ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸಗೌಡ ಪಾಟೀಲರಿಗೆ 93ರ ಸಂಭ್ರಮ

Last Updated 10 ಜನವರಿ 2012, 9:30 IST
ಅಕ್ಷರ ಗಾತ್ರ

ಸಂಕೇಶ್ವರ: ಕಲಿತದ್ದು ಕೇವಲ 5ನೇ ತರಗತಿಯಾದರೂ ಸಾಧಿಸಿದ್ದು ಬೆಟ್ಟದಷ್ಟು. ಈ ಮಾತು  ಮುಂಬೈ-ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ  ಸಹಕಾರಿ ಮಹರ್ಷಿ ಎಂದೇ ಗುರುತಿಸಲ್ಪಡುವ ಬಸಗೌಡ ಪಾಟೀಲ ಅವರಿಗೆ ಅನ್ವಯವಾಗುವಂಥದ್ದು.

ಜನವರಿ 10, 1920ರಂದು ಸಂಕೇಶ್ವರ ಸಮೀಪದ ಅಮ್ಮಿನಭಾವಿಯಲ್ಲಿ ಜನಿಸಿದ ಬಸಗೌಡ ಪಾಟೀಲ ಅವರು 5 ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದರು. ತಂದೆಯವರ ಅನಾರೋಗ್ಯದ ಕಾರಣದಿಂದ ಶಿಕ್ಷಣಕ್ಕೆ ವಿದಾಯ ಹೇಳಿ ಕೃಷಿಯ ಕಡೆ ಮುಖಮಾಡಿದರು.1936ರಲ್ಲಿ ಸಾರ್ವಜನಿಕ ಕ್ಷೇತ್ರ ಪ್ರವೇಶಿಸಿದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಅಪ್ಪಣ್ಣಗೌಡರ ಜೊತೆಯಲ್ಲಿ ಕೆಲಸ ಮಾಡಿದವರು. ತಾಲ್ಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಜಿಲ್ಲಾ ಲೋಕಲ್ ಬೋರ್ಡ್ ಅಧ್ಯಕ್ಷರಾಗಿ, ಅಮ್ಮಿನಭಾವಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಿದ ಕೀರ್ತಿ ಅವರದು.

ಇದಲ್ಲದೆ ಸಹಕಾರ ಕ್ಷೇತ್ರದಲ್ಲಿಯೂ ಪ್ರಥಮವಾಗಿ 1944 ರಲ್ಲಿ ಬೋರಗಲ್ಲ -ಅಮ್ಮಿನಭಾವಿ ಪ್ರಥಮ ಸೇವಾ ಸಹಕಾರಿ ಸಂಘದ ಸ್ಥಾಪನೆ, ಸಂಕೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹುಕ್ಕೇರಿ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅಲ್ಲದೆ ಸಂಕೇಶ್ವರದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ಅದರ ಅಧ್ಯಕ್ಷರಾಗಿಯೂ ಕಾರ್ಖಾನೆಯ ಅಭಿವೃದ್ಧಿಗಾಗಿ ಬಹುಮುಖ ಸೇವೆ ಸಲ್ಲಿಸಿದರು.

ಸಂಕೇಶ್ವರದ ಪ್ರತಿಷ್ಠಿತ ದುರುದುಂಡೀಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ವಿವಿಧ ಕಾಲೇಜುಗಳ ಸ್ಥಾಪನೆ, ಕಟ್ಟಡಗಳ ನಿರ್ಮಾಣಕ್ಕೂ ಕಾರಣರಾದರು. ನಿಡಸೋಸಿಯ ಎಸ್. ಜೆ.ಡಿ ಪ್ರೌಢ ಶಾಲೆಯ ಬೆಳವಣಿಗೆಗೂ ಕಾರಣರಾದರು. ರೈತರು ಬಸಗೌಡರ 75 ವರ್ಷಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ನೀಡಿದ 87 ಲಕ್ಷ ರೂಪಾಯಿಗಳನ್ನು ನಿಡಸೋಸಿಯಲ್ಲಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಲ್ಲಿ ಉಪಯೋಗಿಸಿದರು. ಇದರಿಂದ ಈ ಭಾಗದಲ್ಲಿನ ರೈತರ ಮಕ್ಕಳು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆ, ಘಟಪ್ರಭಾದಲ್ಲಿ ಸಹಕಾರಿ ಆಸ್ಪತ್ರೆ, ಆಯುರ್ವೇದ ಕಾಲೇಜುಗಳ ನಿರ್ಮಾಣಕ್ಕೆ ಶ್ರಮಿಸಿದವರು. ಬೆಳಗಾವಿಯಲ್ಲಿ ನಿಸರ್ಗ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದರು. ರಾಜಕೀಯವಾಗಿ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದ ಬಸಗೌಡರು ನಂತರ ಜನತಾ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ 1988ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದರು.

ಇಂದು ಅವರಿಗೆ 93ನೇ ಹುಟ್ಟುಹಬ್ಬದ ಸಂಭ್ರಮ. 93 ವಯಸ್ಸಾದರೂ 23 ರ ಹರೆಯದ ತರುಣರಂತೆ  ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT