ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಹೊಸ ತಳಿ ಮುಗದ ಸಿರಿ

Last Updated 28 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೋನಾ ಮಸೂರಿ ಭತ್ತಕ್ಕೆ ಕಾಡುವ ಬೆಂಕಿ ರೋಗ ನಿರೋಧಕ ಗುಣಗಳಿರುವ `ಮುಗದ ಸಿರಿ 1253~ ಹೆಸರಿನ ಹೊಸ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಧಾರವಾಡ ಸಮೀಪದ ಮುಗದ ಗ್ರಾಮದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಭತ್ತ ಸಂಶೋಧನಾ ಕೇಂದ್ರದಲ್ಲಿ ಹೊಸ  ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಮಲೆನಾಡು ಮತ್ತು ಬಯಲುಸೀಮೆ ಎರಡಕ್ಕೂ ಒಗ್ಗಿಕೊಳ್ಳವ ಗುಣ ಪಡೆದಿದೆ. ಇದೇ ಈ ತಳಿಯ ವಿಶೇಷ.

ರಾಜ್ಯದ ನೀರಾವರಿ ಪ್ರದೇಶಗಳಾದ ರಾಯಚೂರು, ಕೊಪ್ಪಳ, ಗಂಗಾವತಿ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಸಣ್ಣ ಕಾಳಿನ ಸೋನಾ ಮಸೂರಿಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಮಲೆನಾಡು ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ   ಸೋನಾ ಮಸೂರಿ ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. 

ನೀರಾವರಿ ಪ್ರದೇಶಗಳಲ್ಲಿ ಬೇಸಿಗೆ ಮತ್ತು ಮಳೆಗಾಲದ ಬೆಳೆಗಳಲ್ಲಿ ಸೋನಾ ಮಸೂರಿಗೆ ಬೆಂಕಿ ರೋಗ ಕಾಣಿಸಿಕೊಂಡು ರೈತರಿಗೆ ಹೆಚ್ಚು ನಷ್ಟವಾಗುತ್ತಿತ್ತು. `ಪೈರಿಕುಲೇರಿಯಾ~ ಎಂಬ ಶಿಲೀಂಧ್ರದಿಂದ ಬರುವ ಈ ರೋಗದಿಂದ ಹಸಿರಿನ ಭತ್ತದ ಪೈರುಗಳು ಬೆಳಗಾಗುವುದರೊಳಗೆ ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಗರಿಗಳ ಮೇಲೆ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುವ ಈ ಶಿಲೀಂಧ್ರದಿಂದಾಗಿ ಪೈರು ಒಣಗಿ ಇಳುವರಿ ಕುಸಿಯುತ್ತಿತ್ತು.
ಬೆಂಕಿ ರೋಗ ಬಾರದಿದ್ದರೆ ಬಂಪರ್ ಇಳುವರಿ ನೀಡುತ್ತಿದ್ದ  ಸೋನಾ ಮಸೂರಿಯನ್ನು ಹೆಚ್ಚಾಗಿ ಬೆಳೆಯಲು ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಬೆಲೆಯೇ ರೈತರಿಗೆ ಪ್ರೇರಣೆ.

ಇತ್ತೀಚಿನ ದಿನಗಳಲ್ಲಿ ಸೋನಾ ಮಸೂರಿ ಭತ್ತ ಬೆಳೆಯುವುದೆಂದರೆ ಜೂಜು ಆಡಿದಂತೆ ಎಂಬ ಭಾವನೆ ರೈತರಲ್ಲಿದೆ. ರೋಗ ನಿಯಂತ್ರಣಕ್ಕೆ ಹೆಚ್ಚು ಹಣ  ಖರ್ಚಾಗುವುದರಿಂದ ಮಸೂರಿ ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ.

`ಮುಗದ ಸಿರಿ 1253~
ಮುಗದ ಸಿರಿ 1253 ಸೋನಾ ಮಸೂರಿಗೆ ಪರ್ಯಾಯ. ಸೋನಾ ಮಸೂರಿಗೆ ಬರುವ ಬೆಂಕಿ ರೋಗಕ್ಕೆ ಪರಿಹಾರ ಹುಡುಕಲು ಕೃಷಿ ವಿಶ್ವವಿದ್ಯಾಲಯ ಮುಂದಾದಾಗ `ಮುಗದ ಸಿರಿ~ ಅಭಿವೃದ್ಧಿಯಾಯಿತು. ನೂತನ ತಳಿಯ ಮಾರಾಟಕ್ಕೆ ಈಗಾಗಲೇ ರಾಜ್ಯ ಕೃಷಿ ಇಲಾಖೆಯ ತಳಿ ಬಿಡುಗಡೆ ಸಮನ್ವಯ ಸಮಿತಿ ಒಪ್ಪಿಗೆ ನೀಡಿದೆ ಎನ್ನುತ್ತಾರೆ  ಕೃಷಿ ವಿಶ್ವವಿದ್ಯಾಲಯ ತಳಿ ಅಭಿವೃದ್ಧಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಎನ್.ಜಿ.  ಹನುಮರಟ್ಟಿ.

ಕೇಂದ್ರ ಸರ್ಕಾರದ ಅನುಮೋದನೆಗಾಗಿ ದೆಹಲಿಯ ಭಾರತೀಯ ಭತ್ತ ಅಭಿವೃದ್ಧಿ ಸಮನ್ವಯ ಸಮಿತಿಗೆ ಬೀಜಗಳ ಮಾದರಿ ಕಳುಹಿಸಿಕೊಡಲಾಗಿದೆ. ಈ ತಳಿ ರಾಜ್ಯದ ಪರಿಸರಕ್ಕೆ ಮಾತ್ರ ಸೂಕ್ತವೋ ಅಥವಾ ಇತರ ರಾಜ್ಯಗಳಲ್ಲಿ ಬೆಳೆಯಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಯಲಿದೆ.
 
ಹೊಸ  ತಳಿಗೆ ಸಮಿತಿಯೇ ಹೆಸರು ಸೂಚಿಸಿ ಅಧಿಸೂಚನೆ ಹೊರಡಿಸಲಿದೆ. ಮುಂದಿನ ಮುಂಗಾರು ಹಂಗಾಮಿನ ವೇಳೆಗೆ ರಾಜ್ಯ ಬೀಜ ನಿಗಮದ ಮೂಲಕ ರೈತರಿಗೆ ಬಿತ್ತನೆ ಬೀಜಗಳು ಸಿಗುವ ಸಾಧ್ಯತೆ ಇದೆ.

ಮುಗದ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಹನಮರಟ್ಟಿ ಅವರೊಂದಿಗೆ ಡಾ.ನರೇಶ ಬ್ರೋನವಳ್ಳಿ, ಡಾ.ಮಹಾಬಲೇಶ್ವರ ಹೆಗಡೆ, ಶ್ರೀಪಾದ ಕುಲಕರ್ಣಿ, ರೋಗ ತಜ್ಞರಾದ ಡಾ.ಪ್ರಶಾಂತಿ, ಪಿ.ನಾಗರಾಜು ಅವರ ತಂಡ ಸೇರಿ `ಮುಗದಸಿರಿ 1253~ ತಳಿಯನ್ನು ಅಭಿವೃದ್ಧಿಪಡಿಸಿದೆ.
 
ಹೈದರಾಬಾದ್‌ನ ಭತ್ತ ಸಂಶೋಧನಾ ನಿರ್ದೇಶನಾಲಯ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ಮಟ್ಟದ ಕಾವ್ಯಾ ತಳಿ ಹಾಗೂ ಸೋನಾ ಮಸೂರಿ (ಬಿಪಿಟಿ-5204)ಗಳನ್ನು ಸೇರಿಸಿ ಈ ಹೊಸ  ತಳಿ ಸೃಷ್ಟಿಸಲಾಗಿದೆ. ಇದರಿಂದ ಮುಗದ ಸಿರಿಗೆ ಬೆಂಕಿ ನಿರೋಧಕ ಗುಣ ಹಾಗೂ ಶೀತ ವಾತಾವರಣದಲ್ಲಿ ಅಧಿಕ ಇಳುವರಿ ನೀಡುವ ಗುಣ ಬಂದಿದೆ ಎಂದು ಸಂಶೋಧನಾ ತಂಡದ ವಿಜ್ಞಾನಿಗಳು ಹೇಳುತ್ತಾರೆ.

ಮುಗದ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯಶಸ್ವಿಯಾದ ಈ ಹೊಸ ತಳಿಯನ್ನು ಹೈದರಾಬಾದ್‌ನ ಭತ್ತ ಸಂಶೋಧನಾ ನಿರ್ದೇಶನಾಲಯದಲ್ಲಿ ಅಂತಿಮ ಪರೀಕ್ಷೆಗೆ ಒಳಪಡಿಸಲಾಗಿದ್ದು ಅಲ್ಲಿಯೂ ಸಕಾರಾತ್ಮಕ ಫಲಿತಾಂಶ ಬಂದಿದೆ.
 
ಮಲೆನಾಡು ಭಾಗದಲ್ಲಿ ಈ ತಳಿಯ ಭತ್ತದ ಇಳುವರಿ ಸೋನಾ ಮಸೂರಿಗಿಂತಲೂ ಶೇ. 15ರಿಂದ 20ರಷ್ಟು ಹೆಚ್ಚಾಗುತ್ತದೆ ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ. ಉಷ್ಣವಲಯಕ್ಕೆ ಇದು ಸೂಕ್ತವೇ ಎಂಬುದನ್ನು ಪರಿಶೀಲಿಸಲು  ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಕೃಷಿ ವಿಜ್ಞಾನ ಕೇಂದ್ರ ಪ್ರಯೋಗ ನಡೆಯುತ್ತಿದೆ.

ಮುಗದ ಸಿರಿ ಬೆಳೆಯಲು ಇಚ್ಛಿಸುವ ರೈತರು ಹೆಚ್ಚಿನ ಮಾಹಿತಿಗೆ ಡಾ.ಹನುಮರಟ್ಟಿ (ಮೊಬೈಲ್- 9449188471) ಅವರನ್ನು  ಸಂಪರ್ಕಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT