ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭುಲಿಂಗನ ಪತ್ರೀವನ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆ ನರಗುಂದ ಪಟ್ಟಣದ ಬಳಿಯ ಪುಣ್ಯಾರಣ್ಯ ಪತ್ರೀವನ ಶಂಭುಲಿಂಗ ದೇವನ ಕ್ಷೇತ್ರ. ಅದನ್ನು ಕಟ್ಟಿ ಬೆಳೆಸಿದವರು ವೀರಪ್ಪಜ್ಜನವರು. ಮೂಲತಃ ನವಲಗುಂದ ತಾಲ್ಲೂಕಿನ ಸೊಟಕನಹಾಳ ಗ್ರಾಮದ ವಿಶ್ವಕರ್ಮ ಮನೆತನದ ಅಂದಾನಪ್ಪ ಮತ್ತು ಕಾಳಮ್ಮ ದಂಪತಿಗಳ ಪುತ್ರರು.

ಬನಪುರದ ರುದ್ರಮುನಿ ಶಿವಾಚಾರ್ಯರಲ್ಲಿ ಸೇವೆಗೈದು, ಅಧ್ಯಯನ ನಡೆಸಿ ದೇಹ, ಮನಸ್ಸು, ಬುದ್ಧಿ - ಭಾವ ಇವೆಲ್ಲವನ್ನು ಶಿವಮಯ ಮಾಡಿಕೊಂಡು ಶುದ್ಧ ದ್ವೈತಿಗಳಾದವರು.

ನಿರ್ಲಿಪ್ತ ಮತ್ತು ವೈರಾಗ್ಯವಂತರೆನಿಸಿದ ಅವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗ, ಸಾವಳಗಿಯ ಶಿವಲಿಂಗ, ಗದಗದ ಮಡಿವಾಳ, ಹೊಸಳ್ಳಿಯ ಬೂದಿಸ್ವಾಮಿ, ಶಿಶುನಾಳ ಶರೀಫ, ಉಣಕಲ್ ಸಿದ್ದಪ್ಪಜ್ಜ ಮುಂತಾದವರಿಗೆ ಹತ್ತಿರದವರಾಗಿದ್ದರು.

`ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಭ್ರಾಂತಿಯ ಬೇರು ಅಗೆಯಲು~ ಮುಂದಾಗಿದ್ದ ಅವರು ಜನರ ಅಜ್ಞಾನ, ಬಡತನ, ರೋಗ - ರುಜಿನ, ನಿರುದ್ಯೋಗ, ನಿರಕ್ಷರತೆ, ಆಲಸ್ಯತನ, ಮೌಢ್ಯಗಳನ್ನು ಹೋಗಲಾಡಿಸಲು ತಮ್ಮ ಜೀವವನ್ನೇ ತೇದರು. ಹುಲಸೇರ ಖಂಡಪ್ಪನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡಿದ್ದರು.

ಅವರು ಪುಣ್ಯಾರಣ್ಯ ಪತ್ರೀವನ ಸ್ಥಾಪಿಸಿ ನೆಲೆ ನಿಂತ ಮೇಲೆ ಅಲ್ಲಿನ ವಾತಾವರಣವೇ ಶಿವಮಯವಾಯಿತು. ಶಂಭುಲಿಂಗನ ದರ್ಶನಾಶೀರ್ವಾದ ಪಡೆಯಲು ಬಂದವರೆಲ್ಲ ಈ ಅಜ್ಜನ ದರ್ಶನವನ್ನೂ ಪಡೆಯುತ್ತಿದ್ದರು.

ಬ್ರಿಟಿಶ್ ಸೈನ್ಯಾಧಿಕಾರಿಯಾಗಿದ್ದ ಧೋಂಡಿಬಾ ಭೋಸಲೆ ಜಮಾದಾರ ಬೇಟೆಯಾಡುತ್ತ ಪುಣ್ಯಾರಣ್ಯ ಪತ್ರೀವನಕ್ಕೆ ಬಂದಾಗ ಅಜ್ಜನ ಪ್ರಭಾವದಿಂದ ಬದಲಾದ. ಅವರ ಶಿಷ್ಯ ನಾಗರಾಜ ತೋರಿದ ದಾರಿಯಲ್ಲಿ ನಡೆದು ಶಂಭುಲಿಂಗ ದೇವಾಲಯ ನಿರ್ಮಿಸಿದ.

ಧೋಂಡಿಬಾನ ಬದುಕನ್ನು ರೂಪಿಸಿದಂತೆ ತ್ಯಾಗವೀರ ಸಿರಸಂಗಿ ಲಿಂಗರಾಜರ ಬದುಕಿಗೂ ವೀರಪ್ಪಜ್ಜ ದಾರಿ ತೋರಿದರು. ಅವರ ತಲೆಗೆ ಆಗಿದ್ದ ಮಾರೀ ಹುಣ್ಣು ಪೂರ್ಣ ಮಾಯುವಂತೆ ಮಾಡಿದರು. ಅವರನ್ನು ದತ್ತಕ ಪಡೆದುಕೊಳ್ಳಲು ನವಲಗುಂದ ದೇಸಗತಿಯ ರಾಜಮಾತೆ ಉಮಾಬಾಯಿಗೆ ಸೂಚಿಸಿದರು.

ಇದಕ್ಕೆ ಕೃತಜ್ಞತೆಯ ಕುರುಹಾಗಿ ಲಿಂಗರಾಜರು ಪತ್ರೀವನದಲ್ಲಿ ವೀರಪ್ಪಜ್ಜನಿಗೆ ಅನುಷ್ಥಾನಕ್ಕೆಂದು ಗವಿಯೊಂದನ್ನು ಕಟ್ಟಿಸಿಕೊಟ್ಟರು. ಆ ಕುರಿತಾದ ಶಾಸನ ಮಠದ ಗೋಡೆಯಲ್ಲಿದೆ.

ಪತ್ರೀವನ ಪ್ರವೇಶಿಸುತ್ತಿದ್ದಂತೆ ವಿವಿಧ ಜಾತಿಯ ಗಿಡಮರಗಳು ಕೈಬೀಸಿ ಕರೆಯುತ್ತವೆ, ನೆರಳು ನೀಡುತ್ತವೆ. ಪತ್ರಿಯ ಹೂಗಳು ಸೂಸುವ ಪರಿಮಳ ವಾತಾವರಣವನ್ನು ಸುಗಂಧಮಯಗೊಳಿಸಿದೆ. ನೂರಾರು ಬಗೆಯ ಸಸ್ಯರಾಶಿಗಳು, ಗೋವುಗಳು, ಋಷಿ - ಮುನಿಗಳ ವಿಗ್ರಹಗಳು, ದೇವಾಲಯಗಳು ವಿಶೇಷ ಮೆರಗು ತರುತ್ತವೆ.

ಈ ತಪೋತಾಣಕ್ಕೆ ಕಲಶಪ್ರಾಯವಾಗಿದೆ ಶಂಭುಲಿಂಗನ ದೇವಾಲಯ. ಈ ಶಂಭುಲಿಂಗ ಕಾಶಿಯ ವಿಶ್ವೇಶ್ವರನೆಂದೇ ಭಾವುಕರು ನಂಬುತ್ತಾರೆ.
ಸದ್ಯದ ಪೀಠಾಧಿಪತಿ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.

ಶಾಲಾ ಕಾಲೇಜುಗಳು, ವಸತಿ ನಿಲಯ ಸ್ಥಾಪಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ನಾಡು ನುಡಿಯ ಸಾಧಕರಿಗೆ `ಶಂಭುಲಿಂಗ ಪ್ರಶಸ್ತಿ~ ನೀಡುತ್ತಿದ್ದಾರೆ. ಶಂಭುಲಿಂಗ ಪ್ರಕಾಶನದ ಮೂಲಕ ಅನೇಕ ಗ್ರಂಥಗಳನ್ನು ಹೊರತಂದಿದ್ದಾರೆ.

ಸೇವಾ ವಿವರ (ರೂ)

ಪಂಚಾಮೃತ ಅಭಿಷೇಕ  100
ಕ್ಷೀರಾಭಿಷೇಕ   150
ಕಾರ್ತೀಕ ಪೂಜೆ  150
ವೀಳ್ಯದೆಲೆ ಪೂಜೆ  251
ಬುತ್ತಿ ಪೂಜೆ  350
ಕಾಯಿ, ಕರ್ಪೂರ, ಆರತಿ  10
ಈ ಕ್ಷೇತ್ರ ನರಗುಂದದಿಂದ 1 ಕಿ.ಮೀ. ದೂರದಲ್ಲಿದೆ. ಆಟೊ, ಬಸ್ಸುಗಳಿವೆ. ಮಾಹಿತಿಗೆ 96322 84479.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT