ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬರಡು' ನೆಲಕ್ಕೆ ಮೊದಲ `ಮಳೆ'ಯ ಸಿಂಚನ

ಕ್ರಿಕೆಟ್: ತಲೆದಂಡದ ಅಪಾಯದಿಂದ ಪಾರಾಗಲು ಪ್ರಯತ್ನ; ಅಂತೂ ಇಂತೂ ಕೊಹ್ಲಿ ಶತಕ, ದೋನಿ 99
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನಾಗಪುರ: `ಮುಂದಿನ ಟೆಸ್ಟ್ ಕ್ರಿಕೆಟ್ ಸರಣಿಗೆ ಸ್ಥಾನ ಉಳಿಸಿಕೊಳ್ಳಲು ಇದು ಭಾರತದ ಆಟಗಾರರ ಕಸರತ್ತು' ಎಂಬ ಟೀಕೆಯ ಟ್ವಿಟರ್ ಸಂದೇಶಗಳು ಈಗಾಗಲೇ ಹರಿದಾಡಲು ಆರಂಭಿಸಿವೆ. ತುಂಬಾ ದಿನಗಳ ಬಳಿಕ ದೋನಿ ಹಾಗೂ ಕೊಹ್ಲಿ ಜವಾಬ್ದಾರಿಯಿಂದ ಆಡಿದ ರೀತಿ ತಲೆದಂಡದ ಅಪಾಯದಿಂದ ಪಾರಾಗಲು ನಡೆಸಿದ ಪ್ರಯತ್ನದಂತೆ ಕಾಣಬಹುದು.

ಆದರೆ ಆ ಆಟ ಆತಂಕಕ್ಕೆ ಸಿಲುಕಿದ್ದ ಭಾರತ ತಂಡವನ್ನು ಪಾರು ಮಾಡಿದ್ದು ಸತ್ಯ. ಸಾಲು ಸಾಲು ಆಘಾತದ ಬಳಿಕ ಕೊಹ್ಲಿ ಹಾಗೂ ದೋನಿ ಕಟ್ಟಿದ ಅದ್ಭುತ ಇನಿಂಗ್ಸ್ ಬರಡು ನೆಲಕ್ಕೆ ಮೊದಲ ಮಳೆಯ ಸಿಂಚನವಾದಂತೆ ಭಾಸವಾಯಿತು.

ಪರಿಣಾಮ ಜಾಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದವರು ಸದ್ಯದ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಇಂಗ್ಲೆಂಡ್ ತಂಡದ ಮೊದಲ     ಇನಿಂಗ್ಸ್‌ನ 330 ರನ್‌ಗಳಿಗೆ ಉತ್ತರವಾಗಿ ಆತಿಥೇಯರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 130.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದ್ದಾರೆ.

71 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಮತ್ತೊಂದು ಸೋಲು ಖಚಿತ ಎಂಬ ಆತಂಕದಲ್ಲಿದ್ದ ಭಾರತಕ್ಕೆ ಶನಿವಾರ ಆಸರೆಯಾಗಿದ್ದು ನಾಯಕ ದೋನಿ (99) ಹಾಗೂ ಕೊಹ್ಲಿ (103). ಇವರಿಬ್ಬರು ಐದನೇ ವಿಕೆಟ್‌ಗೆ 198 ರನ್ (341 ನಿ, 507 ಎ.) ಸೇರಿಸಿದರು. ಆದರೆ ಮುಸ್ಸಂಜೆಯ ನೆರಳು ತಲೆಯ ಮೇಲೆ ಬೀಳುವ ಹೊತ್ತಿಗೆ ಆತಿಥೇಯರು ಮತ್ತೆ ಆಘಾತ ಅನುಭವಿಸಿದರು. ಏಕೆಂದರೆ ದಿನದಾಟ ಕೊನೆಗೊಳ್ಳಲು ಕೆಲವೇ ಓವರ್‌ಗಳು ಉಳಿದಿದ್ದಾಗ 28 ರನ್‌ಗಳ ಅಂತರದಲ್ಲಿ 4 ವಿಕೆಟ್‌ಗಳು ಪತನಗೊಂಡವು.

ಸವಾಲಿನ ಪಿಚ್‌ನಲ್ಲಿ ಸಹನೆಯ ಆಟ: ತುಂಬಾ ದಿನಗಳ ಬಳಿಕ ಭಾರತದ ಈ ಬ್ಯಾಟ್ಸ್‌ಮನ್‌ಗಳಿಂದ ಸಹನೆಯ ಆಟ ಮೂಡಿಬಂತು. ಹಾಗಾಗಿ ಮತ್ತೊಂದು ಮುಖಭಂಗದ ಆಘಾತದಿಂದ ಭಾರತ ಸದ್ಯಕ್ಕೆ ಪಾರಾಯಿತು. ಹಳಿ ತಪ್ಪಿದಂತೆ ಕಾಣುತ್ತಿರುವ ಆತಿಥೇಯರನ್ನು ಬಹುಬೇಗ ನಿಯಂತ್ರಿಸಬಹುದು ಎಂದುಕೊಂಡಿದ್ದ ಆಂಗ್ಲ ಬೌಲರ್‌ಗಳ ಆಸೆ ಈಡೇರಲಿಲ್ಲ.

ವಿಚಿತ್ರವಾಗಿ ವರ್ತಿಸುತ್ತಿದ್ದ ಪಿಚ್‌ನಲ್ಲಿ ಕೊಹ್ಲಿ ಹಾಗೂ ದೋನಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿದ್ದು ಫಲ ನೀಡಿತು. ಇದು ನಿರಾಶೆಯ ಕಾರ್ಮೋಡ ಕವಿದಿದ್ದ ಕ್ರಿಕೆಟ್ ಪ್ರೇಮಿಗಳ ಮನಕ್ಕೆ ಮುದ ನೀಡಿತು. ಹಿಂದಿನ ವೈಫಲ್ಯ ಮರೆತಂತಿರುವ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿ ಈ ಆಟಗಾರರನ್ನು ಹುರಿದುಂಬಿಸಿದರು.

ಭವಿಷ್ಯದ ನಾಯಕನ ಮೂರನೇ ಶತಕ: ಭಾರತ ತಂಡದ ಭವಿಷ್ಯದ ನಾಯಕ ಎಂದೇ ಕರೆಸಿಕೊಳ್ಳುತ್ತಿರುವ ಕೊಹ್ಲಿ ಸುಂದರ ಇನಿಂಗ್ಸ್ ಕಟ್ಟಿದರು. ಇತ್ತೀಚಿನ ದಿನಗಳಲ್ಲಿ ತುಂಬಾ ಟೀಕೆಗೆ ಒಳಗಾಗ್ದ್ದಿದ ಅವರು ಟೆಸ್ಟ್‌ನಲ್ಲಿ ಮೂರನೇ ಶತಕ ಪೂರೈಸಿದರು. ಸ್ವಾನ್ ಎಸೆತದಲ್ಲಿ ಬೌಂಡರಿ ಮೂಲಕ ಶತಕ ಗಳಿಸುತ್ತಿದ್ದಂತೆ ಮೇಲೆ ಜಿಗಿದು ಗಾಳಿಯಲ್ಲಿ ಪಂಚ್ ಮಾಡಿದರು. 

ವಿರಾಟ್ (103; 295 ಎ, 356 ನಿ, 11 ಬೌಂ.) ಅವರ ಕವರ್ ಡ್ರೈವ್‌ಗಳು ಸೊಗಸಾಗಿದ್ದವು. ತುಂಬಾ ದಿನಗಳ ಬಳಿಕ ಅವರ ಸೊಗಸಾದ ಆಟ ಸವಿಯಲು ಪ್ರೇಕ್ಷಕರಿಗೆ ಅವಕಾಶ ಲಭಿಸಿತು. ಏಕೆಂದರೆ ಈ ಸರಣಿಯಲ್ಲಿ ಈ ಪಂದ್ಯಕ್ಕೆ ಮುನ್ನ ಅವರು 20 ರನ್‌ಗಳ ಗಡಿ ದಾಟಿರಲಿಲ್ಲ.

ಶತಕ ತಪ್ಪಿಸಿಕೊಂಡ ದೋನಿ: ದೋನಿ ಪಾಲಿಗೆ ಈ ಇನಿಂಗ್ಸ್ ವಿಶೇಷವಾಗಿತ್ತು. ನಾಯಕತ್ವದಿಂದ ಕೆಳಗಿಳಿಯಬೇಕು ಎಂಬ ಕೂಗು ಎದ್ದಿರುವ ಈ ಸಮಯದಲ್ಲಿ ಅವರು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಂಡು ಆಡಿದರು. ಏಕೆಂದರೆ ಇಡಿ ತಮ್ಮ ಟೆಸ್ಟ್ ಜೀವನದಲ್ಲಿ ಇದುವರೆಗೆ ಅವರು ಇಷ್ಟು ಎಸೆತ ಎದುರಿಸಿದ ಉದಾಹರಣೆ ಇಲ್ಲ. ಆದರೆ ದಿನದಾಟದ ಕೊನೆಗೊಳ್ಳಲು ಎರಡು ಓವರ್ ಇರುವಾಗ ದೋನಿ (99; 246 ಎ., 396 ನಿ., 8 ಬೌಂ., 1 ಸಿ.) ಎಡವಟ್ಟು ಮಾಡಿಕೊಂಡರು. 99 ರನ್ ಗಳಿಸಿದ್ದ ಅವರು ಒಂಟಿ ರನ್‌ಗಾಗಿ ಓಡುವಾಗ ರನ್‌ಔಟ್ ಆದರು. ಮಿಡ್ ಆಫ್‌ನಿಂದ ಕುಕ್ ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿತು.

ಆ ರನ್‌ಔಟ್ ನಿರ್ಧರಿಸಲು ಮೂರನೇ ಅಂಪೈರ್ ಎಸ್.ರವಿ ತುಂಬಾ ಹೊತ್ತು ತೆಗೆದುಕೊಂಡರು. ವಿವಿಧ ಕೋನಗಳಲ್ಲಿ ಅದನ್ನು ಪರಿಶೀಲಿಸಿದ ಬಳಿಕ ಔಟ್ ನೀಡಿದರು. ಆದರೆ 90ರಿಂದ 99 ರನ್ ತಲುಪಲು ದೋನಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡರು. ಟೆಸ್ಟ್‌ನಲ್ಲಿ 99 ರನ್ ಗಳಿಸಿದಾಗ ರನ್‌ಔಟ್ ಆದ ಮೊದಲ ನಾಯಕ ದೋನಿ.

ವಿರಾಟ್-ಮಹಿ ಜುಗಲ್‌ಬಂದಿ

ಸತತ ವೈಫಲ್ಯಕ್ಕೆ ಒಳಗಾಗಿದ್ದ ವಿರಾಟ್-ಮಹಿ ಕಠಿಣ ಪಿಚ್‌ನಲ್ಲಿ ತುಂಬಾ ಸವಾಲು ಎದುರಿಸಬೇಕಾಯಿತು. ಆದರೆ ಎಚ್ಚರಿಕೆ ಆಟಕ್ಕೆ ಮೊರೆ ಹೋದ ಅವರು ನಿಧಾನವಾಗಿ ಪ್ರವಾಸಿ ತಂಡದ ಬೌಲರ್‌ಗಳ ಮೇಲೆ ಪಾರಮ್ಯ ಸಾಧಿಸಿದರು. ದಿನದ ಮೊದಲ ಅವಧಿಯಲ್ಲಿ ಅವರು 32 ಓವರ್‌ಗಳಲ್ಲಿ ಗಳಿಸಿದ್ದು ಕೇವಲ 59 ರನ್. ಆ ಬಳಿಕ ಬಿರುಸಿನ ಆಟಕ್ಕೆ ಇಳಿದರು. ಎರಡನೇ ಅವಧಿಯಲ್ಲಿ 27 ಓವರ್‌ಗಳಲ್ಲಿ 81 ರನ್ ಸೇರಿಸಿದ್ದೇ ಅದಕ್ಕೆ ಸಾಕ್ಷಿ. ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳು ಎನಿಸಿರುವ ಇವರಿಬ್ಬರು ಸಂದರ್ಭಕ್ಕೆ ತಮ್ಮನ್ನು ತೆರೆದುಕೊಂಡ ರೀತಿ ಮೆಚ್ಚುವಂಥದ್ದು.

ಮಹಿಗಿದು 28ನೇ ಅರ್ಧ ಶತಕ. ಆದರೆ ಇದು ಅವರ ಅತಿ ನಿಧಾನದ ಅರ್ಧ ಶತಕ. ಆರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಅವರು ತಂಡವನ್ನು ಫಾಲೋಆನ್ ಅಪಾಯದಿಂದ ಪಾರು ಮಾಡಿದರು. ರಣಜಿಯಲ್ಲಿ ಮೂರು ತ್ರಿಶತಕ ಬಾರಿಸಿರುವ ರವೀಂದ್ರ ಜಡೇಜಾ ಇಲ್ಲಿ ಸಫಲರಾಗಲಿಲ್ಲ. ಒಮ್ಮೆ ಆ್ಯಂಡರ್ಸನ್ (68ಕ್ಕೆ4) ಮಾಡಿದ ಎಲ್‌ಬಿಡಬ್ಲ್ಯು ಮನವಿಯಿಂದ ಪಾರಾಗಿದ್ದ ಜಡೇಜಾ ಕೆಲ ನಿಮಿಷಗಳಲ್ಲಿ ಅವರಿಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ದಿನ ಬಂದಿದ್ದು ಕೇವಲ 210 ರನ್ (541 ಎಸೆತ). ಈ ಪಿಚ್‌ನಲ್ಲಿ ರನ್ ಗಳಿಸಲು ಎಷ್ಟು ಕಷ್ಟವಿದೆ ಎಂಬುದಕ್ಕೆ ಇದೇ ಉದಾಹರಣೆ.

ಮನಸ್ಸಿನಲ್ಲಿಯೇ ಕೊಹ್ಲಿ ಆಕ್ರೋಶ

ತುಂಬಾ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ ಆಟವನ್ನು ಮೆಚ್ಚಲೇಬೇಕು. ಆದರೆ ಆ ಕ್ಷಣದಲ್ಲಿ ಅವರು ಗುನುಗಿದ ರೀತಿ ಆ ಶತಕದ ವೈಭವನ್ನು ಕೊಂಚ ಕಡಿಮೆ ಮಾಡಿದ್ದು ಸುಳ್ಳಲ್ಲ. ಇಂಗ್ಲೆಂಡ್ ತಂಡದ ವಿರುದ್ಧ ಆ ಆಕ್ರೋಶ ವ್ಯಕ್ತಪಡಿಸಿದರಾ? ಅಥವಾ ಟೀಕಾಕಾರರಿಗೆ ಉತ್ತರ ನೀಡಿದರಾ? ಗೊತ್ತಿಲ್ಲ. ಆದರೆ ಅನುಚಿತ ಶಬ್ದ ಬಳಸಿದಂತಿದ್ದದ್ದು ತುಟಿಗಳ ಚಲನೆಯಲ್ಲಿ ಗೊತ್ತಾಗದೇ ಇರದು.

ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನಿಂಗ್ಸ್ 145.5 ಓವರ್‌ಗಳಲ್ಲಿ 330
ಭಾರತ ಮೊದಲ ಇನಿಂಗ್ಸ್ 130.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 297

(ಶುಕ್ರವಾರ 41 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87)
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಸ್ವಾನ್  103
ಮಹೇಂದ್ರ ಸಿಂಗ್ ದೋನಿ ರನ್‌ಔಟ್ (ಕುಕ್)  99
ರವೀಂದ್ರ ಜಡೇಜಾ ಎಲ್‌ಬಿಡಬ್ಲ್ಯು ಬಿ ಜೇಮ್ಸ ಆ್ಯಂಡರ್ಸನ್  12
ಆರ್.ಅಶ್ವಿನ್ ಬ್ಯಾಟಿಂಗ್  07
ಪಿಯೂಷ್ ಚಾವ್ಲಾ ಬಿ ಗ್ರೇಮ್ ಸ್ವಾನ್  01
ಇತರೆ (ಬೈ-5, ಲೆಗ್‌ಬೈ-5)  10
ವಿಕೆಟ್ ಪತನ: 1-1 (ಸೆಹ್ವಾಗ್; 0.3); 2-59 (ಪೂಜಾರ; 22.3); 3-64 (ಸಚಿನ್; 27.5); 4-71 (ಗಂಭೀರ್; 31.4); 5-269 (ಕೊಹ್ಲಿ; 116.1); 6-288 (ಜಡೇಜಾ; 123.6); 7-295 (ದೋನಿ; 129.1); 8-297 (ಚಾವ್ಲಾ; 130.1).
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 26-5-68-4, ಟಿಮ್ ಬ್ರೆಸ್ನನ್ 26-5-69-0, ಮಾಂಟಿ ಪನೇಸರ್ 46-15-67-0, ಗ್ರೇಮ್ ಸ್ವಾನ್ 30.1-9-76-3, ಜೊನಾಥನ್ ಟ್ರಾಟ್ 1-0-2-0, ಜೋ ರೂಟ್ 1-0-5-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT