ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಮಕ್ಕಳಿಗೆ ನೆಲೆ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಕ್ಕಳು ಬೇಕೆಂದು ಪ್ರತಿದಿನ ಇಲ್ಲದ ದೇವರಿಗೆ ಹರಕೆ ಹೊರುತ್ತಾ ಮುದುಕರಾಗಿ ವೈರಾಗ್ಯಕ್ಕೆ ಜಾರುವವರು ಕೆಲವರು. ಮಕ್ಕಳನ್ನು ಹೆತ್ತರೂ ಸಾಕಲಾಗದೆ ಎಲ್ಲೋ ಬಿಟ್ಟು ಹೋಗುವವರು ಇನ್ನು ಕೆಲವರು. ಹೀಗೆ ಮಕ್ಕಳಿಲ್ಲದ ದಂಪತಿಗಳೂ, ಹೆತ್ತವರಿಲ್ಲದ ಮಕ್ಕಳೂ ಒಂದೇ ಸಮಾಜದಲ್ಲಿ ಇದ್ದರೂ ಒಬ್ಬರಿಗೊಬ್ಬರು ಇಲ್ಲದ ಸಂಬಂಧಗಳನ್ನು ಬೆಸೆದುಕೊಳ್ಳಲು ಮುಂದೆ ಬರುವವರು ಕಡಿಮೆ. ಇರುವ ಆಸ್ತಿ ತಮ್ಮ ನಂತರ ಯಾರೋ ಕಂಡವರು ಅನುಭವಿಸುವುದು ಬೇಡ ಎಂದೋ ಅಥವಾ ಇನ್ಯಾವುದೋ ಕಾರಣಕ್ಕೋ ದತ್ತು ಪಡೆದು ಸಾಕುವವರು ಬೆರಳೆಣಿಕೆಯಲ್ಲಿದ್ದಾರಷ್ಟೆ. ವಿದೇಶೀಯರಿಗೆ ಹೋಲಿಸಿದರೆ ದತ್ತು ಸ್ವೀಕಾರಕ್ಕೆ ಭಾರತೀಯರು ಅಷ್ಟಾಗಿ ಒಗ್ಗಿಕೊಂಡಿಲ್ಲ. ಹೀಗಾಗಿ ನಮ್ಮಲ್ಲಿ ಅನಾಥ ಮಕ್ಕಳು ಅನಾಥರಾಗಿಯೇ ಬದುಕುವ ಸ್ಥಿತಿಯಿದೆ.

ಆದರೆ, `ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ' ಎಂಬ ಮಾತು ಎಷ್ಟು ನಿಜ ಎಂದೆನ್ನಿಸುವುದು `ನೆಲೆ'ಯಂತಹ ಸಂಸ್ಥೆಗಳನ್ನು ಕಂಡಾಗ. `ನೆಲೆ' ಅನಾಥ ಮಕ್ಕಳ ಆಶ್ರಯಧಾಮ. ಹಿಂದೂ ಸೇವಾ ಪ್ರತಿಷ್ಠಾನದ ಉದಾತ್ತ ಯೋಜನೆಯಡಿ ಹುಟ್ಟಿಕೊಂಡ `ನೆಲೆ' ಆಶ್ರಯರಹಿತ ಮಕ್ಕಳ ಪುನರ್ವಸತಿ ಕೇಂದ್ರ.

ಹೆತ್ತವರ್ದ್ದಿದರೂ ಪ್ರೀತಿ, ಮಮತೆ ಸಿಗದೆ ಅಥವಾ ಬಡತನದ ಕಾರಣದಿಂದ ಚಿಂದಿ ಆಯುತ್ತಾ ಹೊಟ್ಟೆ ಹೊರೆಯುವ ಮಕ್ಕಳು ಶಿಕ್ಷಣ ಮತ್ತು ಸಂಸ್ಕಾರದಿಂದಲೂ ವಂಚಿತರಾಗಿರುತ್ತಾರೆ. ಇಂತಹ ಮಕ್ಕಳ ಪುನರ್ವಸತಿಗಾಗಿ 2000ನೇ ಇಸವಿಯಲ್ಲಿ ಆರಂಭವಾದ ಸಂಸ್ಥೆ ರಾಜ್ಯದಾದ್ಯಂತ ಸೇವೆ ಸಲ್ಲಿಸುತ್ತಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ `ನೆಲೆ ನರೇಂದ್ರ', ಜ್ಞಾನಭಾರತಿಯಲ್ಲಿ `ನೆಲೆ ನಮ್ಮ ಮನೆ', ಆನೇಕಲ್‌ನಲ್ಲಿ `ನೆಲೆ ಆಶಾಕಿರಣ', ಜೆ.ಪಿ.ನಗರದಲ್ಲಿ  `ನೆಲೆ ಪ್ರೇಮಾಂಜಲಿ', ನಗರ್ತಪೇಟೆಯಲ್ಲಿ `ನೆಲೆ ಚಂದನ' ಹೀಗೆ ವಿಭಿನ್ನ ಹೆಸರಿನಿಂದ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಜ್ಞಾನಭಾರತಿ, ಜೆ.ಪಿ.ನಗರ ಮತ್ತು ಆನೇಕಲ್‌ನ `ನೆಲೆ' ಹೆಣ್ಣುಮಕ್ಕಳಿಗೆಂದೇ ಮೀಸಲು. ಉಳಿದ ಕೇಂದ್ರಗಳಲ್ಲಿ ಗಂಡು ಮಕ್ಕಳು ಇದ್ದಾರೆ. ಇವರಿಗೆಲ್ಲ ಒಂದರಿಂದ ಹತ್ತನೇ ತರಗತಿಯವರೆಗೆ ಹತ್ತಿರದ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲಾಗುತ್ತಿದೆ.

`ನೆಲೆ'ಯಲ್ಲಿ ಹದಿನೆಂಟು ವಯಸ್ಸು ತುಂಬುವವರೆಗೂ ಆಶ್ರಯ ನೀಡಲಾಗುತ್ತದೆ. ನಂತರ ಕೆಲವರು ಸಂಬಂಧಿಗಳ ಬಳಿಗೆ ಹೋಗುತ್ತಾರೆ ಅಥವಾ ಬೇರೆಡೆ ಉನ್ನತ ಶಿಕ್ಷಣ, ಉದ್ಯೋಗಕ್ಕೆ ಹೋಗುತ್ತಾರೆ. ಅಂಥವರ ಖರ್ಚುಗಳನ್ನು `ನೆಲೆ'ಯೇ ಭರಿಸುತ್ತದೆ. ಆದರೆ ಸಂಬಂಧಿಕರೆಂದು ಹೇಳಿಕೊಳ್ಳಲು ಯಾರೂ ಇಲ್ಲದವರನ್ನು ಆನಂತರವೂ `ನೆಲೆ'ಯಲ್ಲಿಯೇ ಉಳಿಸಿಕೊಳ್ಳಲಾಗು ತ್ತದೆ. ಈ ವಿಚಾರದಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಲಾಗುತ್ತದೆ. ಹೀಗೆ ಒಂದೊಂದು ಕೇಂದ್ರದಲ್ಲೂ ನೂರಕ್ಕಿಂತ ಹೆಚ್ಚು ಮಕ್ಕಳೂ ಆಶ್ರಯ ಪಡೆದಿದ್ದಾರೆ.

ಮಕ್ಕಳ ಆಯ್ಕೆ ಹೀಗೆ...
ಚಿಂದಿ ಆಯುವ ಮಕ್ಕಳನ್ನು `ನೆಲೆ'ಯ ಸಿಬ್ಬಂದಿ ಕರೆತರುವುದಲ್ಲದೆ, ಸ್ವಯಂಸೇವಾ ಸಂಸ್ಥೆಗಳು ಮತ್ತು ಕೆಲವೊಮ್ಮೆ ಪೊಲೀಸರು ಕೂಡ ತಂದು ಇಲ್ಲಿಗೆ ದಾಖಲಿಸುತ್ತಾರೆ. ಅಪ್ಪ ಇಲ್ಲದ, ಅಮ್ಮನ ಪೋಷಣೆಯಲ್ಲಿರುವ ಮಕ್ಕಳೂ ಇಲ್ಲಿದ್ದಾರೆ. ಕೆಲವರಿಗೆ ಸಹೋದರ ಅಥವಾ ಸಹೋದರಿಯರಿದ್ದಾರೆ. ಬಡತನ ಮತ್ತು ಅಭದ್ರತೆಯ ಕಾರಣ ಇಲ್ಲಿಗೆ ಬಂದವರಿದ್ದಾರೆ. ಕೆಲವರಿಗೆ ದೂರದ ಸಂಬಂಧಿಗಳಿದ್ದಾರೆ. ಇನ್ನು ದಾನಿಗಳ ಮೂಲಕ ಆಶ್ರಯ ಪಡೆದವರೂ ಇದ್ದಾರೆ. ಸಾರ್ವಜನಿಕರು ಮುಂದೆಯೂ ಇಂತಹ ಅನಾಥ ಮಕ್ಕಳನ್ನು `ನೆಲೆ'ಗೆ ಕರೆತರಬಹುದು.

ಇಷ್ಟೇ ಅಲ್ಲದೆ ಶಿವಮೊಗ್ಗ, ಮೈಸೂರು, ತುಮಕೂರು ಮತ್ತು ಬಾಗಲಕೋಟೆಗಳಲ್ಲಿ ತಲಾ ಒಂದರಂತೆ ಒಟ್ಟು ಹತ್ತು ಕೇಂದ್ರಗಳನ್ನು ಹೊಂದಿದೆ.

ಬೀದಿಪಾಲಾಗಿ ಭಿಕ್ಷಾಟನೆ ಮಾಡುವ, ರದ್ದಿ ಆಯುವ ಮಕ್ಕಳನ್ನು ಕರೆತಂದು ಇಲ್ಲಿ ವಸತಿ, ಶಿಕ್ಷಣ, ಸಂಸ್ಕಾರ ನೀಡುವುದಲ್ಲದೆ ಸ್ವಚ್ಛತೆ ಹಾಗೂ ಆರೋಗ್ಯದ ಅರಿವು ಮೂಡಿಸಲಾಗುತ್ತದೆ. ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ಯೋಗ ಕಲಿಸಲಾಗುತ್ತದೆ. ಸಾಮಾಜಿಕ ಅರಿವು ಮೂಡಿಸುತ್ತಾ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳಲ್ಲಿ ಕೆಲವರು ಕಾಲೇಜು ಶಿಕ್ಷಣವನ್ನೂ ಪಡೆಯುತ್ತ್ದ್ದಿದಾರೆ. ಕ್ರೀಡೆ, ಸಂಗೀತ, ನೃತ್ಯಕಲೆ ಮುಂತಾದ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಪೋಷಕರಿಲ್ಲದೆ ಬೀದಿ ಪಾಲಾದ ಮಕ್ಕಳು ಸರಿಯಾದ ಮಾರ್ಗದರ್ಶನವಿಲ್ಲದೆ ಸಮಾಜ ಘಾತುಕರಾಗುವ ಅಪಾಯವಿದೆ. ಆದರೆ `ನೆಲೆ' ಇಂತಹ ದುರಂತಗಳಿಂದ ಮಕ್ಕಳನ್ನು ಪಾರು ಮಾಡುತ್ತಿದೆ. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ. ಇದು ಅನಾಥ ಮಕ್ಕಳ ಪಾಲಿಗೆ ಸ್ವರ್ಗವೇ ಸರಿ.

ಚಟುವಟಿಕೆಯ ತಾಣ
`ನೆಲೆ'ಯ ಮಕ್ಕಳು ಎಲ್ಲರೊಂದಿಗೆ ಬೆರೆಯುವಂತಹ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಕೆಲ ಸಂಘಟನೆಗಳು ಶೈಕ್ಷಣಿಕ ಸಂಸ್ಥೆಯ ಸ್ವಯಂಸೇವಾ ಘಟಕಗಳು `ನೆಲೆ'ಗೆ ಬಂದು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. `ನೆಲೆ'ಯ ಮಕ್ಕಳಿಂದಲೇ ಹೊರಗಿರುವ ಅವಕಾಶ ವಂಚಿತ ಮಕ್ಕಳಿಗೆ ಶಿಬಿರಗಳನ್ನು ನಡೆಸಲಾಗುತ್ತದೆ. ಇಲ್ಲ ಯೋಗಶಿಕ್ಷಣ, ಪ್ರಾರ್ಥನೆ, ಧ್ಯಾನಶಿಬಿರಯ ನಡೆಸಲಾಗುತ್ತಿದೆ. ಧಾರ್ಮಿಕ ಮತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸ್ಥಳೀಯರು ಮಕ್ಕಳ ಜೊತೆ ಬೆರೆತು ಸಿಹಿ ಹಂಚುವ ಸಂಪ್ರದಾಯವಿದೆ.

ವೃತ್ತಿ ಶಿಕ್ಷಣ ತರಬೇತಿ
ಬೆಂಗಳೂರಿನ ಲಗ್ಗೆರೆಯ ಕೇಂದ್ರದಲ್ಲಿ ಶಾಲೆ ತೊರೆದ ಮಕ್ಕಳಿಗಾಗಿ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ನಿರ್ಮಾಣವಾಗಿದೆ. ಇಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ ಪಡೆದು ಕೆಲವರು ಸ್ವಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅವರ ಆಸಕ್ತಿಯ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ. ಬಡ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಹೀಗೆ ಸದ್ದಿಲ್ಲದೆ ಬೀದಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ `ನೆಲೆ' ಶ್ರಮಿಸುತ್ತಿದೆ.

ಮಕ್ಕಳ ಕನಸು
ನಾಲ್ಕು ವರ್ಷದ ಹಿಂದೆ ಅನಾಥೆಯಾಗಿ ಭಿಕ್ಷಾಟನೆ ಮಾಡುತ್ತಿದ್ದ ಮಯೂರಿ ಪೊಲೀಸ್ ಒಬ್ಬರಲ್ಲಿ ಶಾಲೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದ ಪರಿಣಾಮವಾಗಿ `ನೆಲೆ'ಯಲ್ಲಿ ಆಶ್ರಯ ಪಡೆದಿದ್ದಾಳೆ. ಆರರ ವಯಸಿಗೆ ಹೆತ್ತವರನ್ನು ಕಳೆದುಕೊಂಡ ನಮಿತಾ `ನೆಲೆ'ಯಲ್ಲಿ ಬೆಳೆಯುತ್ತಿದ್ದಾಳೆ.

ಎಂಟು ವರ್ಷದ ಹಿಂದೆ `ನೆಲೆ'ಗೆ ಬಂದ ನಾಗೇಶನಿಗೆ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ತನ್ನ ಇಂಗಿತವನ್ನು `ನೆಲೆ'ಯ ಮುಖ್ಯಸ್ಥರಲ್ಲಿ ತಿಳಿಸಿದಾಗ ಪ್ರೋತ್ಸಾಹ ನೀಡಿ ಎಸ್‌ಎಸ್‌ಎಲ್‌ಸಿ ಪೂರೈಸಿ ಈಗ ಚಿತ್ರಕಲಾ ಶಿಕ್ಷಣ ಪಡೆಯುತ್ತಿದ್ದಾನೆ.

ಇನ್ನು ಪಿಯುಸಿ ಓದುತ್ತಿರುವ ಶ್ವೇತಾಗೆ ಲಾಯರ್ ಆಗುವ ಕನಸು. ರಮ್ಯಾಗೆ ನೃತ್ಯಗಾತಿಯಾಗುವ ಬಯಕೆ. ಹೀಗೆ ಇಲ್ಲಿನ ಎಲ್ಲ ಮಕ್ಕಳೂ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತಿದ್ದಾರೆ.

ಹೆತ್ತವರ ಪ್ರೀತಿ ಇಲ್ಲಿದೆ...
`ನೆಲೆಯಲ್ಲಿ ಅನಾಥ ಮಕ್ಕಳಿಗೆ ಮೊದಲು ಹೆತ್ತವರ ಪ್ರೀತಿ ನೀಡುತ್ತೇವೆ. ಆ ಮೂಲಕ ಅವರಲ್ಲಿ ಅನಾಥ ಪ್ರಜ್ಞೆ ದೂರ ಮಾಡಲಾಗುತ್ತದೆ. ಇದರ ಜೊತೆಗೆ ಅವರಿಗೆ ಮೌಲ್ಯಯುತ ಶಿಕ್ಷಣ ನೀಡಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ಇದರ ಮುಖ್ಯ ಉದ್ದೇಶ'
-ಪ್ರಕಾಶ್ ಎಂ., `ನೆಲೆ' ನಿರ್ದೇಶಕ
ಮಾಹಿತಿಗಾಗಿ: 080-2211 8318, 2660 8926, 2242 5337

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT