ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನಗಳ ಕೊಳುಕೊಡುಗೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾನವನಿಗೆ ಮಾತನಾಡಲು ಬರುತ್ತದೆ. ಪಶುಪ್ರಾಣಿಪಕ್ಷಿಗಳಿಗೆ ಈ ಸೌಲಭ್ಯ ಇಲ್ಲ. ಪ್ರಾಣಿಗಳು ಗ್ರಹಿಸುತ್ತವೆ, ಅದಕ್ಕೆ ತಕ್ಕಂತೆ ವರ್ತಿಸುತ್ತವೆ. ಮಾನವ ಮಾತ್ರ ಮಾತನಾಡುತ್ತಾನೆ. ಹೀಗೆ ಮಾತನಾಡುವವರಿಗೆ, ಎಂದರೆ ಅದರಲ್ಲಿ ಭಿನ್ನ ಭಿನ್ನ ಮಾತು ಇರುವವರಿಗೆ  `ಇಂಥ ಭಾಷೆಯ ಜನ~ ಎನ್ನುತ್ತಾರೆ.

ಕನ್ನಡ ಭಾಷೆಯನ್ನು ಆಡುವ ಜನರ ಸುತ್ತ ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳನ್ನು ಆಡುವ ಜನರಿದ್ದಾರೆ. ಕನ್ನಡ ಮತ್ತು ತಮಿಳು ಈ ಎರಡೂ ಭಾಷೆಗಳನ್ನು ತೆಗೆದುಕೊಂಡರೆ ಕೊಳು- ಕೊಡುಗೆ ಶತಮಾನಗಳಿಂದ ನಡೆದುಬಂದಿದೆ. ತಮಿಳಿನ ಪೆರಿಯ ಪುರಾಣಂನಿಂದ ನಮ್ಮ ಹರಿಹರನ ರಗಳೆಗಳಿಗೆ ಪ್ರೇರಣೆ ದೊರೆಯಿತು.

ಆದರೆ ನಮ್ಮ ಅನೇಕ ಹಿರಿಯ ಸಾಹಿತಿ ಮಹನೀಯರಿಗೆ ತಮಿಳು ಮಾತೃಭಾಷೆಯಾಗಿದ್ದರೂ ಅವರು ಇಲ್ಲಿಯೇ ಹುಟ್ಟಿ ಬೆಳೆದು, ವಿದ್ಯಾವಂತರಾಗಿ ಕನ್ನಡಿಗರೇ ಆಗಿಹೋಗಿದ್ದಾರೆ. ಡಿವಿಜಿ, ಮಾಸ್ತಿ, ರಾಜರತ್ನಂ, ಗೊರೂರು- ಹೀಗೆ ನಮ್ಮ ಹಿರಿಯರು ತಮ್ಮ ಮನೆಮಾತು ತಮಿಳು ಆಗಿದ್ದರೂ ಕನ್ನಡದಲ್ಲೇ ಮಾತನಾಡಿ, ಅದರಲ್ಲೇ ಬರೆದರು. ತಮಿಳು ಭಾಷೆಯಿಂದ ಅವರು ಅನುವಾದ ಮಾಡಲಿಲ್ಲ.

ಹಿರಿಯ ಸಾಹಿತಿ ಎಲ್. ಗುಂಡಪ್ಪ ಅವರು ತಮಿಳು ಕಲಿತು ತಮಿಳರ ಶ್ರೇಷ್ಠ ಕೃತಿ `ತಿರುಕ್ಕುರಳ್~ ಅನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಆದರೆ ಇದಕ್ಕೆ ಕೆಲವು ಭಾಗಗಳನ್ನು ಮಾತ್ರ ಆರಿಸಿಕೊಂಡ್ದ್ದಿದರು. ಮುಂದೆ ಪಾ.ಶ. ಶ್ರೀನಿವಾಸ ಅವರು ಪೂರ್ಣ ಕೃತಿಯನ್ನು ಅನುವಾದಿಸಿದ್ದಾರೆ. ನಂತರ ತಮಿಳು ಮತ್ತು ಕನ್ನಡ ಭಾಷಾಂತರದಲ್ಲಿ ಟಿ.ಬಿ. ಸಿದ್ಧಲಿಂಗಯ್ಯ ಅವರು ಮುಖ್ಯರು.

ಆಮೇಲೆ ಹೆಚ್ಚು ಕೃತಿಗಳನ್ನು ಭಾಷಾಂತರ ಮಾಡಿದವನು ನಾನೇ ಎಂದು ಕಾಣುತ್ತದೆ. ಹತ್ತು ಕೃತಿಗಳನ್ನು ನಾನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ. ಇವೆಲ್ಲವೂ ಪ್ರಸಿದ್ಧ ಕೃತಿಗಳೇ. ಅಶೋಕ ಮಿತ್ರನ್ ಅವರ ಕಾದಂಬರಿಯ ಅನುವಾದ `ಹದಿನೆಂಟನೆಯ ಅಕ್ಷರೇಖೆ~ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ತಮಿಳು ವಿದ್ವಾಂಸ ಮು. ವರದರಾಜನಾರ್, ಮುಖ್ಯಮಂತ್ರಿ ಕರುಣಾನಿಧಿ ಅವರ ಕೃತಿಗಳನ್ನೂ ನಾನು ಅನುವಾದಿಸಿದ್ದೇನೆ. ಕನ್ನಡದಿಂದ ತಮಿಳಿಗೆ ಮಾಸ್ತಿಯವರ ಕಥೆಗಳನ್ನು, ಎಸ್.ಎಲ್. ಭೈರಪ್ಪ ಅವರ `ದಾಟು~ ಕಾದಂಬರಿಯನ್ನು ಅನುವಾದ ಮಾಡಿದ್ದೇನೆ. ನನ್ನ `ಕಾವೇರಿ: ಒಂದು ಚಿಮ್ಮು, ಒಂದು ಹೊರಳು~ ಸಂಶೋಧನಾ ಕೃತಿಯೂ ನನ್ನಿಂದ ಅನುವಾದವಾಗಿದೆ.

ಆಮೇಲೆ, ಮತ್ತೂರು ಕೃಷ್ಣಮೂರ್ತಿ ಅವರು ಕಲ್ಕಿಯವರ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಮೂವರು ತಮಿಳು ಹೆಣ್ಣುಮಕ್ಕಳಾದ ತಮಿಳ್ ಸೆಲ್ವಿ, ಮಲರ್‌ವಿಳಿ ಮತ್ತು ಜಯಲಲಿತಾ ಅವರು ಕನ್ನಡ- ತಮಿಳು ಭಾಷಾಂತರ ಕಾರ್ಯದಲ್ಲಿ ಈಗ ಹೆಚ್ಚು ಆಸಕ್ತಿ ವಹಿಸಿದ್ದಾರೆ.

ಮೂಡಣ ಕಡಲ ತೀರದಲ್ಲಿ ಕಡಲೂರು ಎನ್ನುವ ಒಂದು ನಗರ ಚಿದಂಬರಂನಿಂದ ಪೂರ್ವಕ್ಕೆ ಇದೆ. ಅದರ ಬಳಿ ಕುರುಂಜಿಪ್ಪಾಡಿ ಎನ್ನುವ ಪುಟ್ಟ ಗ್ರಾಮವಿದೆ. ಅಲ್ಲಿರುವ ಸಾಹಿತ್ಯ ಪ್ರಮುಖರಾದ ಕುರಿಂಜಿವೇಲನ್ ಅವರದೊಂದು ಅಸಾಮಾನ್ಯ ಸಾಹಸವಿದೆ.

ಕಳೆದ ಎಂಟು ವರ್ಷಗಳಿಂದ ಅವರು ಭಾಷಾಂತರ ವಿಚಾರಗಳಿಗೇ ಮೀಸಲಾದ `ದಿಸೈ ಎಟ್ಟುಂ~ (ಅಂದರೆ `ಎಂಟು ದಿಕ್ಕುಗಳಿಂದ~ ಎಂದು ಅರ್ಥ) ಎಂಬ ತ್ರೈಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಭಾಷಾಂತರಕ್ಕಾಗಿಯೇ ಒಂದು ಪತ್ರಿಕೆಯನ್ನು ಹೊರತರುವುದು ತೀರಾ ವಿಶೇಷವಾದ ಸಂಗತಿ.
 
ಈ ಪತ್ರಿಕೆಯಲ್ಲಿ ಭಾಷಾಂತರ ಎಂದರೆ ಏನು, ಭಾರತದಲ್ಲಿ ಯಾವ ಯಾವ ಭಾಷೆಗಳಲ್ಲಿ ಭಾಷಾಂತರ ಕೆಲಸಗಳು ನಡೆಯುತ್ತಿವೆ, ಯಾರು ಯಾರು ಈ ಸಾಧನೆ ಮಾಡುತ್ತಿದ್ದಾರೆ ಮುಂತಾದ ವಿವರಗಳಿರುತ್ತವೆ. ಇದು ತಮಿಳು ಮಾತ್ರವಲ್ಲ, ಭಾರತದ ಎಲ್ಲ ಭಾಷಾಂತರಕಾರರನ್ನು ಉತ್ತೇಜಿಸುವ ಅದ್ಭುತ ಪ್ರಯತ್ನ.

ಈ ಪತ್ರಿಕೆಯ ಜುಲೈ- ಸೆಪ್ಟೆಂಬರ್ 2011 ರ ಸಂಚಿಕೆಯನ್ನು ಕನ್ನಡ ಭಾಷೆಯ ಸಾಹಿತ್ಯ ವಿಶೇಷ ಸಂಚಿಕೆಯಾಗಿ ತರಲಾಗಿದೆ. `ಕನ್ನಡಮೊಳಿ~ಯ ಲೇಖಕರಾದ ಕುವೆಂಪು, ಜಿಎಸ್‌ಎಸ್, ಸುಮತೀಂದ್ರ ನಾಡಿಗ, ಸಿದ್ದಲಿಂಗಯ್ಯ, ಪ್ರತಿಭಾ ನಂದಕುಮಾರ್ ಮೊದಲಾದವರ ಕವಿತೆಗಳು, ಲೇಖನಗಳು ಇದರಲ್ಲಿ ಸ್ಥಾನ ಪಡೆದಿವೆ. ಇರೈಯಡಿಯನ್ (ದಾಸ್), ಪಾವಣ್ಣನ್ ಮೊದಲಾದ ಅನುವಾದಕರು ಇವುಗಳನ್ನು ಕನ್ನಡದಿಂದ ತಮಿಳಿಗೆ ಅನುವಾದಿಸಿದ್ದಾರೆ.

ತಮಿಳಿನಲ್ಲಿ ಇನ್ನೂ ಒಂದು ಗಮನಾರ್ಹ ಕಾರ್ಯ ನಡೆಯುತ್ತಿದೆ. `ನಲ್ಲಿ ಸಿಲ್ಕ್ಸ್~ ನ ರೇಷ್ಮೆ ಉದ್ಯಮದ ಪದ್ಮಶ್ರೀ ಕುಪ್ಪುಸ್ವಾಮಿ ಚೆಟ್ಟಿಯಾರ್ ಅವರು ಸಂಸ್ಕೃತಿ ಪ್ರಿಯರಾಗಿ ಪ್ರಸಿದ್ಧರು. ಅವರು ಮತ್ತು `ಎಂಟು ದಿಕ್ಕುಗಳಿಂದ~ ಪತ್ರಿಕೆ ಇಬ್ಬರೂ ಜೊತೆಗೂಡಿ, `ನಲ್ಲಿ- ಎಂಟು ದಿಕ್ಕುಗಳಿಂದ~ ಎಂಬ ಪ್ರತಿಷ್ಠಾನ ನಡೆಸುತ್ತಾರೆ.
 
ತಮಿಳಿನಿಂದ ಇತರ ಭಾಷೆಗಳಿಗೆ, ಇತರ ಭಾಷೆಗಳಿಂದ ತಮಿಳಿಗೆ ಆಗುವ ಭಾಷಾಂತರ ಕೆಲಸಗಳನ್ನು ಉತ್ತೇಜಿಸುವುದು ಈ ಪ್ರತಿಷ್ಠಾನದ ಧ್ಯೇಯ. ಈ ಕೆಲಸ ಮಾಡಿರುವವರನ್ನು ಗುರುತಿಸಿ `ಜೀವಮಾನ ಸಾಧಕರು~ ಮತ್ತು ಭಾಷಾಂತರ ಪ್ರಶಸ್ತಿಗಳನ್ನು ಕೊಡುತ್ತಾರೆ. ಮೊನ್ನೆ ಸೆ. 17 ರಂದು ತಿರುಚಿನಾಪಳ್ಳಿಯಲ್ಲಿ ದೊಡ್ಡ ಸಮಾರಂಭ ನಡೆಯಿತು.

ಭಾಷಾಂತರದಲ್ಲಿ `ಜೀವಮಾನ ಸಾಧಕ~ ಗೌರವ ಈ ಬಾರಿ ನನಗೆ ಮತ್ತು ಹಿಂದಿ ಅನುವಾದಕ ಡಾ. ರವೀಂದ್ರಕುಮಾರ್ ಸೇಟ್ ಅವರಿಗೆ ದೊರೆಯಿತು. ಉಳಿದ ಹನ್ನೆರಡು ಮಂದಿ ಪ್ರಶಸ್ತಿ ವಿಜೇತ ಅನುವಾದಕರಲ್ಲಿ ಮಲರ್‌ವಿಳಿಯೂ ಸೇರಿದ್ದರು.

ಕುರಿಂಜಿವೇಲನ್ ಅವರ ದೀರ್ಘದರ್ಶಿತ್ವ ಮತ್ತು ಕುಪ್ಪುಸ್ವಾಮಿ ಚೆಟ್ಟಿಯಾರ್ ಅವರ ಔದಾರ್ಯ ಎರಡೂ ಸೇರಿಕೊಂಡು, ತಮಿಳು ಭಾಷೆಗೆ ಮತ್ತು ತಮಿಳಿನಿಂದ ಇತರ ಭಾಷೆಗಳಿಗೆ ಭಾಷಾಂತರ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವಂತೆ ಪೋಷಿಸುತ್ತಿವೆ. ನಮ್ಮ ಕನ್ನಡದ ಸಿರಿವಂತರು ಹೀಗೆ ಸಾಂಸ್ಕೃತಿಕವಾಗಿ ಯೋಚಿಸುವುದು ಎಂದಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT