ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿವರ್ಧಕ ಪೇಯಗಳಿಂದ ಬೊಜ್ಜು!

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ) : ನಿಮ್ಮ ಮಕ್ಕಳಿಗೆ ಶಕ್ತಿ ಹೆಚ್ಚಾಗಲೆಂದು `ಶಕ್ತಿ ವರ್ಧಕ ಪೇಯಗಳನ್ನು~ ಕುಡಿಯಲು ಸಲಹೆ ನೀಡುತ್ತಿದ್ದೀರಾ ? ಹೌದಾದರೆ, ಒಮ್ಮೆ ಈ ಮಾಹಿತಿ ಓದಿ, ನಂತರ ನಿರ್ಧರಿಸಿ ! 

ನಿಜ, ಅಧಿಕ ಶಕ್ತಿಗಾಗಿ ಕ್ರೀಡಾಪಟುಗಳು ಕುಡಿಯುವ `ಶಕ್ತಿ ವರ್ಧಕ ಪೇಯ~ಗಳಿಂದ ದೇಹದ ಶಕ್ತಿ ಹೆಚ್ಚುವ ಜತೆಗೆ ಸ್ಥೂಲಕಾಯರನ್ನಾಗಿ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಉತ್ಪನ್ನಗಳ ವಿಶ್ಲೇಷಣೆ : ಕ್ರೀಡಾಪಟುಗಳು ಕುಡಿಯುವ ಶಕ್ತಿವರ್ಧಕ ಪೇಯಗಳ ಕುರಿತು ಸಂಶೋಧನೆ ನಡೆಸಿರುವ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಸಂಶೋಧಕರು, `ಇಂಥ ಪೇಯಗಳನ್ನು ಕುಡಿಯುವುದರಿಂದ ತೂಕ ಕೂಡ ಹೆಚ್ಚಾಗುತ್ತದೆ~ ಎಂದು ಹೇಳಿದ್ದಾರೆ.

ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ವಿಷಯದ ಅಧ್ಯಯನದಲ್ಲಿ 431 ಉತ್ಪನ್ನಗಳನ್ನು ವಿಶ್ಲೇಷಿಸಲಾಗಿದೆ. ಇವುಗಳಲ್ಲಿ ಶಕ್ತಿವರ್ಧಕ ಪೇಯ ಹಾಗೂ ಪ್ರೋಟಿನ್ ಶೇಕ್ಸ್ ಸೇರಿದಂತೆ 104 ವಿವಿಧ ಉತ್ಪನ್ನಗಳಿಂದ ವ್ಯತಿರಿಕ್ತ ಪರಿಣಾಮ ಬೀರುವುದನ್ನು ಪತ್ತೆ ಹಚ್ಚಲಾಗಿದೆ.

ಸ್ಥೂಲಕಾಯ ಹೆಚ್ಚಿಸುವ ಆತಂಕ : ವ್ಯತಿರಿಕ್ತ ಪರಿಣಾಮ ಬೀರುವ ಪೇಯಗಳ ಕುರಿತು ಸಮರ್ಪಕ ಸಾಕ್ಷ್ಯಾಧಾರಗಳು ಲಭ್ಯವಾಗದಿದ್ದಾಗ ಸಂಶೋಧಕರು ಮಾಹಿತಿಗಾಗಿ ಪೇಯ ತಯಾರಿಕಾ ಕಂಪೆನಿಗಳ ಮೊರೆ ಹೋಗಿದ್ದಾರೆ. ಆ ಒಟ್ಟು ಕಂಪೆನಿಗಳಲ್ಲಿ  ಶೇ 2.7 ರಷ್ಟು ಕಂಪೆನಿಗಳು ಮಾತ್ರ ತಾವು ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆಂದು ದೃಢಪಡಿಸಿವೆ !

`ಪ್ರಚಾರದಿಂದಾಗಿ ಶಕ್ತಿವರ್ಧಕ ಪೇಯಗಳು ಅತ್ಯಂತ ಜನಪ್ರಿಯವಾಗಿವೆ. ಈ ಪೇಯಗಳಿಗೆ ಮಕ್ಕಳು ಆಕರ್ಷಿತರಾಗಿದ್ದಾರೆ. ಆದರೆ ಇವು ಮಕ್ಕಳಲ್ಲಿ ಸ್ಥೂಲಕಾಯ ಪ್ರಮಾಣ ಹೆಚ್ಚಲು ನೆರವಾಗುತ್ತವೆ ಎಂಬುದೇ ಕಳವಳಕಾರಿ ಸಂಗತಿ~ ಎಂದು ಸಂಶೋಧಕರು ಹೇಳಿದ್ದಾರೆ.

 `ಶಕ್ತಿವರ್ಧಕ ಪೇಯಗಳಿಂದ ದೂರ ಉಳಿದಿರುವ ಸಾಮಾನ್ಯ ಓಟಗಾರರು ಒಲಿಂಪಿಕ್ ಅಥ್ಲೆಟ್‌ಗಳಾಗಿ ಬದಲಾಗಿದ್ದಾರೆ. ಈ ಪೇಯಗಳನ್ನು ನಿಲ್ಲಿಸಿದರೆ ಕ್ರೀಡಾಪಟುಗಳು ತೆಳ್ಳಗಾಗುತ್ತಾರೆ. ಮಾತ್ರವಲ್ಲ, ಓಟದ ವೇಗವೂ ಹೆಚ್ಚುತ್ತದೆ~ ಎಂದು ಕೇಪ್‌ಟೌನ್ ವಿಶ್ವವಿದ್ಯಾಲಯದ ಪ್ರೊ. ಟಿಮ್ ನೋವಾಕೆಸ್ ಅಭಿಪ್ರಾಯಪಟ್ಟಿದ್ದಾರೆ.

ತಂಪು ಪಾನೀಯ ಕಂಪೆನಿಯೊಂದು ಸಂಶೋಧಕರ ಈ ವಾದವನ್ನು ಅಲ್ಲಗಳೆದಿದ್ದು, `ಯಾವುದೇ ಒಂದು ಆಹಾರ ಅಥವಾ ಪಾನೀಯಾದಿಂದ ಮನುಷ್ಯ ಸ್ಥೂಲಕಾಯನಾಗುತ್ತಾನೆಂದು ಹೇಳಲು ಸಾಧ್ಯವಿಲ್ಲ. ಯಾವುದೇ ಆಹಾರವನ್ನು ಸಮತೋಲನವಾಗಿ ಸೇವಿಸಿದರೆ, ದೇಹಕ್ಕೆ ಸೇರಿಸುವ ಕ್ಯಾಲೊರಿಗಿಂತ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಿದರೆ ಸಾಕು~ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT