ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಿದ್ಧತೆ

Last Updated 8 ಫೆಬ್ರುವರಿ 2011, 10:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸುಸಜ್ಜಿತ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಬೇಕೆಂಬ ರೈತರ ಕನಸು ಈಡೇರುವ ಕಾಲ ಕೂಡಿಬಂದಿದೆ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆದಿದೆ.

ಕೇಂದ್ರ ಸ್ಥಾಪನೆಗೆ ನವದೆಹಲಿಯ ಭಾರತೀಯ ಕೃಷಿ ಅನು ಸಂಧಾನ ಪರಿಷತ್‌ನಿಂದ 14 ಲಕ್ಷ ರೂ ಬಿಡುಗಡೆಯಾಗಿದೆ. ಈಗಾಗಲೇ, ಪ್ರತ್ಯೇಕ ಕೊಠಡಿಯಲ್ಲಿ ಕೇಂದ್ರ ಸ್ಥಾಪಿಸಲು ವಿಜ್ಞಾನ ಕೇಂದ್ರದ ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಪ್ರಯೋಗಾಲಯದ ಉಪಕರಣಗಳು ಬಂದಿಲ್ಲ. ಎರಡು ವಾರದೊಳಗೆ ಬರುವ ನಿರೀಕ್ಷೆಯಿದೆ. ಕನಿಷ್ಠ ಒಂದು ತಿಂಗಳೊಳಗೆ ರೈತರಿಗೆ ಕೇಂದ್ರದ ಸೇವೆ ಲಭಿಸಲಿದೆ.

ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯ ಮಣ್ಣಿನಲ್ಲಿ ಸತು, ಬೊರಾನ್ ಹಾಗೂ ಗಂಧಕದ ಪ್ರಮಾಣ ಕಡಿಮೆಯಿದೆ. ಜತೆಗೆ, ಸಾವಯವ ಇಂಗಾಲದ ಪ್ರಮಾಣವೂ ಕಡಿಮೆ ಯಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಬೆಳೆಯ ಬೆಳವಣಿಗೆ ಸೇರಿದಂತೆ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಉತ್ತಮ ಬೆಳೆ ಬೆಳೆಯಲು ಮಣ್ಣಿನಲ್ಲಿ ಸತುವಿನ ಪ್ರಮಾಣ 0.5 ಪಿಪಿಎಂನಷ್ಟಿರಬೇಕು. ಆದರೆ, 0.2ರಿಂದ 0.3ಪಿಪಿಎಂನಷ್ಟಿದೆ. ಬೊರಾನ್ ಪ್ರಮಾಣವೂ .2ಪಿಪಿಎಂ ನಷ್ಟು ಇರಬೇಕು. ಸದ್ಯಕ್ಕೆ ಈ ಪ್ರಮಾಣ .1ಪಿಪಿಎಂನಷ್ಟಿದೆ. ಉಳಿದಂತೆ ಗಂಧಕದ ಪ್ರಮಾಣ 10ಪಿಪಿಎಂನಷ್ಟಿರಬೇಕು. ಆದರೆ, 4ರಿಂದ 5ಪಿಪಿಎಂನಷ್ಟಿದೆ. ಜತೆಗೆ, ಸಾವಯವ ಇಂಗಾಲದ ಪ್ರಮಾಣ 0.2ರಿಂದ 0.3ರಷ್ಟಿರಬೇಕು. ಆದರೆ, ಜಿಲ್ಲೆಯಲ್ಲಿರುವ ಮಣ್ಣಿನಲ್ಲಿ ಈ ಪ್ರಮಾಣ ತೀರಾ ಕಡಿಮೆ ಯಿದೆ. ಇದರ ಪರಿಣಾಮ ಶೇ. 25ರಿಂದ 30ರಷ್ಟು ಇಳುವರಿ ಕುಂಠಿತವಾಗುತ್ತಿದೆ.

ರಸಗೊಬ್ಬರ ಬಳಕೆಯಿಂದಾಗಿ ಮಣ್ಣಿನ ಆರೋಗ್ಯ ನಿರ್ವಹಣೆಗೆ ತೊಡಕಾಗಿದೆ. ಇದು ರೈತರು ಬೆಳೆಯುವ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಗುಣಮಟ್ಟವೂ ಕುಸಿಯುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ಮಣ್ಣು ಪರೀಕ್ಷಿಸಿ ರೈತರಿಗೆ ತಿಳಿವಳಿಕೆ ಮೂಡಿಸುವುದು ಈ ಕೇಂದ್ರದ ಮೂಲ ಉದ್ದೇಶ.

‘ಪ್ರಸ್ತುತ ಜಿಲ್ಲೆಯ ರೈತರು ಮಂಡ್ಯ ಮತ್ತು ನಂಜನ ಗೂಡಿಗೆ ಮಣ್ಣು ಪರೀಕ್ಷೆಗೆ ಹೋಗುತ್ತಿದ್ದರು. ಇದರಿಂದ ಸಮಯ ವ್ಯಯವಾಗುತ್ತಿತ್ತು. ಈಗ ಇಲ್ಲಿಯೇ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ನೀರು ಹಾಗೂ ಸಸ್ಯಗಳ ಪರೀಕ್ಷೆ ಮಾಡಲಾಗುವುದು. ಮಣ್ಣಿನ ಲಕ್ಷಣದ ಆಧಾರದ ಮೇಲೆ ಬೆಳೆ ಬೆಳೆಯಲು ರೈತರಿಗೆ ಸೂಚಿಸಲಾಗುವುದು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಯೋಜನಾ ಸಂಯೋಜಕ ಡಾ.ಸಿ. ದೊರೆಸ್ವಾಮಿ.

‘ಕೊಳವೆಬಾವಿಗಳಲ್ಲಿ ಲಭಿಸುವ ನೀರಿನ ಆಧಾರದ ಮೇಲೂ ಸೂಕ್ತ ಬೆಳೆ ತೆಗೆಯಲು ರೈತರಿಗೆ ತಿಳಿಸಲಾಗುತ್ತಿದೆ. ಸಸ್ಯಗಳನ್ನು ಪರೀಕ್ಷಿಸಿ ಕೊರತೆಯಿರುವ ಪೋಷಕಾಂಶದ ಬಗ್ಗೆ ವಿವರಿಸಲಾಗುತ್ತದೆ. ರೈತರು ಕೇಂದ್ರದಲ್ಲಿ ಹೆಸರು ದಾಖಲಿಸ ಬೇಕು. ನಂತರ ಒಂದು ವಾರದೊಳಗೆ ಮಣ್ಣು ಪರೀಕ್ಷಿಸಿ ಅವರಿಗೆ ವರದಿ ನೀಡಲಾಗುವುದು. ಜತೆಗೆ, ಮಣ್ಣು ಪರೀಕ್ಷಾ ಕಾರ್ಡ್ ನೀಡಲಾಗುತ್ತದೆ. ರೈತರ ಜಮೀನಿನ ಮಣ್ಣಿನಲ್ಲಿರುವ ಅಂಶಗಳ ಬಗ್ಗೆ ಕಾರ್ಡ್‌ನಲ್ಲಿ ದಾಖಲಿಸಲಾ ಗುತ್ತದೆ. ಜತೆಗೆ, ಯಾವ ವಿಧಾನ ಅನುಸರಿಸಬೇಕೆಂಬ ಬಗ್ಗೆಯೂ ತಿಳಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಈಗ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಡಿ ಸವಲತ್ತು ನೀಡಲು ಮಣ್ಣು ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿತ್ತು. ಈ ಕೇಂದ್ರದ ಸ್ಥಾಪನೆ ಅನ್ನದಾತರಿಗೆ ವರದಾನವಾಗಲಿದೆ.

‘ರಾಸಾಯನಿಕ ಗೊಬ್ಬರದ ಬಳಕೆಯಿಂದ ಮಣ್ಣಿನ ಫಲವತ್ತತೆ ನಶಿಸುತ್ತಿದೆ. ಇದು ಬೆಳೆಯ ಗುಣಮಟ್ಟ, ಇಳುವರಿ ಮೇಲೆ ಪರಿಣಾಮ ಬೀರುವುದು ಸಹಜ. ಮಣ್ಣಿನ ಪರೀಕ್ಷೆ ನಡೆಸದೆ ಬಹಳಷ್ಟು ರೈತರು ಬೆಳೆ ಬೆಳೆಯುತ್ತಾರೆ. ತೊಂದರೆ ಕೂಡ ಅನುಭವಿಸುತ್ತಾರೆ. ಮಣ್ಣಿನ ಫಲವತ್ತತೆ ವೃದ್ಧಿಸಲು ರೈತರು ಸಾವಯವ ಗೊಬ್ಬರದ ಬಳಕೆಗೆ ಮುಂದಾಗಬೇಕಿದೆ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್. ಚನ್ನಕೇಶವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT