ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಕುರಿತ ಧೋರಣೆ ಬದಲಾಗಬೇಕು

Last Updated 3 ಡಿಸೆಂಬರ್ 2012, 6:37 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜದಲ್ಲಿ ಮಹಿಳೆಯರ ಕುರಿತ ಧೋರಣೆ ಬದಲಾಗಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಆಶಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ ಜನತಾವಾಣಿ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವ, ವಾರ್ಷಿಕೋತ್ಸವ, ಶರಣೆ ಜಯದೇವಿತಾಯಿ ಲಿಗಾಡೆ ಅವರ ಸಂಸ್ಮರಣೆ, ಪುಸ್ತಕಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾವ್ಯದಲ್ಲಿ ಮಹಿಳಾ ಸಂವೇದನೆ ತೋರಿಸುವ ಮೂಲಕ ಲೇಖಕಿಯರು ಛಾಪು ಮೂಡಿಸಿದ್ದಾರೆ. ಆದರೆ, ಮಹಿಳಾ ಲೇಖಕಿಯರಿಗೆ ಪುರುಷ ಸಾಹಿತಿಗಳಿಗೆ ಸಿಕ್ಕಷ್ಟು ಪ್ರಚಾರ ಸಿಗುತ್ತಿಲ್ಲ. ಪುರುಷ ಸಾಹಿತಿಗಳ ಪುಸ್ತಕ ಬಿಡುಗಡೆ ಹಾಗೂ ನಂತರ ವಿಮರ್ಶೆ, ಚರ್ಚೆ, ಸಂವಾದ ನಡೆಯುತ್ತದೆ. ಮಹಿಳೆಯರು ಎಷ್ಟೇ ಉತ್ಕೃಷ್ಟ ಸಾಹಿತ್ಯ ರಚಿಸಿದರೂ ಸಹ ಬೆಳಕಿಗೆ ಬರುವುದಿಲ್ಲ ಎಂದು ವಿಷಾದಿಸಿದರು. ಈ ತಾರತಮ್ಯವೇಕೆ? ಎಲ್ಲ ಸಾಹಿತ್ಯವನ್ನೂ ಸಮಾನವಾಗಿ ಕಾಣಬೇಕು. ತಾರತಮ್ಯ ನಿವಾರಿಸಲು ಮುಂದಾಗಬೇಕು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಈವರೆಗೆ ನಾಲ್ವರು ಮಹಿಳೆಯರಿಗೆ ಮಾತ್ರ ದೊರೆತಿದೆ. ಮುಂದಿನ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಹಿಳೆಯನ್ನೇ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು. ಭಾರತದಲ್ಲಿ ಆರು ಮಹಿಳೆಯರಿಗೆ ಜ್ಞಾನಪೀಠ ಲಭಿಸಿದೆ. ಮುಂದಿನ ದಿನಗಳಲ್ಲಿ ಕನ್ನಡದ ಮಹಿಳೆಗೂ ದೊರೆಯಲಿ ಎಂದು ಆಶಿಸಿದರು.

`ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ' ಸ್ವೀಕರಿಸಿದ ಸಾಹಿತಿ, ಸ್ತ್ರೀರೋಗ ತಜ್ಞೆ ಡಾ.ಎಚ್. ಗಿರಿಜಮ್ಮ ಮಾತನಾಡಿ, ವನಿತೆಯರಿಗೋಸ್ಕರವೇ ಇರುವ ಸಂಸ್ಥೆಯಿಂದ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಸಂತಸವಾಗಿದೆ. ನಮ್ಮೂರು ದಾವಣಗೆರೆಯಲ್ಲಿ ಪ್ರಶಸ್ತಿ ಪಡೆದಿದ್ದು, ರಾಷ್ಟ್ರಪ್ರಶಸ್ತಿ ಪಡೆದುದ್ದಕ್ಕಿಂತಲೂ ಹೆಚ್ಚಿನ ಖುಷಿ ತಂದಿದೆ ಎಂದರು.

ಇದೇ ಸಂದರ್ಭ, ಎಸ್.ಎಂ. ಮಲ್ಲಮ್ಮ ನಾಗರಾಜ್ ಅವರ `ನುಡಿ-ಸಂಧಾನ', ಸಂಧ್ಯಾ ಸುರೇಶ್ ಅವರ `ಬೆಳ್ಳಿ-ಚುಕ್ಕಿ' ಹಾಗೂ ಮಮತಾ ರಾಧಾಕೃಷ್ಣ ಅವರ `ಮಕ್ಕಳ-ಪದಬಂಧ' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಾಹಿತಿ ಟಿ. ಗಿರಿಜಾ, ಪತ್ರಕರ್ತ ಬಕ್ಕೇಶ್ ನಾಗನೂರು ಪಾಲ್ಗೊಂಡಿದ್ದರು. ಅರುಂಧತಿ ರಮೇಶ್ ಸ್ವಾಗತಿಸಿದರು. ಎಸ್.ಎಂ. ಮಲ್ಲಮ್ಮ ಪ್ರಾಸ್ತಾವಿಕ ಮಾತನಾಡಿದರು.

`ಸುಧಾ', `ಮಯೂರ', `ಪ್ರಜಾವಾಣಿ'ಯ ಸ್ಮರಣೆ
`ಸುಧಾ', `ಮಯೂರ' ಹಾಗೂ `ಪ್ರಜಾವಾಣಿ' ನನ್ನ `ಪೋಷಕ ಪತ್ರಿಕೆಗಳು' ಎಂದು ಗಿರಿಜಮ್ಮ ಸ್ಮರಿಸಿದರು. ಬರಹಗಾರ್ತಿ ಎಂದು ಗುರುತಿಸಿದ್ದು ಹಾಗೂ ಬೆಳಕಿಗೆ ತಂದದ್ದು ಇದೇ ಪತ್ರಿಕೆಗಳು ಎಂದರು.

7-8 ವರ್ಷ ವಯಸ್ಸಿನವಳಿದ್ದಾಗಲೇ ಸಾಹಿತ್ಯದ ಆಸಕ್ತಿ ಬೆಳೆದಿತ್ತು. ತಾಯಿಯಿಂದ ಬಂದ ಬಳುವಳಿ ಇದು. 9ನೇ ತರಗತಿಗೆ ಬರುವ ವೇಳೆಗೆ ನಾನು ತ್ರಿವೇಣಿ ಸೇರಿದಂತೆ ಹಲವು ಲೇಖಕರ ಕೃತಿಗಳನ್ನು ಓದಿಕೊಂಡಿದ್ದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಗಲೇ, `ಸುಧಾ' ವಾರಪತ್ರಿಕೆಯಲ್ಲಿ `ಹೂಬನ' ಲೇಖನಗಳು ಬಂದಿದ್ದವು. ತ್ರಿವೇಣಿ ನನಗೆ ಮಾದರಿಯಾದರು. ಅವರ ಪ್ರಭಾವದಿಂದ ನಾನು ಬರೆಯುವುದನ್ನು ರೂಢಿಸಿಕೊಂಡೆ. ನನಗೆ ಸಾಹಿತ್ಯ ಹೊಟ್ಟೆಯಾದರೆ; ಮಾಧ್ಯಮ ನನಗೆ ಹೃದಯ. ಶಿಕ್ಷಣ, ಅಕ್ಷರ ಪ್ರೀತಿ ನನ್ನಲ್ಲಿ ನಾನು ಚೆನ್ನಾಗಿಲ್ಲ ಎಂಬ ಭಾವನೆ ದೂರ ಮಾಡಿತು. ಕಪ್ಪಗಿದ್ದೇನೆ ಎಂಬ ಕೀಳರಿಮೆ ತೊಡೆದುಹಾಕಿತು ಎಂದು ಅಂತರಂಗ ತೆರೆದಿಟ್ಟರು.

`ಚಿಕ್ಕಂದಿನಿಂದಲೂ ನಾನು ಅಂತರ್ಮುಖಿಯಾಗಿದ್ದೆ. ನಾನು ಬರೆದಿದ್ದನ್ನು ನಾನೇ ಓದಿ, ಅಳುತ್ತಿದ್ದೆ. ಆನಂದಿಸುತ್ತಿದ್ದೆ. ಕಾಲೇಜಿನಲ್ಲಿ ನಾನು ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟ ಸ್ನೇಹಿತೆ ಶೋಭಾ ಭಟ್ ಅವರನ್ನು (ಅವರು ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇದ್ದಾರೆ) ನಾನು ಸದಾ ಸ್ಮರಿಸುತ್ತೇನೆ. ನನ್ನ ಬೆಳವಣಿಗೆಯಲ್ಲಿ ಮಾಧ್ಯಮದ ಪಾಲು ದೊಡ್ಡದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT