ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ: ಅಡಿಗಲ್ಲಿಟ್ಟ ನೆನಪಲ್ಲಿ...

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಪ್ರಮುಖ ಹೆಗ್ಗುರುತು ಯಾವುದು ಎಂಬ ಪ್ರಶ್ನೆಗೆ ಬಹುಶಃ ಬಹಳಷ್ಟು ಮಂದಿಯ ಉತ್ತರ ವಿಧಾನಸೌಧ.ದೇಶ ವಿದೇಶಗಳಲ್ಲೂ ಖ್ಯಾತಿ ಪಡೆದಿರುವ ಕರ್ನಾಟಕ ಆಡಳಿತ ಚುಕ್ಕಾಣಿಯ ನರಮಂಡಲವೆನ್ನಿಸಿಕೊಂಡ ವಿಧಾನಸೌಧ ಅದ್ಭುತ ಕಲಾ ಶ್ರೀಮಂತಿಕೆಯ ಕಟ್ಟಡ.

ಪ್ರಜಾತಂತ್ರ ವ್ಯವಸ್ಥೆಯ ಸಂಕೇತವಾಗಿರುವ ವಿಧಾನಸೌಧಕ್ಕೆ ಅಡಿಗಲ್ಲು ಇಟ್ಟಿದ್ದು ಇಂದಿಗೆ 61 ವರ್ಷಗಳ ಹಿಂದೆ (13 ಜುಲೈ 1951).ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಶಂಕು ಸ್ಥಾಪನೆ ಮಾಡಿದಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆ. ಚಂಗಲರಾಯರೆಡ್ಡಿ.  ನಂತರ ಮುಖ್ಯಮಂತ್ರಿ ಗಾದಿಗೆ ಬಂದ ಕೆಂಗಲ್ ಹನುಮಂತಯ್ಯನವರ ಆಸಕ್ತಿಯಿಂದ ಅರಳಿದ್ದು ಈಗಿನ ವಿಧಾನಸೌಧ.

ಭಾರತದ ಹಲವು ಬಗೆಯ ವಾಸ್ತುಶೈಲಿಗಳ ಸಂಗಮವಾಗಿದ್ದು, ಪ್ರಾಚೀನ ಮತ್ತು ನವೀನ ಶಿಲ್ಪ ಶೈಲಿಯಲ್ಲಿ ಮೈದಾಳಿರುವ ವಿಧಾನಸೌಧ ಕಟ್ಟಡ ನಿರ್ಮಾಣವಾದ ಸಂದರ್ಭದಲ್ಲಿದ್ದ ವಾತಾವರಣ ಈಗಿಲ್ಲ. ಗಿಡಮರಗಳೇ ತುಂಬಿಕೊಂಡು ಹಸಿರು-ಹೂಗಳ ಆವರಣದಲ್ಲೆಗ ಅನೇಕ ಪ್ರತಿಮೆಗಳು ಸ್ಥಾಪನೆಗೊಂಡಿವೆ. ವಿಧಾನಸೌಧದ ಪಕ್ಕ ವಿಕಾಸಸೌಧ ತಲೆ ಎತ್ತಿದೆ.

ಜನರಿಗೆ ಹತ್ತಿರವಾಗಿದ್ದ ಈ ಕಟ್ಟಡದಲ್ಲಿ ಯುವಜನ ಸೇವಾ ಇಲಾಖೆಯು ವಾರಾಂತ್ಯದಲ್ಲಿ `ಅರಳು ಪ್ರತಿಭೆ~ ಕಾರ್ಯಕ್ರಮ ನಡೆಸುತ್ತಿತ್ತು. ಬ್ಯಾಂಕ್ವೆಟ್ ಹಾಲ್‌ನಲ್ಲಿ ನಗರಕ್ಕೆ ಬರುವ ಗಣ್ಯಾತಿಗಣ್ಯರಿಗೆ ಪೌರ ಸನ್ಮಾನಗಳೂ ನಡೆಯುತ್ತಿದ್ದವು. ವಿಧಾನಸೌಧದ ಭವ್ಯ ಹಿನ್ನೆಲೆಯಲ್ಲಿ ಛಾಯಾಚಿತ್ರ ತೆಗೆಸಿಕೊಳ್ಳುವ ಪರಿಪಾಠ ಮಂತ್ರಿ ಶಾಸಕರಿಗೆ ಮಾತ್ರವಲ್ಲ, ವಿಧಾನಸೌಧಕ್ಕೆ ಬರುವ ಗಣ್ಯರಿಗೂ ಇರುತ್ತಿತ್ತು.

ವಿಧಾನಸೌಧದ ಪಾವಟಿಗೆಗಳ ಮೇಲೆ ಸಾರ್ವಜನಿಕರು ನಡೆದಾಡುತ್ತಿದ್ದರು. ಮುಂಜಾನೆಯ ವ್ಯಾಯಾಮಕ್ಕೂ ಇದೇ ತಾಣ. ಕೆಲವು ರಾಷ್ಟ್ರೀಯ ಹಬ್ಬಗಳಿಗೂ ವಿಧಾನಸೌಧದ ಪಾವಟಿಗೆಗಳು ಉಪಯೋಗವಾಗುತ್ತಿದ್ದವು. ಕರ್ನಾಟಕ ನಾಮಕರಣ ಸಂದರ್ಭದಲ್ಲಿ ದೊಡ್ಡ ಸಮಾರಂಭವೂ ಅಲ್ಲಿ ನಡೆದಿತ್ತು.

ಸುತ್ತಲೂ ಸುಂದರ ಉದ್ಯಾನ. ಜೊತೆಗೆ ಈ ಸೌಧಕ್ಕೆ ದೀಪಾಲಂಕಾರ ಮಾಡಿದಾಗ ಸಂಜೆ ಅದನ್ನು ನೋಡಲೆಂದೇ ಸಾರ್ವಜನಿಕರು- ಪ್ರವಾಸಿಗರು ಕಾಯುತ್ತಿದ್ದ ಕಾಲವೊಂದಿತ್ತು.

ಬೇಸಿಗೆ ಕಾಲದಲ್ಲಂತೂ ವಿಧಾನಸೌಧದ ಆಸುಪಾಸಿನ ಮರಗಳ ನೆರಳು ವಿಶ್ರಾಂತಿ ತಾಣವಾಗಿರುತ್ತಿತ್ತು. ದೂರದೂರದ ಊರುಗಳಿಂದ ಬಂದವರಿಗೆ ಈ ಮರಗಳು ದಿನದಲ್ಲಿ ಆಶ್ರಯ ನೀಡುತ್ತಿದ್ದವು.

1980ರ ದಶಕದಲ್ಲಿ ರಕ್ಷಣೆಯ ದೃಷ್ಟಿಯಿಂದ ವಿಧಾನಸೌಧಕ್ಕೆ ಬೇಲಿಬಿತ್ತು. ಈಗಂತೂ ಅದರ ಸುತ್ತಲೂ  ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲೇ ಇದೆ.  ಪಾರ್ಲಿಮೆಂಟ್ ಕಟ್ಟಡದ ಮೇಲೆ ಉಗ್ರರ ದಾಳಿ ನಂತರ ವಿಧಾನಸೌಧ ಸುರಕ್ಷಿತ ಪ್ರದೇಶವಾಗಿದೆ. ಅಧಿಕೃತ ಅನುಮತಿಗಳಿಲ್ಲದೆ ವಿಧಾನಸೌಧದೊಳಕ್ಕೆ ಹೋಗಿ ಬರುವುದು ಈಗ ಸಾಧ್ಯವಿಲ್ಲ.

ವಿಧಾನಸೌಧದ ಆವರಣದಲ್ಲಿ ಆಗೀಗ ಕಾರ್ಯಕ್ರಮಗಳು ನಡೆದರೂ ಸಾರ್ವಜನಿಕರಿಗೆ ಅಲ್ಲಿ ಪ್ರವೇಶ ಬಹಳ ಕಡಿಮೆ. ಅಲ್ಲೆಗ ಆಹ್ವಾನಿತರಿಗೆ ಮಾತ್ರ ಪ್ರವೇಶ.
ಪ್ರಮಾಣ ವಚನ, ಜಾನಪದ ಜಾತ್ರೆ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ರೈತರಿಗೆ ಗೌರವ ಸಮರ್ಪಣೆ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುತ್ತಿದ್ದ ವಿಧಾನಸೌಧದ ಪಾವಟಿಗೆಗಳು ಮೆಟ್ರೊ ನಿರ್ಮಾಣದ ಹಿನ್ನೆಲೆಯಲ್ಲಿ ಮಂಕಾಗಿವೆ.

ಹಸಿರು ನಾಟ್ಯವಾಡುತ್ತಿದ್ದ, ವರ್ಷದುದ್ದಕ್ಕೂ ರಂಗುರಂಗಿನ ಹೂಗಳ ಮೆರವಣಿಗೆ ಇರುತ್ತಿದ್ದ ವಿಧಾನಸೌಧದ ಸುತ್ತಣ ದೃಶ್ಯಾವಳಿ ಈಗ ತದ್ವಿರುದ್ಧ. ಈಗಲ್ಲಿ ಪಾರಿವಾಳಗಳಿಗೂ ಸರಿಯಾದ ತಾವಿಲ್ಲ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT