ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್: ಗಣ್ಯರ ಅಭಿಪ್ರಾಯಗಳು

Last Updated 6 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬಂದ್ ನಡೆಸುವುದು ಅನಿವಾರ್ಯ
`ಬಂದ್ ನಡೆಸುವುದು ರಾಜ್ಯದ ಜನರಿಗೆ ಅನಿವಾರ್ಯವಾಗಿತ್ತು. ಕೆಆರ್‌ಎಸ್ ಜಲಾಶಯ ಬತ್ತಿರುವಾಗ ಇತರೆ ರಾಜ್ಯಕ್ಕೆ ನೀರು ಬಿಡಬೇಕೆಂಬ ಆದೇಶ ಸರಿಯಲ್ಲ. ಈ ವಿಚಾರದಲ್ಲಿ ಸಂಸದರು ಹಾಗೂ ಮುಖ್ಯಮಂತ್ರಿ ಹೆಚ್ಚಿನ ಪ್ರಯತ್ನ ನಡೆಸಬೇಕಾಗಿತ್ತು. ಪರಿಶೀಲನೆಗೆ ಬಂದ ಕೇಂದ್ರ ತಂಡದ ಅಭಿಪ್ರಾಯವನ್ನು ಪಡೆದುಕೊಂಡು ರಾಜ್ಯ ಸರ್ಕಾರ ಮುಂದಿನ ಕ್ರಮದ ಬಗ್ಗೆ ಆಲೋಚನೆ ನಡೆಸಬೇಕು. ಕುಡಿಯಲು, ಬೆಳೆ ಬೆಳೆಯಲು ನೀರೇ ಇಲ್ಲದೇ ಹೋದರೆ ರಾಜ್ಯವೂ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ. ಈಗ ನಡೆದ ಬಂದ್‌ಗೆ ಕೇಂದ್ರ ಸರ್ಕಾರ ಧನಾತ್ಮಕವಾಗಿ ಪ್ರತಿಕ್ರಿಯಿಸಲಿ.
 -ಪ್ರೊ ಜಿ.ವೆಂಕಟಸುಬ್ಬಯ್ಯ, ನಿಘಂಟುತಜ್ಞ

ಮಣ್ಣಿನ ಮಕ್ಕಳ ಅಭಿಪ್ರಾಯ ಪಡೆಯಲಿ
`
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರ ಅಭಿಪ್ರಾಯಕ್ಕೆ ಮೊದಲ ಮನ್ನಣೆ ದೊರೆಯಬೇಕು. ತಮಿಳುನಾಡು ರೈತರು ಕೆಆರ್‌ಎಸ್ ಜಲಾಶಯದ ಸುತ್ತಮುತ್ತಲಿನ ಕೃಷಿ ಭೂಮಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿ, ರಾಜ್ಯದ ರೈತರೊಂದಿಗೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆ. ಇಷ್ಟು ವರ್ಷಗಳಿಂದ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಆಗಿದೆ. ಈ ವರೆಗೂ ಎರಡು ರಾಜ್ಯದ ಮಣ್ಣಿನ ಮಕ್ಕಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ಜಗಳವಿಲ್ಲದೇ ಸಂಧಾನ ಮಾಡಿಕೊಳ್ಳುವಷ್ಟು ವಿವೇಚನೆ ರೈತರಿಗಿದೆ.
- ಡಾ.ಯು.ಆರ್.ಅನಂತಮೂರ್ತಿ, ಹಿರಿಯ ಸಾಹಿತಿ

ಸುಪ್ರೀಂಕೋರ್ಟ್ ಆದೇಶದಿಂದ ನೋವಾಗಿದೆ
`ಗೋಕಾಕ್ ಚಳವಳಿ ಸಂದರ್ಭದಲ್ಲಿ ಜನತೆಯಿಂದ ದೊರಕಿದ ಬೆಂಬಲದಷ್ಟೇ ಈ ಬಾರಿಯೂ ಬೆಂಬಲ ದೊರಕಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ಒಗ್ಗಟ್ಟಿನಿಂದ ಪ್ರತಿಭಟಿಸಿರುವುದು ಹೆಮ್ಮೆಯ ವಿಚಾರ. ಕನ್ನಡಿಗರ ಒಗ್ಗಟ್ಟಿನಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕನ್ನಡಿಗರು ಶಿಸ್ತಿಗೆ ಬದ್ಧರೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಸುಪ್ರೀಂ ಕೋರ್ಟ್‌ನ ಆದೇಶ ನೋವು ತಂದಿದೆ. ಸರ್ಕಾರದ ಪ್ರಯತ್ನದಿಂದ ಸಮಸ್ಯೆ ಬಗೆಹರಿಯಬೇಕು.
- ಡಾ.ಎಂ. ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ 

ಸಮಸ್ಯೆಗೆ ಕೇಂದ್ರ, ರಾಜ್ಯ ಸ್ಪಂದಿಸುತ್ತಿಲ್ಲ
`
ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡುವುದು ಕೇಂದ್ರ ಸರ್ಕಾರದ ಅವಸಾರದ ತೀರ್ಮಾನ. ತಮಿಳುನಾಡಿನ ಜನತೆಗೆ ಒಂದೂವರೆ ತಿಂಗಳಿಗೆ ಸಾಕಾಗುವಷ್ಟು ನೀರಿನ ವ್ಯವಸ್ಥೆಯಿದೆ. ಇದಲ್ಲದೇ ಇದೇ ತಿಂಗಳ ಕೊನೆಯಲ್ಲಿ ತಮಿಳುನಾಡಿನಲ್ಲಿ ಮಳೆ ಆರಂಭವಾಗಲಿದೆ. ಕುಡಿಯುವ ನೀರನ್ನು ಕಿತ್ತುಕೊಂಡು ಬೇರೆ ರಾಜ್ಯಕ್ಕೆ ಹಂಚುವುದು ಜನವಿರೋಧಿ ನೀತಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನ. ಇದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವುದು ಸೂಕ್ತವಾಗಿದೆ. ಆದರೆ, ಹೋರಾಟಗಳಿಗೆ ಮನ್ನಣೆಯಿಲ್ಲ ಎಂಬ ವಿಚಾರ ತಿಳಿದಾಗ ಸಂಕಟವಾಗುತ್ತದೆ~.
-ಚಂದ್ರಶೇಖರ ಕಂಬಾರ,  ಹಿರಿಯ ಸಾಹಿತಿ

ರಾಷ್ಟ್ರೀಯ ಪಕ್ಷಗಳಿಂದ ಪ್ರಯೋಜನವಿಲ್ಲ
`ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಕನ್ನಡಿಗರು ಸ್ವಯಂಪ್ರೇರಣೆಯಿಂದ ಬಂದ್ ಮಾಡಿರುವುದು ಒಳ್ಳೆಯ ಲಕ್ಷಣ. ಕಾವೇರಿ ವಿವಾದವನ್ನು ಇಂದಿಗೂ ಬಗೆಹರಿಸಲು ಸಾಧ್ಯವಾಗದೇ ಇರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವೇ ಕಾರಣ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಾದೇಶಿಕ ಪಕ್ಷಗಳು ಮತ್ತು ಕನ್ನಡ ಪರ ಸಂಘಟನೆಗಳಿಗೆ ರಾಜಕೀಯ ಶಕ್ತಿ ದೊರಕದೆ ಕಾವೇರಿ ವಿವಾದ ಬಗೆಹರಿಯದು.
- ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ 

ರಾಜಕೀಯ ಮುತ್ಸದ್ಧಿತನದ ಅಭಾವ
`ಕಾವೇರಿ ಜಲವಿವಾದ ಇಂದು ನಿನ್ನೆಯದಲ್ಲ. ಕಾವೇರಿ ಪ್ರಾಧಿಕಾರವು ವಸ್ತುಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಿಲ್ಲ. ಹಾಗಾಗಿ ನೀರು ಹಂಚಿಕೆ ವಿವಾದ ಹೆಚ್ಚಾಗಿದೆ. ಇದಲ್ಲದೇ ಈಚೆಗೆ ನಡೆದ ಕಾವೇರಿ ಪ್ರಾಧಿಕಾರದ ಚರ್ಚೆಯಲ್ಲಿ ಮುಖ್ಯಮಂತ್ರಿ ಮತ್ತು ಸಂಸದರು ಸಭಾತ್ಯಾಗ ಮಾಡುವ ಮೂಲಕ ಹೀರೋಗಳಾದೆವು ಎಂಬ ಭ್ರಮೆಗೊಳಗಾದುದು ಈ ಅನಾಹುತಕ್ಕೆ ಕಾರಣ. ಕಾವೇರಿ ಹಂಚಿಕೆ ತೀರ್ಪು ದೊರೆಯುವ ಮುನ್ನವೇ ಸರ್ಕಾರ ಸರ್ವ ಪಕ್ಷಗಳ ಸದಸ್ಯರನ್ನು ಒಟ್ಟಾಗಿ ದೆಹಲಿಗೆ ಕರೆದುಕೊಂಡು ಪ್ರಧಾನಿಯೊಂದಿಗೆ ಚರ್ಚೆ ನಡೆಸಬೇಕಿತ್ತು. ರಾಜಕೀಯ ಮುತ್ಸದ್ಧಿತನದ ಅಭಾವದಿಂದ ಈ ಪರಿಸ್ಥಿತಿ ಎದುರಾಗಿದೆ~
-ಬರಗೂರು ರಾಮಚಂದ್ರಪ್ಪ, ವಿಮರ್ಶಕ 

ಯಾರಿಗೂ ಅನ್ಯಾಯವಾಗಬಾರದು
`ಕಾವೇರಿ ವಿವಾದವನ್ನು ಈವರೆಗೆ ಬಗೆಹರಿಸಲು ಸಾಧ್ಯವಾಗದೇ ಇರುವುದು ನಮ್ಮನ್ನು ಆಳಿದ ಸರ್ಕಾರಗಳ ವೈಫಲ್ಯ. ನೈಸರ್ಗಿಕ ಸಂಪನ್ಮೂಲ ಎಲ್ಲರ ಆಸ್ತಿ. ಇದನ್ನು ಸಮರ್ಪಕವಾಗಿ ಎರಡು ರಾಜ್ಯಗಳಿಗೆ ಹಂಚಲು ಸಾಧ್ಯವಾಗದೇ ಇರುವುದು ಇಂದಿನ ದುಸ್ಥಿತಿಗೆ ಕಾರಣ. ಈ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸುವ ಅಗತ್ಯವಿದ್ದು, ನೆಲ, ಜಲ, ಗಡಿ,ನಾಡು ಸಂರಕ್ಷಣೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬಿಟ್ಟು ಜವಾಬ್ದಾರಿ ಮೆರೆಯಲಿ. ಯಾರಿಗೂ ಅನ್ಯಾಯವಾಗದಂತ ಹೆಜ್ಜೆ ಇಡಲಿ.
-ವಿಮಲ ಕೆ.ಎಸ್,  ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ

ಬ್ರಿಟಿಷರ ತಪ್ಪು ನಿರ್ಧಾರ ಮುಂದುವರೆದಿದೆ
`ಆಗಿರುವ ಅನ್ಯಾಯವನ್ನು ಪ್ರತಿಭಟಿಸಲು ಬಂದ್ ನಡೆಸುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಆದರೆ ಒಂದು ತಿಂಗಳಲ್ಲಿಯೇ ಮೂರು ಬಂದ್ ಆಗಿರುವುದರಿಂದ ಕೂಲಿಕಾರ್ಮಿಕರಿಗೆ ಕಷ್ಟವಾಗುತ್ತದೆ. ಸರ್ಕಾರದ ಆಡಳಿತಾಂಗದ ವಿರುದ್ಧ ಪ್ರತಿಭಟಿಸುವ ಅಗತ್ಯ ಎದ್ದು ಕಾಣುತ್ತಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ  ಬ್ರಿಟಿಷ್ ಸರ್ಕಾರದ ಮಾಡಿದ ತಪ್ಪುಗಳನ್ನೇ ರಾಷ್ಟ್ರೀಯ ಪಕ್ಷಗಳು ಅನುಸರಿಸಿಕೊಂಡು ಹೋಗುತ್ತಿರುವುದು ವಿಪರ್ಯಾಸ~. 
-ಡಾ.ಸಿ.ಎಸ್.ದ್ವಾರಕನಾಥ್, ಹಿರಿಯ ವಕೀಲ

ಕಾವೇರಿ ಕಳೆದುಕೊಳ್ಳಲು ಸಾಧ್ಯವಿಲ್ಲ
`ನೆಲ ಜಲದ ವಿಚಾರದಲ್ಲಿ ನಾವೆಲ್ಲ ಒಂದೇ ಎಂಬುದಕ್ಕೆ ಬಂದ್ ಉತ್ತಮ ಉದಾಹರಣೆ. ಕಾವೇರಿ ನದಿ ಕರ್ನಾಟಕದ ಹಕ್ಕು, ನಮ್ಮ ರೈತರಿಗೆ ನೀರಿಲ್ಲದಿರುವಾಗ ಬೇರೆಯವರಿಗೆ ನೀಡಬೇಕೆಂಬುದು ಅವೈಜ್ಞಾನಿಕ. ಜೀವ ನದಿ ಕಾವೇರಿಯನ್ನು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದೆ. ಅನ್ಯಾಯವಾದಾಗ ಒಂದು ಹಂತದವರೆಗೆ ತಾಳ್ಮೆ ವಹಿಸುವ ಕನ್ನಡಿಗರು ಎಂದಿಗೂ ಕೈಲಾಗದವರಲ್ಲ ಎಂಬುದನ್ನು ತೋರಿಸುವ ಅಗತ್ಯವಿದೆ~
- ಪುಂಡಲೀಕ ಹಾಲಂಬಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್

ಕೇಂದ್ರ ತಂಡದ ಭೇಟಿಯೇ ಕಣ್ಣೊರೆಸುವ ತಂತ್ರ
`ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಜ್ಞರ ತಂಡ ಕಳುಹಿಸುವ ಮೂಲಕ ಕಣ್ಣೊರೆಸುವ ತಂತ್ರ ಮಾಡಲಾಗಿದೆ. ಈ ತಂಡವೇ ಅವೈಜ್ಞಾನಿಕ. ತಜ್ಞರ ಸಮಿತಿಯಲ್ಲಿ ಅಧಿಕಾರಿಗಳು ಹಾಗೂ ನೀರಾವರಿ ತಜ್ಞರು ಮಾತ್ರ ಇದ್ದಾರೆ. ಕೃಷಿ ಹಾಗೂ ಮಣ್ಣಿನ ತಜ್ಞರು ಇಲ್ಲ. ಇವರಿಂದ ರಾಜ್ಯಕ್ಕೆ ನ್ಯಾಯ ದೊರಕುತ್ತದೆ ಎಂಬ ನಿರೀಕ್ಷೆ ಮಾಡುವಂತಿಲ್ಲ. ಎಲ್ಲ ಕ್ಷೇತ್ರದ ತಜ್ಞರ ಸಮಿತಿಯನ್ನು ಕಳುಹಿಸಿದರೆ ಅವರಿಗೆ ಇಲ್ಲಿನ ವಸ್ತುಸ್ಥಿತಿಯ ಅರಿವಾಗುತ್ತಿತ್ತು~.
-ಪ್ರೊ.ಎಂ.ಮಹದೇವಪ್ಪ, ವಿಶ್ರಾಂತ ಕುಲಪತಿ,
ಧಾರವಾಡ ಕೃಷಿ ವಿಶ್ವವಿದ್ಯಾಲಯ

ಆದೇಶಕ್ಕೂ ಮುನ್ನ ವಸ್ತುಸ್ಥಿತಿ ಅರಿಯಬೇಕಿತ್ತು
`ಕಾವೇರಿ ನದಿ ಪ್ರಾಧಿಕಾರದ ಸೂಚನೆ ಆಧಾರದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡಲು ರಾಜ್ಯಕ್ಕೆ ಆದೇಶಿಸಿದೆ. ಆದರೆ, ನೀರು ಬಿಡುವಂತೆ ಕೇಂದ್ರ ಸೂಚನೆ ನೀಡುವ ಮೊದಲೇ ರಾಜ್ಯಕ್ಕೆ ತಜ್ಞರ ಸಮಿತಿಯನ್ನು ಕಳುಹಿಸಿ  ವಸ್ತುಸ್ಥಿತಿಯ ಮಾಹಿತಿ ಪಡೆದಿದ್ದರೆ ಸಮಂಜಸವಾಗುತ್ತಿತ್ತು~.
ಡಾ.ಎಂ.ಎನ್. ಶೀಲವಂತರ್,
ವಿಶ್ರಾಂತ ಕುಲಪತಿ, ಬೆಂಗಳೂರು ಕೃಷಿ ವಿವಿ

ಶಾಶ್ವತ ಸಮಿತಿ ರಚಿಸಬೇಕು
`ಪ್ರಾಧಿಕಾರದ ತೀರ್ಪಿನ ಆಧಾರದಲ್ಲಿಯೇ ಸುಪ್ರೀಂ ಕೋರ್ಟ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಆದೇಶ ಹೊರಡಿಸುತ್ತಿದೆ. ಇಲ್ಲಿ ಮಳೆ ಕೊರತೆ, ಬರ ಇದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಾಜ್ಯದಲ್ಲಿ ಸಾಮಾನ್ಯವಾಗಿ ನಾಲ್ಕೈದು ವರ್ಷಕ್ಕೊಮ್ಮೆ ಮಳೆ ಕೊರತೆ ಉಂಟಾಗುತ್ತಿದೆ. ಆ ಸಂದರ್ಭದಲ್ಲಿ ನೀರು ಬಿಡುಗಡೆ ಕಷ್ಟ. ಇಂತಹ ಸಮಸ್ಯೆಯನ್ನು ನಿಭಾಯಿಸಲು ಶಾಶ್ವತ ಸಮಿತಿಯೊಂದನ್ನು ರಚಿಸಿ ಮಾರ್ಗಸೂಚಿ ರೂಪಿಸಬೇಕು. ವಸ್ತುಸ್ಥಿತಿ ನೋಡಿಕೊಂಡು ನೀರು ಬಿಡುಗಡೆಗೆ ಆದೇಶ ಹೊರಡಿಸುವಂತಾಗಬೇಕು~.
ಡಾ.ಜಿ.ಕೆ.ವೀರೇಶ್, ವಿಶ್ರಾಂತ ಕುಲಪತಿ,
ಬೆಂಗಳೂರು ಕೃಷಿ ವಿವಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT