ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಅತಿಥಿ: ಬಹರೇನ್‌ನಲ್ಲಿ ಭ್ರಷ್ಟಾಚಾರ ಇಲ್ಲ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಅಲ್ಲಿ, ಭ್ರಷ್ಟಾಚಾರ ಎಂದರೆ ಏನು ಎಂದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ತಿಳಿದವರೂ ಆ ಶಬ್ದ ಕೇಳಿದರೆ ಅಂಜುತ್ತಾರೆ. ಆದರೆ ಇಲ್ಲಿ, ಆ ಬಗ್ಗೆ ತಿಳಿಯದವರೇ ಇಲ್ಲ. ದಿನನಿತ್ಯವೂ ಇಲ್ಲಿ ಅದರದ್ದೇ ಮಾತು. ಇದೇ ಅಲ್ಲಿಗೂ, ಇಲ್ಲಿಗೂ ಇರುವ ಮುಖ್ಯ ಅಂತರ~ ಎನ್ನುತ್ತಾ ಕೊಲ್ಲಿ ರಾಷ್ಟ್ರ ಬಹರೇನ್ ಹಾಗೂ ಭಾರತದ ನಡುವಿನ ವ್ಯತ್ಯಾಸದ ಕುರಿತು `ಮೆಟ್ರೊ~ ಜೊತೆ ಮಾತಿಗೆ ಇಳಿದವರು ಬಹರೇನ್ ಕನ್ನಡ ಸಂಘದ ಅಧ್ಯಕ್ಷ ರಾಜ್‌ಕುಮಾರ್.

ಈಚೆಗೆ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ ರಾಜ್‌ಕುಮಾರ್, ಎರಡೂ ದೇಶಗಳ ನಡುವಿನ ತಮ್ಮ ಅನುಭವವನ್ನು ಹಂಚಿಕೊಂಡರು. ಬೆಂಗಳೂರಿನ ಕುರಿತು ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು ಹೀಗೆ..

* ಮಾತಿನಲ್ಲಿ ಭ್ರಷ್ಟಾಚಾರದ ಕುರಿತು ಹೆಚ್ಚಿನ ಒತ್ತು ಕೊಟ್ಟಿದ್ದೀರಲ್ಲ, ಕಾರಣವೇನು?
ನಾನು ಬೆಂಗಳೂರಿಗೆ ಬಂದಾಗ ಕಿವಿಗೆ ಬಿದ್ದದ್ದು ಲೋಕಾಯುಕ್ತರ ವರದಿ, ಅಕ್ರಮ ಗಣಿ, ಭ್ರಷ್ಟಾಚಾರ ಇವೇ ವಿಷಯ.  ಇಂಟರ್‌ನೆಟ್‌ನಲ್ಲಿ ಇಲ್ಲಿಯ ಪತ್ರಿಕೆಗಳನ್ನು ಓದಿ ವಿಷಯ ತಿಳಿದುಕೊಂಡಿದ್ದೆ. ಇದರಿಂದ ಬಹಳ ನೋವಾಯಿತು. ಬಹರೇನ್ ಮಟ್ಟಿಗೆ ಹೇಳುವುದಾದರೆ ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಯಾರಾದರೂ ಲಂಚ ತಿಂದಿದ್ದು ಗೊತ್ತಾದರೆ  ಅಂಥವರ ಹೆಸರನ್ನು `ಕಪ್ಪುಪಟ್ಟಿಗೆ~ ಸೇರಿಸಲಾಗುತ್ತದೆ. ಕನಿಷ್ಠ 5-10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಬಹಳ ಭಿನ್ನ.

* ಕರ್ನಾಟಕ ನಿಮ್ಮ ಜನ್ಮಭೂಮಿ. ಬಹರೇನ್‌ಗೆ ಹೋದ ಹಿನ್ನೆಲೆ?
ನಾನು ಹುಟ್ಟಿ, ಶಿಕ್ಷಣ ಪಡೆದದ್ದು ಉಡುಪಿಯಲ್ಲಿ. ನನ್ನ ತಂದೆ ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದರು. ಶಿಕ್ಷಣ ಕಲಿತ ಮೇಲೆ ಉದ್ಯೋಗ ಅರಸಿ ಅಲ್ಲಿಗೆ ಹೋದೆ. ಅಲ್ಲಿಯ ವಾತಾವರಣ, ಪರಿಸರ, ಉದ್ಯೋಗಕ್ಕಿರುವ ವಿಫುಲ ಅವಕಾಶ ನನ್ನನ್ನು ಆಕರ್ಷಿಸಿತು. ಅದೇ ಕಾರಣಕ್ಕೆ ಅಲ್ಲಿಯೇ ನೆಲೆಸಿದೆ.

* ಸುಮಾರು ಮೂರು ದಶಕಗಳ ಕಾಲ ಅಲ್ಲಿ ನೆಲೆಸಿದ ನಂತರ ಎರಡೂ ದೇಶಗಳ ನಡುವೆ ನಿಮ್ಮ ಗಮನಕ್ಕೆ ಬಂದ ಪ್ರಮುಖ ವ್ಯತ್ಯಾಸ ಏನು?
ಮೊದಲೇ ಹೇಳಿದ ಹಾಗೆ ಭ್ರಷ್ಟಾಚಾರ ಮುಕ್ತ ಹಾಗೂ ಉದ್ಯೋಗಕ್ಕೆ ಬೇಕಾದಷ್ಟು ಅವಕಾಶ ಇರುವ ದೇಶ ಅದು. ಇನ್ನು ಹೇಳುವುದಾದರೆ ಅಲ್ಲಿ ನಾವು ಎಷ್ಟು ದುಡಿಯುತ್ತೇವೆಯೋ ಅಷ್ಟನ್ನೂ ನಾವೇ ಅನುಭವಿಸಬಹುದು. ಅರ್ಥಾತ್ ಅಲ್ಲಿ ತೆರಿಗೆ ಕಟ್ಟುವ ಪ್ರಮೇಯ ಇಲ್ಲ. ತೆರಿಗೆ ಮುಕ್ತ ದೇಶವದು. ಆದರೆ ಇಲ್ಲಿ ನಾವು ದುಡಿದ ಅರ್ಧದಷ್ಟು ಪಾಲು ತೆರಿಗೆಗಳೇ ನುಂಗಿ ಹಾಕುತ್ತದೆ.

ಇನ್ನೂ ಒಂದು ವಿಷಯ ಎಂದರೆ, ಬಹರೇನ್ ಶುಚಿತ್ವಕ್ಕೆ ಹೆಸರುವಾಸಿ. ಬೆಂಗಳೂರು ನೋಡಲು ಚೆನ್ನಾಗಿಯೇ ಇದೆ. ಆದರೆ ಒಂದೇ ಒಂದು ಮಳೆ ಸುರಿದರೆ, ಇಲ್ಲಿಯ ಹಲವು ರಸ್ತೆಗಳ ಮೇಲೆ ಕಾಲಿಡಲು ಆಗದು. ಊರ ತುಂಬ ಗಲೀಜಿನ ವಾತಾವರಣ ಸೃಷ್ಟಿಯಾಗುತ್ತದೆ. ಈ ವಿಷಯದಲ್ಲಿ ಬಹರೇನ್‌ನಿಂದ ಕಲಿಯುವುದು ಸಾಕಷ್ಟು ಇದೆ.

ಸೊಳ್ಳೆ ಕಾಟವಂತೂ ಇಲ್ಲ. ಸ್ಥಳೀಯ ಸಂಸ್ಥೆಗಳು ಹೋಟೆಲ್‌ಗಳ ಮೇಲೆ ನಿಗಾ ವಹಿಸುತ್ತವೆ. ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತವೆ. ಹಳೆಯ ಸ್ಟಾಕ್‌ಗಳನ್ನು ಇಟ್ಟುಕೊಂಡಿದ್ದರೆ, ಹೋಟೆಲ್‌ಗಳ ಪರವಾನಗಿಯನ್ನೇ ರದ್ದು ಮಾಡುವಂತಹ ಕ್ರಮ ತೆಗೆದುಕೊಳ್ಳಲಾಗುತ್ತದೆ.

* ಬಡವರು ಹಾಗೂ ಸಿರಿವಂತರ ನಡುವಿನ ಅಂತರ ಹೇಗಿದೆ?
ಭಾರತದಂತೆಯೇ ಅಲ್ಲಿಯೂ ಇಬ್ಬರ ನಡುವೆ ಅಂತರ ಹೆಚ್ಚಾಗಿಯೇ ಇದೆ.  ಷಿಯಾ ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಸಹಾಯ ಅಷ್ಟೊಂದು ಇಲ್ಲ. ಆದರೆ  ಅಲ್ಲಿ ಬಡವರು ಎನಿಸಿಕೊಂಡಿರುವವರು ಇಲ್ಲಿಯ ಹಾಗೆ ಭಿಕ್ಷೆ ಬೇಡುವುದೂ ಇಲ್ಲ. ತೀರಾ ಚಿಕ್ಕ ಗುಡಿಸಲುಗಳಲ್ಲಿ ವಾಸವಾಗಿರುವುದೂ ಇಲ್ಲ. ಮನೆ ಕೆಲಸದವರಿಗೂ ಸ್ವಂತ ಕಾರು ಇದ್ದೇ ಇದೆ. ಇಲ್ಲಿ ಮಧ್ಯಮ ವರ್ಗದವರು ವಾಸಿಸುವಷ್ಟು ದೊಡ್ಡ ಮನೆ ಅಲ್ಲಿ ಬಡವರು ಎನಿಸಿಕೊಂಡವರಿಗೆ ಇದೆ. ಇಲ್ಲಿಯ ಹಾಗೆ ಅಲ್ಲಿ ಕುಟುಂಬ ಯೋಜನೆ ಇಲ್ಲ. ಮಕ್ಕಳು ಬಹಳ. ಆದರೆ ಎಲ್ಲರೂ ಚೆನ್ನಾಗಿ ಸಂಪಾದನೆ ಮಾಡಿ ತಮ್ಮ ಕಾಲ ಮೇಲೆ ನಿಲ್ಲುವುದು ಅಲ್ಲಿಯ ಸ್ಪೆಷಾಲಿಟಿ.

ಅಲ್ಲಿ ಪ್ರತಿಯೊಬ್ಬ ಪ್ರಜೆ ಇಂತಿಷ್ಟು ದುಡಿಯಬೇಕು ಎಂಬ ನಿಯಮವಿದೆ. ಒಂದು ವೇಳೆ ಆತ ಕಡಿಮೆ ದುಡಿಯುತ್ತಾನೆ ಎಂದರೆ ಅವನಿಗೆ ವಿವಾಹಕ್ಕೆ ಅಲ್ಲಿಯ ಸರ್ಕಾರ ಅನುಮತಿ ನೀಡುವುದಿಲ್ಲ. ಕುಟುಂಬವನ್ನು ಮುಂದುವರಿಸಲು ಆತ ಅನರ್ಹ ಎಂದು ತಿಳಿಸಲಾಗುತ್ತದೆ. 

* ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳ ದುಬಾರಿ, ಅಲ್ಲಿ ಹೇಗೆ..?
ಅರಬ್ ವಿದ್ಯಾರ್ಥಿಗಳಿಗೆ ಅಲ್ಲಿ ಶಿಕ್ಷಣ ಉಚಿತ. ಅನಿವಾಸಿಗಳಿಗೆ ಇಂತಿಷ್ಟು ಶುಲ್ಕ ನಿಗದಿ ಪಡಿಸಲಾಗಿದೆ. ಆದರೆ ಇಲ್ಲಿಯಷ್ಟು ಶಿಕ್ಷಣ ದುಬಾರಿಯಲ್ಲ.

* ಬಹರೇನ್ ಕನ್ನಡ ಸಂಘದ ಕುರಿತು ಒಂದಿಷ್ಟು ಮಾಹಿತಿ..
ಕನ್ನಡ ಸಂಘದ ಇತಿಹಾಸ ಸುದೀರ್ಘವಾದುದು. 1927ರಲ್ಲಿಯೇ ನೋಂದಣಿಯಾಗಿದೆ. ಇಲ್ಲಿಯವರೆಗೆ ಕನ್ನಡಿಗರಿಗಾಗಿ ಸಾವಿರಾರು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಲವಾರು ಬಾರಿ ವಿಶ್ವ ಕನ್ನಡಿಗರ ಸಮ್ಮೇಳನಗಳು ನಡೆದಿವೆ, ವಿವಿಧ ದೇಶಗಳ ಕನ್ನಡ ಕಲಾವಿದರನ್ನು ಕರೆಸಲಾಗಿದೆ.
ಸಂಘದ ವತಿಯಿಂದ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿದೆ. ಹಲವು ಮಕ್ಕಳು ಕನ್ನಡ ಕಲಿಕೆಗೆ ಉತ್ಸುಕರಾಗಿ ಮುಂದೆ ಬಂದಿದ್ದಾರೆ. ಅದೇ ರೀತಿ, ಇದೇ ಸೆಪ್ಟೆಂಬರ್ 29 ಹಾಗೂ 30ರಂದು 8ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಬಾರಿಯೂ ಕರ್ನಾಟಕದಿಂದ ಸಾಕಷ್ಟು ಸಾಹಿತಿ, ಕಲಾವಿದರು ಆಗಮಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT