ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಯೂರೋಪ್ ಅತಿಥಿಗಳ ಕಲರವ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಚೌಡಸಂದ್ರ ಗೇಟಿನ ಬಳಿಯ ಮುತ್ತುಗದ ಮರದಲ್ಲಿ ಈಗ ಯೂರೋಪ್ ಭಾಗದ `ರೋಸಿ ಸ್ಟಾರ‌್ಲಿಂಗ್~ ಅತಿಥಿಗಳು ಬೀಡುಬಿಟ್ಟಿದ್ದಾರೆ.

ಚಳಿಗಾಲದಲ್ಲಿ ಭಾರತ ಭೂಖಂಡಕ್ಕೆ ವಲಸೆ ಬರುವ ಈ ಹಕ್ಕಿಗಳು `ಅರಣ್ಯ ಜ್ವಾಲೆ~ ಎಂದೇ ಹೆಸರಾದ ಮುತ್ತುಗದ ಹೂಗಳ ಮಕರಂದ ಹೀರಲು `ನಾ ಮುಂದು, ತಾ ಮುಂದು~ ಎಂದು ದಾಳಿ ಇಡುತ್ತಿವೆ. ಸಂಕ್ರಾಂತಿ ಸಮಯದಲ್ಲಿ ಎಲೆಗಳನ್ನೆಲ್ಲಾ ಉದುರಿಸಿಕೊಂಡು ಕೇವಲ ಕೆಂಪು ಹೂವುಗಳಿಂದ ಆವೃತವಾಗುವ ಮುತ್ತುಗದ ಮರದಲ್ಲಿ ಈ ವಲಸೆ ಹಕ್ಕಿಗಳು ಶಬ್ದ ಮಾಡುತ್ತಾ ನೀಲಿ ಆಗಸದ ಹಿನ್ನೆಲೆಯಲ್ಲಿನ ಕೆಂಪು ಹೂವಿನ ಅಂದದೊಡನೆ ಹಕ್ಕಿ ಸಂಗೀತದ ಸಂಗಮದಂತಾಗಿದೆ.

ಇದರ ತಲೆ ಮತ್ತು ರೆಕ್ಕೆ ಕಪ್ಪು ಬಣ್ಣವಿದ್ದರೆ, ಕೊಕ್ಕು, ಕಾಲು, ಬೆನ್ನು ಮತ್ತು ಹೊಟ್ಟೆಯ ಭಾಗ ತಿಳಿ ಗುಲಾಬಿ ಬಣ್ಣವಿರುತ್ತದೆ. ಗುಂಪಿನಲ್ಲಿರುವ ಇವು ಚಿಲಿ ಚಿಲಿ ಎಂದು ಒಂದೇ ಸಮನೆ ಶಬ್ದ ಮಾಡುತ್ತವೆ. ಹಣ್ಣು, ಕೀಟಗಳನ್ನು ತಿಂದರೂ ಹೂಗಳ ಮಕರಂದ ಹಕ್ಕಿಗಳಿಗೆ ಪ್ರಿಯ. ಹಾರುವಾಗಲೂ ಗುಂಪಿನಲ್ಲೇ ಒಗ್ಗಟ್ಟಿನಿಂದ ಹಾರುತ್ತವೆ. ಮೇ, ಜೂನ್ ತಿಂಗಳಿನಲ್ಲಿ ಯೂರೋಪ್ ಖಂಡದಲ್ಲಿ ಗುಂಪಿನಲ್ಲಿಯೇ ಗೂಡು ನಿರ್ಮಿಸುತ್ತವೆ. 

ಈ ಹಕ್ಕಿಗಳು ಬೆಳೆಗಳಿಗೆ ಮಾರಕವಾದ ಕೀಟಗಳನ್ನೂ ಕಬಳಿಸುವುದರಿಂದ ರೈತರಿಗೂ ಉಪಕಾರಿಯಾಗಿದೆ. `ಕಾಗೆ, ಮೈನಾ, ಗಿಣಿ ಮುಂತಾದ ಹಕ್ಕಿಗಳೂ ಮುತ್ತುಗದ ಮಕರಂದ ಹೀರಲು ಬರುತ್ತವೆ. ಆದರೆ ಈ ಪುಟ್ಟ ಹಕ್ಕಿಗಳು ಮಾತ್ರ ಗಲಾಟೆ ಮಾಡಿ ಓಡಿಸುತ್ತವೆ. ಇಷ್ಟು ಚಿಕ್ಕ ಹಕ್ಕಿಗಳಿಗೆ ಎಷ್ಟೊಂದು ಶಕ್ತಿ ಅಂದುಕೊಳ್ಳುತ್ತಿದ್ದೆ. ಆದರೆ ಇವು ಯೂರೋಪಿನಿಂದ ಬಂದವು ಮತ್ತು ಒಗ್ಗಟ್ಟಿನ ಬಲವುಳ್ಳವು ಎಂದು ತಿಳಿದಾಗ ಇವುಗಳ ಶಕ್ತಿ ಅರಿವಾಯಿತು.

ಇವುಗಳ ಶಬ್ದ ಕೇಳಲು ಹಾಗೂ ನೋಡಲೂ ಸುಂದರ. ಇದಕ್ಕಾಗಿ ಖಾಲಿ ಸ್ಥಳದಲ್ಲಿ ಮರಗಿಡಗಳನ್ನು ಬೆಳೆಸಬೇಕು~ ಎಂದು ಚೌಡಸಂದ್ರದ ಕರಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT