ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿ ಹಬ್ಬದ ಸಂಭ್ರಮ

ಕುಡಿದು ಕುಪ್ಪಳಿಸಿದರು: ಲಾಠಿ ರುಚಿಯುಂಡು ಮನೆಗೆ ಮರಳಿದರು
Last Updated 31 ಡಿಸೆಂಬರ್ 2012, 20:59 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದು ಹೋದ ವರ್ಷಕ್ಕೆ ವಿದಾಯ ಹೇಳುವ ಸಂತಾಪವೋ, ನೂತನ ಸಂವತ್ಸರಕ್ಕೆ ಕಾಲಿಟ್ಟ ಸಡಗರವೋ, ರಸ್ತೆಯಲ್ಲಿ ಕಂಗೊಳಿಸುತ್ತಿದ್ದ ದೀಪಗಳು ವರ್ಷದ ಕೊನೆಯ ಕ್ಷಣಕ್ಕೆ ಒಮ್ಮೆಲೆ ಆಫ್ ಆಗಿ, ಹೊಸ ವರ್ಷದ ಮೊದಲ ಕ್ಷಣಕ್ಕೆ ಮತ್ತೆ ಬೆಳಕು ಹರಿಸಿದಾಗ `ವೆಲ್ ಕಮ್ ಟು ನ್ಯೂ ಇಯರ್' ಎಂದು ಸಾರ್ವಜನಿಕರಿಂದ ಮೊಳಗಿದ ಹರ್ಷೋದ್ಗಾರ ಇಡೀ ನಗರಕ್ಕೆ ಹಬ್ಬುವಂತಿತ್ತು.

ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ, ಅರಮನೆ ಮೈದಾನ, ತಾರಾ ಹೋಟೆಲ್‌ಗಳಲ್ಲಿ ಸೋಮವಾರ ಮಧ್ಯರಾತ್ರಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜನ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಅದರಲ್ಲೂ ಯುವ ಜನತೆಯ ವಿವಿಧ ವೇಷಭೂಷಣಗಳಿಂದ ಗಮನ ಸೆಳೆದರು.

ಸಂಭ್ರಮಾಚರಣೆಯಲ್ಲಿ ತೊಡಗಿದ್ದವರಿಂದ `ವೆಲ್‌ಕಮ್ ಟು ನ್ಯೂ ಇಯರ್', `ಬಾಯ್ ಬಾಯ್ 2012' ಎಂಬ ಘೋಷಣೆಗಳು ಕೇಳಿಬಂದವು. ಬಾರ್ ರೆಸ್ಟೋರೆಂಟ್, ಪಬ್ ಹಾಗೂ ಡಿಸ್ಕೋಥೆಕ್‌ಗಳಲ್ಲಿ ಸೇರಿದ್ದವರು 12 ಗಂಟೆ ಯಾಗುತ್ತಿದ್ದಂತೆ ಹೊರಬಂದು ಕುಣಿದು ಕುಪ್ಪಳಿಸಿದರು.

ಕುಡಿತ, ಕುಣಿತದ ಜೊತೆಗೆ ಆತ್ಮೀಯತೆಯ ಅಪ್ಪುಗೆ ಯೊಂದಿಗೆ ಸ್ನೇಹಿತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮದ್ಯದ ಗುಂಗಿನಲ್ಲಿ ಮುಸುಕು ಹೊದ್ದು ಮಲಗಿದ್ದ ಯುವಕರಿಗೆ ಆಚರಣೆಯ ತೀವ್ರತೆಗೆ ಮಧ್ಯ ರಾತ್ರಿಯೇ ಸೂರ್ಯ ಉದಯಿಸಿದಂತಾಯಿತು. ಹೀಗಾಗಿ ಅವರು ಮತ್ತಿನಲ್ಲೇ ರಸ್ತೆಗೆ ಬಂದು ಹೆಜ್ಜೆ ಹಾಕಿದರು.

ಸೋಮವಾರ ಸಂಜೆಯೇ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಪೋಲಿಸರು ವಾಹನಗಳನ್ನು ತೆರವುಗೊಳಿಸಿದರು. ಆಚರಣೆಗೆ ಪೂರ್ವ ಪೀಠಿಕೆ ಹಾಕಿಕೊಂಡಿದ್ದವರು ಸಂಜೆಯೇ ಖರೀದಿ ಕಾರ್ಯಕ್ಕೆ ಮಾಲ್‌ಗಳಿಗೆ ಮುತ್ತಿಗೆ ಹಾಕಿದ್ದರು. ಯುವಕರು ನಗರದ ಬಾರ್, ರೆಸ್ಟೋರೆಂಟ್, ಪಬ್‌ಗಳಲ್ಲಿ ತಮ್ಮ ಹಾಜರಿಯನ್ನು ಕಾಯ್ದಿರಿಸಿದ್ದರು.

ಬ್ರಿಗೇಡ್ ರಸ್ತೆಯುದ್ದಕ್ಕೂ ದೀಪಾಲಂಕಾರ ಕಂಗೊಳಿಸಿದರೆ, ಸಾರ್ವಜನಿಕರು ರಸ್ತೆಯ ರಂಗನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಂ.ಜಿ ರಸ್ತೆಯ ಕೆಲ ಅಂಗಡಿ, ಮಾಲ್‌ಗಳಲ್ಲಿ ಆಕರ್ಷಕ ಸಂಗೀತಗಳು ಸದ್ದು ಮಾಡುತ್ತಿದ್ದವು.

ರಾತ್ರಿ ಒಂಬತ್ತು ಗಂಟೆಗಾಗಲೇ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಯುವಕರ ಮೋಜಿನ ತಾಣವಾಗಿತ್ತು. ವಿದೇಶಿ ಸಂಗೀತಕ್ಕೆ ಯುವಕರು ಕುಣಿಯುವುದರ ಜೊತೆಗೆ ಪಟಾಕಿ, ಬಾಣ ಬಿರುಸುಗಳೊಂದಿಗೆ ಇಡೀ ನಗರವೇ ಬೆಳಕಿನಲ್ಲಿತ್ತು. ಕೆಲವರು ಬ್ಯಾನರ್‌ಗಳನ್ನು ಹಿಡಿದು ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಒಟ್ಟಿನಲ್ಲಿ ಹೊಸ ವರ್ಷದ ಆಚರಣೆಯ ಅಬ್ಬರಕ್ಕೆ ಚಳಿ ಕೂಡಾ ನಡುಗಿ ಹಿಂದೆ ಸರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT