ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿನ ಗೊಂದಲ ಸಾಕು

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಲ್ಲ ಬಗೆಯ ನಿರ್ಮಾಣ ಕಾಮಗಾರಿಗಳಿಗೆ ಅತ್ಯಗತ್ಯವಾಗಿರುವ ಮರಳು ನಮ್ಮ ರಾಜ್ಯದಲ್ಲಿ ವಿವಾದದ ಸರಕಾಗಿ ಪರಿಣಮಿಸಿರುವುದು ದುರದೃಷ್ಟಕರ. ಪೊಲೀಸ್, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಲೋಕೋಪಯೋಗಿ- ಹೀಗೆ ನಾನಾ ಇಲಾಖೆಗಳು ಮರಳು ಸಂಗ್ರಹ, ಸಾಗಣೆ ಮೇಲೆ ಅಧಿಕಾರ ಚಲಾಯಿಸುತ್ತ ಕಿರುಕುಳ ಕೊಡುತ್ತಿವೆ ಎಂದು ಆರೋಪಿಸಿ ಮರಳು ಸಾಗಣೆ ಲಾರಿ ಮಾಲೀಕರು ರಾಜ್ಯವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ.

ಹೀಗಾಗಿ ಎಲ್ಲೆಡೆ ಮರಳಿನ ದರ ಗಗನ ಮುಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಷ್ಕರಕ್ಕೆ ಮುನ್ನ ರೂ 18ರಿಂದ 20 ಸಾವಿರಕ್ಕೆ ಸಿಗುತ್ತಿದ್ದ ಒಂದು ಲಾರಿ ಮರಳು ಈಗ ರೂ 35 ಸಾವಿರದ ಆಸುಪಾಸಿಗೆ ಏರಿದೆ. ಎಷ್ಟೋ ಕಡೆ ಇಷ್ಟೊಂದು ದುಬಾರಿ ಹಣ ಕೊಟ್ಟರೂ ಮರಳು ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ. ಕಳಪೆ ದರ್ಜೆಯ ಫಿಲ್ಟರ್ ಮರಳಿಗೆ ಮೊರೆ ಹೋಗುವಂತಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದ ಚಟುವಟಿಕೆಗಳು ಕುಂಠಿತಗೊಂಡಿವೆ.

ಸಾಲಸೋಲ ಮಾಡಿ ಮನೆ ಕಟ್ಟಿಸುವವರು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಹತಾಶರಾಗುತ್ತಿದ್ದಾರೆ. ಮರಳು ಸಾಗಣೆ ಲಾರಿಗಳನ್ನೇ ಅವಲಂಬಿಸಿದ್ದ ಕಾರ್ಮಿಕರು, ಚಾಲಕರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಪರಿಸ್ಥಿತಿ ಇಷ್ಟೆಲ್ಲ ಗಂಭೀರವಾಗಿದ್ದರೂ ಸರ್ಕಾರ ಇತ್ತ ಗಮನ ಕೊಡುತ್ತಿಲ್ಲ. ಇನ್ನೊಂದು ಕಡೆ, ರಾಜಕಾರಣಿಗಳು ಮತ್ತು ಅಧಿಕಾರಸ್ಥರ ಬೆಂಬಲದಿಂದ ಮರಳು ತೆಗೆಯುವ ಮಾಫಿಯಾ ಬೇರು ಬಿಡುತ್ತಿದೆ.

ಮರಳು ನೀತಿಗೆ ಅನುಗುಣವಾಗಿ ಕಾನೂನಿನ ಕಟ್ಟುನಿಟ್ಟು ಜಾರಿಗೆ ಮುಂದಾಗುವ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಮರಳು ಮಾಫಿಯಾ ಗೂಂಡಾಗಿರಿ ನಡೆಸುತ್ತಿರುವುದು ವರದಿಯಾಗುತ್ತಿದೆ. ಇದಂತೂ ಆಘಾತಕಾರಿ. ಇಂಥ ದುಂಡಾವರ್ತನೆಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು.

ಮರಳು ಲಾರಿ ಮಾಲೀಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು, ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗಬೇಕು. ಏಕೆಂದರೆ ಇಂಥ ಮುಷ್ಕರ ಪದೇ ಪದೇ ನಡೆಯುತ್ತಿದೆ. ಇದರಿಂದ ತೊಂದರೆಗೆ ಒಳಗಾಗುವವರು ಅಸಹಾಯಕ ಬಳಕೆದಾರರು. ಇದರ ಜತೆಗೆ, ಗ್ರಾಹಕರನ್ನು ಶೋಷಿಸುವ ಪ್ರವೃತ್ತಿಯನ್ನು ಮರಳು ಲಾರಿ ಮಾಲೀಕರು ಕೂಡ ಕೈಬಿಡಬೇಕು.

ಏಕೆಂದರೆ ಒಂದು ಲಾರಿ ಲೋಡ್‌ಗೆ ಅವರು ತೆರುವ ರಾಜಧನ ಕೇವಲ ರೂ 2,500. ಆದರೆ ಗ್ರಾಹಕರಿಗೆ ಮಾರುವುದು ಇದರ 7-8 ಪಟ್ಟು ಅಧಿಕ ಮೊತ್ತಕ್ಕೆ. ಯಾವುದೇ ದೃಷ್ಟಿಯಿಂದ ನೋಡಿದರೂ ಈ ಮೊತ್ತ ತೀರಾ ದುಬಾರಿ. ಇದು ನ್ಯಾಯವಾದ ವಿಧಾನವಂತೂ ಅಲ್ಲ. ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮತ್ತು ಅಮೂಲ್ಯ ನೈಸರ್ಗಿಕ ಸಂಪತ್ತಾದ ಮರಳಿಗೆ ಸಂಬಂಧಿಸಿದಂತೆ ಸಮಗ್ರ ನೀತಿ ರೂಪಿಸುವ ಹೊಣೆ ಸರ್ಕಾರದ ಮೇಲಿದೆ.

ಅದರಲ್ಲಿ ಬಳಕೆದಾರ, ಸಂಗ್ರಾಹಕ ಮತ್ತು ಸಾಗಣೆದಾರರ ಹಿತ ಕಾಯುವುದರ ಜತೆಗೆ ಬೊಕ್ಕಸಕ್ಕೆ ಆದಾಯ, ಪರಿಸರ ರಕ್ಷಣೆಯ ಅಂಶಗಳಿಗೂ ಆದ್ಯತೆ ಇರಬೇಕು. ಅಕ್ಕಪಕ್ಕದ ರಾಜ್ಯಗಳಲ್ಲಿ ಇಲ್ಲದ ಗೊಂದಲ ಇಲ್ಲಿ ಏಕೆ? ಪ್ರತಿಷ್ಠೆ, ಹಟ ಬಿಟ್ಟು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯವರು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT