ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವ್ಯವಸ್ಥೆ ಸಮಗ್ರ ಬದಲಾವಣೆ ಸುಳಿವು

ಶಿಕ್ಷಣ ತಜ್ಞರ, ಚಿಂತಕರ ಸಲಹೆ ಆಹ್ವಾನ: ಕಿಮ್ಮನೆ
Last Updated 4 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕಿದೆ. ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು, ಸಾರ್ವಜನಿಕರು ಹಾಗೂ ಸ್ವಯಂಸೇವಾ ಸಂಘಟನೆಗಳ ಜೊತೆಗೆ ಸಮಾಲೋಚಿಸಿ ಸಲಹೆಗಳನ್ನು ಪಡೆದು ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ನಗರದ ಪಿ.ಇ.ಎಸ್. ಶಿಕ್ಷಣ ಸಂಸ್ಥೆಯು ದತ್ತು ಪಡೆದಿರುವ ವೀರಭದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆರು ಕೊಠಡಿಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಇಲಾಖೆಯ ಅಡಿಯಲ್ಲಿ ಒಂದು ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮೀಣ ಶಾಲೆಗಳು ಮೂಲಸೌಕರ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕಿದೆ. ನಾನು ಯಾವ ಶಾಲೆಯನ್ನೂ ಮುಚ್ಚಿ ಎಂದಿಲ್ಲ. ಈ ಬಗ್ಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಆದರೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ವಾಸಿಸುವರು ಹಾಗೂ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳುಹಿಸುವವರು ವ್ಯವಸ್ಥೆ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪಕ್ಷದವರೇ ಕೆಲವು ನಾಯಕರು ಬದಲಾವಣೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ' ಎಂದು ಅವರು ಕಿಡಿಕಾರಿದರು.

`ನಾನು ಪ್ರಾಧ್ಯಾಪಕ ಅಲ್ಲ. ಆದರೆ, ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಸರ್ಕಾರಿ ಶಾಲೆಯಲ್ಲೇ ಕಲಿತವನು. ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಮುಂದಿನ ವರ್ಷ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುವುದು. ಇದಕ್ಕೂ ಮುನ್ನ ಶಿಕ್ಷಣತಜ್ಞರ ಸಲಹೆಗಳನ್ನು ಸ್ವೀಕರಿಸಲಾಗುವುದು. ಮುಖ್ಯಮಂತ್ರಿ ಅವರ ಸಲಹೆ ಪಡೆಯದೆ ಯಾವುದೇ ಬದಲಾವಣೆ ಮಾಡುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

`16,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲೆಗಳ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲು 3,500 ಕೋಟಿ ರೂಪಾಯಿ ಅಗತ್ಯ ಇದೆ. ಅನೇಕ ಗ್ರಾಮೀಣ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿ ವರೆಗೆ 10ರಿಂದ 20 ವಿದ್ಯಾರ್ಥಿಗಳು ಇದ್ದಾರೆ. ಒಬ್ಬ ಶಿಕ್ಷಕ ಈ ಎಲ್ಲ ತರಗತಿಗೆ ಪಾಠ ಮಾಡುವುದು ಹೇಗೆ. ಇದರ ಬದಲು ಇಂತಹ ನಾಲ್ಕೈದು ಶಾಲೆಗಳ ವಿದ್ಯಾರ್ಥಿಗಳಿಗೆ ಒಂದೇ ಕಡೆಯಲ್ಲಿ ಶಿಕ್ಷಣ ಕೊಡಿಸುವುದು ಉತ್ತಮ. ಈ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು' ಎಂದು ಅವರು ಹೇಳಿದರು.

`ಕನ್ನಂಗಿ ಎಂಬ ಗ್ರಾಮ ಪಂಚಾಯಿತಿಯಲ್ಲಿ ಏಳು ಶಾಲೆಗಳು ಇವೆ. ಒಂದು ಶಾಲೆಯಲ್ಲಿ 1ರಿಂದ 5ರವರೆಗೆ ಏಳು ವಿದ್ಯಾರ್ಥಿಗಳು, ಮತ್ತೊಂದು ಶಾಲೆಯಲ್ಲಿ 1ರಿಂದ 7ರ ವರೆಗೆ 25 ವಿದ್ಯಾರ್ಥಿಗಳು, ಒಂದು ಶಾಲೆಯಲ್ಲಿ 60 ವಿದ್ಯಾರ್ಥಿಗಳು ಇವೆ. ಆರು ಮಕ್ಕಳು ಇರುವ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ಇದ್ದಾರೆ. ಇದು ರಾಷ್ಟ್ರೀಯ ನಷ್ಟ. ಜನರ ತೆರಿಗೆ ಹಣವೂ ಪೋಲು ಎಂದರು.

ಪಿ.ಇ.ಎಸ್. ಶಿಕ್ಷಣ ಸಮೂಹದ ಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, `ಪ್ರತಿಯೊಬ್ಬ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಕ್ಷೇತ್ರದ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜು ಆರಂಭಿಸುವವರು ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎಂದು ನಿಬಂಧನೆ ವಿಧಿಸಬೇಕು. ನಗರದ 600 ಐಟಿ ಕಂಪೆನಿಗಳ ಮುಖ್ಯಸ್ಥರ ಸಭೆ ಕರೆದು ಸರ್ಕಾರಿ ಶಾಲೆಗಳ ಮೂಲಸೌಕರ್ಯ ವೃದ್ಧಿಗೆ ಅಗತ್ಯ ನೆರವು ಪಡೆಯಬೇಕು' ಎಂದರು.

ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್.ಉಮಾಶಂಕರ್, ಉಪನಿರ್ದೇಶಕಿ (ಡಿಡಿಪಿಐ) ಪದ್ಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಉಪಸ್ಥಿತರಿದ್ದರು.

ಪಠ್ಯಪುಸ್ತಕ, ಸಮವಸ್ತ್ರ- ಮೇ ಆರಂಭದಲ್ಲೇ ಸಿದ್ಧ'
``ಮುಂದಿನ ವರ್ಷ ಮೇ ತಿಂಗಳ ಆರಂಭದಲ್ಲೇ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ಸಿದ್ಧವಾಗಿರಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ' ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸಮಾರಂಭದಲ್ಲಿ ಮಾತನಾಡಿ, `ಪ್ರತಿವರ್ಷ ಶೈಕ್ಷಣಿಕ ವರ್ಷ ಜೂನ್ ಒಂದರಂದೇ ಆರಂಭವಾಗುತ್ತಿದೆ. ಆದರೆ, ವರ್ಷವೂ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಐದು ಕೋಟಿ ಪುಸ್ತಕಗಳನ್ನು ತಯಾರಿಸಲು ಮಾರ್ಚ್‌ನಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬೇಕು. ಟೆಂಡರ್ ಕರೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು' ಎಂದು ಅವರು ಆಯುಕ್ತರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT