ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಗಾನ

Last Updated 10 ಮಾರ್ಚ್ 2011, 19:30 IST
ಅಕ್ಷರ ಗಾತ್ರ

‘ಹೂ’ ಚಿತ್ರ ಅಂದುಕೊಂಡಷ್ಟು ಹಣ ತಂದುಕೊಡದ ಕಾರಣ ದಿನೇಶ್ ಗಾಂಧಿ ಮರಳಿಯತ್ನವ ಮಾಡಿದ್ದಾರೆ. ರವಿಚಂದ್ರನ್ ಅವರನ್ನೇ ನಾಯಕನನ್ನಾಗಿಸಿ ಅವರು ನಿರ್ಮಿಸಿರುವ ಚಿತ್ರ ‘ಮಲ್ಲಿಕಾರ್ಜುನ’. ತಣ್ಣಗೆ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ರವಿಚಂದ್ರನ್ ತೀರಾ ತಡವಾಗಿ ಬಂದರು. ‘ನರಸಿಂಹ’ ಚಿತ್ರೀಕರಣ ಮುಗಿದ ನಂತರ ಮನೆಗೆ ಹೋಗಿ, ರೆಡಿಯಾಗಿ ಬರಲು ಅವರಿಗೆ ತಡವಾಯಿತಂತೆ.

ಖುದ್ದು ರವಿ ‘ಮಲ್ಲಿಕಾರ್ಜುನ’ ಹೆಸರಿನ ಸಿನಿಮಾ ಮಾಡಬೇಕಿತ್ತು. ಆದರೆ, ಆ ಶೀರ್ಷಿಕೆ ದಿನೇಶ್ ಗಾಂಧಿ ಕೈಲಿತ್ತು. ‘ಹೂ’ ಚಿತ್ರ ಸುಮಾರಾಗಿ ಓಡಿದರೂ ಹಾಕಿದ ಬಂಡವಾಳವಷ್ಟನ್ನೂ ತರಲಿಲ್ಲ. ಹೀಗಾಗಿ ದಿನೇಶ್ ಗಾಂಧಿ ಇನ್ನೊಂದು ಯತ್ನಕ್ಕೆ ರವಿಚಂದ್ರನ್ ಕಾಲ್‌ಷೀಟ್ ಕೇಳಿದ್ದು. ಅವರ ಫಲವೇ ‘ಮಲ್ಲಿಕಾರ್ಜುನ’.

ಮುರಳಿ ಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ತಮಿಳಿನ ‘ತಾವಸಿ’ ಚಿತ್ರದ ರೀಮೇಕ್ ಇದು ಎಂಬ ಸುದ್ದಿ ಇದ್ದರೂ ಅವರು ಮಾತ್ರ ಆ ಬಗ್ಗೆ ಬಾಯಿಬಿಡಲಿಲ್ಲ. ಭಗವದ್ಗೀತೆಯ ಶ್ಲೋಕವೊಂದನ್ನು ಆಧರಿಸಿದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂದು ಅವರು ತತ್ವಜ್ಞಾನವನ್ನು ಅರುಹಿದರು. ಇದು ಅವರ ನಿರ್ದೇಶನದ ಮೂರನೇ ಚಿತ್ರ.

ತಾವು ಆಡಿಯೋ ಬಿಡುಗಡೆಗೆ ತಡವಾಗಿ ಬಂದದ್ದೇನೋ ಸರಿ. ಆದರೆ, ದಿನೇಶ್ ಗಾಂಧಿ ಸೆಟ್‌ಗೆ ಸದಾ ತಡವಾಗಿ ಬರುತ್ತಿದ್ದರು ಎಂದು ರವಿಚಂದ್ರನ್ ಹಾರಿಸಿದ ಚಟಾಕಿಗೆ ನಗುವಿನ ಪ್ರತಿಕ್ರಿಯೆ.

ಎಸ್.ಎ.ರಾಜಕುಮಾರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮೂಲ ಚಿತ್ರದ ಟ್ಯೂನ್‌ಗಳೇ ಇಲ್ಲವೆಯೋ, ಬೇರೆ ಇವೆಯೋ ಎಂಬುದನ್ನು ಯಾರೂ ಖಾತರಿಪಡಿಸಲಿಲ್ಲ. ಖುದ್ದು ರಾಜ್‌ಕುಮಾರ್ ಎರಡು ಹಾಡುಗಳನ್ನು ಹಾಡಿದ್ದಾರೆ. ಲಹರಿ ಆಡಿಯೋ ಸಂಸ್ಥೆಯು ಹಾಡುಗಳ ಹಕ್ಕನ್ನು ಪಡೆದಿದೆ.

ರವಿಚಂದ್ರನ್ ಇನ್ನೊಂದು ‘ಪ್ರೇಮಲೋಕ’ ಕೊಡಲಿ. ಅಂಥ ಹಾಡುಗಳು ಬಂದರೆ, ತಮ್ಮ ಕಂಪೆನಿ 2 ಕೋಟಿ ರೂಪಾಯಿ ರಾಯಲ್ಟಿ ಕೊಡಲು ಸಿದ್ಧ ಎಂದು ವೇಲು ಮಾತುಕೊಟ್ಟರು. ‘ಪ್ರೇಮಲೋಕ’ ಚಿತ್ರದ 80 ಲಕ್ಷ ಕ್ಯಾಸೆಟ್‌ಗಳು ಬಿಕರಿಯಾಗಿದ್ದನ್ನು ನೆನಪಿಸಿಕೊಂಡು ವೇಲು ಸುಖಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಗಣೇಸ್ ನಿರ್ಮಾಪಕ ಉಮೇಶ್ ಬಣಕಾರ್ ಸಿನಿಮಾ ಚೆನ್ನಾಗಿ ಓಡಲಿ ಎಂದು ಹಾರೈಸಿದರು. ರವಿಚಂದ್ರನ್ ಇನ್ನಷ್ಟು ಚಟಾಕಿಗಳನ್ನು ಹಾರಿಸತೊಡಗಿದ್ದೇ ಸಮಾರಂಭದ ತುಂಬಾ ನಗೆಯ ಲವಲವಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT