ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲರ್‌ಗಳ ಪ್ರದರ್ಶನ: ವೆಟೋರಿ ಶ್ಲಾಘನೆ

Last Updated 4 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಹಿ ಅನುಭವಿಸಿದ್ದ ನ್ಯೂಜಿಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ಅವರು ಶುಕ್ರವಾರ ಹರ್ಷಚಿತ್ತರಾಗಿದ್ದರು. ಜಿಂಬಾಬ್ವೆ ವಿರುದ್ಧ ಲಭಿಸಿದ 10 ವಿಕೆಟ್‌ಗಳ ಭರ್ಜರಿ ಗೆಲುವು ಇದಕ್ಕೆ ಕಾರಣ. ಕಿವೀಸ್ ನಾಯಕ ಗೆಲುವಿನ ಕ್ರೆಡಿಟ್‌ನ್ನು ಬೌಲರ್‌ಗಳಿಗೆ ನೀಡಿದರು. ‘ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿತ್ತು. ನಮ್ಮ ಬೌಲರ್‌ಗಳ ಸೊಗಸಾದ ಪ್ರದರ್ಶನದಿಂದಾಗಿ ಜಿಂಬಾಬ್ವೆ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಯಿತು. ಬೌಲರ್‌ಗಳ ಸಾಧನೆ ಮೆಚ್ಚುವಂತಹದ್ದು’ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇಲ್ಲಿನ ಪಿಚ್ ಏಕದಿನ ಪಂದ್ಯಕ್ಕೆ ಯೋಗ್ಯವಾಗಿತ್ತು. ಮಾರ್ಟಿನ್ ಗುಪ್ಟಿಲ್ ಮತ್ತು ಬ್ರೆಂಡನ್ ಮೆಕ್ಲಮ್ ಅವರು ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದರೆ, ಇಲ್ಲಿ 300 ಕ್ಕೂ ಅಧಿಕ ರನ್ ಪೇರಿಸುವುದು ಕಷ್ಟವಲ್ಲ’ ಎಂದು ವೆಟೋರಿ ನುಡಿದರು. ಆಟಗಾರರ ಪ್ರದರ್ಶನದಿಂದ ಸಾಕಷ್ಟು ಸಂತಸ ಹೊಂದಿದ್ದ ಕಿವೀಸ್ ನಾಯಕ, ‘ತಂಡದ ಸದಸ್ಯರಿಂದ ಇದಕ್ಕಿಂತ ಹೆಚ್ಚಿನ ಏನನ್ನೂ ಬಯಸುವುದಿಲ್ಲ. ಬ್ಯಾಟಿಂಗ್‌ಗೆ ಯೋಗ್ಯವಾಗಿರುವ ಪಿಚ್‌ನಲ್ಲಿ ಎದುರಾಳಿ ತಂಡವನ್ನು 160ರ ಮೊತ್ತಕ್ಕೆ ನಿಯಂತ್ರಿಸಿ, 10 ವಿಕೆಟ್‌ಗಳ ಗೆಲುವು ಪಡೆದಿದ್ದೇವೆ. ಈ ಪ್ರದರ್ಶನ ಸಾಕಷ್ಟು ತೃಪ್ತಿ ಉಂಟುಮಾಡಿದೆ’ ಎಂದರು.

ಈ ಗೆಲುವಿನಿಂದಾಗಿ ಕಿವೀಸ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಕಲೆಹಾಕಿರುವ ತಂಡ ‘ಎ’ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ‘ಈ ಪಂದ್ಯದಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿತ್ತು. ಈ ಕಾರಣ ತಂಡದ ಸದಸ್ಯರ ಮೇಲೆ ಅಲ್ಪ ಒತ್ತಡವೂ ಇತ್ತು. ಆದರೆ ಬ್ರೆಂಡನ್ ಮೆಕ್ಲಮ್ ಮತ್ತು ಮಾರ್ಟಿನ್ ಗುಪ್ಟಿಲ್ ಸೊಗಸಾದ ಇನಿಂಗ್ಸ್ ಕಟ್ಟಿದರು’ ಎಂದರು. ಇವರಿಬ್ಬರ ಉತ್ತಮ ಆಟದ ನೆರವಿನಿಂದ ಕಿವೀಸ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 166 ರನ್ ಗಳಿಸಿ ಗೆಲುವು ಸಾಧಿಸಿದೆ.

ಕೈಲ್ ಮಿಲ್ಸ್ ಅವರು ತಂಡಕ್ಕೆ ಯಶಸ್ವಿಯಾಗಿ ಪುನರಾಗಮನ ಮಾಡಿದ್ದು ಕೂಡಾ ವೆಟೋರಿ ಅವರ ಪ್ರಶಂಸೆಗೆ ಪಾತ್ರವಾಯಿತು. ಮಿಲ್ಸ್ ಬೆನ್ನು ನೋವಿನ ಕಾರಣ ಕಳೆದ ಒಂದು ತಿಂಗಳಲ್ಲಿ ಯಾವುದೇ ಪಂದ್ಯ ಆಡಿರಲಿಲ್ಲ. ಶುಕ್ರವಾರ ಅವರು 10 ಓವರ್‌ಗಳಲ್ಲಿ 29 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ‘ತಮ್ಮ ಪಾತ್ರ ಏನೆಂಬುದು ಮಿಲ್ಸ್‌ಗೆ ಚೆನ್ನಾಗಿ ತಿಳಿದಿದೆ. ಅವರು ತಂಡದಲ್ಲಿ ಬ್ಯಾಲೆನ್ಸ್ ಉಂಟುಮಾಡುವರು’ ಎಂದರು.

ಪಾಕಿಸ್ತಾನ ವಿರುದ್ಧದ ತಮ್ಮ ಮುಂದಿನ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ವೆಟೋರಿ, ‘ಪಾಕ್ ತಂಡದ ಬೌಲಿಂಗ್ ಚೆನ್ನಾಗಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರೂ ಅದನ್ನು ಬೌಲಿಂಗ್ ಮೂಲಕ ಸರಿದೂಗಿಸುವ ಸಾಮರ್ಥ್ಯ ತಂಡಕ್ಕಿದೆ’ ಎಂದು ಹೇಳಿದರು. ‘ಪಂದ್ಯಶ್ರೇಷ್ಠ’ ಮಾರ್ಟಿನ್ ಗುಪ್ಟಿಲ್ ಅವರು, ‘ನಾನು ಎಂದಿನ ಆಟವಾಡಿದೆ. ಇಬ್ಬರೂ ಹೊಂದಾಣಿಕೆಯಿಂದ ಇನಿಂಗ್ಸ್ ಕಟ್ಟಿದೆವು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT