ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢರಿಗೂ ಸವಾಲು ಅರುಣ್‌ ಕಾಯಕ

ಸೈಕಲ್ ಹತ್ತಿ ಹೊರಟರೆ ಹತ್ತಾರು ಕೆಲಸ
Last Updated 3 ಡಿಸೆಂಬರ್ 2013, 5:45 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರತಿ ನಿತ್ಯ ಮುಂಜಾನೆ 3.30ಕ್ಕೆ ಆರಂಭವಾಗುವ ಅವರ ದಿನಚರಿ ಅಂತ್ಯ ಕಾಣುವುದು ರಾತ್ರಿ 11ಕ್ಕೆ. ಮುಂಜಾನೆದ್ದು ಪತ್ರಿಕೆಗಳನ್ನು ಜೋಡಿಸಿಕೊಂಡು, ಸೈಕಲ್ ಹತ್ತಿ ಹೊರಟರೆ ಹತ್ತಾರು ಕಾಯಕಗಳು ಒಂದೊಂದಾಗಿ ಪೂರ್ಣಗೊಳ್ಳುತ್ತವೆ.

ಶಿಕಾರಿಪುರದ ಹುಚ್ಚಪ್ಪ–ಶಾಂತಮ್ಮ ದಂಪತಿಯ ಹಿರಿಯ ಮಗ ಎಚ್‌.ಅರುಣ್‌, ಬಾಲ್ಯದಲ್ಲಿ ಪೋಲಿಯೊಗೆ ಒಳಗಾಗಿ ಒಂದು ಕಾಲಿನ ಸ್ವಾಧೀನ ಕಳೆದುಕೊಂಡವರು. ಆದರೆ, ಧೈರ್ಯ ಕಳೆದುಕೊಂಡಿಲ್ಲ. ಹಾಗಾಗಿ, ಅವರು ಮಾಡುವ ಕೆಲಸ, ಬದುಕುವ ರೀತಿ ದೈಹಿಕವಾಗಿ ಸದೃಢವಾಗಿರುವವರನ್ನೂ ನಾಚಿಸುತ್ತದೆ.

ಅರುಣ್‌ ಮಾಡುವ ಕೆಲಸ ಒಂದಲ್ಲ; ಎರಡಲ್ಲ. ಬೆಳಿಗ್ಗೆ ಪತ್ರಿಕಾ ವಾಹನಗಳು ಹಾಕಿ ಹೋಗುವ ಬಂಡಲ್‌ಗಳನ್ನು ಜೋಡಿಸಿ, ಪೇಪರ್‌  ಹಾಕುವ ಹುಡುಗರಿಗೆಲ್ಲ ಪೇಪರ್‌ ಕೊಟ್ಟು, ತಾವೂ ಒಂದು ಸೈಕಲ್ ಏರಿ ಮನೆ–ಮನೆಗೆ ಪೇಪರ್‌ ಹಾಕುವುದು ಅರುಣ್‌ ಹಲವು ವರ್ಷಗಳಿಂದ ಮಾಡಿಕೊಂಡು ಬಂದ ಕಾಯಕ. ತದನಂತರ ಪಾಳಿಯ ಲೆಕ್ಕಾಚಾರದಲ್ಲಿ ಎರಡು ಪತ್ರಿಕಾಲಯಗಳಲ್ಲಿ ಡಿಟಿಪಿ, ಪೇಜ್‌ ಮೇಕಿಂಗ್‌, ಇದರ ಮಧ್ಯೆ ಬೈಂಡಿಂಗ್‌, ವಿಸಿಟಿಂಗ್‌ ಕಾರ್ಡ್‌ ತಯಾರಿಸುವುದು, ಹ್ಯಾಂಡ್‌ಬಿಲ್ಲು ಮುದ್ರಿಸುವುದು, ಮೊಬೈಲ್‌ ರಿಪೇರಿ... ಹೀಗೆ ದಿನದಲ್ಲಿ ಹತ್ತಾರು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅರುಣ್‌ ಶಿವಮೊಗ್ಗಕ್ಕೆ ಬಂದಿದ್ದು ಪತ್ರಿಕಾ ಕಚೇರಿಯೊಂದರ ಕಚೇರಿ ಸಹಾಯಕನಾಗಿ; ಅಲ್ಲಿಯೇ ಡಿಟಿಪಿ ಸೇರಿದಂತೆ ಮುದ್ರಣದ ಎಲ್ಲಾ ವಿಭಾಗಗಳಲ್ಲಿ ಪರಿಣಿತರಾಗುವ ಅವಕಾಶ ಕಲ್ಪಿಸಿಕೊಂಡರು. ಇವರಿಗೆ ಯಾರೂ ಗುರುಗಳಿಲ್ಲ; ಫೋಟೋಶಾಫ್ ಬಳಸುವುದರಿಂದ ಹಿಡಿದು ಪೇಜ್‌ ಮೇಕಿಂಗ್‌ವರೆಗೆ ಇವರಷ್ಟು ವೇಗವಾಗಿ ಮಾಡುವವರು ಬಹಳ ವಿರಳ.

ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಂಡು ಶಿವಮೊಗ್ಗ ನಗರ ಸೇರಿದ ಅರುಣ್‌, ಹಠ ಹಿಡಿದು ಎಸ್ಸೆಸ್ಸೆಲ್ಸಿ ಪಾಸ್‌ ಮಾಡಿಕೊಂಡಿದ್ದಾರೆ. ಅರುಣ್‌, 4ನೇ ವರ್ಷದ ಬಾಲಕನಿರುವಾಗಲೇ ಎರಡೂ ಕಾಲುಗಳು ಪೋಲಿಯೊಕ್ಕೆ ಒಳಗಾಗಿದ್ದವು. ಒಂದು ಕಾಲು ಹೇಗೋ ಸುಧಾರಣೆ ಕಂಡಿತು. ಮತ್ತೊಂದು ಮಾತ್ರ ಸರಿಯಾಗಲೇ ಇಲ್ಲ. ಮನೆಯಲ್ಲೂ ಬಡತನ; ಓದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಶಿವಮೊಗ್ಗಕ್ಕೆ ಬರುವುದಕ್ಕೂ ಮೊದಲು ಅರುಣ್‌, ಶಿಕಾರಿಪುರದಲ್ಲಿ ಮಾಡಿದ ಕೆಲಸ ಹಲವು. ಹಾಲು ಮಾರಾಟ, ಗಾರೆ ಕೆಲಸ, ಸಂತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಈ ಮೂಲಕ ತಂದೆ–ತಾಯಿಗೆ ನೆರವಾಗಿದ್ದರು.

ಈಗ ಶಿವಮೊಗ್ಗಕ್ಕೆ ಬಂದ ಮೇಲೂ ಅವರದ್ದು ನಿರಂತರ ದುಡಿಮೆ. ತಮ್ಮ ದುಡಿಮೆಯಿಂದಲೇ ತಂಗಿ ಮದುವೆ ಮಾಡಿದರು. ಮನೆ ಕಟ್ಟುವುದಕ್ಕೆ ತಂದೆ–ತಾಯಿಗೆ ಆಸರೆಯಾದರು. ತಾವೊಂದು ಮೋಟಾರ್‌ ಬೈಕ್ ತೆಗೆದುಕೊಂಡರು. ಈ ನಡುವೆ ಗೆಳೆಯರ ಜತೆಗೂಡಿ ವಾಹನ ವಾಟರ್‌ ವಾಶ್‌ ಶಾಪ್‌ ಆರಂಭಿಸಿದರು. ಅದನ್ನು ಐದು ತಿಂಗಳು ನಡೆಸಿದರು; ನೀರಿನ ಸಮಸ್ಯೆಯಾಗಿ ಅದನ್ನು ಕೈಬಿಟ್ಟರು.

‘ಸ್ವಂತವಾಗಿ ಡಿಟಿಪಿ ಸೆಂಟರ್‌ವೊಂದನ್ನು ತೆರೆಯಬೇಕೆಂಬ ಆಸೆ. ಅದು ನನ್ನ ಕನಸು ಕೂಡ. ಅಂತಹ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುವ ಅರುಣ್, ‘ನಾನು ಅಂಗವಿಕಲ ಎಂದು ನನಗೆ ಅನ್ನಿಸಿಯೇ ಇಲ್ಲ; ಜೀವನದಲ್ಲಿ ಏನು ಬರುತ್ತದೆ ಅದನ್ನೇ ಸ್ವೀಕರಿಸಬೇಕು. ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂಬ ಸಣ್ಣ ಸಲಹೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT