ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನೈಜ ಜಾತ್ಯತೀತ ತಾಣ

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  `ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿದರೆ ಸಿಸಿಟಿವಿಗಳಲ್ಲಿ ಅದು ದಾಖಲಾಗಿರುತ್ತದೆ. ವಾಹನ ಸಂಖ್ಯೆ ಹುಡುಕಿ ದಂಡ ವಿಧಿಸಲಾಗುತ್ತದೆ. ಮೂತ್ರ ವಿಸರ್ಜಿಸುವವರಿಗೆ ಯಾವ ಸಂಖ್ಯೆ ಇರುತ್ತದೆ, ಅವರನ್ನು ಹುಡುಕಿ ದಂಡ ವಿಧಿಸುವ ಬಗೆ ಹೇಗೆ?'
-ಕಾಂಗ್ರೆಸ್‌ನ ಮೋಟಮ್ಮ ಮುಂದಿಟ್ಟ ಈ ಪ್ರಶ್ನೆ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯಲ್ಲಿ ಈ ಪ್ರಸಂಗ ನಡೆಯಿತು. `ಬಳ್ಳಾರಿಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಗೋಡೆ ಮೇಲೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಜಿಲ್ಲಾಧಿಕಾರಿಗಳೇ ಅವನನ್ನು ಹಿಡಿದು, ಶರ್ಟ್ ಬಿಚ್ಚಿಸಿ ಒರೆಸಲು ಹಚ್ಚಿದ್ದರು' ಎಂದು ಮೋಟಮ್ಮ ನೆನಪು ಮಾಡಿಕೊಂಡರು.

ಆಗ ಬಿಜೆಪಿಯ ಕೆ.ಬಿ. ಶಾಣಪ್ಪ, `ಅಧಿಕಾರಿಗಳೇನು ಮೂತ್ರ ವಿಸರ್ಜನೆ ಮಾಡುವವರನ್ನು ನೋಡುತ್ತಾ ಕೂಡಬೇಕೇನು, ಹಾಗೆ ಕೂಡುವುದಾದರೆ ಎಲ್ಲೆಲ್ಲಿ ಕೂಡಬೇಕು' ಎಂದು ಪ್ರಶ್ನೆ ಹಾಕಿದರು. ಜೆಡಿಎಸ್‌ನ ಎಂ.ಸಿ. ನಾಣಯ್ಯ, `ದೇಶದಲ್ಲಿ ನಿಜವಾಗಿಯೂ ಜನರಲ್ಲಿ ಭಾವನಾತ್ಮಕ ಸಂಬಂಧ ಇರುವುದು ಶೌಚಾಲಯಗಳಲ್ಲಿ ಮಾತ್ರ. ಅಲ್ಲಿ ಯಾವ ಜಾತಿ ಭೇದ ಎಣಿಸುವುದಿಲ್ಲ. ಎಲ್ಲರೂ ಸಮಾನರು ಮತ್ತು ಅದು ನಿಜವಾದ ಜಾತ್ಯತೀತ ತಾಣ' ಎಂದು ವ್ಯಾಖ್ಯಾನಿಸಿದರು.

ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಒಂದೊಂದು ಶೌಚಾಲಯದಲ್ಲೂ ಸಾವಿರಾರು ಜನ ಸರದಿಯಲ್ಲಿ ನಿಲ್ಲುವ ಸ್ಥಿತಿ ಇದೆ. ಅವಸರವಾದವರು ಏನು ಮಾಡಬೇಕು' ಎಂದು ಕೇಳಿದರು. `ವಿಧಾನಸೌಧದ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲ. ಬಂದ ಜನ ಗೋಡೆಯನ್ನು ಬಳಸದೆ ಏನು ಮಾಡಬೇಕು' ಎಂದು ಇ.ಕೃಷ್ಣಪ್ಪ ಪ್ರಶ್ನೆ ಮುಂದಿಟ್ಟರು.

`ಇನ್ಫೋಸಿಸ್ ಸಂಸ್ಥೆ ಈ ಹಿಂದೆ 8 ಕೋಟಿ ವೆಚ್ಚದಲ್ಲಿ 100 ಶೌಚಾಲಯ ಕಟ್ಟಿಸಿತ್ತು. ಅವುಗಳನ್ನು ಬಿಬಿಎಂಪಿ ಈಗ ಗೋದಾಮುಗಳನ್ನಾಗಿ ಬಳಸುತ್ತಿದೆ' ಎಂದು ಉಪಸಭಾಪತಿ ವಿಮಲಾಗೌಡ ಹೇಳಿದರು. `8 ಕೋಟಿಯಲ್ಲಿ 100 ಶೌಚಾಲಯ ನಿರ್ಮಿಸಿದ್ದು ಹೇಗೆ' ಎಂಬ ಪ್ರಶ್ನೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ಕಾಡಿತು. `ನಾವು ಅವುಗಳನ್ನು ನೋಡಬೇಕು. ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು' ಎಂಬ ಬೇಡಿಕೆ ಇಟ್ಟರು.

`ನಮ್ಮ ಸಂಸ್ಥೆಯ ಕಾಂಪೌಂಡ್‌ಗೆ ದೇವರ ಚಿತ್ರ ಅಂಟಿಸಿದರೂ ಜನ ಮೂತ್ರ ವಿಸರ್ಜನೆ ಬಿಡಲಿಲ್ಲ' ಎಂದು ಎಂ.ಆರ್. ದೊರೆಸ್ವಾಮಿ ಅಳಲು ತೋಡಿಕೊಂಡರು. `ಕಾಂಪೌಂಡ್‌ಗೆ ದೇವರ ಚಿತ್ರ ಅಂಟಿಸಿದ್ದೇಕೆ' ಎಂದು ಬಿಜೆಪಿಯ ಗೋ. ಮಧುಸೂಧನ್ ಮುನಿಸು ತೋರಿದರು. `ಬೀದಿ ನಾಯಿಗಳಿಗೂ ಶೌಚಾಲಯ ನಿರ್ಮಿಸುವ ಅಗತ್ಯವಿದೆ' ಎಂದು ಬಿಜೆಪಿಯ ಡಿ.ಎಸ್. ವೀರಯ್ಯ ಕುಟುಕಿದರು.

`ಬೀದಿ ನಾಯಿಗಳು, ಹುಚ್ಚು ನಾಯಿಗಳು ಮತ್ತು ರೋಗ ಹಿಡಿದ ನಾಯಿಗಳ ಹಾವಳಿ ಮಿತಿಮೀರಿದ್ದು, ಅವುಗಳಿಗೆ ಏನಾದರೂ ಒಂದು ವ್ಯವಸ್ಥೆ ಮಾಡಬೇಕು. ಪ್ರಾಣಿ ದಯಾ ಸಂಘದವರಿಗೆ ಅವುಗಳ ಮೇಲೆ ಪ್ರೀತಿ ಇದ್ದರೆ ತಮ್ಮ ಬೆಡ್‌ರೂಮ್‌ಗಳಲ್ಲಿ ಅವುಗಳನ್ನು ಸಾಕಬಹುದು' ಎಂದು ನಾಣಯ್ಯ ಹೇಳಿದಾಗ, ಸಭೆ ನಗೆಗಡಲಲ್ಲಿ ಮುಳುಗಿತು.

ಸ್ಲೇಟ್ ಮಾತ್ರ ಇರಲ್ಲ: `ನಗರದಲ್ಲಿ ಫ್ಲೆಕ್ಸ್, ಹೋರ್ಡಿಂಗ್‌ಗಳ ಹಾವಳಿ ಅತಿಯಾಗಿದ್ದು, ಜನ್ಮದಿನದ ಶುಭಾಶಯ ಕೋರುವ ಆ ಫಲಕಗಳಲ್ಲಿ ಪೊಲೀಸ್ ಠಾಣೆಯಲ್ಲಿ ಇರುವಂತೆ ಸಾಲು, ಸಾಲು ಫೋಟೊಗಳು ಇರುತ್ತವೆ. ಒಂದೇ ವ್ಯತ್ಯಾಸ ಎಂದರೆ ಸ್ಲೇಟ್ ಮಾತ್ರ ಇರುವುದಿಲ್ಲ' ಎಂದು ವಿಮಲಾ ಗೌಡ ಹೇಳಿದರು.

`ನಗರ ಅಂದವಾಗಿ ಕಾಣಲು ಅಂತಹ ಫ್ಲೆಕ್ಸ್ ಇಲ್ಲದಂತೆ ನೋಡಿಕೊಳ್ಳಬೇಕು' ಎಂದು ಆಗ್ರಹಿಸಿದರು. ವಿಧಾನಸಭೆಯಲ್ಲಿ ಅಂಗೀಕಾರವಾದ ರೂಪದಲ್ಲೇ ಮಸೂದೆಗೆ ವಿಧಾನ ಪರಿಷತ್ ಕೂಡ ಅನುಮೋದನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT