ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೂರಾದರೂ ಬಾರದ ವಿಧವಾ ವೇತನ

Last Updated 20 ಜುಲೈ 2012, 5:30 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ವಿಧವಾ ವೇತನ ಮಂಜೂ ರಾಗಿದ್ದರೂ ಇದುವರೆಗೆ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ವಿಧವೆಯೊಬ್ಬರು ತನ್ನ ಮೂರು ಮಕ್ಕಳೊಂದಿಗೆ ಕಷ್ಟ ಪಡುತ್ತಿದ್ದಾರೆ.

ಮರಿಯಮ್ಮನಹಳ್ಳಿಯ ವಡ್ಡರ ದೇವೇಂದ್ರಮ್ಮ ಅವರಿಗೆ ಎರಡು ಗಂಡು ಹಾಗೂ ಒಬ್ಬ ಹೆಣ್ಣು ಮಕ್ಕಳು ಸೇರಿ ಮೂರು ಮಕ್ಕಳಿದ್ದು ಇರುಳುಗಣ್ಣು ರೋಗದಿಂದ ಬಳಲುತ್ತಿದ್ದಾರೆ. ದೇವೇಂದ್ರಮ್ಮ ಅವರಿಗೆ ವಿಧವಾ ವೇತನ ಕಳೆದ ವರ್ಷ ಮಂಜೂರಾಗಿದೆ. ಗಾರೆ ಕೆಲಸ ಮಾಡುತ್ತಿದ್ದ ಈಕೆಯ ಗಂಡ ವಡ್ಡರ ವೆಂಕಟೇಶ್ ಐದು ವರ್ಷದ ಹಿಂದೆ ಮೃತಪಟ್ಟಿದ್ದು ಇದುವರೆಗೂ ವಿಧವಾ ವೇತನ ಸಿಕ್ಕಿಲ್ಲ.

ಈಕೆಯ ದೊಡ್ಡ ಮಗ, 16 ವರ್ಷದ ಸೋಮಶೇಖರನಿಗೆ ಸಂಪೂರ್ಣ ಕಣ್ಣು ಕಾಣದೇ ಇದ್ದು, ಗದುಗಿನ ಪುಟ್ಟರಾಜರ ಆಶ್ರಮದಲ್ಲಿ ಸಂಗೀತ ವಿದ್ಯಾಭ್ಯಾ ಮಾಡುತ್ತಿದ್ದಾನೆ.

ಎರಡನೇ ಮಗಳು, 10 ವರ್ಷದ ಮಗಳು ಶೋಭಾ ನಾಲ್ಕನೆ ತರಗತಿ ಓದುತ್ತಿದ್ದು, ಆಕೆಗೆ ಸರಿಯಾಗಿ ಕಣ್ಣು ಕಾಣದು. ಬೇರೆ ಮಕ್ಕಳ ಸಹಾಯದಿಂದ ಪರೀಕ್ಷೆ ಬರೆಸುತ್ತಾಳೆ ಎನ್ನುತ್ತಾರೆ ದೇವೇಂದ್ರಮ್ಮ. ಇನ್ನು ಕೊನೆಯ ಮಗ ಸುರೇಶ್‌ನದೂ  ಇದೇ ಸ್ಥಿತಿ.

ಈ ಪೈಕಿ ಇಬ್ಬರು ತೀವ್ರ ಇರುಳುಗಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಹಗಲಲ್ಲೇ ದೃಷ್ಟಿ ಕಾಣದೇ ಇದ್ದು, ಸಂಜೆಯಾಗುತ್ತಿದ್ದಂತೆ ದೃಷ್ಟಿಗೆ ಸಂಪೂರ್ಣ ಕತ್ತಲು ಕವಿಯುತ್ತದೆ. ವೈದ್ಯರಿಗೆ ತೋರಿಸಿದರೂ ಗುಣವಾಗದು ಎಂದು ತಿಳಿಸಿದ್ದಾರೆ ಎನ್ನುತ್ತಾರೆ ದೇವೇಂದ್ರಮ್ಮ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಪಟ್ಟಣದ ನಾಡಕಾರ್ಯಾಲಯದ ಉಪ ತಹಶೀಲ್ದಾರ್ ವಿಧವಾ ವೇತನ ಮಂಜೂರು ಮಾಡಿ ಆದೇಶ ಪತ್ರ ಹಾಗೂ ಗುರುತಿನ ಪತ್ರವನ್ನು ನೀಡಿದ್ದಾರೆ. ಆದರೆ ಒಂದೂವರೆ ವರ್ಷವಾದರೂ ವೇತನ ಮಾತ್ರ ಬರದೇ ಪರದಾಡುವಂತ ಪರಿಸ್ಥಿತಿ ದೇವೇಂದ್ರಮ್ಮ ನದ್ದು.

ವಿಧವಾ ವೇತನ ಪಡೆಯಲು ನಾಡ ಕಾರ್ಯಾಲಯ, ಹೊಸಪೇಟೆಯ ತಹಶೀಲ್ದಾರ್ ಕಚೇರಿಗೆ ಅಲೆದು ಸಾಕಾಗಿದ್ದು, ವೇತನದ ಮೂಲ ಅರ್ಜಿಯ ದಾಖಲು ಮತ್ತು ಮಂಜೂರು ಮಾಡಿದ ಬಗ್ಗೆ ಯಾವುದೇ ಸಂಖ್ಯೆ ಮತ್ತು ಮೂಲ ದಾಖಲೆ ಪತ್ರ ಇಲ್ಲ ಎಂದು ವಾಪಸು ಕಳುಹಿಸುತ್ತಿದ್ದಾರೆ. ಹೀಗಾಗಿ ಮತ್ತೆ ಅರ್ಜಿ ಹಾಕಲು ಬಂದಿದ್ದಾಗಿ ದೇವೇಂದ್ರಮ್ಮ ತಿಳಿಸಿದರು.

`ನೋಡಿ ಸಾರ್, ನಾ ಬಡವಿ, ಗಂಡ ಇಲ್ಲ, ಮಕ್ಕಳಿಗೆ ಬೇರೆ ಕಣ್ಣ ಕಾಣಂಗಿಲ್ಲ, ನಮ್ ಅತ್ತೆ ಪಿಂಚಣಿಯಾಗ ನಮ್ ಜೀವನ ಸಾಗಬೇಕು, ಹೋದ ವರ್ಷ ಆದೇಶ ಪತ್ರ ಕೊಟ್ಟಾರ, ಆದ್ರೂ ಇನ್ನು ಪಿಂಚಣಿ ಬರವಲ್ದು, ಪಿಂಚಣಿ ಬಂದ್ರ ಜೀವನಕ್ಕ ಆಸ್ರನಾದ್ರೂ ಆಗೈತಿ~ ಎನ್ನುತ್ತಾರೆ ದೇವೇಂದ್ರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT