ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುರ‌್ರಕಥೆಯ ಪ್ರಚಾರಕ

Last Updated 19 ಆಗಸ್ಟ್ 2012, 7:30 IST
ಅಕ್ಷರ ಗಾತ್ರ

ವಿಶಿಷ್ಟ ಜನಪದ ಕಲೆ ಬುರ‌್ರಕಥೆ ಅಪರೂಪವಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಈ ಕಲೆಯನ್ನು ಗಣ್ಯರ ಜೀವನ ಚರಿತ್ರೆ, ಗತಕಾಲದ ವೈಭವ, ಸಾಮಾಜಿಕ ಮೌಲ್ಯಗಳ ಬಗ್ಗೆ ಸಂದೇಶ ನೀಡುತ್ತ ಜೀವಂತವಾಗಿಟ್ಟಿರುವ ಅಪರೂಪದ ಶಿಕ್ಷಕರೊಬ್ಬರು ಮುಳಬಾಗಲು ತಾಲ್ಲೂಕಿನಲ್ಲಿದ್ದಾರೆ. ಎಚ್.ಗೊಲ್ಲಹಳ್ಳಿ ವಾಸಿ, ಶಿಕ್ಷಕ ವಿ.ವೆಂಕಟಮುನಿಯುಪ್ಪ ಅವರಿಗೆ ಬುರ‌್ರಕಥೆ ಹೇಳುವುದೇ ಪ್ರವೃತ್ತಿ. ಅವರ ಜೀವನ ಕಲೆಯ ಬಹುಮುಖ್ಯ ಭಾಗವಿದು.

ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ (1946ನೇ ಏಪ್ರಿಲ್ 6) ಅವರು 1968ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದರು. ತಂದೆ ಕಾಕಿ ಮುನಿವೆಂಕಟಪ್ಪ ಬುರ‌್ರಕಥೆ ಕಲಾವಿದರಾಗಿದ್ದರು. ಮೈಸೂರು ಮಹಾರಾಜರಿಂದ ಬಹುಮಾನವನ್ನೂ ಪಡೆದಿದ್ದವರು. ತಂದೆ ನೆರಳಲ್ಲಿ ವೆಂಕಟಪ್ಪಮುನಿಯಪ್ಪನವರಿಗೂ ಕಲೆ ಕರಗತವಾಯಿತು.

ಕರ್ನಾಟಕದಲ್ಲಷ್ಟೇ ಅಲ್ಲದೆ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬುರ‌್ರಕಥೆ ಪ್ರದರ್ಶನ ನೀಡುತ್ತ ಬಂದಿರುವ ವಿ.ವೆಂಕಟಮುನಿಯಪ್ಪ ತೆಲುಗಿನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಗ್ರಾಮೀಣ ಜನಪದ ಕಲೆಗಳಿಗೆ ಚೈತನ್ಯ ನೀಡುತ್ತಿರುವುದು ವಿಶೇಷ. ಹವ್ಯಾಸಿ ರಂಗಕರ್ಮಿಯಾಗಿ, ಅನುವಾದ ಕಲಾವಿದ, ಕ್ರೀಡಾಪಟುವಾಗಿ ಅವರ ಪರಿಶ್ರಮ ದೊಡ್ಡದು.

ಕೇಂದ್ರ, ರಾಜ್ಯ ಸರ್ಕಾರ ಕೈಗೊಂಡ ಅನೇಕ ಜಾಗೃತಿ ಅಭಿಯಾನ, ಸಾಂಸ್ಕೃತಿಕ ಜಾಥಾ, ಏಷಿಯನ್ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವ ಅವರ ಬಳಿ ಪ್ರಾಚೀನ ಜಾನಪದ ವಸ್ತುಗಳು ಸಂಗ್ರಹಗೊಂಡಿವೆ. ಭಾರತೀಯ ಪರಂಪರೆ, ಚಾರಿತ್ರಿಕ ಜೀವನ ಶೈಲಿಗೆ ಸಂಬಂಧಿಸಿದ ಪರಿಕರ, ರಾಜಮಹಾರಾಜರ ಕಾಲದ ಆಳ್ವಿಕೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿರುವ ಅವರು, ಹೊಸ ಪೀಳಿಗೆಗೆ ಆ ಪರಂಪರೆಯನ್ನು ಪರಿಚಯಿಸಲೆಂದೇ ಯೋಗಿ ನಾರಾಯಣ ಜಾನಪದ ಕಲಾ ಅಕಾಡೆಮಿ ಸ್ಥಾಪಿಸಿದ್ದಾರೆ.

ತೆಲುಗು ನಾಟಕ, ತತ್ವಪದ, ಅನುಭಾವ ಸಾಹಿತ್ಯ, ಬುರ‌್ರಕಥೆಗಳನ್ನೂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೈವಾರ ನಾರಾಯಣ ಯತ್ರೀಂದ್ರರ ಜೀವನ ಚರಿತ್ರೆ, ಡಾ.ಬಿ.ಆರ್.ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಡಿವಿಜಿ, ಬಸವೇಶ್ವರರ ಜೀವನ ಚರಿತ್ರೆಯನ್ನು ಬುರ‌್ರಕಥೆಗೆ ಅಳವಡಿಸಿದ್ದಾರೆ.
 
ಕರ್ನಾಟಕದ ಗತವೈಭವಗಳ ಬಗ್ಗೆಯೂ ಬುರ‌್ರಕಥೆ ರಚಿಸಿ ರಾಜ್ಯದ ಜನಪದ ಜಾತ್ರೆ, ಗಡಿನಾಡು ಉತ್ಸವಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಅದಷ್ಟೇ ಅಲ್ಲ; ಪೌರಾಣಿಕ-ಸಾಮಾಜಿಕ ನಾಟಕ, ಕೋಲಾಟ, ಕವಾಲಿ, ಲಾವಣಿಗಳಿಗೆ ನಿರ್ದೇಶನ ಮಾಡುವ ಜೊತೆ ಅಭಿನಯದಲ್ಲೂ ಅವರು ಸೈ ಎನ್ನುತ್ತಾರೆ. ವೇಣು ಕುಣಿತ, ಪಂಡರಿ ಭಜನೆ, ತತ್ವಪದಗಳ ಗಾಯನಕ್ಕೂ ಸಿದ್ಧರಿರುತ್ತಾರೆ!

ಹಲವು ಕಲೆಗಳಲ್ಲಿ ನಿಷ್ಣಾತರಾದ ಅವರಿಗೆ ಬುರ‌್ರಕಥೆಯ ಪರಂಪರೆ ಮುಂದುರಿಸುವ ಹೊಸ ತಲೆಮಾರನ್ನು ಸೃಷ್ಟಿಸುವ ಉಮೇದು ಬಲವಾಗಿದೆ. ಹೀಗಾಗಿಯೇ ನೂರಾರು ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಬುರ‌್ರಕಥೆಯೆಂಬ ಜನಪದ ಕಲೆ ಹೊಸ ಕಾಲಮಾನದಲ್ಲೂ ಹೊಳೆಯಬೇಕು ಎಂಬುದು ಅವರ ಮಹದಾಸೆ.

ಹಿರಿಯ ನಾಗರಿಕ ರಾಷ್ಟ್ರ ಪ್ರಶಸ್ತಿ, 1981-1990ರ ಸಾಲಿನಲ್ಲಿ ಉತ್ತಮ  ಜನಗಣತಿ ಕಾರ್ಯ ನಿರ್ವಹಣೆಗೆ ರಾಷ್ಟ್ರಪತಿಗಳಿಂದ ಪದಕ, 1993ರಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 1998ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2003ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂರಿಂದ ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರಿಗೆ ದೊರೆತ ಸನ್ಮಾನಗಳು ಅನೇಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT