಇಂಗುವ ಅವಕಾಶವೇ ಇಲ್ಲದಂತಾಗಿದೆ. ಮಳೆ ನೀರು ಇಂಗಿಸುವ ಬಗ್ಗೆ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಳೆ ನೀರನ್ನು ಇಂಗಿಸಿ ಅಂತರ್ಜಲ ಮರುಪೂರಣ ಮಾಡುವ ಬಗ್ಗೆ ಅರಿವು ಮೂಡಿಸಬೇಕು~ ಎಂದು ಸ್ಥಳೀಯ ನಿವಾಸಿ ರಶ್ಮಿ ಸಲಹೆ ನೀಡಿದರು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಿಂದ ಬಸ್, ನೀರು, ರಸ್ತೆ ಸಮಸ್ಯೆ ಸೇರಿದಂತೆ ನೂರು ದೂರಿನ ಅರ್ಜಿಗಳು ಬಂದಿವೆ. ಇವುಗಳಲ್ಲಿ 25 ಸಮಸ್ಯೆಗಳು ಪಾಲಿಕೆಯ ವ್ಯಾಪ್ತಿಯವಾಗಿದ್ದು, ಇವನ್ನು ಪರಿಶೀಲಿಸಿ ಪರಿಹಾರ ಕಾರ್ಯಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನುಳಿದ 75 ಸಮಸ್ಯೆಗಳು ವಿವಿಧ ಇಲಾಖೆಗಳ ವ್ಯಾಪ್ತಿಯವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅರ್ಜಿಗಳನ್ನು ವರ್ಗಾಯಿಸಲಾಗುವುದು~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ತಿಳಿಸಿದರು.

ಗೊಂದಲ : ಜನಸ್ಪಂದನ ಕಾರ್ಯಕ್ರಮದಲ್ಲಿ ನಾಗರಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಉತ್ತರ ನೀಡಬೇಕು ಎಂದು ಮೇಯರ್ ಮೊದಲೇ ಸೂಚನೆ ನೀಡಿದ್ದರು. ಆದರೆ ಸಾರ್ವಜನಿಕರು ಒಂದು ಸಮಸ್ಯೆಯನ್ನು ಹೇಳಿಕೊಂಡ ನಂತರವೇ ಮತ್ತೊಂದು ಸಮಸ್ಯೆಯನ್ನು ಹೇಳುತ್ತಾ ಹೋದ್ದರಿಂದ ಅಧಿಕಾರಿಗಳು ಸಮಸ್ಯೆಗಳಿಗೆ ಉತ್ತರ ನೀಡಲು ಅವಕಾಶವೇ ಸಿಗದೇ ಗೊಂದಲ ಉಂಟಾಯಿತು. 

 ಕಾರ್ಯಕ್ರಮದಲ್ಲಿ ಶಾಸಕ ಎಲ್. ಎ.ರವಿಸುಬ್ರಹ್ಮಣ್ಯ, ಪಾಲಿಕೆ ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಕೆ.ಚಂದ್ರಶೇಖರ್, ಎಚ್.ಎಸ್.ಲಲಿತಾ, ಎಂ.ವೆಂಕಟೇಶ್,  ಟಿ.ತಿಮ್ಮೇಗೌಡ, ಪಾಲಿಕೆಯ ದಕ್ಷಿಣ ವಲಯ ಜಂಟಿ ಆಯುಕ್ತ ಹೇಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

`ತೆರವು ಮಾಡಿ~
`ಗಾಂಧಿಬಜಾರ್‌ನ ಪಾದಚಾರಿ ಮಾರ್ಗಗಳ ಮೇಲೆ ನಿರ್ಮಿಸಲಾಗಿದ್ದ ಅಂಗಡಿಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆದ ನಂತರವೂ ಈಗ ಮತ್ತೆ ಅಂಗಡಿಗಳು ತಲೆ ಎತ್ತಿವೆ. ಇದರಿಂದ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ರಸ್ತೆಯಲ್ಲಿ ನಡೆದಾಡುವುದೇ ಕಷ್ಟವಾಗಿದೆ. ಕೂಡಲೇ ಪಾದಚಾರಿ ಮಾರ್ಗದ ಅಂಗಡಿಗಳನ್ನು ತೆರವುಗೊಳಿಸಬೇಕು~ ಎಂದು ಗಾಂಧಿಬಜಾರ್‌ನ ನಿವಾಸಿ ಕೋಟೇಶ್ವರ ಸೂರ್ಯನಾರಾಯಣ ರಾವ್ ಒತ್ತಾಯಿಸಿದರು.

`ಕೆರೆಗಳನ್ನು ಉಳಿಸಿ~
`ನಗರದಲ್ಲಿದ್ದ ನೂರಾರು ಕೆರೆಗಳ ಪೈಕಿ ಸದ್ಯ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಉಳಿದಿವೆ. ಉಳಿದಿರುವ ಕೆರೆಗಳ ಸಂರಕ್ಷಣೆಗಾದರೂ ಸರ್ಕಾರ ಮುಂದಾಗಬೇಕು. ನಗರದ ಕೆಂಪಾಂಬುಧಿ ಕೆರೆಯ ಅಭಿವೃದ್ಧಿ ಕೇವಲ ಮಾತುಗಳಿಗಷ್ಟೇ ಸೀಮಿತವಾಗಿದೆ. ಆದಷ್ಟು ಬೇಗ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು~ ಎಂದು ಸ್ಥಳೀಯರಾದ ಪುಟ್ಟಶಂಕರಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT