ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣ: ತೀರದ ಬವಣೆ

Last Updated 29 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಮುಳಬಾಗಲು: ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಸಮಸ್ಯೆ ತಾಲ್ಲೂಕು ಆಡಳಿತ, ಪೊಲೀಸರಿಗೆ ನುಂಗಲಾರದ ಕಡುಬಾಗಿದೆ. ಜಟಿಲ ಸಮಸ್ಯೆ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀಳುವ ಆತಂಕ ಕಾಡುತ್ತಿದೆ.

ಪಟ್ಟಣದ ಬಹುದಿನಗಳ ಬೇಡಿಕೆಯಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಾಜಿ ಸಚಿವ, ದಿವಂಗತ ಕಾಮ್ರೆಡ್ ಆರ್.ವೆಂಕಟರಾಮಯ್ಯ ಅವರ ಕಾಲದಲ್ಲಿ ಪೂಜೆ ನಡೆಯಿತು. ನಂತರ ವಿಧಾನಸಭಾ ಅಧ್ಯಕ್ಷರಾಗಿದ್ದ ಎಂ.ವಿ.ವೆಂಕಟಪ್ಪ ಅವರ ಅವಧಿಯಲ್ಲಿ ಮತ್ತೊಂದು ಬಾರಿ ಭೂಮಿ ಪೂಜೆ ನಡೆಯಿತು. ಆದರೆ ಬಸ್ ನಿಲ್ದಾಣದ ನಿರ್ಮಾಣ ಬರಿ ಕನಸಾಗಿಯೇ ಉಳಿದಿದೆ.

ಹಿಂದೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ನಿಲ್ದಾಣಗಳು ಒಂದೆಡೆ ಇದ್ದವು. ಎರಡು ವರ್ಷದ ಹಿಂದೆ ಸಾರಿಗೆ ಸಂಸ್ಥೆ ನಿಲ್ದಾಣದ ಕಾಮಗಾರಿ ಆರಂಭಗೊಂಡ ನಂತರ ನಂತರ ಸಾರಿಗೆ ಸಂಸ್ಥೆ ಬಸ್ ಹೊರತಾಗಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ನಿರಾಕರಿಸಲಾಯಿತು.

ಅಲ್ಲಿಂದ ಸಮಸ್ಯೆಗಳ ಸರಮಾಲೆ ಆರಂಭವಾಯಿತು. ಬಸ್ ನಿಲ್ಲಿಸಲು ಜಾಗ ನೀಡಿ ಎಂದು ಎರಡು ವರ್ಷದಿಂದ ಕೋರುತ್ತಲೇ ಬಂದ ಖಾಸಗಿ ಬಸ್ ಮಾಲೀಕರು ನ್ಯಾಯಾಲಯದ ಮುಂಭಾಗದಲ್ಲಿ ತಾತ್ಕಾಲಿಕ ನಿಲ್ದಾಣ ನಿರ್ಮಿಸಿಕೊಂಡರು. ಸಾರಿಗೆ ಸಂಸ್ಥೆ ಮತ್ತು ಖಾಸಗಿ ಹಾಗೂ ಇತರೆ ಎಲ್ಲ ವಾಹನಗಳು ಇದೇ ಸ್ಥಳದಿಂದಲೇ ತೆರಳುವುದರಿಂದ ರಸ್ತೆ ಇಕ್ಕಟ್ಟಾಯಿತು. ಇದರೊಂದಿಗೆ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿರುವುದು ಕೂಡ ಬಿಕ್ಕಟ್ಟನ್ನು ಹೆಚ್ಚಿಸಿದೆ.

ಒಂದು ಕಡೆ ಸಾರಿಗೆ ಸಂಸ್ಥೆ ನಿಲ್ದಾಣ ಪೂರ್ತಿಯಾಗಿಲ್ಲ, ಮತ್ತೊಂದು ಕಡೆ ಖಾಸಗಿ ಬಸ್ ನಿಲ್ಲಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನೆಹರೂ ಪಾರ್ಕ್‌ನಲ್ಲಿ ಬಸ್ ನಿಲುಗಡೆಗೆ ಅವಕಾಶ ಕೋರುತ್ತಿರುವ ಖಾಸಗಿ ಬಸ್‌ಗಳ ಮಾಲೀಕರಿಗೆ ಪಾರ್ಕ್ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.

ಆಗಾಗ ಇಕ್ಕಟ್ಟಾದ ವಾಹನ ಸಂಚಾರದಿಂದ ಚಾಲಕರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮುಕಿ ಕೈಮೀಲಾಯಿಸುವ ಹಂತಕ್ಕೆ ಹೋಗಿ ಕಾನೂನು ಸಮಸ್ಯೆಗಳು ಎದುರಾಗುತ್ತಿವೆ. ನೂತನ ಬಸ್ ನಿಲ್ದಾಣ ತುರ್ತಾಗಿ ಆಗಬೇಕು, ಖಾಸಗಿ ವಾಹನಗಳಿಗೆ ಸೂಕ್ತ ಬಸ್ ನಿಲ್ದಾಣ ತುರ್ತಾಗಿ ಆಗಬೇಕು ಎನ್ನುತ್ತಾರೆ ಗಂಗಾಪುರ ಗ್ರಾಮದ ರಘುಪತಿ.

ನೆಹರೂ ಪಾರ್ಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂಬುದು ಬಿಜೆಪಿ ಮುಖಂಡ ಹರೀಶ್ ವಾದ. ಪಟ್ಟಣದಲ್ಲಿ ಸಂಜೆ ಸಮಯದಲ್ಲಿ ಕಾಲಕಳೆಯಲು ವೃದ್ಧರಿಗೆ ಬೇರೆ ಜಾಗವಿಲ್ಲ, ನೆಹರೂ ಪಾರ್ಕನ್ನು ಅಭಿವೃದ್ಧಿ ಪಡಿಸುವುದು ಅಗತ್ಯ ಎಂಬುದು ನಿವೃತ್ತ ನೌಕರ ಶ್ರೀನಿವಾಸಲು ಒತ್ತಾಯ.

ಒಟ್ಟಾರೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನ ನಿಲ್ದಾಣದ ಸಮಸ್ಯೆ ದಿನದಿನಕ್ಕೆ ಜಟಿಲವಾಗುತ್ತಿದೆ. ಪಟ್ಟಣದ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT