ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಸದೀಯ ಅವ್ಯವಸ್ಥೆಗೆ ಕಾಂಗ್ರೆಸ್-ಬಿಜೆಪಿ ಹೊಣೆ'

ಯಾದಗಿರಿ ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡರ ಆಕ್ರೋಶ
Last Updated 26 ಡಿಸೆಂಬರ್ 2012, 6:39 IST
ಅಕ್ಷರ ಗಾತ್ರ

ಯಾದಗಿರಿ: ಸಂಸತ್ತಿನ ಕಲಾಪಗಳಲ್ಲಿ ಅವಶ್ಯಕ ಚರ್ಚೆಗಳಿಗಿಂತ ಅನವಶ್ಯಕ ಗೊಂದಲಗಳೇ ಹೆಚ್ಚಾಗುತ್ತಿವೆ. ಸಂಸತ್ ಕಲಾಪಕ್ಕಿಂತ ಗ್ರಾಮಗಳಲ್ಲಿನ ಪಂಚಾಯಿತಿ ಕಟ್ಟೆಗಳೇ ಎಷ್ಟೋ ಮೇಲು. ಇಂತಹ ಅವ್ಯವಸ್ಥೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಹೊಣೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜವಾಹರ ಕಾಲೇಜಿನ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭೆಯ ಸದಸ್ಯನಾಗಿ ಕಲಾಪವನ್ನು ನೋಡಿದ್ದೇನೆ. ಅಲ್ಲಿರುವ ಅವ್ಯವಸ್ಥೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎನಿಸುತ್ತದೆ. ದೇಶದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೇ ಇದಕ್ಕೆ ಕಾರಣ ಎಂದು ಕಿಡಿ ಕಾರಿದರು.

2007 ರಲ್ಲಿ ಕಾವೇರಿಗೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಾಗ, ಅದರ ಕುರಿತು ಚರ್ಚೆ ಮಾಡಲಿಕ್ಕೂ ಲೋಕಸಭೆಯಲ್ಲಿ ರಾಜ್ಯದ ಸಂಸದರಿಗೆ ಅವಕಾಶ ಸಿಗಲಿಲ್ಲ. ತಮಿಳುನಾಡನ್ನು ಪ್ರತಿನಿಧಿಸುತ್ತಿದ್ದ 14 ಸಚಿವರೂ ಸೇರಿದಂತೆ 39 ಸಂಸದರು ಸ್ಪೀಕರ್ ಎದುರಿನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಚರ್ಚಿಸುವುದಕ್ಕೂ ಅವಕಾಶ ಸಿಗಲಿಲ್ಲ. ಇಂತಹ ವ್ಯವಸ್ಥೆಯಲ್ಲಿ ರಾಜ್ಯದ ಹಿತ ಕಾಪಾಡುವುದು ಹೇಗೆ ಎನ್ನುವುದು ತಿಳಿಯದಂತಾಗಿದೆ ಎಂದರು.

ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯವು ಕಾವೇರಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಒಪ್ಪಿಕೊಳ್ಳಲಾಗದೇ ಅಪಪ್ರಚಾರಕ್ಕೆ ಗುರಿಯಾಗುತ್ತಿದೆ. ಇದರ ಬಗ್ಗೆ ಚರ್ಚೆ ಮಾಡಲು ವೇದಿಕೆಯಾಗಿರುವ ಸಂಸತ್‌ನಲ್ಲಿಯೂ ರಾಜ್ಯದವರಿಗೆ ಅವಕಾಶ ಸಿಗದೇ ಇರುವುದು ದುರಂತದ ಸಂಗತಿ ಎಂದು ಹೇಳಿದರು.

ರಾಜ್ಯ ಸರ್ಕಾರ 1.78 ಲಕ್ಷ ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇದರಿಂದಾಗಿ ರೈತಾಪಿ ವರ್ಗಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ದೂರಿದರು.

ರಾಜ್ಯದಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಯಾರೊಬ್ಬರನ್ನೂ ಟೀಕೆ ಮಾಡಲು ಹೋಗುವುದಿಲ್ಲ. ಇಡೀ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಯುವಕರು, ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು. ತಮ್ಮ ಮತಕ್ಕಿರುವ ಶಕ್ತಿ ಎಂಥದ್ದು ಎಂಬುದನ್ನು ತೋರಿಸಬೇಕು ಎಂದು ಸಲಹೆ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಆರಂಭಿಸಿದರು. ಆದರೆ ರಾಹುಲ್ ಗಾಂಧಿ ಕೂಡ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದರು. ಇಂದಿಗೂ ಅದು ಸಾಧ್ಯವಾಗಿಲ್ಲ ಎಂದ ಅವರು, ಕುಮಾರ ಸ್ವಾಮಿ ಅವರಿಗೆ ಗ್ರಾಮ ವಾಸ್ತವ್ಯ ಮಾಡುವಂತೆ ನಾವಾರೂ ಹೇಳಿರಲಿಲ್ಲ. ಅದು ಅವರ ಕಲ್ಪನೆ. ಏಡ್ಸ್ ಪೀಡಿತರ ಮನೆಯಲ್ಲೂ ವಾಸ್ತವ್ಯ ಮಾಡಿದ್ದನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳು ಬಿತ್ತರಿಸಿದವು ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ನೀರಾವರಿ ಸೌಲಭ್ಯ ಕಲ್ಪಿಸಲು ತಮ್ಮ ಅವಧಿಯಲ್ಲಿ ಸಾಕಷ್ಟು ಅನುದಾನ ನೀಡಲಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಜೆಡಿಎಸ್ ನಿರ್ಲಕ್ಷ್ಯ ತಾಳಿಲ್ಲ ಎಂದು ಸ್ಪಷ್ಟಪಡಿಸಿದರು. 

ಜಿಲ್ಲೆಯಲ್ಲಿ ನಾಯಕರ ಬಗ್ಗೆ ಯಾವುದೇ ಗೊಂದಲಕ್ಕೆ ಆಸ್ಪದ ಬೇಡ. ಎಲ್ಲರೂ ಒಗ್ಗಟ್ಟಾಗಿ ಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ, ಶ್ರೀನಿವಾಸರಡ್ಡಿ ಚೆನ್ನೂರ, ಶರಣಪ್ಪ ಸಲಾದಪೂರ, ಎ.ಸಿ. ಕಾಡ್ಲೂರ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ, ಅಜೀಜ್ ಅಹ್ನದ್ ಶಹನಾ, ಪದ್ಮಾ, ಉಸ್ತಾದ್ ವಜಾಹತ್ ಹುಸೇನ್, ಶರಣಗೌಡ ಕಂದಕೂರ, ಜಿ. ತಮ್ಮಣ್ಣ, ವಿಶ್ವನಾಥರಡ್ಡಿ ಗೊಂದಡಗಿ, ನವಾಜ್‌ರಡ್ಡಿ ಚಪೇಟ್ಲಾ, ಚೆನ್ನಪ್ಪಗೌಡ ಮೋಸಂಬಿ, ಎಸ್.ಪಿ. ನಾಡೇಕರ್ ಇದ್ದರು.

ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನಾ ಅನಪೂರ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT