ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ: ನದಿ ಪಾತ್ರದ ಆಳ, ಅಗಲ ಹೆಚ್ಚಳ

Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ತಿರುಚನಾಪಳ್ಳಿ:  ತಮಿಳುನಾಡಿನಲ್ಲಿ ಕಾವೇರಿ ನದಿಯ ಆಳ ಮತ್ತು ಅಗಲ ಎರಡೂ ಹೆಚ್ಚಾಗಿದೆ. ಹಲವಾರು ಉಪ ನದಿಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ತಮಿಳುನಾಡನ್ನು ಪ್ರವೇಶಿಸುವ ಕಾವೇರಿ ನದಿ ಸಹಜವಾಗಿಯೇ ಇಲ್ಲಿ ತನ್ನ ಪಾತ್ರ ವಿಸ್ತರಿಸಿಕೊಂಡಿದೆ. ಜೊತೆಗೆ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮರಳುಗಾರಿಕೆಯೂ ಕಾವೇರಿ ಪಾತ್ರವನ್ನು ಇನ್ನಷ್ಟು ಹಿಗ್ಗಿಸಿದೆ.

2003ರಲ್ಲಿಯೇ ತಮಿಳುನಾಡಿನಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದೆ. ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಕೂಡ ಅಕ್ರಮ ಮರಳು ಗಣಿಗಾರಿಕೆ  ತಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾವೇರಿ ನದಿ ಪಾತ್ರದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲದಿಂದ ಗಣಿಗಾರಿಕೆ ನಡೆಸುತ್ತಿರುವ ಸ್ಥಳಗಳಲ್ಲಿ ಇನ್ನು ಮುಂದೆ ಮರಳನ್ನು ತೆಗೆಯಬಾರದು ಎಂದೂ ಕೋರ್ಟ್ ಹೇಳಿದೆ.

ಆದರೂ ಕಾವೇರಿ ನದಿ ದಂಡೆಯ ಮೇಲೆ ಸಾಗಿದರೆ ಅಕ್ರಮ ಮರಳು ಗಣಿಗಾರಿಕೆ ವಿಪರೀತವಾಗಿರುವುದು ಕಣ್ಣಿಗೆ ರಾಚುತ್ತದೆ.
ತಮಿಳುನಾಡಿನಲ್ಲಿ ಲೋಕೋಪಯೋಗಿ ಇಲಾಖೆಯೇ ಮರಳು ಗಣಿಗಾರಿಕೆಯನ್ನು ಅಧಿಕೃತವಾಗಿ ಮಾಡುತ್ತದೆ. ಜೊತೆಗೆ ಗುತ್ತಿಗೆದಾರರು, ರಾಜಕಾರಣಿಗಳ ಹಿಂಬಾಲಕರು ಅಕ್ರಮವಾಗಿ ಮರಳು ಸಾಗಿಸುತ್ತಾರೆ. ಇದು ಎಷ್ಟು ಗಂಭೀರವಾಗಿದೆ ಎಂದರೆ ಕೊಲ್ಲಿಡ್ಯಾಂ, ಅಪ್ಪರ್ ಅಣೆಕಟ್ಟು, ಗ್ರಾಂಡ್ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಬೃಹತ್ ಯಂತ್ರಗಳಲ್ಲಿ ಮರಳು ತೆಗೆಯುವುದನ್ನು ಕಾಣಬಹುದು. ಒಂದೊಂದು ಸ್ಥಳದಲ್ಲಿಯೂ ಸಾವಿರಕ್ಕೂ ಹೆಚ್ಚು ಲಾರಿಗಳು ನಿಂತಿರುತ್ತವೆ.

ತಿರುಚನಾಪಳ್ಳಿ, ನಾಮಕ್ಕಲ್, ತಂಜಾವೂರು ಜಿಲ್ಲೆಗಳಲ್ಲಿ ಪ್ರತಿ ದಿನ 30ರಿಂದ 50 ಸಾವಿರ ಲೋಡ್ ಮರಳನ್ನು ಸಾಗಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ಎರಡು ಲಕ್ಷ ಟನ್ ಮರಳು ಇಲ್ಲಿಂದ ಬೇರೆ ಕಡೆಗೆ ಹೋಗುತ್ತದೆ. ತಿರುಚನಾಪಳ್ಳಿಯಿಂದ 15 ಕಿ.ಮೀ ದೂರದಲ್ಲಿ ಗ್ರಾಂಡ್ ಅಣೆಕಟ್ಟು ಇದೆ. ತಿರುಚನಾಪಳ್ಳಿ ಪಟ್ಟಣದಿಂದ ಗ್ರಾಂಡ್ ಅಣೆಕಟ್ಟೆಗೆ ಹೋಗುವ ಮಾರ್ಗಕ್ಕೆ ತಿರುಗಿದರೆ ಸುಮಾರು 10 ಕಿ.ಮೀ ದೂರ ರಸ್ತೆಯ ಒಂದು ಭಾಗದಲ್ಲಿ ಉದ್ದಕ್ಕೂ ಮರಳು ಲಾರಿಗಳು ನಿಂತಿರುತ್ತವೆ.

ಮುಖ್ಯಮಂತ್ರಿ ಜಯಲಲಿತಾ ಅವರ ಸ್ವಕ್ಷೇತ್ರವಾದ ಶ್ರೀರಂಗಂನಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ಜೋರಾಗಿಯೇ ಇದೆ. ನಿಷೇಧ ಇದ್ದರೂ ಎಗ್ಗಿಲ್ಲದೆ ಅಕ್ರಮ ನಡೆಯುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ನಿಷೇಧಿಸಲಾಗುವುದು ಎಂದು ಚುನಾವಣೆಗೆ ಮೊದಲು ಜಯಲಲಿತಾ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಮರಳು ಗಣಿಗಾರಿಕೆ ತಡೆಯುವಲ್ಲಿ ಅವರು ಶ್ರಮ ಹಾಕಿದಂತೆ ಕಾಣುವುದಿಲ್ಲ.

ಸಿ.ಎಂ ಹಿಂಬಾಲಕರ ಕೃತ್ಯ: `ಮುಖ್ಯಮಂತ್ರಿ ಹಿಂಬಾಲಕರೇ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವುದರಿಂದ ಸರ್ಕಾರಿ ವ್ಯವಸ್ಥೆಯಲ್ಲಿ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಪರಿಸರವಾದಿಗಳು ನಡೆಸಿದ ಹೋರಾಟ ಕೂಡ ಯಶಸ್ವಿಯಾಗಿಲ್ಲ. ಒಮ್ಮೆ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ  ತಡೆಯಲು ಯತ್ನಿಸಿದ ವ್ಯಕ್ತಿಯ ಮೇಲೆಯೇ ಲಾರಿ ಹರಿಸಲಾಗಿತ್ತು' ಎಂದು ವೆಂಗೂರ್ ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ಗುಡಿ ಕೈಗಾರಿಕೆ: ಕಾವೇರಿ ಮತ್ತು ಕೊಲ್ಲಿಡ್ಯಾಂ ದಂಡೆಯಲ್ಲಿ ಪ್ರತಿ ದಿನ ಕನಿಷ್ಠ 2 ಸಾವಿರ ಲಾರಿಗಳು ರಾತ್ರಿ ಹಗಲೆನ್ನದೆ ನಿರಂತರ ಮರಳು ಸಾಗಿಸುತ್ತವೆ. ಈ ಪ್ರದೇಶದಲ್ಲಿ 42 ಮರಳು ಗಣಿಗಾರಿಕೆ ಪ್ರದೇಶಗಳಿದ್ದು ಯಾವುದಕ್ಕೂ ಅನುಮತಿ ಇಲ್ಲ. ಕರೂರು, ತಿರುಚನಾಪಳ್ಳಿ, ತಂಜಾವೂರು, ತಿರುವರೂರ್, ನಾಗಪಟ್ಟಣಂ ಜಿಲ್ಲೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಜಾಸ್ತಿ. ಅದರಲ್ಲಿಯೂ ಗ್ರಾಂಡ್ ಅಣೆಕಟ್ಟೆ ಬಳಿಯ ವೆಂಗೂರ್ ಅಕ್ರಮ ಮರಳುಗಾರಿಕೆಯ ಕೇಂದ್ರವೇ ಆಗಿದೆ.  `ತಿರುವಲರಸೊಲೈ, ಸರ್ಕಾರಿಪಾಳ್ಯಂ, ಪುತ್ತರವರಂ ಮುಂತಾದ ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಣೆ ಗುಡಿ ಕೈಗಾರಿಕೆಯಾಗಿದೆ' ಎಂದು ವೆಂಗೂರು ಗ್ರಾಮದವರೊಬ್ಬರು ಹೇಳುತ್ತಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ 5033 ಜನರನ್ನು ಬಂಧಿಸಲಾಗಿದೆ. 4173 ಪ್ರಕರಣ ದಾಖಲಿಸಲಾಗಿದೆ. ್ಙ 14 ಕೋಟಿ   ದಂಡ ವಿಧಿಸಲಾಗಿದೆ. ಪ್ರತಿ ವರ್ಷ ಮರಳು ಗಣಿಗಾರಿಕೆಯಿಂದ ತಮಿಳುನಾಡು ಸರ್ಕಾರಕ್ಕೆ ಸರಾಸರಿ ್ಙ 120 ಕೋಟಿ ವರಮಾನ ಬರುತ್ತದೆ. ಹೋದ ವರ್ಷ ಇದು ್ಙ 197 ಕೋಟಿಗೆ ಹೆಚ್ಚಿದೆ.  ಅಕ್ರಮ ಮರಳು ಗಣಿಗಾರಿಕೆಯ ವ್ಯವಹಾರ ಸಾವಿರಾರು ಕೋಟಿ ರೂಪಾಯಿಗಳಾಗುತ್ತವೆ ಎಂದು ಕೆಲವರು ಮಾಹಿತಿ ನೀಡುತ್ತಾರೆ.

ಗುಂಡಿ ತುಂಬಿಸಲು ನೀರು: ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದರಿಂದ ಮೆಟ್ಟೂರು ಜಲಾಶಯದಿಂದ ಕಾವೇರಿಪಟ್ಟಣಂವರೆಗೂ ಕಾವೇರಿ ನದಿಯ ಅಗಲ ಮತ್ತು ಆಳ ಹೆಚ್ಚಾಗಿದೆ. ಮೆಟ್ಟೂರು ಜಲಾಶಯದಿಂದ ಈಗ ಎಷ್ಟೇ ನೀರು ಬಿಟ್ಟರೂ ಅದು ಸರಿಯಾಗಿ ಹರಿಯುವುದಿಲ್ಲ. ಕಾವೇರಿ ನದಿ ಪಾತ್ರದಲ್ಲಿರುವ ಗುಂಡಿಗಳು ತುಂಬಿಕೊಳ್ಳುವುದಕ್ಕೇ ಈಗ ಭಾರಿ ಪ್ರಮಾಣದ ನೀರು ಬೇಕಾಗಿದೆ.

`ಕರ್ನಾಟಕದಿಂದ ಈಗ 2 ಟಿಎಂಸಿ ಅಡಿ ನೀರು ಬಿಟ್ಟರೆ ಅದು ಯಾವುದಕ್ಕೂ ಸಾಕಾಗುವುದಿಲ್ಲ. ಈಗ ಕಾವೇರಿ ನದಿ ಹರಿಯಬೇಕಾದರೆ ಭಾರಿ  ಚಂಡಮಾರುತ ಬಂದು ಮಹಾಮಳೆಯೇ ಸುರಿಯಬೇಕು' ಎಂದು ಕಾವೇರಿ ಕುಟುಂಬದ ಸದಸ್ಯರೊಬ್ಬರು ಅಭಿಪ್ರಾಯಪಡುತ್ತಾರೆ. ಗಣಿಗಾರಿಕೆಗಿಂತ ಮೊದಲು ಕರ್ನಾಟಕದಿಂದ ಬಿಟ್ಟ ನೀರು ಕಾವೇರಿ ನದಿಯಲ್ಲಿ ಸರಾಗವಾಗಿ ಹರಿದು ಬರುತ್ತಿತ್ತು. ನದಿಯ ಕೆಳ ಭಾಗದಲ್ಲಿರುವ ಭೂಮಿಗೆ ನೀರು ಸಿಗುತ್ತಿತ್ತು. ಈಗ ಹೊಲಗದ್ದೆಗಳಿಗಿಂತ ಕಾವೇರಿ ನದಿ ಪಾತ್ರವೇ ಕೆಳಕ್ಕೆ ಸರಿದಿರುವುದರಿಂದ ಹೊಲಗಳಿಗೆ ನೀರು ಹರಿಸುವುದು ಕಷ್ಟವಾಗಿದೆ. ಅಲ್ಲದೆ ಕೃಷಿ ಕೂಲಿ ಕಾರ್ಮಿಕರೂ ಕೂಡ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವುದರಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆ ಕೂಡ ಉಂಟಾಗಿದೆ ಎಂದೂ ಅವರು ಹೇಳುತ್ತಾರೆ.

ಕೋಟಿ ಕೋಟಿ ಗಳಿಕೆ!
ಕಾವೇರಿ ಪಾತ್ರದಲ್ಲಿ ಗಣಿಗಾರಿಕೆ ಮಾಡಿ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆಯ ಹಿನ್ನೆಲೆಯಲ್ಲಿ ಶಾಸಕರೊಬ್ಬರನ್ನು ಬಂಧಿಸಲಾಯಿತು. ಅವರು ಒಂದು ವರ್ಷದಲ್ಲಿ ಗಣಿಗಾರಿಕೆಯಿಂದ ಗಳಿಸಿದ ಹಣ ್ಙ 238 ಕೋಟಿ ಎಂದು ಪೊಲೀಸರು ಆರೋಪಪಟ್ಟಿಯಲ್ಲಿಯೇ ಹೇಳಿದ್ದರು. ಅಲ್ಲದೆ 5 ವರ್ಷಗಳಲ್ಲಿ ಅವರ ಆಸ್ತಿ ್ಙ 1 ಸಾವಿರ  ಕೋಟಿಯನ್ನೂ ಮೀರಿದೆ ಎಂದು ಹೇಳಿದ್ದರು. ಅವರು 350 ಎಕರೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಮಾಡುತ್ತಿದ್ದರು.

ಒಂದು ಲೋಡ್ ಮರಳಿನಿಂದ ಮುಚ್ಚಿಬಿಡುತ್ತಾರೆ!
ತಿರುಚನಾಪಳ್ಳಿಯಿಂದ ಗ್ರಾಂಡ್ ಅಣೆಕಟ್ಟೆಗೆ ಹೋಗುವ ಮಾರ್ಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಒಂದು ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಲಾರಿಗಳು ನಿಂತಿದ್ದವು. ಬೃಹತ್ ಯಂತ್ರಗಳನ್ನು ಬಳಸಿ ಮರಳು ತೆಗೆಯಲಾಗುತ್ತಿತ್ತು. ಅದರ ಛಾಯಾಚಿತ್ರ ತೆಗೆಯಲು ಮುಂದಾದಾಗ ನಮ್ಮ ಜೊತೆಗೆ ಬಂದಿದ್ದವರು, `ನೀವು ಫೋಟೊ ತೆಗೆಯುವುದು ಅವರಿಗೆ ಗೊತ್ತಾದರೆ ಒಂದು ಲೋಡ್ ಮರಳನ್ನು ನಿಮ್ಮ ಮೇಲೆ ಹಾಕಿ ಮುಚ್ಚಿ ಬಿಡುತ್ತಾರೆ ಅಷ್ಟೆ' ಎಂದು ಎಚ್ಚರಿಕೆ ನೀಡಿದರು. ಫೋಟೊ ತೆಗೆಯಲು ಅವಕಾಶ ನೀಡಲಿಲ್ಲ.


(ನಾಳಿನ ಸಂಚಿಕೆಯಲ್ಲಿ ಭಾಗ-5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT