ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಕೆಟ್ ಮೂಲಕವೇ ಉತ್ತರ: ಜ್ವಾಲಾ

`ಐಬಿಎಲ್‌ನಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದೇನೆ'
Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): `ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಹರಾಜು ಪ್ರಕ್ರಿಯೆ ವಿವಾದದ ಬಗ್ಗೆ ನಾನು ಇನ್ನು ಹೆಚ್ಚು ಮಾತನಾಡುವುದಿಲ್ಲ. ಬದಲಾಗಿ ನನ್ನ ರ‍್ಯಾಕೆಟ್ ಮೂಲಕವೇ ಉತ್ತರ ನೀಡುತ್ತೇನೆ' ಎಂದು ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ನುಡಿದಿದ್ದಾರೆ.

`ಮೂಲಬೆಲೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಸಂಘಟಕರು ನಮಗೆ ಮೊದಲೇ ತಿಳಿಸಬಹುದಿತ್ತು. ಹಣ ಕಡಿಮೆ ಆಗಿದೆ ಎಂಬುದರ ಬಗ್ಗೆ ನಾನು ಹೆಚ್ಚು ಚಿಂತಿಸುತ್ತಿಲ್ಲ. ಆದರೆ ಅವರು ನಡೆಸಿಕೊಂಡ ಕ್ರಮ ನನಗೆ ಬೇಸರ ಉಂಟು ಮಾಡಿದೆ. ಅದನ್ನು ಹೊರತುಪಡಿಸಿದರೆ ಐಬಿಎಲ್‌ನ ಭಾಗವಾಗಿರಲು ನನಗೆ ಖುಷಿಯಾಗುತ್ತಿದೆ. ಈ ಲೀಗ್‌ಗಾಗಿ ಕಾತರದಿಂದ ಕಾಯುತ್ತಿದ್ದೇನೆ. ಬ್ಯಾಡ್ಮಿಂಟನ್ ಕೋರ್ಟ್ ನನ್ನ ಕಾರ್ಯಸ್ಥಾನ. ಅಲ್ಲಿ ನನ್ನ ರ‍್ಯಾಕೆಟ್ ಮೂಲಕ ಪ್ರತಿಕ್ರಿಯೆ ನೀಡುತ್ತೇನೆ. ನನ್ನ ಪರವಾಗಿ ರ‍್ಯಾಕೆಟ್ ಮಾತನಾಡಲಿದೆ' ಎಂದು ಅವರು ಹೇಳಿದ್ದಾರೆ.

`ನಾನು ಕೆಲ ವಿಷಯಗಳ ಬಗ್ಗೆ ಮಾತನಾಡಿದರೆ ದೂರು ನೀಡುತ್ತಿದ್ದೇನೆ ಅಥವಾ ಬಂಡಾಯ ಸಾರಿದ್ದೇನೆ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ. ಬಂಡಾಯ ಆಟಗಾರ್ತಿ ಎಂಬ ಹಣೆಪಟ್ಟವನ್ನು ಈಗಾಗಲೇ ನನಗೆ ನೀಡಿದ್ದಾರೆ. ಆದರೆ ಈಗ ನಡೆದಿರುವ ಘಟನೆಗಳು ಅನಿರೀಕ್ಷಿತ' ಎಂದಿದ್ದಾರೆ.

`ದೇಶದಲ್ಲಿ ಡಬಲ್ಸ್ ವಿಭಾಗವೂ ಯಶಸ್ವಿಯಾಗಿರುವುದಕ್ಕೆ ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿದ ಉತ್ತಮ ಪ್ರದರ್ಶನ ಕಾರಣ. ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಉತ್ತಮ ಆಟದ ಮೂಲಕ ಪದಕ ಗೆದ್ದುಕೊಟ್ಟಿದ್ದೇನೆ. ನನಗಿಂತ ಮೊದಲು ಡಬಲ್ಸ್‌ನಲ್ಲಿ ಉತ್ತಮ ಎನ್ನುವ ಆಟಗಾರ್ತಿಯರೇ ಇರಲಿಲ್ಲ. ಡಬಲ್ಸ್‌ನತ್ತ ಜನರ ದೃಷ್ಟಿಕೋನ ಬದಲಾಯಿಸಿದ್ದು ನಾನು. ನನ್ನ ಉತ್ತಮ ಪ್ರದರ್ಶನದ ಬಳಿಕ ಜನರ ನಿರೀಕ್ಷೆ ಹೆಚ್ಚಾಯಿತು' ಎಂದು ಅವರು ವಿವರಿಸಿದ್ದಾರೆ.

29 ವರ್ಷ ವಯಸ್ಸಿನ ಜ್ವಾಲಾ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೊತೆಗೂಡಿ 2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಲಂಡನ್‌ನಲ್ಲಿ ನಡೆದ 2011ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

`ಹರಾಜಿನಲ್ಲಿ ನಡೆದ ಸಂಗತಿ ಬಗ್ಗೆ ನನಗೆ ನೋವುಂಟಾಗಿದೆ. ರಾಜಕೀಯ ನಡೆಸಲು ನನಗೆ ಇಷ್ಟವಿಲ್ಲ. ಆದರೆ ಸದಾ ಅದರೊಳಗೆ ನನ್ನನ್ನು ಎಳೆಯುತ್ತಾರೆ. ಅದೀಗ ಅಭ್ಯಾಸವಾಗಿಬಿಟ್ಟಿದೆ' ಎಂದೂ ಜ್ವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.

`ಐಕಾನ್ ಆಟಗಾರ್ತಿ ಎಂದು ಈ ಮೊದಲು ನನ್ನಿಂದ ಸಹಿ ಹಾಕಿಸಿಕೊಂಡಿದ್ದರು. ಆದರೆ ನಂತರ ನಡೆದ ಬೆಳವಣಿಗೆಗಳಿಂದ ಮೋಸ ಹೋಗಿದ್ದೇನೆ ಎನಿಸುತ್ತಿದೆ. ಐಬಿಎಲ್ ಪ್ರಚಾರದಲ್ಲಿ ಉಳಿದವರಿಗಿಂತ ನನ್ನನ್ನು ಹೆಚ್ಚು ತೊಡಗಿಸಿಕೊಂಡಿದ್ದೆ. ಹೆಚ್ಚಿನ ನಗರಗಳಿಗೆ ತೆರಳಿ ಐಬಿಎಲ್‌ನ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದೆ' ಎಂದಿದ್ದಾರೆ.

`ನಾನು ಡಬಲ್ಸ್ ಆಟಗಾರ್ತಿ ಎಂಬುದು ಈ ಮೊದಲೇ ಫ್ರಾಂಚೈಸ್‌ಗಳಿಗೆ ಗೊತ್ತಿದೆ. ಆದರೆ ಸಿಂಗಲ್ಸ್ ಆಡಬೇಕು ಎಂಬುದನ್ನು ನನ್ನಿಂದ ಅವರು ನಿರೀಕ್ಷಿಸಿದ್ದರೆ ಏನು ಮಾಡಬೇಕು ಹೇಳಿ? ನಾನು ಡಬಲ್ಸ್ ಪರಿಣತೆ. ಡಬಲ್ಸ್‌ಗಾಗಿ ಮಾತ್ರ ನನ್ನ ಸೇವೆ' ಎಂದು ಗುಟ್ಟಾ ಸ್ಪಷ್ಟಪಡಿಸಿದ್ದಾರೆ.

`ಮಿಶ್ರ ಡಬಲ್ಸ್‌ನಲ್ಲಿ ನಾನು ವಿಶ್ವದಲ್ಲಿ ಆರನೇ ರ‍್ಯಾಂಕ್ ಹೊಂದಿದ್ದೇನೆ. ಆ ಬಗ್ಗೆಯೂ ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ. ಡಬಲ್ಸ್ ಪಂದ್ಯಗಳು ಲೀಗ್‌ನಲ್ಲಿ ಇಲ್ಲವೆಂದ ಮಾತ್ರಕ್ಕೆ ನನ್ನ ಮೂಲಬೆಲೆಯನ್ನು ಕಡಿಮೆ ಮಾಡಿದ್ದು ಮೂರ್ಖತನದ ಕ್ರಮ. ಏಕೆಂದರೆ ಸಿಂಗಲ್ಸ್ ಆಟಗಾರರು ಸಿಂಗಲ್ಸ್‌ನಲ್ಲಿ ಮಾತ್ರ ಆಡುತ್ತಾರೆ' ಎಂಬ ಕಾರಣವನ್ನು ಜ್ವಾಲಾ ನೀಡಿದ್ದಾರೆ.

`ನಾನು ಸೋಲುವ ವ್ಯಕ್ತಿ ಅಲ್ಲ. ಈ ಕ್ರೀಡೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಖುಷಿಯಿಂದ ಆಡುತ್ತೇನೆ. ಶೇಕಡಾ ನೂರರಷ್ಟು ಶ್ರಮ ಹಾಕಿ ಆಡುತ್ತೇನೆ. ದೆಹಲಿ ಸ್ಮ್ಯಾಷರ್ಸ್ ತಂಡದಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT