ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್: 124 ಕೋಟಿ ಲಾಭ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಕೃತ ವಿಜಯ ಬ್ಯಾಂಕ್, ಡಿಸೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ರೂ 124 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

 ಕಳೆದ ವರ್ಷದ ಇದೇ ಅವಧಿಯಲ್ಲಿನ  ರೂ 152 ಕೋಟಿಗಳಷ್ಟು ನಿವ್ವಳ ಲಾಭಕ್ಕೆ ಹೋಲಿಸಿದರೆ ಇದು ಶೇ 18.14ರಷ್ಟು ಕಡಿಮೆಯಾಗಿದೆ.

ಕೆಲ ದೊಡ್ಡ ಮೊತ್ತದ ಸಾಲಗಳ ಮರು ಹೊಂದಾಣಿಕೆ ಕಾರಣಕ್ಕೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದ ಹಣಕಾಸು ಸಾಧನೆ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ಹಣಕಾಸು ಸಾಧನೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಎಚ್. ಎಸ್. ಉಪೇಂದ್ರ ಕಾಮತ್ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂರನೇ ತ್ರೈಮಾಸಿಕ  ಅವಧಿಯಲ್ಲಿ ಬ್ಯಾಂಕ್‌ನ ಒಟ್ಟಾರೆ ವಹಿವಾಟು ರೂ1,37,594 ಕೋಟಿಗಳಿಗೆ ತಲುಪಿದೆ. ಇದರಲ್ಲಿ ರೂ 81,756 ಕೋಟಿ ಠೇವಣಿಗಳು ಮತ್ತು ರೂ 55,838 ಕೋಟಿಗಳಷ್ಟು ಮುಂಗಡಗಳು ಸೇರಿವೆ.

ಬ್ಯಾಂಕ್‌ನ ಒಟ್ಟು ವರಮಾನವು ಕಳೆದ ವರ್ಷದ ಇದೇ ಅವಧಿಯಲ್ಲಿನ ರೂ 1,584 ಕೋಟಿಗಳಿಗೆ ಹೋಲಿಸಿದರೆ ಶೇ 37ರಷ್ಟು ಹೆಚ್ಚಳಗೊಂಡು ರೂ 2,174 ಕೋಟಿಗಳಷ್ಟಾಗಿದೆ. ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣವು ರೂ 599 ಕೋಟಿಗಳಿಂದ ರೂ 997 ಕೋಟಿಗಳಿಗೆ ಏರಿಕೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತ ಕಡಿಮೆ ಮಾಡಿದ್ದರಿಂದ ಬ್ಯಾಂಕ್ ಬಳಿ ಸಾಲ ನೀಡಲು ರೂ 390 ಕೋಟಿಗಳಷ್ಟು ಮೊತ್ತ ಲಭ್ಯವಾಗಲಿದೆ ಎಂದು ಕಾಮತ್ ಹೇಳಿದರು.

ಶಾಖೆಗಳ ಸಂಖ್ಯೆ: ಕಳೆದ 3 ತಿಂಗಳಲ್ಲಿ 13 ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು ಒಟ್ಟು ಶಾಖೆಗಳ ಸಂಖ್ಯೆ 1252ಕ್ಕೆ ಏರಿದಂತಾಗಿದೆ. `ವಿ- ಸಮೃದ್ಧಿ~ ಹೆಸರಿನ ಹೊಸ ಠೇವಣಿ ಯೋಜನೆಯನ್ನೂ  ಆರಂಭಿಸಲಾಗಿದೆ.

ಇದೇ ಮಾರ್ಚ್ ತಿಂಗಳ ಅಂತ್ಯದ ಹೊತ್ತಿಗೆ ಬ್ಯಾಂಕ್‌ನ ಒಟ್ಟಾರೆ ವಹಿವಾಟನ್ನು ರೂ1,44,000 ಕೋಟಿಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದೂ ಕಾಮತ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT