ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೆಟ್ಟದಲ್ಲಿ ಬಹುಬೆಳೆಗೆ ಚಿಂತನೆ'

Last Updated 6 ಸೆಪ್ಟೆಂಬರ್ 2013, 6:55 IST
ಅಕ್ಷರ ಗಾತ್ರ

ಶಿರಸಿ: `ಬೆಟ್ಟಭೂಮಿ ಸದ್ಬಳಕೆ ನಿಟ್ಟಿನಲ್ಲಿ ವಿವಿಧ ಲಾಭದಾಯಕ ಬೆಳೆಗಳನ್ನು ರೈತರಿಗೆ ಪರಿಚಯಿಸುವ ದೃಷ್ಟಿಯಿಂದ ಅಂತರರಾಷ್ಟ್ರೀಯ ಕಂಪೆನಿಗಳನ್ನು ಆಹ್ವಾನಿಸಲಾಗಿದೆ. ಈ ಕಂಪೆನಿಗಳು ಬೆಟ್ಟ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನು ಪರಿಚಯಿಸುವ ಜೊತೆಗೆ ಬೈಬ್ಯಾಕ್ (ಪುನಃ ಖರೀದಿಸುವ) ಒಪ್ಪಂದ ಮಾಡಿಕೊಳ್ಳಲಿವೆ' ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ವನದುರ್ಗಿ ಅಗರ್‌ವುಡ್ ಇಂಡಿಯಾ ಸಂಸ್ಥೆ ಹಾಗೂ ಕದಂಬ ಚಾರಿಟಬಲ್ ಟ್ರಸ್ಟ್ ಜಂಟಿಯಾಗಿ ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಗರ್‌ವುಡ್ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. `ಬೆಟ್ಟ ಭೂಮಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಿದೆ. ಬೆಟ್ಟವನ್ನು ನಮ್ಮ ಕೈಯಲ್ಲಿ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಬೆಟ್ಟ ಬಳಕೆದಾರರ ಸಂಘ ರಚಿಸಲಾಗುತ್ತಿದೆ. ಬೆಟ್ಟದಲ್ಲಿ ಸ್ವಾಭಾವಿಕ ಅರಣ್ಯ ಗಿಡಗಳಂತೆ ಅನೇಕ ಜಾತಿಯ ಆದಾಯ ಕೊಡುವ ಸಸ್ಯಗಳನ್ನು ಬೆಳೆಸಬಹುದು. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕಂಪೆನಿಗಳನ್ನು ಆಹ್ವಾನಿಸಲಾಗಿದ್ದು, ಅಕ್ಟೋಬರ್ ಹೊತ್ತಿಗೆ ಆಗಮಿಸುವ ಭರವಸೆ ನೀಡಿವೆ' ಎಂದರು.

`ಲಕ್ಷಾಂತರ ರೂಪಾಯಿ ಆದಾಯ ತರುವ ಅರಗು, ಮುತ್ತು, ಅಗರ್‌ವುಡ್ ಕೃಷಿ ಮಾಡಲು ಜಿಲ್ಲೆಯಲ್ಲಿ ಅವಕಾಶಗಳಿವೆ. ಕಡಿಮೆ ಶ್ರಮದ ಹೆಚ್ಚಿನ ಹಣ ಗಳಿಸುವ ಕೃಷಿಯಿಂದ ಮಾತ್ರ ಯುವಕರ ನಗರ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ' ಎಂದರು.

`ಅಡಿಕೆ ನಮ್ಮ ಆಂತರಿಕ ಬಳಕೆಯ ಬೆಳೆಯಾಗಿದ್ದರೆ ಅಗರ್‌ವುಡ್‌ಗೆ ಜಗತ್ತಿನಾದ್ಯಂತ ವ್ಯಾಪಕ ಬೇಡಿಕೆ ಇದೆ. ಅಡಿಕೆ ಬೆಳೆಯ ಪರ್ಯಾಯಕ್ಕೆ ಬೆಳೆಗಾರರು ಗಂಭೀರ ಚಿಂತನೆ ನಡೆಸಬೇಕಾದ ಕಾಲ ಬಂದಿದೆ. ಕೇಂದ್ರ ಸರ್ಕಾರ ಸಹ ಅಡಿಕೆಗೆ ಪರ್ಯಾಯದ ಕುರಿತು ಚಿಂತನೆ ಪ್ರಾರಂಭಿಸಿದೆ. ಕೇರಳದಲ್ಲಿ ಅಡಿಕೆ ತೋಟ ಕ್ರಮೇಣ ರಬ್ಬರ್ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಅಗರ್‌ವುಡ್ ಜೊತೆ ಲಾಭ ತರುವ ಕೋಕೊ, ಕಾಳುಮೆಣಸು ಕೃಷಿ ಮಾಡಲು ಸಾಧ್ಯತೆಗಳಿವೆ' ಎಂದರು.

ಅಗರ್‌ವುಡ್ ಬೆಳೆ ಕುರಿತು ಮಾಹಿತಿ ನೀಡಿದ ನಿವೃತ್ತ ಪ್ರಾಧ್ಯಾಪಕ ವಿ.ಭಾಸ್ಕರ್, `ಶ್ರೀಗಂಧ, ರಕ್ತಚಂದನ ಹಾಗೂ ಅಗರ್‌ವುಡ್ ಹಸಿರು ಬಂಗಾರದ ಬೆಳೆಗಳಾಗಿವೆ. ಮಣಿಪುರ, ಅಸ್ಸಾಂ ರಾಜ್ಯಗಳಲ್ಲಿ ಅಗರ್ ಕೃಷಿ ಯಶಸ್ಸು ಕಂಡಿದೆ' ಎಂದರು.

`ಅಗರ್‌ವುಡ್ ಸಸ್ಯಗಳ ಬೇರು ಕೊಳೆತ ಮೇಲೆ ಬದುಕಿಸಿಕೊಳ್ಳಲು ಸಾಧ್ಯವಿಲ್ಲ. ಈ ವರ್ಷದ ಅತಿಯಾದ ಮಳೆಯಿಂದ ಅಗರ್ ಸಸಿಗಳು ಹಳದಿಯಾಗಿ ಎಲೆ ಉದುರುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ. ತೋಟದಲ್ಲಿ ಸಮರ್ಪಕ ಬಸಿಗಾಲುವೆ ನಿರ್ಮಿಸುವ ಮೂಲಕ ನೀರು ನಿಲ್ಲದಂತೆ ಕ್ರಮ ವಹಿಸಬೇಕು' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವನದುರ್ಗಿ ಸಂಸ್ಥೆಯ ಧರ್ಮೇಂದ್ರಕುಮಾರ ಹೆಗ್ಗಡೆ, ಪ್ರಗತಿಪರ ಕೃಷಿಕ ಭೀಮಣ್ಣ ನಾಯ್ಕ, ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಉಪಸ್ಥಿತರಿದ್ದರು. ಸತೀಶ ಹೆಗ್ಗುಂಬ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT