ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರ ಪಿಟೀಲು: ಚೈತನ್ಯದ ನೃತ್ಯ

Last Updated 14 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕೃಷ್ಣರಾಜಪುರದ ಶ್ರೀ ಮಹಾಗಣಪತಿ ಸಂಗೀತ ಸಭಾ ಆಶ್ರಯದಲ್ಲಿ ನಡೆದ ಮೂರು ದಿನಗಳ ಶ್ರೀಪುರಂದರ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ತೊಂಬತ್ತೆರಡು ವರ್ಷದ ಪಿಟೀಲು ವಿದ್ವಾಂಸ ಎಚ್.ಬಿ. ನಾರಾಯಣಾಚಾರ್ ಅವರ ಕಾರ್ಯಕ್ರಮವೇ ಅತ್ಯಂತ ವಿಶೇಷ.
ತಮ್ಮ ಇಳಿ ವಯಸ್ಸನ್ನು ಮರೆಮಾಚಿಸುವಂತಹ ರೀತಿಯಲ್ಲಿ ತುಂಬಿದ ಉತ್ಸಾಹ ಮತ್ತು ಆಸಕ್ತಿಗಳಿಂದ ಚಿಕ್ಕದಾದ ಚೊಕ್ಕವಾಗಿದ್ದ ತನಿ ಕಛೇರಿ ನೀಡಿ ಅವರು ರಸಿಕರನ್ನು ಬೆರಗುಗೊಳಿಸಿದರು.
 
ಸಭಾ ವತಿಯಿಂದ ನೀಡಿದ ಗಂಜಿಗುಂಟೆ ಕುಟುಂಬದವರ ಕೊಡುಗೆಯಾದ ಗಾನ ಕಮಲ ಬಿರುದನ್ನು ಸ್ವೀಕರಿಸಿದ ನಂತರ ತಮ್ಮ ಶಿಷ್ಯ ಶ್ಯಾಂಸುಂದರ್ (ಪಿಟೀಲು ಸಹಕಾರ) ಮತ್ತು ಗಣೇಶ್ (ಖಂಜಿರ) ಅವರ ಸೂಕ್ತ ಪಕ್ಕವಾದ್ಯಗಳೊಂದಿಗೆ ಕಛೇರಿಯನ್ನು ವಿದ್ವತ್ಪೂರ್ಣವಾಗಿ ನಿರ್ವಹಿಸಿದರು. ಸಭೆಯ ರೂವಾರಿ ಮತ್ತು ಮೃದಂಗ ವಾದಕ ನಂದಕುಮಾರ್ ಅವರ ಪಕ್ಕವಾದ್ಯ ವಿಶೇಷವಾಗಿ ಗಮನ ಸೆಳೆಯಿತು.
 
ದೈಹಿಕ ಮುಪ್ಪಿನ ಪ್ರಭಾವ ಒಂದೆರಡು ಕಡೆಗಳಲ್ಲಿ ಕಾಣಬಂದಿತಾದರೂ ಸಹ ಅವರ ಸಂಗೀತ ನವನವೀನ ಚೈತನ್ಯ ಹಾಗೂ ಶ್ರೀಮಂತ ಮನೋಧರ್ಮದಿಂದ ಹೊಸ ಅನುಭವ ನೀಡಿತು. ಕಮಾನಿನ ಸುದೃಢ ಪ್ರಯೋಗ, ಸಾಹಿತ್ಯ ಭಾವವನ್ನು ಹೊರಗೆಡಹಿದ ಬೆರಳುಗಳ ಸಂಚಲನೆ, ಹಿಂದಿನ ಕಾಲದ ಬೆಡಗಿನ ನಿಷ್ಕಲ್ಮಷ ಸರಳತೆಯ ವಿದ್ವತ್ತು, ತಮ್ಮ ಶ್ರೋತೃಗಳನ್ನು ಸಂಪೂರ್ಣವಾಗಿ ತಣಿಸಬೇಕೆಂಬ ಸದಿಚ್ಛೆ ಇವೇ ಮುಂತಾದ ವಿಶಿಷ್ಟತೆಗಳಿಂದ ನಾರಾಯಣಾಚಾರ್ ಅವರು ಕೇಳುಗರ ಮನ ಗೆದ್ದರು.

ಮೋಹನ ವರ್ಣವನ್ನು ಎರಡು ಕಾಲಗಳಲ್ಲಿ ನುಡಿಸಿ ಕಛೇರಿಯ ಆರಂಭದಿಂದಲೇ ಶ್ರೋತೃಗಳನ್ನು ಸೆಳೆದರು. ತಮ್ಮ ಕಛೇರಿಯನ್ನು ಸಮಾಪ್ತಗೊಳಿಸಬೇಕೆಂಬ ಮನವಿಯನ್ನು ಒಪ್ಪದೆ ಒಂದಾದ ನಂತರ ಮತ್ತೊಂದು ಕೃತಿಯನ್ನು ಆಲಾಪನೆ ಮತ್ತು ಕಲ್ಪನಾಸ್ವರಗಳೊಂದಿಗೆ ನುಡಿಸುತ್ತಾ ನಿರಾಯಾಸವಾಗಿ ಸಾಗಿದರು.
 
ಸ್ವಾಮಿನಾಥ ಪರಿಪಾಲಯ (ನಾಟ) ರಚನೆಗೆ ಸ್ವರಗಳನ್ನು ಹಾಕಿ ಚಲಮೇಲರಾ, ಬಾರೋಕೃಷ್ಣಯ್ಯ, ಮೆಲ್ಲಮೆಲ್ಲನೆ ಬಂದನೇ ಮುಂತಾದ ಕೃತಿಗಳನ್ನು ಒಪ್ಪು ಓರಣಗಳಿಂದ ಮಂಡಿಸಿದರು. ಅಭೇರಿ ರಾಗದ (ನಗುಮೋಮು) ವಿಸ್ತ್ರತ ನಿರೂಪಣೆ ಇಡೀ ಕಛೇರಿಯ ಪ್ರಧಾನ ಅಂಶವಾಗಿ ರೂಪುಗೊಂಡು ಅವರ ಮಾಗಿದ ಪರಿಣತಿ ಮತ್ತು ಕೌಶಲ್ಯಗಳು ಮಿಂಚಿದವು.
 
ಚೈತನ್ಯಪೂರ್ಣ ನಾಟ್ಯ
ಹಿರಿಯ ಗುರು ರಾಧಾ ಶ್ರೀಧರ್ ಅವರ ಶಿಷ್ಯೆ ಜಿ.ಎ. ಚೈತನ್ಯ ತನ್ನ ಸರಸ ಆಂಗಿಕಗಳು, ಆಕರ್ಷಕ ಮುಖ, ಸಾರ್ಥಕ ಅಭಿನಯ ಹಾಗೂ ಲಯ ಗಾಂಭೀರ್ಯಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ತುಂಬಿದ್ದ ನೃತ್ಯ ಪ್ರೇಮಿಗಳಿಂದ ಪ್ರಶಂಸೆಗೆ ಪಾತ್ರರಾದರು. ಹಸನ್ಮುಖಿಯಾಗಿ ನೃತ್ಯ ನಿರ್ವಹಿಸಿದ ಚೈತನ್ಯ, ಪುಷ್ಪಾಂಜಲಿ ಮತ್ತು ಜತಿಸ್ವರವನ್ನು ಮಂಡಿಸಿ ತಂಜಾವೂರು ಶಂಕರ ಅಯ್ಯರ್ ಅವರ ಶಿವನನ್ನು ಕುರಿತಾದ ರೇವತಿ ರಾಗದ ಕೃತಿಯನ್ನು ಕಲಾಪೂರ್ಣವಾಗಿ ಅಭಿನಯಿಸಿದರು. 

ವಿವಿಧ ಲಯ ಮಾದರಿಗಳಲ್ಲಿ ವೇದಿಕೆಯನ್ನು ಆವರಿಸಿಕೊಂಡು ಕಾರ್ಯಕ್ರಮದ ಪ್ರಮುಖ ಘಟ್ಟವಾಗಿದ್ದ ರಾಮಗೋಪಾಲ ಶರ್ಮ ಅವರ ಅಠಾಣ ವರ್ಣದ ಪ್ರಸ್ತಾರವನ್ನು ಕೈಗೊಂಡರು. ಬೃಂದಾವನಿ ತಿಲ್ಲಾನದೊಂದಿಗೆ ಮುಕ್ತಾಯವಾದ ಅವರ ಭರತನಾಟ್ಯ, ಪುಲಿಕೇಶಿ (ನಟುವಾಂಗ), ಶ್ರೀವತ್ಸ (ಗಾಯನ), ಮಧುಸೂದನ್(ಪಿಟೀಲು), ಜಯರಾಂ (ಕೊಳಲು) ಮತ್ತು ಲಿಂಗರಾಜು (ಮೃದಂಗ) ಅವರ ಪ್ರೌಢ ಸಹಕಾರದೊಂದಿಗೆ ಕಳೆ ಕಟ್ಟಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT