ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಗಂಜಿ ಬಿದ್ದು ಮಕ್ಕಳಿಗೆ ಗಾಯ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪಾತ್ರೆ ಉರುಳಿ ಬಿಸಿ ಗಂಜಿ ಬಿದ್ದು ಮೂವರು ಅಂಗನವಾಡಿ ಮಕ್ಕಳು ಗಾಯಗೊಂಡ ಘಟನೆ ಇಲ್ಲಿನ ಎಪಿಎಂಸಿ ಯಾರ್ಡ್ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ  ಗುರುವಾರ ನಡೆದಿದೆ. ಅನ್ನ ಬಸಿಯುವಾಗ ಪಾತ್ರೆ ಜಾರಿ ಬಿತ್ತು. ಅದರಿಂದ ಸುರಿದ ಬಿಸಿ ಗಂಜಿ ಮಕ್ಕಳ ಮೈಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಹನುಮಂತಪ್ಪ -ಜ್ಯೋತಿ ದಂಪತಿಯ ಪುತ್ರ ಗಗನ್ (4) ಗಂಭೀರವಾಗಿ ಗಾಯಗೊಂಡಿದ್ದಾನೆ. ಕೈಕಾಲು ಮತ್ತು ಹೊಟ್ಟೆಯ ಭಾಗಗಳು ಸುಟ್ಟಿದ್ದು, ಶೇ 70ರಷ್ಟು ಸುಟ್ಟಗಾಯಗಳಾಗಿವೆ. ಈತನನ್ನು ನಗರದ ಎಸ್‌ಎಸ್ ಹೈಟೆಕ್  ಆಸ್ಪತ್ರೆಗೆ ಸೇರಿಸಲಾಗಿದೆ. ಸೌಮ್ಯಾ ಮತ್ತು ಕಾರ್ತಿಕ್‌ರ ಕೈಕಾಲಿಗೆ ಗಾಯಗಳಾಗಿವೆ. ಕಾರ್ತಿಕ್ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ, ಸೌಮ್ಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮುಷ್ಕರಕ್ಕೆ ಕಾರ್ಯಕರ್ತೆ: ಘಟನೆ ಸಂದರ್ಭ ಇಲ್ಲಿನ ಕಾರ್ಯಕರ್ತೆ ಪುಟ್ಟಮ್ಮ ಅವರು ತಾಲ್ಲೂಕು ಕಚೇರಿ ಆವರಣದಲ್ಲಿ ತಮ್ಮ ಸಂಘಟನೆ ವತಿಯಿಂದ ನಡೆಯುತ್ತಿರುವ ಮುಷ್ಕರಕ್ಕೆ ತೆರಳಿದ್ದರು. ಕೇಂದ್ರದಲ್ಲಿ ಸಹಾಯಕಿ ಕೆಂಚವೀರಮ್ಮ ಅವರೊಬ್ಬರೇ ಮಕ್ಕಳನ್ನು ಹಾಗೂ ಅಡುಗೆ ಕೆಲಸ ನಿಭಾಯಿಸುತ್ತಿದ್ದರು. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 35ರಿಂದ 40 ಮಕ್ಕಳಿದ್ದಾರೆ.

ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು. ಇಕ್ಕಟ್ಟಾದ ಈ ಕೇಂದ್ರದಲ್ಲಿ ಮೂಲಸೌಲಭ್ಯ ಇಲ್ಲ. ಇದ್ದ ಚಿಕ್ಕ ಸ್ಥಳದಲ್ಲಿ ಆಹಾರ ತಯಾರಿಸಬೇಕಿದೆ. ಸಹಜವಾಗಿ ಮಕ್ಕಳು ಸಹಾಯಕಿಯತ್ತ ಧಾವಿಸಿರಬಹುದು ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರೋಜಾ ಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಘಟನೆ ತಿಳಿದಾಕ್ಷಣ ಮಕ್ಕಳ ಚೀರಾಟ ಕೇಳಿದ ಪೋಷಕರು ಮತ್ತು ಸ್ಥಳೀಯರು ಕೇಂದ್ರಕ್ಕೆ ಮತ್ತು ಆಸ್ಪತ್ರೆಗೆ ಧಾವಿಸಿ, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ಎಚ್.ಕೆ. ರೇವಣ್ಣ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT