ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಮೇಳಕ್ಕೆ ರಜತ ಸಂಭ್ರಮ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಮಹಾಮಾನವತಾವಾದಿ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ ಮತ್ತು ಐಕ್ಯಕ್ಷೇತ್ರವಾದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಜನವರಿ 11ರಿಂದ ಐದು ದಿನಗಳ ಶರಣ ಮೇಳ ನಡೆಯಲಿದೆ. ಇದು 25ನೇ ಶರಣಮೇಳ ಎಂಬುದು ಈ ಸಲದ ವಿಶೇಷ.

ಮುಸ್ಲಿಮರು ಮೆಕ್ಕಾ-ಮದೀನಾದಲ್ಲಿ, ಕ್ರೈಸ್ತರು ಜೆರುಸಲೆಂನಲ್ಲಿ, ಸಿಖ್ ಅನುಯಾಯಿಗಳು ಅಮೃತಸರದಲ್ಲಿ ಸೇರುವಂತೆ ಲಿಂಗಾಯತ ಧರ್ಮಿಯರು ವರ್ಷಕ್ಕೆ ಒಂದು ಬಾರಿಯಾದರೂ ಒಂದೆಡೆ ಸೇರಬೇಕೆನ್ನುವ ಸದುದ್ದೇಶದಿಂದ ಇಪ್ಪತ್ತೈದು ವರ್ಷಗಳ ಹಿಂದೆ ಈ ಮೇಳ ಪ್ರಾರಂಭವಾಗಿತ್ತು.

ಅಂದಿನಿಂದ ನಿರಂತರವಾಗಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇದು ನಡೆಯುತ್ತಾ ಬಂದಿದೆ. ಐದು ದಿನಗಳ ಕಾಲ ಚಿಂತನಗೋಷ್ಠಿ, ಪೀಠಾರೋಹಣ, ಸಾಮೂಹಿಕ ಪ್ರಾರ್ಥನೆ, ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ, ವಚನ ಗಾಯನ, ವಚನ ನೃತ್ಯ ಸೇರಿದಂತೆ ವಿವಿಧ ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಸವ ಭಕ್ತರನ್ನು ಶರಣಲೋಕಕ್ಕೆ ಕರೆದೊಯ್ಯುತ್ತವೆ.

ಮೇಳ ನಡೆಯುವ ಮಹಾಮನೆ, ಮಹಾಮಠದ ಆವರಣದಲ್ಲಿ ಇಳಿದುಕೊಳ್ಳುವ ಸಲುವಾಗಿ 500ಕ್ಕೂ ಹೆಚ್ಚು ಕೊಠಡಿಗಳನ್ನು ದಾನಿಗಳು ಕಟ್ಟಿಸಿದ್ದಾರೆ. ಇದರ ಜೊತೆಗೆ ಸುಮಾರು 3,000 ವಸತಿ ಡೇರೆಗಳನ್ನು ಹಾಕಿಸಲಾಗುತ್ತದೆ. ಜ್ಞಾನ ದಾಸೋಹದ ಜೊತೆಗೆ ದಾಸೋಹ ಮಂಟಪದಲ್ಲಿ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿರುತ್ತದೆ.

ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗಾಗಿ ಪ್ರತಿ ವರ್ಷ ಜನವರಿ 10ರಿಂದಲೇ ಆರಂಭವಾಗುವ ಅಡುಗೆ ಮನೆ ಒಲೆ ಹಗಲು-ರಾತ್ರಿ ಉರಿಯುತ್ತದೆ. ನುರಿತ ಇನ್ನೂರಕ್ಕೂ ಹೆಚ್ಚು ಬಾಣಸಿಗರು ಹಗಲಿರುಳೆನ್ನದೇ ಭಕ್ತರಿಗೆ ಅವಶ್ಯವಾದ ದಾಸೋಹವನ್ನು ಸಿದ್ಧಪಡಿಸುತ್ತಿರುತ್ತಾರೆ. ಇದಕ್ಕಾಗಿ ನೂರಾರು ಕ್ವಿಂಟಾಲ್ ಅಕ್ಕಿ ಬಳಕೆಯಾಗುತ್ತದೆ. ಇವೆಲ್ಲ ಏರ್ಪಾಡುಗಳು ಸರ್ಕಾರದ ನೆರವಿಲ್ಲದೇ, ಕೇವಲ ಭಕ್ತಾದಿಗಳ ಕೊಡುಗೆಯಿಂದಲೇ ನಡೆಯುವುದು ವಿಶೇಷ.

ಲಿಂ. ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿಯವರ ನೇತೃತ್ವದಲ್ಲಿ 1988ರಲ್ಲಿ ನಡೆದ ಮೊದಲ ಶರಣಮೇಳದಲ್ಲಿ ಅಸಂಖ್ಯಾತ ಜನ ಪಾಲ್ಗೊಂಡಿದ್ದರು. ಮಾಹಿತಿಗೆ: 096633 85657, 08351 268 038
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT