ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಪದವೀಧರರಿಗೆ ಬಿಇಡಿ ಪ್ರವೇಶಕ್ಕೇ ಅವಕಾಶ ಇಲ್ಲ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೇ ಅವಕಾಶ ಇಲ್ಲದ ಬಿ.ಇಡಿ ವಿದ್ಯಾರ್ಹತೆಯನ್ನು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಬಿ.ಕಾಂ ಮತ್ತು ಎಂ.ಕಾಂ ಪದವೀಧರರಿಗೆ ಪ್ರವೇಶ ಬಾಗಿಲನ್ನು ಬಂದ್ ಮಾಡಿದೆ!

ರಾಜ್ಯದಲ್ಲಿ ಈಗ ಇರುವ ನಿಯಮಗಳ ಪ್ರಕಾರ ಬಿ.ಕಾಂ, ಎಂ.ಕಾಂ. ಪದವೀಧರರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ. ಆದರೆ ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮಗಳ ಪ್ರಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಬಿ.ಇಡಿ ವಿದ್ಯಾರ್ಹತೆ ಕಡ್ಡಾಯ. ಹೀಗಾಗಿ ಈ ಕೋರ್ಸ್ ಗಳನ್ನು ಪೂರೈಸಿದವರಿಗೆ ಈಗ ಸಂಕಟದ ಸ್ಥಿತಿ ಎದುರಾಗಿದೆ.

`ಬಿ.ಇಡಿ ಕೋರ್ಸ್ ಸೇರಲು ನಮಗೆ ಅರ್ಜಿ ಕೂಡ ನೀಡುವುದಿಲ್ಲ. ಇನ್ನು ಕಲಿಯುವ ಮಾತೆಲ್ಲಿ? ಆದರೆ, ಇದ್ಯಾವುದನ್ನೂ ಗಮನಿಸದ ಸರ್ಕಾರ, ಉಪನ್ಯಾಸಕರಿಗೆ ಬಿಇಡಿ ವಿದ್ಯಾರ್ಹತೆ ಕಡ್ಡಾಯ ಮಾಡಿದೆ. ಇದು ಯಾವ ನ್ಯಾಯ~ ಎಂಬುದು ಎಂ.ಕಾಂ. ಪದವೀಧರ ನಿರುದ್ಯೋಗಿಗಳ ಪ್ರಶ್ನೆ.

ಬಿ.ಎ, ಬಿ.ಎಸ್ಸಿ ಪದವಿ ಪಡೆದವರಿಗೆ ಮಾತ್ರ ಬಿಇಡಿ ಪ್ರವೇಶಕ್ಕೆ ಅವಕಾಶವಿದೆ. ಮೊದಲಿನಿಂದಲೂ ಇದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಎನ್‌ಸಿಇಆರ್‌ಟಿ ಈಚೆಗೆ ಮಾಡಿರುವ ತಿದ್ದುಪಡಿ ಪ್ರಕಾರ ಬಿ.ಕಾಂ ಪದವೀಧರರು ಸಹ ಬಿ.ಇಡಿಗೆ ಸೇರಲು ಅವಕಾಶವಿದೆ. ಆದರೆ ರಾಜ್ಯದಲ್ಲಿ ಈ ಸಂಬಂಧ ಇನ್ನೂ ತಿದ್ದುಪಡಿ ಆಗಿಲ್ಲ. ಹೀಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲೂ ಸದ್ಯಕ್ಕೆ ಬಿ.ಕಾಂ ಪದವೀಧರರಿಗೆ ಬಿಇಡಿ ವ್ಯಾಸಂಗಕ್ಕೆ ಅವಕಾಶವಿಲ್ಲ.

ಆದರೆ, ಶಿಕ್ಷಣ ಇಲಾಖೆಯು ಪಿಯು ಉಪನ್ಯಾಸಕರ ನೇಮಕಕ್ಕೆ ಹೊಸದಾಗಿ ರೂಪಿಸಿರುವ ವಿಶೇಷ ನೇಮಕಾತಿ ನಿಯಮಗಳಲ್ಲಿ ಏಕಾಏಕಿ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿರುವುದು ನಗೆಪಾಟಲಿಗೆ ಈಡಾಗಿದೆ.
 
ವಾಣಿಜ್ಯ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ ಎಂಬುದು ನಿಯಮಾವಳಿಗಳನ್ನು ರೂಪಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಎಂ.ಕಾಂ ಪದವೀಧರರು ಖಾರವಾಗಿ ಪ್ರಶ್ನಿಸಿದರು.

ಎಂ.ಕಾಂ.ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ವಾಣಿಜ್ಯ, ಲೆಕ್ಕಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಇದುವರೆಗೆ ನೇಮಕಗೊಳ್ಳುತ್ತಿದ್ದರು. ಆದರೆ ಈಗ ಎಂ.ಕಾಂ.,ಬಿ.ಇಡಿ ವಿದ್ಯಾರ್ಹತೆ ಹೊಂದಿರುವವರು ಇಲ್ಲದೆ ಇರುವಾಗ ಈ ಹುದ್ದೆಗಳನ್ನು ಭರ್ತಿ ಮಾಡುವುದಾದರೂ ಹೇಗೆ ಎಂಬುದು ಸ್ನಾತಕೋತ್ತರ ಪದವಿ ಪಡೆದಿರುವ ಎ.ಸೋಮಶೇಖರ್, ಕುಮಾರ್ ಅವರ ಪ್ರಶ್ನೆ.

ಒಟ್ಟು 1,765 ಪಿಯು ಉಪನ್ಯಾಸಕರ ನೇಮಕ ಪ್ರಕ್ರಿಯೆ ಮುಂದಿನ ತಿಂಗಳು ಆರಂಭವಾಗಲಿದ್ದು, ಹಲವರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ವಾಣಿಜ್ಯ ವಿಭಾಗದ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿಲ್ಲದೆ ಇರುವವರು ಗೊಂದಲದಲ್ಲಿದ್ದಾರೆ.
ವಾಣಿಜ್ಯ ವಿಷಯದ ಪದವೀಧರರಿಗೂ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ.
 
ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವುದರಿಂದ ಈ ವರ್ಷವಂತೂ ಬದಲಾವಣೆ ಅಸಾಧ್ಯ. ಮುಂದಿನ ವರ್ಷದಿಂದ ಬದಲಾವಣೆ ಜಾರಿಯಾಗಬಹುದು. ಆದರೆ ಸದ್ಯಕ್ಕಂತೂ ವಾಣಿಜ್ಯ ಪದವೀಧರರಿಗೆ ಬಿಇಡಿಗೆ ಪ್ರವೇಶ ನೀಡುತ್ತಿಲ್ಲ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಭವಿಷ್ಯಕ್ಕೆ ಮಾರಕ: ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವೀಧರರಿದ್ದು, ಇವರಲ್ಲಿ ಬಹುತೇಕ ಮಂದಿ 10-15 ವರ್ಷಗಳಿಂದ ಖಾಸಗಿ, ಸರ್ಕಾರಿ ಕಾಲೇಜುಗಳಲ್ಲಿ ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಈಗ ಬಿಇಡಿ ಕಡ್ಡಾಯ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಮಾರಕವಾಗುವ ನಿಲುವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಸ್ನಾತಕೋತ್ತರ ಪದವೀಧರರ ವೇದಿಕೆಯ ಅಧ್ಯಕ್ಷ ಎನ್.ವಾಸುದೇವ್ ಅಸಮಾಧಾನ ವ್ಯಕ್ತಪಡಿಸಿದರು.

`ಪ್ರೌಢಶಾಲಾ ಉಪನ್ಯಾಸಕರ ನೇಮಕಕ್ಕೆ ನಿಗದಿಪಡಿಸಿರುವ ಬಿ.ಇಡಿ ವಿದ್ಯಾರ್ಹತೆಯನ್ನು ಪಿಯು ಉಪನ್ಯಾಸಕರಿಗೂ ವಿಸ್ತರಿಸಿರುವುದು ಸರಿಯಲ್ಲ. ಬಲವಂತವಾಗಿ ಬಿ.ಇಡಿ ವಿದ್ಯಾರ್ಹತೆಯನ್ನು ಹೇರಿರುವುದರ ಹಿಂದೆ ಬಿ.ಇಡಿ ಕಾಲೇಜುಗಳನ್ನು ಉಳಿಸುವ ಹುನ್ನಾರವಿದೆ.

ರಾಜ್ಯದಲ್ಲಿ 428 ಬಿ.ಇಡಿ ಕಾಲೇಜುಗಳಿದ್ದು, 40 ಸಾವಿರ ಸೀಟುಗಳಿವೆ. ಆದರೆ ಕಳೆದ ವರ್ಷ ವಿದ್ಯಾರ್ಥಿಗಳು ದಾಖಲಾಗದ ಕಾರಣ ಕಾಲೇಜುಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಸಚಿವು ಅವುಗಳನ್ನು ಉಳಿಸುವ ಜವಾಬ್ದಾರಿ ಹೊತ್ತಿದ್ದಾರೆ~ ಎಂದು ಟೀಕಿಸಿದರು.

`ಪಿಯು ಕಾಲೇಜುಗಳನ್ನು ಪ್ರೌಢಶಿಕ್ಷಣ ಮಂಡಳಿಯ ವ್ಯಾಪ್ತಿಗೆ ತರಲಾಗದೆ ಹಿಂಬಾಗಿಲ ಮೂಲಕ ಬಿ.ಇಡಿ ಕಡ್ಡಾಯ ಮಾಡಿರುವುದು ಸರಿಯಲ್ಲ. ಅಷ್ಟೊಂದು ಕಾಳಜಿ ಇದ್ದರೆ ಮೊದಲು ಕೇಂದ್ರ ಸರ್ಕಾರದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತನ್ನಿ, ಆ ನಂತರ ಉಪನ್ಯಾಸಕರ ನೇಮಕ ಮಾಡಿಕೊಳ್ಳಿ, ಆ ರೀತಿ ಮಾಡಲು ಸಾಧ್ಯವಾಗದಿದ್ದರೆ ಬಿ.ಇಡಿ ಕಡ್ಡಾಯ ಎಂಬ ನಿಯಮವನ್ನು ತೆಗೆದುಹಾಕಿ~ ಎಂದು ಒತ್ತಾಯಿಸಿದರು.

ಪ್ರಮುಖ ವಿಷಯಗಳ ಖಾಲಿ ಹುದ್ದೆಗಳು
ಕನ್ನಡ- 148, ಇಂಗ್ಲಿಷ್- 140, ಇತಿಹಾಸ- 101, ಅರ್ಥಶಾಸ್ತ್ರ- 138, ರಾಜ್ಯಶಾಸ್ತ್ರ- 65, ಸಮಾಜ ಶಾಸ್ತ್ರ- 110, ವಾಣಿಜ್ಯ ಶಾಸ್ತ್ರ- 135, ಭೌತವಿಜ್ಞಾನ- 223, ರಸಾಯನ ವಿಜ್ಞಾನ- 220, ಗಣಿತ- 134, ಜೀವವಿಜ್ಞಾನ- 228

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT