ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲಕ್ಕೆ ಸಿದ್ಧತೆ ಇನ್ನಷ್ಟು ಹೆಚ್ಚಲಿ: ಆಗ್ರಹ

Last Updated 1 ಜೂನ್ 2011, 8:25 IST
ಅಕ್ಷರ ಗಾತ್ರ

ಉಡುಪಿ: ನಗರಸಭೆಯ ಕೆಲವು ಅಪೂರ್ಣ ಕಾಮಗಾರಿಗಳಿಂದ ಹಾಗೂ ಹೂಳೆತ್ತದೇ ಇರುವ ಚರಂಡಿಗಳಿಂದ ನಗರದ ಹಲವು ಕಡೆ ಮಳೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿಯ ಮಳೆಗಾಲದಲ್ಲಿ ಕೃತಕ ನೆರೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ನಗರಸಭೆ ಸದಸ್ಯರು, ಸಮಸ್ಯೆಯಿರುವ ಕಡೆ ಕೂಡಲೇ ಚರಂಡಿ ಹೂಳೆತ್ತುವಂತೆ ಆಗ್ರಹಿಸಿದರು.

ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಸದಸ್ಯರು ಪಕ್ಷಭೇದವಿಲ್ಲದೇ ಮಾತನಾಡಿ, ಮಳೆಗಾಲಕ್ಕೆ ನಗರಸಭೆಯ ಪೂರ್ವತಯಾರಿಯ ಪರಾಮರ್ಶೆ ನಡೆಸಿದರು.ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅಮೃತಾ ಕೃಷ್ಣಮೂರ್ತಿ, ಮತ್ತೆ ಮಳೆಗಾಲ ಆರಂಭವಾಗಲಿದೆ. ಆದರೆ ಮಳೆ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವ ತೋಡುಗಳಲ್ಲಿ ಹೂಳು ತುಂಬಿದೆ. ಕೂಡಲೇ ಜೆಸಿಬಿ ಕಳುಹಿಸಿ ಹೂಳು ತೆಗೆಸಬೇಕು. ಇಲ್ಲದಿದ್ದರೆ ತಮ್ಮ ವಾರ್ಡ್ ಜಲಾವೃತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಮೋಹನ್ ಉಪಾಧ್ಯ, ನಗರಸಭೆಯ 35 ವಾರ್ಡ್‌ಗಳ ಪೈಕಿ 14-15 ವಾರ್ಡ್‌ಗ   ಳಲ್ಲಿ ಮಾತ್ರ ಹೂಳೆತ್ತಲಾಗಿದೆ. ಇನ್ನುಳಿದ ಕಡೆ ಆಗಿಲ್ಲ. ಪ್ರಸ್ತುತ ನಗರಸಭೆಯಲ್ಲಿ ಒಂದು ಜೆಸಿಬಿ ಮತ್ತು ಒಂದು ಹಿಟಾಚಿ ಯಂತ್ರ ಬಾಡಿಗೆಗೆ ಪಡೆದು ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ. ಇದು ಏನೇನೂ ಸಾಲದು. ಈ ಕೆಲಸಕ್ಕೆ ಕನಿಷ್ಟ 2-3 ಜೆಸಿಬಿ ಬಾಡಿಗೆಗೆ  ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಡಾ.ಎಂ.ಆರ್.ಪೈ ಮಾತನಾಡಿ, ಕೃತಕ ನೆರೆ ಆತಂಕ ನಿವಾರಿಸಲು ನಗರಸಭೆ ಏನು ಮುನ್ನೆಚ್ಚರಿಕೆ ತೆಗೆದುಕೊಂಡಿದೆ? ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಅವಧಿಯಲ್ಲಿ ಉಡುಪಿ-ಬನ್ನಂಜೆ ನಡುವೆ ಶಿರಿಬೀಡುವಿನಲ್ಲಿ ನೆರೆಹಾವಳಿ ಸಾಮಾನ್ಯ ಎನ್ನುವಂತಾಗಿದೆ.

ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಲೋಕೋಪಯೋಗಿ ಇಲಾಖೆ ಜತೆ ಮಾತನಾಡಿ ಚರಂಡಿ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಇದು ಸಾಧ್ಯವಿಲ್ಲದೇ, ನೆರೆ ಬಂದರೆ ಸ್ಥಳೀಯ ನಿವಾಸಿಗಳು ಎಲ್ಲಿಗೆ ಹೋಗಬೇಕು ಎನ್ನುವುದನ್ನೂ ಇಲ್ಲಿಯೇ ತಿಳಿಸಿ ಎಂದು ಕುಟುಕಿದರು.

ಸದಸ್ಯ ಶ್ಯಾಂ ಪ್ರಸಾದ್ ಕುಡ್ವ ಇದೇ ವಿಷಯದ ಬಗ್ಗೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಿಂದಾಗಿ ಅಕ್ಕಪಕ್ಕದಲ್ಲಿ ಮಣ್ಣಿನ ರಾಶಿ ಸುರಿಯಲಾಗಿದೆ. ಚರಂಡಿಗಳು ಮುಚ್ಚಿಹೋಗಿವೆ. ಕೃತಕ ನೆರೆಯ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸದಸ್ಯೆ ಆನಂದಿ ಮಾತನಾಡಿ, ಮಲ್ಪೆ ಪ್ರದೇಶದಲ್ಲೂ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲೂ ಬಹಳಷ್ಟು ಕಡೆ ಹೂಳೆತ್ತಬೇಕಾಗಿದೆ. ನಮ್ಮ ವಾರ್ಡ್‌ಗೆ ಜೆಸಿಬಿ ಕಳುಹಿಸಿಕೊಡಿ ಎಂದು ಆಗ್ರಹಿಸಿದರು. ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಕೂಡಾ ಧ್ವನಿಗೂಡಿಸಿದರು.

ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ನಗರಸಭೆಯಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಲಾಗಿದೆ. ಶೇ 50ರಷ್ಟು ಹೂಳೆತ್ತುವ ಕೆಲಸವಾಗಿದೆ. ಇನ್ನು ಕೆಲವು ಕಡೆ ಬಾಕಿಯಿದೆ. ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಿಗೆ ಕೂಡ ಸಂಬಂಧಪಟ್ಟ ರಸ್ತೆಗಳ ಚರಂಡಿ ಸರಿಪಡಿಸಿಕೊಡಲು ಮನವಿ ಮಾಡಲಾಗಿದೆ ಎಂದರು.

ಸೆಟ್‌ಬ್ಯಾಕ್ ಬಿಡದೇ ಮನೆನಿರ್ಮಾಣ: ಕಲ್ಸಂಕ-ತಾಂಗದಗಡಿ ನಡುವೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಆ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಆದರೆ ಇನ್ನೂ ಹಲವು ಮನೆಯವರು ಖಾಲಿ ಮಾಡಿಲ್ಲ.

ಇನ್ನು ಕೆಲವರು ಸೆಟ್‌ಬ್ಯಾಕ್ ಬಿಡದೇ ಮನೆ ಕಟ್ಟುತ್ತಿದ್ದಾರೆ. ಈ ಬಗ್ಗೆ ನಗರಸಭೆ ಗಮನಹರಿಸಬೇಕು ಎಂದು ಪ್ರಭಾಕರ ಪೂಜಾರಿ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕಿರಣ್ ಕುಮಾರ್, ಮನೆಕಟ್ಟುವಾಗ ರಸ್ತೆಯಿಂದ ಕನಿಷ್ಟ 15 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು ಎನ್ನುವ ನಿಯಮ ನಗರ–ದಲ್ಲಿ ಚಾಲ್ತಿಯಲ್ಲಿದೆ.

ಆದರೆ ಕೆಲವರು ಅದನ್ನು ಗಾಳಿಗೆ ತೂರಿ ಮನಬಂದಂತೆ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅಂತಹ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಕಂಡುಬಂದಲ್ಲಿ ಅವುಗಳನ್ನು ಒಡೆದು ಹಾಕಲಾಗುತ್ತಿದೆ ಎಂದರು.

ಅಲ್ಲಿನ ನಿವಾಸಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೆ ಕೆಲವು ಮನೆಯವರು ತಮಗೆ ಜಲ್ಲಿ, ಸಿಮೆಂಟ್ ಮತ್ತು ಕೂಲಿಯಾಳುಗಳ ಕೊರತೆಯಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಅವರನ್ನು ತೆರವುಗೊಳಿಸಲಾಗಿಲ್ಲ  ಎಂದರು.ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಕಾರ್ಯನಿರ್ವಾಹಕ ಎಂಜಿನಿಯರ್ ಕ್ಯಾ.ಎಂ.ಎಚ್.ನಂಜುಂಡಸ್ವಾಮಿ ಉಪಸ್ಥಿತರಿದ್ದರು.


ನೆಪಮಾತ್ರ ಅಭಿವೃದ್ಧಿ ಸಮಿತಿ ಬೇಡ: ಜಿಲ್ಲಾಧಿಕಾರಿಗೆ ಪತ್ರ
ನಗರಸಭೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಸಮಿತಿಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಆದರೆ ಅವುಗಳಿಂದ ಸರಿಯಾದ ಕೆಲಸಕಾರ್ಯ ಆಗುತ್ತಿಲ್ಲ. ನೆಪಮಾತ್ರಕ್ಕೆ ಸಭೆ ಸೇರಿ ಅಸ್ತಿತ್ವ ಇಟ್ಟುಕೊಂಡಿವೆ. ಇದರ ಬದಲಿಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಸ್ಥಳೀಯ ನಗರಸಭೆ ಸದಸ್ಯರು, ಪೌರಾಯುಕ್ತರನ್ನು ಒಳಗೊಂಡ ಅಭಿವೃದ್ಧಿ ಸಮಿತಿಗಳ ರಚನೆಯಾಗಬೇಕು.

ಅನಗತ್ಯ ಅಭಿವೃದ್ಧಿ ಸಮಿತಿಗಳು ನಮಗೆ ಬೇಡ. ಈ ಬಗ್ಗೆ ನೂತನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT