ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗಗನಕ್ಕೇರಿದ ಶೇಂಗಾ ಬೀಜದ ಬೆಲೆ

Last Updated 5 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಮುಗಿಯದ ರೈತರ ಬವಣೆ: ಬರದ ಮಧ್ಯೆ ಬಿತ್ತನೆಗೆ ಸಿದ್ಧತೆ

ಯಾದಗಿರಿ
: ಮುಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಗೆ ಗುರಿಯಾಗಿರುವ ಅನ್ನದಾತನಿಗೆ ಹಿಂಗಾರು ಹಂಗಾಮಿನಲ್ಲೂ ಸಂಕಷ್ಟಗಳು ತಪ್ಪುತ್ತಿಲ್ಲ. ಮುಂಗಾರಿನಲ್ಲಿ ಅಷ್ಟಿಷ್ಟು ಹೆಸರು ಬೆಳೆದ ರೈತರು, ಹಿಂಗಾರಿನಲ್ಲಿ ಶೇಂಗಾ ಬಿತ್ತನೆಗೆ ಮುಂದಾಗಿದ್ದು, ಬೆಲೆ ಏರಿಕೆಯ ಸಂಕಷ್ಟ ಕಾಡುತ್ತಿದೆ.

ಶೇಂಗಾ ಬಿತ್ತನೆಗೆ ಸಜ್ಜಾಗಿರುವ ರೈತರು, ಇದೀಗ ಮಾರುಕಟ್ಟೆಯಲ್ಲಿ ಬೀಜದ ಖರೀದಿಗೆ ಆಗಮಿಸುತ್ತಿದ್ದ, ಬೆಲೆ ಕೇಳಿದೊಡನೆ ಆಘಾತ ಅನುಭವಿಸುವಂತಾಗಿದೆ. ಕ್ವಿಂಟಲ್ ಶೇಂಗಾ ಬೀಜಕ್ಕೆ ಸದ್ಯ ರೂ.9 ಸಾವಿರದಿಂದ 10 ಸಾವಿರದವರೆಗೆ ಬೆಲೆ ಇದ್ದು, ಶೇಂಗಾ ಬಿತ್ತನೆಗೂ ರೈತರು ಹಿಂದೇಟು ಹಾಕುವಂತಾಗಿದೆ.

ಚಳ್ಳಕೆರೆ, ದಾವಣಗೆರೆ, ಗದಗನಿಂದ ಬರುವ ಶೇಂಗಾ ಬೀಜಗಳು ಸದ್ಯಕ್ಕೆ ಯಾದಗಿರಿಯ ಮಾರುಕಟ್ಟೆಯಲ್ಲಿ ಲಭ್ಯವಾಗಿವೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಶೇಂಗಾ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಕಳೆದ ಎರಡು ವಾರದಿಂದ ಹೊಲವನ್ನು ಹದ ಮಾಡಿಕೊಂಡಿರುವ ರೈತರು ಮಳೆಗಾಗಿ ಕಾಯುತ್ತಿದ್ದರು. ರೈತರ ಆಶಯಕ್ಕೆ ಅನುಗುಣವಾಗಿ ಮಳೆ ಸುರಿದರೂ, ಬೆಲೆ ಏರಿಕೆಯಿಂದಾಗಿ ಶೇಂಗಾ ಬೀಜ ಖರೀದಿಸುವುದು ದುಸ್ತರವಾಗಿದೆ.

ಸಾಮಾನ್ಯವಾಗಿ ಅಕ್ಟೋಬರ್ ಕೊನೆಯ ವಾರದಲ್ಲಿ ಶೇಂಗಾ ಬಿತ್ತನೆ ನಡೆಯುತ್ತದೆ. ಆದರೆ ಸದ್ಯಕ್ಕೆ ಮಳೆ ಬಿದ್ದಿರುವುದರಿಂದ ಭೂಮಿ ಹಸಿಯಾಗಿದ್ದು, ಈಗಲೇ ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ.

ಮಳಿ ಬಂದ್ರೂ, ರೇಟ್ ಜಾಸ್ತಿ: “ಮುಂಗಾರ‌್ಯಾಗ ಮಳಿನ ಬರಲಿಲ್ರಿ. ಹಿಂಗಾಗಿ ಹೆಸರು ಅಷ್ಟಕ್ಕಷ್ಟ ಆತು. ಹಿಂಗಾರ‌್ಯಾಗ ಶೇಂಗಾ ಬಿತ್ತಬೇಕ ಅಂತ ಹೊಲ ಹದ ಮಾಡಿ ಇಟ್ಟಿವರಿ. ಮೂರ‌್ನಾಲ್ಕ ದಿನ ಮಳಿ ಛೋಲೋ ಆಗೇತಿ. ಶೇಂಗಾ ಬಿತ್ತಾಕ ಹಂಗಾಮ ಛೋಲೋ ಐತಿ. ಆದರ ಏನ್ ಮಾಡೋದ್ರಿ ಶೇಂಗಾ ಬೀಜದ ರೇಟ್ ಕೇಳಿದ್ರ ತಲಿ ತಿರಗತೈತಿ” ಎಂದು ಕೊಂಕಲ್ ಗ್ರಾಮದ ಚಂದ್ರಾಮ ಹೇಳುತ್ತಾರೆ.

“ಒಟ್ಟ ರೈತರಿಗೆ ತ್ರಾಸ ಅನ್ನೋದ ತಪ್ಪವಾಲ್ತರಿ. ಬೀಜ ಸಿಕ್ಕರ ಮಳಿ ಬರಾಣ ಇಲ್ಲ. ಮಳಿ ಬಂದ್ರ ಬೀಜದ ರೇಟ್ ಜಾಸ್ತಿ ಆಗೇತಿ. ನಮ್ಮ ಕಡೆ ನೀರಾವರಿ ಇಲ್ರಿ. ಬೋರವೆಲ್ ಹಾಕಿಸೇವಿ. ಇಷ್ಟ ರೊಕ್ಕಾ ಹಾಕಿ ಬೀಜಾ ಬಿತ್ತಿದ್ರು, ಕರೆಂಟ್ ಇಲ್ಲದ್ದಕ್ಕ ಹಾಕಿದ ರೊಕ್ಕರೇ ಬರತೈತೋ ಇಲ್ಲೋ ಅನ್ನೂ ಹಂಗ ಆಗೇತಿ” ಎನ್ನುತ್ತಾರೆ.

ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿದ್ದರೂ, ಕೈಚೆಲ್ಲದ ರೈತರು ಇರುವ ಸೌಲಭ್ಯದಲ್ಲಿ ಕೃಷಿ ಚಟುವಟಿಕೆ ಆರಂಭಿಸುತ್ತಿದ್ದಾರೆ. ಆದರೆ ಪ್ರತಿ ಬಾರಿ ಒಂದಿಲ್ಲೊಂದು ತೊಂದರೆಗಳು ಎದುರಾಗುತ್ತಿರುವುದು ರೈತರ ಉತ್ಸಾಹಕ್ಕೆ ತಣ್ಣೀರು ಎರಚುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕಷ್ಟ ಪಟ್ಟು ಹೆಸರು ಬೆಳೆದರೂ, ಸೂಕ್ತ ಬೆಲೆ ಸಿಗಲಿಲ್ಲ ಎಂಬ ನೋವು ರೈತರಲ್ಲಿದೆ.

ಶೇಂಗಾ ಬಿತ್ತನೆಗೆ ಒಲವು: ಕಳೆದ ಬಾರಿ ಇಲ್ಲಿಯ ಎಪಿಎಂಸಿಗೆ ಆಗಮಿಸಿದ್ದ ಎಣ್ಣೆ ಬೀಜ ನಿಗಮವು, ಶೇಂಗಾ ಖರೀದಿಗೆ ಮುಂದಾಗಿತ್ತು. ಇದರಿಂದಾಗಿ ರೈತರು ಬೆಳೆದ ಶೇಂಗಾಕ್ಕೆ ಹೆಚ್ಚಿನ ಬೆಲೆ ದೊರೆಕಿತ್ತು. ದಾಖಲೆಯ ಪ್ರಮಾಣದ ಸುಮಾರು 4 ಲಕ್ಷ ಕ್ವಿಂಟಲ್ ಶೇಂಗಾ ಇಲ್ಲಿಯ ಮಾರುಕಟ್ಟೆಯಲ್ಲಿ ಖರೀದಿಯಾಗಿತ್ತು.

ಕಳೆದ ಬಾರಿ ಒಳ್ಳೆಯ ಬೆಲೆ ಸಿಕ್ಕಿರುವುದರಿಂದ ಈ ಬಾರಿ ರೈತರು ಶೇಂಗಾ ಬಿತ್ತನೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಎಣ್ಣೆ ಬೀಜ ನಿಗಮ ಮಾರುಕಟ್ಟೆ ಪ್ರವೇಶಿಸುವ ಮೂಲಕ ಹೆಚ್ಚಿನ ಬೆಲೆ ದೊರೆಯಬಹುದು ಎಂದು ನಿರೀಕ್ಷೆ ರೈತರದ್ದು. ಹೀಗಾಗಿ ಬಿತ್ತನೆಗೆ ಸಾಲ ಸೋಲ ಮಾಡಿಯಾದರೂ ಶೇಂಗಾ ಬೀಜ ಖರೀದಿಸುವ ಹಂಬಲ ರೈತರದ್ದಾಗಿದೆ.


ಆದರೆ ಸದ್ಯಕ್ಕೆ ಶೇಂಗಾ ಬೀಜದ ಬೆಲೆ ಗಗನಕ್ಕೇರಿದ್ದು, ರೈತರ ಉತ್ಸಾಹದ ದುರ್ಲಾಭವನ್ನು ವರ್ತಕರು ಪಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ರೈತರದ್ದಾಗಿದೆ. ಶೇಂಗಾ ಬಿತ್ತನೆಗೆ ಮನಸ್ಸು ಮಾಡಿರುವ ರೈತರು, ಎಷ್ಟೇ ಬೆಲೆಯಾದರೂ ಖರೀದಿ ಮಾಡುತ್ತಾರೆ ಎಂಬ ಆಲೋಚನೆಯಿಂದ ವ್ಯಾಪಾರಿಗಳೂ ಬೀಜದ ದರ ಹೆಚ್ಚಳ ಮಾಡಿರಬಹುದು ಎಂದು ರೈತರು ಹೇಳುತ್ತಿದ್ದಾರೆ.

ಒಂದೆಡೆ ಹಲವಾರು ಕಷ್ಟಗಳ ಮಧ್ಯೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ರೈತರಿಗೆ ಕೃಷಿ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ಒದಗಿಸುವ ಕೃಷಿ ಇಲಾಖೆ, ಖಾಸಗಿ ವರ್ತಕರಲ್ಲಿರುವ ಬೀಜದ ಬೆಲೆ ನಿಯಂತ್ರಿಸಲು ಮುಂದಾಗಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT