ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಕೋಲು ಚಳವಳಿಗೆ ಸನ್ನದ್ಧ

Last Updated 11 ಏಪ್ರಿಲ್ 2011, 9:10 IST
ಅಕ್ಷರ ಗಾತ್ರ

ಕೊಪ್ಪಳ: ರೈತರ ಮೇಲೆ ಲಾಠಿ ಪ್ರಹಾರ ನಡೆದ ಘಟನೆಯನ್ನು ಖಂಡಿಸಿ ಹಾಗೂ ಆ ಸಂಬಂಧ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏ. 11ರಂದು ನಗರದಲ್ಲಿ ಹಮ್ಮಿಕೊಂಡಿರುವ ಬಾರುಕೋಲು ಚಳವಳಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ನಗರದಲ್ಲಿ ಭಾನುವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಬಂದೋಬಸ್ತ್‌ಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಿದರು.

ಚಳವಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಬಿಗಿ ಭದ್ರತೆಯ ಉಸ್ತುವಾರಿಗಾಗಿ 4 ಜನ ಡಿವೈಎಸ್‌ಪಿ, 11 ಜನ ಪೊಲೀಸ್ ಇನ್ಸ್‌ಪೆಕ್ಟರ್, 33 ಜನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. 49 ಜನ ಎ.ಎಸ್.ಐ., 145 ಹೆಡ್‌ಕಾನ್ಸ್‌ಟೇಬಲ್, 369 ಪೊಲೀಸ್ ಕಾನ್ಸ್‌ಟೇಬಲ್ ಹಾಗೂ 49 ಜನ ಮಹಿಳಾ ಕಾನ್ಸ್‌ಟೇಬಲ್ ಈ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿದ್ದಾರೆ ಎಂದು ಅವರು ವಿವರಿಸಿದರು.

ಮೂರು ಕೆ.ಎಸ್.ಆರ್.ಪಿ ತುಕಡಿಗೆ ಕೋರಲಾಗಿತ್ತು. ಆದರೆ, 2 ತುಕಡಿಗಳು ಮಾತ್ರ ಬಂದಿವೆ. 7 ಡಿ.ಎ.ಆರ್. ತುಕಡಿಗಳು, 2 ಕ್ಷಿಪ್ರ ಕಾರ್ಯಾಚರಣೆ ಪಡೆಗಳು (ಆರ್.ಎ.ಎಫ್) ಸಹ ಈ ಕಾರ್ಯದಲ್ಲಿ ನೆರವಾಗಲಿವೆ ಎಂದು ಅವರು ತಿಳಿಸಿದರು.

ಚಳವಳಿ ಪ್ರಾರಂಭಗೊಂಡು ಮುಕ್ತಾಯವಾಗುವವರೆಗಿನ ವಿದ್ಯಮಾನಗಳನ್ನು ಚಿತ್ರೀಕರಿಸಿಕೊಳ್ಳುವ ಸಂಬಂಧ ಇಲಾಖೆ ವತಿಯಿಂದ 10 ವಿಡಿಯೋಗ್ರಾಫರ್‌ಗಳನ್ನು ಸಹ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಚಳವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ, ಅಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಸಹ ನಡೆಯಲಿದೆ. ಹೀಗಾಗಿ ಯಾರಿಗೂ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗಿದೆ. ಸಂಯಮ ಕಳೆದುಕೊಳ್ಳದೇ ಕರ್ತವ್ಯ ನಿರ್ವಹಿಸುವಂತೆ ಸಹ ಎಲ್ಲಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಡಿ.ವೈ.ಎಸ್‌ಪಿ ವಿಜಯ ಡಂಬಳ ಸಹ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT